West Bengal Elections 2021: ಬಿಜೆಪಿ ಸೇರಿದ ಟಿಎಂಸಿ ಮಾಜಿ ಎಂಪಿ ದಿನೇಶ್ ತ್ರಿವೇದಿ
Dinesh Trivedi: ಬಿಜೆಪಿ ಸೇರ್ಪಡಗೊಂಡ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದಿನೇಶ್ ತ್ರಿವೇದಿ, ‘ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಲಿ ಅಥವಾ ನೀಡದಿರಲಿ, ಸಕ್ರಿಯವಾಗಿ ಪ್ರಚಾರದಲ್ಲಿ ಭಾಗಿಯಾಗುತ್ತೇನೆ’ ಎಂದಿದ್ದಾರೆ.
ದೆಹಲಿ: ಪಶ್ಚಿಮ ಬಂಗಾಳದ ಪ್ರಮುಖ ಟಿಎಂಸಿ ನಾಯಕ, ಮಾಜಿ ಸಂಸದ ದಿನೇಶ ತ್ರಿವೇದಿ (Dinesh Trivedi) ಬಿಜೆಪಿ ಸೇರ್ಪಡೆಯಾಗಿದ್ದಾರೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೇಸರಿ ಶಾಲು ಹಾಕಿ, ಪುಷ್ಪ ಗುಚ್ಚ ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಹ ಉಪಸ್ಥಿತರಿದ್ದು, ದಿನೇಶ್ ತ್ರಿವೇದಿ ಅವರನ್ನು ಬಿಜೆಪಿಗೆ ಬರಮಾಡಿಕೊಂಡರು. ಟಿಎಂಸಿ ಪಕ್ಷದ ರಾಜ್ಯಸಭಾ ಸಂಸದರಾಗಿದ್ದ ಅವರು, ಫೆಬ್ರವರಿ 12ರಂದು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ದಿನೇಶ್ ತ್ರಿವೇದಿ ಅವರ ಆಗಮನದಿಂದ ಟಿಎಂಸಿಗೆ ಭರ್ಜರಿ ಪೆಟ್ಟು ಬೀಳಲಿದೆ ಎಂಬ ಮಾತು ಬಂಗಾಳ ರಾಜಕೀಯದಲ್ಲಿ ಕೇಳಿಬರುತ್ತಿದೆ.
ಬಿಜೆಪಿ ಸೇರ್ಪಡಗೊಂಡ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದಿನೇಶ್ ತ್ರಿವೇದಿ, ‘ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಲಿ ಅಥವಾ ನೀಡದಿರಲಿ, ಸಕ್ರಿಯವಾಗಿ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ಬಂಗಾಳಿ ಜನತೆಗೆ ಅಭಿವೃದ್ಧಿಯ ಅಗತ್ಯವಿದ್ದು, ಭೃಷ್ಟಾಚಾರದಿಂದ ಬೇಸತ್ತು ಟಿಎಂಸಿಯನ್ನು ತಿರಸ್ಕರಿಸಿದ್ದಾರೆ. ಮಮತಾ ಬ್ಯಾನರ್ಜಿ, ತಮ್ಮ ಆದರ್ಶಗಳನ್ನು ಮರೆತು ರಾಜಕೀಯ ನಡೆಸುತ್ತಿದ್ದಾರೆ. ಇದೀಗ ಬಂಗಾಳದ ಮತದಾರರು ನಿಜವಾದ ಅಭಿವೃದ್ಧಿಯತ್ತ ಹೆಜ್ಜೆಹಾಕಲು ಮುಂದಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಟಿಎಂಸಿ ನಾಯಕರು ಬಿಜೆಪಿ ಸೇರುವುದು ಇದೇ ಮೊದಲಲ್ಲ
ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಹುಕಿಯಲ್ಲಿರುವ ಬಿಜೆಪಿ, ಟಿಎಂಸಿ ನಾಯಕರನ್ನು ಸೆಳೆದುಕೊಳ್ಳುವತ್ತ ಕಾರ್ಯೋನ್ಮುಖವಾಗಿತ್ತು. ಮಮತಾ ಬ್ಯಾನರ್ಜಿ ಶಿಷ್ಟ ಎಂದೇ ಹೆಸರು ಗಳಿಸಿದ್ದ ಸಂಸದ ಸುವೇಂದು ಅಧಿಕಾರಿ ಅವರನ್ನು ತನ್ನ ತೆಕ್ಕೆಗೆ ಎಳೆದುಕೊಂಡಿದ್ದ ಬಿಜೆಪಿ, ನಂತರ ಟಿಎಂಸಿಯ ಹಲವು ಶಾಸಕರನ್ನು ಪಾಳಯಕ್ಕೆ ಬರಮಾಡಿಕೊಂಡಿತ್ತು.
2016ರಲ್ಲಿ ಪಶ್ಚಿಮಬಂಗಾಳದಲ್ಲಿ ಬಿಜೆಪಿ ಕೇವಲ 3 ಕ್ಷೇತ್ರಗಳನ್ನು ಗೆದ್ದಿತ್ತು. ಅಲ್ಲಿ ಬಿಜೆಪಿ ಶಾಸಕರು, ಮುಖಂಡರು ಅಷ್ಟು ಪ್ರಭಾವಿಗಳು ಯಾರೂ ಇಲ್ಲ. ಹೋದರೆ ಟಿಎಂಸಿಯಿಂದ ಬಿಜೆಪಿ ಸೇರ್ಪಡೆಯಾದವರೇ ಗೆಲ್ಲುವ ಸಾಧ್ಯತೆ ಅಧಿಕವಾಗಿದೆ. ಈಗಾಗಲೇ ಟಿಎಂಸಿಯಿಂದ ಹಲವು ಪ್ರಮುಖರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದೀಗ ಆ ಸಾಲಿಗೆ ದಿನೇಶ್ ತಿವಾರಿ ಅವರೂ ಸೇರಿದ್ದಾರೆ.
ನಂದಿಗ್ರಾಮದಲ್ಲಿ ಆಗಲಿದೆಯೇ ಮಮತಾ-ಸುವೇಂದು ಕದನ?
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ವಿರುದ್ಧ ನಂದಿಗ್ರಾಮದಲ್ಲಿ ಸ್ಪರ್ಧೆ ಮಾಡುವುದಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ.
ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲೇ ಸುವೇಂದು ಬಿಜೆಪಿ ಸೇರ್ಪಡೆ ಆಗಿದ್ದರು. ಅಂದಿನಿಂದಲೂ ಸುವೇಂದು ವಿರುದ್ಧ ಮಮತಾ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಈಗ ಅವರಿಗೆ ಪಾಠ ಕಲಿಸೋಕೆ ಮುಂದಾಗಿರುವ ಮಮತಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಸುವೇಂದು ಅಧಿಕಾರಿ ನಂದಿಗ್ರಾಮದಿಂದಲೇ ಕಣಕ್ಕಿಳಿಯುತ್ತಾರಾ ಎಂಬುದು ಇದುವರೆಗೂ ನಿರ್ಧಾರವಾಗಿಲ್ಲ.
ಚುನಾವಣೆ ಎಂದು ನಡೆಯಲಿದೆ?
ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 294 ಸೀಟುಗಳಿರುವ ವಿಧಾನಸಭೆಗೆ ಮಾರ್ಚ್ 27ರಿಂದ ಏಪ್ರಿಲ್29ರವರೆಗೆ ಚುನಾವಣೆ ನಡೆಯಲಿದ್ದು ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಈ ಬಾರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನಡುವೆ ಸ್ಪರ್ಧೆ ನಡೆಯಲಿದೆ. ಈ ಚುನಾವಣೆಯಲ್ಲಿ 200ಕ್ಕಿಂತಲೂ ಹೆಚ್ಚು ಸೀಟು ಗೆಲ್ಲಲು ಬಿಜೆಪಿ ಹವಣಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಟಿಎಂಸಿಯಿಂದ ಹಲವಾರು ಸದಸ್ಯರು ಬಿಜೆಪಿಗೆ ಸೇರಿರುವುದರಿಂದ ಮತ್ತು ಟಿಎಂಸಿ ನಾಯಕರ ಮೇಲೆ ಭ್ರಷ್ಟಾಚಾರ ಆರೋಪಗಳಿರುವುದರಿಂದ ಈ ಚುನಾವಣೆ ಟಿಎಂಸಿ ಪಾಲಿಗೆ ನಿರ್ಣಾಯಕವಾಗಲಿದೆ. ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಪೈಪೋಟಿ ನಡೆಸುತ್ತಿದ್ದವು. ಆದರೆ ಈ ಬಾರಿ ಬಿಜೆಪಿ ಮತ್ತು ಟಿಎಂಸಿ ನಡುವಿನ ಸ್ಪರ್ಧೆ ಎಂದೇ ಪಶ್ಚಿಮ ಬಂಗಾಳ ಚುನಾವಣೆಯನ್ನು ಬಿಂಬಿಸಲಾಗುತ್ತದೆ.
ಈಗಾಗಲೇ ಚುನಾವಣಾ ಪ್ರಚಾರಗಳು ಭರದಿಂದ ನಡೆಯುತ್ತಿದ್ದು ಬಿಜೆಪಿ ಮತ್ತು ಟಿಎಂಸಿ ನಾಯಕರು ಪರಸ್ಪರ ಟೀಕೆ-ವಾಗ್ವಾದಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಗೋಲ್ ಕೀಪರ್ ಆಗಲಿದ್ದು, ಬೇರೆ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಒಂದೇ ಒಂದು ಗೋಲು ಬಾರಿಸಲು ಬಿಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅದೇ ವೇಳೆ ಮೆರವಣಿಗೆ, ರೋಡ್ ಶೋಗಳನ್ನು ನಡೆಸುತ್ತಾ ಅಬ್ಬರದ ಪ್ರಚಾರ ನಡೆಸುತ್ತಿರುವ ಬಿಜೆಪಿ, ಪಶ್ಚಿಮ ಬಂಗಾಳವನ್ನು ಸೋನರ್ ಬಾಂಗ್ಲಾ ಮಾಡುವುದಾದಿ ಭರವಸೆ ನೀಡಿದೆ. ಮಮತಾ ಬ್ಯಾನರ್ಜಿ ಅವರ ಅಧಿಕಾರವಧಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳನ್ನು ಎತ್ತಿ ತೋರಿಸಿ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ.
ಒಂದು ವೇಳೆ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಗೆದ್ದರೆ ಮಮತಾ ಬ್ಯಾನರ್ಜಿ ಮೂರನೇ ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ. ಬಿಜೆಪಿ ಇಲ್ಲಿಯವರೆಗೆ ಯಾವುದೇ ಅಭ್ಯರ್ಥಿಯನ್ನು ಘೋಷಿಸಿಲ್ಲ. ಆದರೆ ಬಿಜೆಪಿ ಇಲ್ಲಿ ಖಾತೆ ತೆರೆದರೆ ಅದು ರಾಜಕೀಯವಲಯದಲ್ಲಿ ಮಹತ್ವದ ಬೆಳವಣಿಗೆಯಾಗಲಿದೆ.
ಇದನ್ನೂ ಓದಿ: ಚುನಾವಣಾ ಪರ್ವಕಾಲ; ಸಿನಿತಾರೆಯರ ರಾಜಕೀಯ ಸೇರುವ ಹಂಬಲಕ್ಕೆ ನೀರೆರೆದ ಬಂಗಾಳ
ಪಶ್ಚಿಮ ಬಂಗಾಳದಲ್ಲಿ ಘೋಷಣೆಗಳ ಪ್ರವಾಹ: ಬಿಜೆಪಿಗೆ ಬೇಕಾಯ್ತು ಇಟಲಿ ಮೂಲದ ಹಾಡಿನ ಸಹಾಯ
Published On - 1:40 pm, Sat, 6 March 21