ಸೋತಿದ್ದಕ್ಕೆ ಇವಿಎಂ ಹೊಣೆ ಮಾಡಬೇಡಿ, ಫಲಿತಾಂಶ ಕೊಟ್ಟಿದ್ದು ಜನರ ಮನಸಲ್ಲಿರುವ ಚಿಪ್: ಯುಪಿಯಲ್ಲಿ ಒಂದೂ ಕ್ಷೇತ್ರ ಗೆಲ್ಲದ ಓವೈಸಿಯಿಂದ ಸಲಹೆ
ಲಖಿಂಪುರ ಖೇರಿ ಹಿಂಸಾಚಾರದಲ್ಲಿ ರೈತರ ಮೇಲೆ ಕಾರು ಹರಿಸಿದ್ದು ಬಿಜೆಪಿ ಸಚಿವರ ಪುತ್ರನೇ ಆದರೂ ಅಲ್ಲಿಯೂ ಬಿಜೆಪಿಯೇ ಗೆದ್ದಿದೆ. ಇಲ್ಲಿ ಕೆಲಸ ಮಾಡುತ್ತಿರುವುದು 80-20 ರ ನಿಯಮವಷ್ಟೇ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಉತ್ತರಪ್ರದೇಶದ ಚುನಾವಣೆಯಲ್ಲಿ 100 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅಸಾದುದ್ದೀನ್ ಓವೈಸಿಯ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷ ಒಂದೇ ಒಂದು ಕ್ಷೇತ್ರದಲ್ಲೂ ಗೆಲುವು ಕಂಡಿಲ್ಲ. ಈ ಪಕ್ಷ ಭಾಗಿದಾರಿ ಪರಿವರ್ತನ್ ಮೋರ್ಚಾದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಆದರೆ ಓವೈಸಿ ಚುನಾವಣಾ ತಂತ್ರಗಾರಿಕೆಯಾಗಲಿ, ಅವರು ನಡೆಸಿದ್ದ ರ್ಯಾಲಿಗಳಾಗಲೀ ಪ್ರಯೋಜನಕ್ಕೆ ಬರಲಿಲ್ಲ. ಬಹುದೊಡ್ಡ ಅಂತರದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮಾತನಾಡಿದ ಅಸಾದುದ್ದೀನ್ ಓವೈಸಿ, ನಾವು ಜನಾದೇಶವನ್ನು ಒಪ್ಪಿಕೊಳ್ಳುತ್ತೇವೆ. ಉಳಿದ ಸೋತ ರಾಜಕೀಯ ಪಕ್ಷಗಳು ತಮ್ಮ ಸೋಲಿಗೆ ಇವಿಎಂ ಯಂತ್ರವನ್ನು ಹೊಣೆ ಮಾಡಲು ಯತ್ನಿಸುತ್ತಿವೆ. ಆದರೆ ಖಂಡಿತ ಇದು ಇವಿಎಂ ದೋಷದಿಂದ ಆದ ಸೋಲಲ್ಲ. ಜನರ ಮನಸಲ್ಲಿರುವ ಚಿಪ್ನಿಂದ ಹೊರಬಿದ್ದ ಫಲಿತಾಂಶ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಮತ್ತೆ ನಾವು ನಾಳೆಯಿಂದ ನಮ್ಮ ಕೆಲಸದಲ್ಲಿ ತೊಡಗುತ್ತೇವೆ. ಮುಂದಿನ ಚುನಾವಣೆಯಲ್ಲಿ ನಾವು ಖಂಡಿತ ಯಶಸ್ಸು ಕಾಣುತ್ತೇವೆ ಎಂಬ ನಂಬಿಕೆಯಿದೆ ಎಂದು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಅಲ್ಪಸಂಖ್ಯಾತರನ್ನು ಮತಬ್ಯಾಂಕ್ಗಳಾಗಿ ಬಳಸಿಕೊಳ್ಳಲಾಗುತ್ತಿದೆ. ಲಖಿಂಪುರ ಖೇರಿ ಹಿಂಸಾಚಾರದಲ್ಲಿ ರೈತರ ಮೇಲೆ ಕಾರು ಹರಿಸಿದ್ದು ಬಿಜೆಪಿ ಸಚಿವರ ಪುತ್ರನೇ ಆದರೂ ಅಲ್ಲಿಯೂ ಬಿಜೆಪಿಯೇ ಗೆದ್ದಿದೆ. ಇಲ್ಲಿ ಕೆಲಸ ಮಾಡುತ್ತಿರುವುದು 80-20 ರ ನಿಯಮವಷ್ಟೇ. ಈ 80-20ರ ರೂಲ್ಸ್ ಇನ್ನೂ ಕೆಲ ವರ್ಷಗಳ ಕಾಲ ಹಾಗೇ ಇರಲಿದೆ. ಅದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಏನೇ ಆಗಲಿ ನಮ್ಮಲ್ಲಿ ಉತ್ಸಾಹ ಕುಂದಲಿಲ್ಲ. ಅದಿನ್ನೂ ಹೆಚ್ಚಾಗಿದೆ ಎಂದು ಹೇಳಿದ್ದಾರೆ. (ಇಲ್ಲಿ 80-20 ರ ನಿಯಮವೆಂದರೆ, ಶೇ.80ರಷ್ಟು ಫಲಿತಾಂಶಕ್ಕೆ ಕಾರಣಗಳು ಶೇ.20ರಷ್ಟು ಮಾತ್ರ ಇರುತ್ತವೆ ಎಂದು. ಇದನ್ನು ಪ್ಯಾರೆಟೊ ತತ್ವ ಎಂದೂ ಕರೆಯುತ್ತಾರೆ. ಇಲ್ಲಿ ಬಿಜೆಪಿ ಕಡಿಮೆ ಕೆಲಸ ಮಾಡಿಯೂ ಹೆಚ್ಚು ಕ್ಷೇತ್ರಗಳನ್ನು ಗೆದ್ದುಕೊಂಡಿದೆ ಎಂಬ ಅರ್ಥದಲ್ಲಿ ಓವೈಸಿ ಈ ನಿಯಮದ ಬಗ್ಗೆ ಉಲ್ಲೇಖ ಮಾಡಿದ್ದಾರೆ.)
ಕಳೆದ ತಿಂಗಳು ಚುನಾವಣಾ ಪ್ರಚಾರ ನಡೆಸುವಾಗ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಾರ್ಟಿಗಳ ವಿರುದ್ಧ ಓವೈಸಿ ವಾಗ್ದಾಳಿ ನಡೆಸಿದ್ದರು. ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಅಲ್ಪಸಂಖ್ಯಾತರ ಬೆನ್ನಿಗೆ ಚೂರಿ ಹಾಕುವ ಪಕ್ಷಗಳು. ಕಳೆದ 30ವರ್ಷಗಳಿಂದಲೂ ಇದನ್ನೇ ಮಾಡಿಕೊಂಡು ಬಂದಿವೆ. ಅಲ್ಪಸಂಖ್ಯಾತರು, ಹಿಂದುಳಿದವರು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಕ್ಕೆ ಮತ ಹಾಕಿದ್ದೇ ಬಂತು. ಆದರೆ ಹಿಂದಿನಿಂದ ಅವರು ಚೂರಿಯನ್ನೇ ಹಾಕಿದ್ದು ಬಿಟ್ಟರೆ ಇನ್ನೇನೂ ಮಾಡಲಿಲ್ಲ. ಅಲ್ಪಸಂಖ್ಯಾತರ ಮಕ್ಕಳಿಗೆ ಶಿಕ್ಷಣ ಸಿಗಲಿಲ್ಲ, ಉದ್ಯೋಗ ಕೊಡಲಿಲ್ಲ ಅಷ್ಟೇ ಅಲ್ಲ, ಬಡತನವೂ ಕೊನೆಯಾಗಲಿಲ್ಲ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಆಸ್ಪತ್ರೆಗೆ ದಾಖಲು; ಕೆಲವೇ ಹೊತ್ತಲ್ಲಿ ಎಂಆರ್ಐ, ಸಿಟಿ ಸ್ಕ್ಯಾನ್
Published On - 12:06 pm, Fri, 11 March 22




