ಎನ್ರಿಕಾ ಲೆಕ್ಸಿ 2012: ಅನೇಕ ತಿರುವು ಮತ್ತು ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದ್ದ ಕೇಸ್, ಇಟಲಿ  ರೂ. 10 ಕೋಟಿ ಪರಿಹಾರ ನೀಡುವುದರೊಂದಿಗೆ ಕೊನೆಗೊಂಡಿದೆ

| Updated By: ರಶ್ಮಿ ಕಲ್ಲಕಟ್ಟ

Updated on: Jun 16, 2021 | 1:15 PM

ಇಬ್ಬರು ಮೀನುಗಾರರು ತಾವು ಹಾರಿಸಿದ ಗುಂಡುಗಳಿಗೆ ಬಲಿಯಾಗಿದ್ದರೂ ಏನೂ ನಡೆದಿಲ್ಲವೆಂಬಂತೆ ಎನ್ರಿಕಾ ಲೆಕ್ಸೀಯಲ್ಲಿದ್ದ ಮರೀನ್​ಗಳು ತಮ್ಮ ಯಾನ ಮುಂದುವರೆಸಿದ್ದರು. ನೌಕೆ ತೀರದಿಂದ ಸುಮಾರು 30 ನಾಟಿಕಲ್ ಮೈಲಿ ದೂರ ಹೋಗಿದ್ದಾಗ ಮುಂಬೈ ಮಾರಿಟೈಮ್ ರೆಸ್ಕ್ಯೂ ಕೊ-ಆರ್ಡಿನೇಷನ್ ಕೇಂದ್ರದಿಂದ ಅವರಿಗೊಂದು ಸಂದೇಶ ಹೋಗಿ, ಕೊಚ್ಚಿ ಬಂದರಿಗೆ ವಾಪಸ್ಸಾಗುವಂತೆ ಹೇಳಲಾಯಿತು.

ಎನ್ರಿಕಾ ಲೆಕ್ಸಿ 2012: ಅನೇಕ ತಿರುವು ಮತ್ತು ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದ್ದ ಕೇಸ್, ಇಟಲಿ  ರೂ. 10 ಕೋಟಿ ಪರಿಹಾರ ನೀಡುವುದರೊಂದಿಗೆ ಕೊನೆಗೊಂಡಿದೆ
ಎನ್ರಿಕಾ ಲೆಕ್ಸೀ ನೌಕೆ ಮತ್ತು ಇಟಲಿಯ ನಾವಿಕರು
Follow us on

ನವದೆಹಲಿ: ನಿಮಗೆ ಎನ್ರಿಕಾ ಲೆಕ್ಸೀ ಪ್ರಕರಣ ನೆನಪಿದೆ ತಾನೆ? ಒಂಭತ್ತು ವರ್ಷಗಳ ಹಿಂದೆ ಇಟಲಿ ನೌಕಾದಳ ಸೇವೆಯ ಇಬ್ಬರು ನಾವಿಕರ (ಮರೀನ್​​ಗಳು) ಸಮುದ್ರದಲ್ಲಿ ಗುಂಡು ಹಾರಿಸಿ ಭಾರತದ ಇಬ್ಬರು ಮೀನುಗಾರರರನ್ನು ಕೊಂದ ಪ್ರಕರಣವನ್ನು ಬಹಳಷ್ಟು ಭಾರತೀಯರು ಮರೆತಿರಲಾರರು. ಇದು ಎಷ್ಟು ಸೆನ್ಸೇಷನಲ್ ಪ್ರಕರಣವಾಗಿತ್ತೆಂದರೆ ಒಂದು ಹಂತದಲ್ಲಿ ಭಾರತ ಮತ್ತು ಇಟಲಿ ನಡುವಿನ ರಾಜತಾತ್ರಿತ್ತಿ ಸಂಬಂಧಗಳು ಕಡಿದುಹೋಗುವ ಅನುಮಾನ ಮೂಡಿಸಿತ್ತು. ಸದರಿ ಪ್ರಕರಣವು ಕೊನೆಗೂ ಸೌಹಾರ್ದತಯುತವಾಗಿ ಕೊನೆಗೊಂಡಿದೆ. ಮಂಗಳವಾರದಂದು ಸುಪ್ರೀಮ್ ಕೋರ್ಟ್, ಇಟಲಿಯ ಮರೀನ್​ಗಳು-ಮ್ಯಾಸಿಮಿಲಾನೊ ಲ್ಯಾಟೊರ್ ಮತ್ತು ಸ್ಯಾಲ್ವಟೋರ್ ಜಿರೋನಿ ವಿರುದ್ಧ ದಾಖಲಾಗಿದ್ದ ಕೇಸ್​ಗಳನ್ನು ಇಟಲಿ ದೇಶವು ಮೃತ ನಾವಿಕರ ಕುಟುಂಬಗಳಿಗೆ ಒದಗಿಸಿದ 10 ಕೋಟಿ ರೂಪಾಯಿಗಳ ಪರಿಹಾರವನ್ನು ಡಿಪಾಸಿಟ್​ ಮಾಡಿಸಿಕೊಂಡ ನಂತರ ರದ್ದು ಮಾಡಿತು. ಇಬ್ಬರನ್ನು ಬಲಿ ತೆಗೆದುಕೊಂಡ ಶೂಟಿಂಗ್ ಪ್ರಕರಣ 2012ರಲ್ಲಿ ಕೇರಳದ ಒಂದು ಸಮುದ್ರ ತೀರ ಹತ್ತಿರ ನಡೆದಿತ್ತು. ವಿಶ್ವಸಂಸ್ಥೆಯ ಕನ್ವೆನ್ಷನ್ ಆನ್ ಲಾ ಆಫ್​ ಸೀಸ್ ಅಡಿಯಲ್ಲಿ ಬರುವ ಅಂತರರಾಷ್ಟ್ರೀಯ ನ್ಯಾಯಮಂಡಳಿಯು ಇಟಲಿಯ ಮರೀನ್​ಗಳನ್ನು ಕ್ರಿಮಿನಲ್ ವಿಚಾರಣೆ ನಡೆಸಲು ಭಾರತಕ್ಕೆ ನ್ಯಾಯಾಂಗ ಅಧಿಕಾರದ ಕೊರತೆಯಿದೆ ಎಂದು ಹೇಳಿದ್ದರಿಂದ ಭಾರತದ ಸುಪ್ರೀಮ್ ಕೋರ್ಟ್​ ಸಂವಿಧಾನ 142 ವಿಧಿಯಡಿ ವಿಶೇಷ ಅಧಿಕಾರವನ್ನು ಬಳಸಿ ಅವರ ವಿರುದ್ಧ ದಾಖಲಾಗಿದ್ದ ಕೇಸ್​ಗಳನ್ನು ರದ್ದುಗೊಳಿಸುವಂತೆ ಕೇಂದ್ರ ಆಗ್ರಹಿಸಿತ್ತು. ತಪ್ಪಿತಸ್ಥರಿಗೆ ಅಂತರರಾಷ್ಟ್ರೀಯ ನ್ಯಾಯಮಂಡಳಿಯಿಂದ ಶಿಕ್ಷೆ ಮತ್ತು ಇಟಲಿ ದೇಶವು ರೂ. 10 ಕೋಟಿ ಹೆಚ್ಚುವರಿ ಕಂಪೆನ್ಸೇಷನ್ ನೀಡಲು ಮುಂದೆ ಬಂದಿರುವುದಕ್ಕೆ ತನ್ನ ಸಮ್ಮತಿಯಿದೆ ಎಂದು ಸರ್ಕಾರವು ಕೋರ್ಟ್​ಗೆ ತಿಳಿಸಿತು. ಈ ಪ್ರಕರಣವು ಹಲವಾರು ನಾಟಕೀಯ ತಿರುವುಗಳನ್ನು ಕಂಡಿತ್ತು ಮತ್ತು ರಾಜಕೀಯವಾಗಿಯೂ ಇದನ್ನು ಬಳಸಿಕೊಳ್ಳಲಾಗಿತ್ತು. 2014 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಯವರು, ಆಗಿನ ಕೇಂದ್ರ ಸರ್ಕಾರವು ಇಟಲಿ ವಿರುದ್ಧ ಭಾರತೀಯ ಸಂತ್ರಸ್ತರ ಹಿತಾಸಕ್ತಿಗಳನ್ನು ಸಂರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿದ್ದರು.

ಈ ಘಟನೆ ಯಾವಾಗ ನಡೆಯಿತು, 9 ವರ್ಷಗಳ ಅವಧಿಯಲ್ಲಿ ಏನೆಲ್ಲ ತಿರುವುಗಳನ್ನು ಕಂಡಿತೆನ್ನುವ ಟೈಮ್​ಲೈನ್ ಇಲ್ಲಿದೆ:

ಫೆಬ್ರುವರಿ 15, 2012

ಮೀನುಗಾರರ ಬೋಟ್​ ಸೆಂಟ್​ ಅಂಟೋನಿ ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ನೀಂದಕರ ಬಂದರಿನಿಂದ ಸಮುದ್ರಕ್ಕಿಳಿಯಲು ತಯಾರಾಯಿತು. ಸಾಯಂಕಾದ ಸುಮಾರು 4.30 ಕ್ಕೆ ಸಮುದ್ರ ತೀರದಿಂದ 20.5 ನಾಟಿಕಲ್ ಮೈಲಿ ದೂರದಲ್ಲಿ ಇಟಲಿಯ ಫ್ಲ್ಯಾಗ್ ಹೊತ್ತಿದ್ದ ಎನ್ರಿಕಾ ಲೆಕ್ಸಿ ತೈಲದ ಟ್ಯಾಂಕರ್ ನೌಕೆಯನ್ನು ದಾಟುವುದರಲ್ಲಿತ್ತು. ಹಡಗಿನಲ್ಲಿದ್ದ ಇಬ್ಬರು ಮರೀನ್​ಗಳು ಮ್ಯಾಸಿಮಿಲಾನೊ ಲ್ಯಾಟೊರ್ ಮತ್ತು ಸ್ಯಾಲ್ವಟೋರ್ ಜಿರೋನಿ ಸೆಂಟ್​ ಅಂಟೋನಿಯನ್ನು ಕಡಲ್ಗಳ್ಳರ ನಾವೆಯೆಂದು ಭಾವಿಸಿ ಅದರೆಡೆ ಗುಂಡು ಹಾರಿಸಲಾರಂಭಿಸಿದರು. ಅದರ ಪರಿಣಾಮವಾಗಿ ಇಬ್ಬರು ಮೀನಗಾರರು-ವ್ಯಾಲೆಂಟೀನ್ ಜಲಸ್ಟೀನ್ ಮತ್ತು ಅಜೇಷ್ ಬಿಂಕಿ ಗುಂಡಿಗೆ ಆಹುತಿಯಾದರು.

ಫೆಬ್ರುವರಿ 16, 2012

ಇಬ್ಬರು ಮೀನುಗಾರರು ತಾವು ಹಾರಿಸಿದ ಗುಂಡುಗಳಿಗೆ ಬಲಿಯಾಗಿದ್ದರೂ ಏನೂ ನಡೆದಿಲ್ಲವೆಂಬಂತೆ ಎನ್ರಿಕಾ ಲೆಕ್ಸೀಯಲ್ಲಿದ್ದ ಮರೀನ್​ಗಳು ತಮ್ಮ ಯಾನ ಮುಂದುವರೆಸಿದ್ದರು. ನೌಕೆ ತೀರದಿಂದ ಸುಮಾರು 30 ನಾಟಿಕಲ್ ಮೈಲಿ ದೂರ ಹೋಗಿದ್ದಾಗ ಮುಂಬೈ ಮಾರಿಟೈಮ್ ರೆಸ್ಕ್ಯೂ ಕೊ-ಆರ್ಡಿನೇಷನ್ ಕೇಂದ್ರದಿಂದ ಅವರಿಗೊಂದು ಸಂದೇಶ ಹೋಗಿ, ಕೊಚ್ಚಿ ಬಂದರಿಗೆ ವಾಪಸ್ಸಾಗುವಂತೆ ಹೇಳಲಾಯಿತು. ಆ ಸಂದೇಶಕ್ಕೆ ಪ್ರತಿಕ್ರಿಯಿಸಿದ ಇಟಲಿಯ ನಾವಿಕರು ತಮ್ಮ ನೌಕೆಯ ದಿಕ್ಕನ್ನು ಬದಲಿಸಿ ಕೊಚ್ಚಿಯತ್ತ ಹೊರಟರು. ಅಲ್ಲಿಗೆ ತಲುಪಿದ ನಂತರ ಕೊಲ್ಲಂನ ನೀಂದಕರ ಸರ್ಕಲ್ ಇನ್ಸ್​ಪೆಕ್ಟರ್​ ಕಚೇರಿಯಲ್ಲಿ ಅವರ ವಿರುದ್ಧ ಇಬ್ಬರು ಮೀನುಗಾರರ ಸಾವಿಗೆ ಸಂಬಂಧಿಸಿದಂತೆ ಎಫ್​ ಐಆರ್ ದಾಖಲಾಗಿರುವುನ್ನು ತಿಳಿಸಲಾಯಿತು.

ಫೆಬ್ರುವರಿ 19, 2012

ನೀಂಡಕರ ಕರಾವಳಿ ಪೊಲೀಸ್ ಸ್ಟೇಷನ್ ಸರ್ಕಲ್ ಇನ್ಸ್​ಪೆಕ್ಟರ್ ಇಟಲಿಯ ಇಬ್ಬರು ನಾವಿಕರನ್ನು ಬಂಧಿಸಿದರು

ಫೆಬ್ರುವರಿ 20, 2012

ಮೀನುಗಾರರ ಕುಟುಂಬದ ವಾರಸುದಾರರಿಂದ ಕೇರಳ ಹೈಕೋರ್ಟ್​ನಲ್ಲಿ ಎನ್ರಿಕಾ ಲೆಕ್ಸೀ ನೌಕೆಯಿಂದ ಪರಿಹಾರ ಕೋರಿ ಮೊಕದ್ದಮೆಗಳನ್ನು ದಾಖಲಿಸಲಾಯಿತು. ಎನ್ರಿಕಾ ಲೆಕ್ಸೀ ಅದೇ ಹೈಕೋರ್ಟ್​ನಲ್ಲಿ ಮನವಿಯೊಂದನ್ನು ಸಲ್ಲಿಸಿ ತನ್ನ ಸಮುದ್ರಯಾನ ಮುಂದುವರಿಸಲು ಅನುಮತಿ ಕೋರಿತು. ಏಕ ಸದಸ್ಯ ಪೀಠ ಅದಕ್ಕೆ ಅನುಮತಿ ನೀಡಿದಾಗ, ಜಲೆಸ್ಟಿನ್ ಪತ್ನಿ ಡೋರಮ್ಮ ಆ ತೀರ್ಪನ್ನು ವಿಭಾಗೀಯ ಪೀಠದಲ್ಲಿ ಪ್ರಶ್ನಿಸುತ್ತಾಳೆ. ಏಕ ಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ಬದಿಗಿರುಸುತ್ತದೆ. ಈ ಆದೇಶವನ್ನು ಎನ್ರಿಕಾ ಲೆಕ್ಸೀ ಸುಪ್ರೀಮ್ ಕೋರ್ಟ್​ನಲ್ಲಿ ಪ್ರಶ್ನಿಸುತ್ತದೆ.

ಏಪ್ರಿಲ್ 2012

ಇಟಲಿ ಸರ್ಕಾರವು ಪರಿಹಾರ ನೀಡಿವುದಾಗಿ ಹೇಳಿದಾಗ ಮೊಕದ್ದಮೆ ಹೂಡಿದ್ದ ಕುಟುಂಬದ ವಾರಸುದಾರರು, ಕೋರ್ಟ್ ಆಚೆಗಿನ ಸೆಟ್ಲ್​ಮೆಂಟ್​ಗೆ ಒಪ್ಪಿಕೊಳ್ಳುತ್ತಾರೆ. ಜಲೆಸ್ಟಿನ್ ಮತ್ತು ಅಜೇಷ್ ಬಿಂಕಿ ಕುಟುಂಬದವರು ತಲಾ ಒಂದು ಕೋಟಿ ರೂಪಾಯಿಗಳ ಪರಿಹಾರಕ್ಕೆ ಸಮ್ಮತಿಸುತ್ತಾರೆ. ಮೀನುಗಾರರ ಬೋಟಿನ ಮಾಲೀಕ ಫ್ರೆಡ್ಡೀ 17 ಲಕ್ಷ ರೂಪಾಯಿಗಳ ಪರಿಹಾರಕ್ಕೆ ಒಪ್ಪಿಗೆ ಸೂಚಿಸಿತ್ತಾನೆ.
ಇಟಲಿ ಗಣತಂತ್ರವು ಭಾರತ ನಡೆಸಿದ ಕ್ರಿಮಿನಲ್ ವಿಚಾರಣೆಯನ್ನು ಪ್ರಶ್ನಿಸಿ 32ನೇ ವಿಧಿಯಡಿ ಸುಪ್ರೀಮ್​ ಕೋರ್ಟ್​ನಲ್ಲಿ ರಿಟ್​ ಮನವಿ ಸಲ್ಲಿಸುತ್ತದೆ

ಮೇ 2012

ಸುಪ್ರೀಮ್ ಕೋರ್ಟ್​ ಉಳಿದ ಸಿಬ್ಬಂದಿಯೊಂದಿಗೆ (ಅರೋಪಿಗಳನ್ನು ಬಿಟ್ಟು) ಎನ್ರಿಕಾ ಲೆಕ್ಸೀಗೆ ಭಾರತದಿಂದ ತೆರಳುವ ಅನುಮತಿ ನೀಡುತ್ತದೆ.

ಜನೆವರಿ 2013

ನ್ಯಾಯಮೂರ್ತಿಗಳಾದ ಅಲ್ತಾಮಾಸ ಕಬೀರ್ ಮತ್ತು ಜೆ ಚೆಲಮೇಶ್ವರ ಅವರನ್ನೊಳಗೊಂಡ ವಿಭಾಗೀಯ ಪೀಠವು ಪ್ರಕರಣವನ್ನು ಇತ್ಯರ್ಥಗೊಳಿಸುತ್ತದೆ. ಮರೀನ್​ಗಳ ಮೇಲಿನ ಕ್ರಿಮಿನಲ್ ವಿಚಾರಣೆ ನಡೆಸಲು ಭಾರತಕ್ಕಿರುವ ನ್ಯಾಯಾಂಗ ಅಧಿಕಾರವನ್ನು ಎತ್ತಿ ಹಿಡಿಯಲಾಗುತ್ತದೆ. ಇಟಲಿಯ ಸಾವರೀನ್ ಇಮ್ಯುನಿಟಿ ವಾದವನ್ನು ತಳ್ಳಿಹಾಕಲಾಗುತ್ತದೆ. ಅದೇ ವೇಳೆ, ಪ್ರಕರಣದ ತನಿಖೆ ನಡೆಸಲು, ಕೇರಳಕ್ಕೆ ನ್ಯಾಯಿಕ ಅಧಿಕಾರವಿಲ್ಲವೆಂದು ಅಪೆಕ್ಸ್ ಕೋರ್ಟ್ ಹೇಳುತ್ತದೆ. ನಂತರ ಪ್ರಕರಣದ ತನಿಖೆಯನ್ನು ಕೇರಳ ಪೋಲಿಸರಿಂದ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಕೈಗೆತ್ತಿಕೊಳ್ಳುತ್ತದೆ ಮತ್ತು ಪ್ರಕರಣವನ್ನು ದೆಹಲಿಯಲ್ಲಿ ಸ್ಥಾಪಿಸಲಾದ ವಿಶೇಷ ಕೊರ್ಟೊಂದಕ್ಕೆ ವರ್ಗಾಯಿಸಲಾಗುತ್ತದೆ.

ಫೆಬ್ರವರಿ-ಮಾರ್ಚ್ 2013-ರಾಜತಾಂತ್ರಿಕ ಬಿಕ್ಕಟ್ಟು

2013ರಲ್ಲಿ ಸುಪ್ರೀಮ್ ಕೋರ್ಟ್ ಇಟಲಿಯ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ ಚಲಾಯಿಸಲು ಹೋಗುವುದಕ್ಕೆ ಮರೀನ್​ಗಳನ್ನು ತಮ್ಮ ದೇಶಕ್ಕೆ ಹೋಗುವ ಅನುಮತಿ ನೀಡಿ ನಿಗದಿತ ಸಮಯದೊಳಗೆ ಭಾರತಕ್ಕೆ ವಾಪಸ್ಸಾಗಬೇಕೆಂದು ಹೇಳುತ್ತದೆ.

ಇದು ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ನಡುವೆ ತಿಕ್ಕಾಟಕ್ಕೆ ನಾಂದಿಯಾಗಿ, ಆಗಿನ ಇಟಲಿಯ ರಾಯಭಾರಿ ಡೇನಿಯಲ್ ಮಿನ್ಸಿನಿಯನ್ನು ಬಾರತ ಬಿಟ್ಟು ತೆರಳದಂತೆ ಪ್ರತಿಬಂಧಿಸಲಾಗುತ್ತದೆ. ರಾಜತಾಂತ್ರಿಕ ಒತ್ತಡದ ನಂತರ ಇಟಲಿ ಮರೀನ್​ಗಳನ್ನು ಮಾರ್ಚ್​ 2013ರಲ್ಲಿ ಭಾರತಕ್ಕೆ ವಾಪಸ್ಸು ಕಳಿಸುತ್ತದೆ.

ಸೆಪ್ಟಂಬರ್ 2014

ಮರೀನ್​ಗಳಲ್ಲಿ ಒಬ್ಬನಾದ ಲ್ಯಾಟೋರ್ ಸುಪ್ರೀಮ್ ಕೋರ್ಟ್​ಗೆ ಮನವಿಯೊಂದನ್ನು ಸಲ್ಲಿಸಿ ವೈದ್ಯಕೀಯ ಚಿಕಿತ್ಸೆಗೆ ಇಟಲಿಗೆ ತೆರಳು ಅನುಮತಿ ಕೋರುತ್ತಾನೆ. ಮಾನವೀಯತೆಯ ದೃಷ್ಟಿಯಿಂದ ಅವನಿಗೆ ನಾಲ್ಕು ತಿಂಗಳ ಮಟ್ಟಿಗೆ ತೆರಳುವ ಅನುಮತಿ ಕೋರ್ಟ್​ ನೀಡುತ್ತದೆ.

ಜುಲೈ-ಆಗಸ್ಟ್ 2015

ಇಟಲಿಯು ಯುಎನ್ಸಿಎಲ್​ಒಎಸ್ ಅಧೀನದಲ್ಲಿರುವ ಸಾಗರ ಕಾನೂನುಗಳ ಅಂತರರಾಷ್ಟ್ರೀಯ ನ್ಯಾಯಮಂಡಳಿಯ (ಐಟಿಎಲ್​ಒಎಸ್) ಮೊರೆಹೋಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿಚಾರಣೆಯನ್ನು ಸ್ಥಗಿತಗೊಳಿಸುವಂತೆ ಐಟಿಎಲ್​ಒಎಸ್ ಭಾರತ ಮತ್ತು ಇಟಲಿಗಳಿಗೆ ಹೇಳುತ್ತದೆ. ಸಂತ್ರಸ್ತ ಮೀನುಗಾರರ ಕುಟುಂಬಗಳು ಅನುಭವಸುತ್ತಿರುವ ಯಾತನೆಯ ಅರಿವು ತನಗಿದೆ ಎಂದು ಅದು ಈ ಸಂದರ್ಭದಲ್ಲಿ ಹೇಳುತ್ತದೆ. ಆದರೆ ಇಟಲಿ ನಾವಿಕರ (ಮರೀನ್​ಗಳು) ಕುಟುಂಬಗಳು ಸಹ ತೊಂದರೆಗೀಡಾಗಿರುವುದನ್ನು ಮರೆಯಬಾರದು ಅಂತಲೂ ಅದು ಹೇಳುತ್ತದೆ.

ಮೇ 2016

ಮೇ 2016ರಲ್ಲಿ ಇಟಲಿಯ ಮತ್ತೊಬ್ಬ ನಾವಿಕ ಜಿರೋನಿಗೂ ಇಟಲಿಗೆ ವಾಪಸ್ಸಾಗುವ ಅನುಮತಿಯನ್ನು ಸುಪ್ರೀಮ್ ಕೋರ್ಟ್​ ನೀಡುತ್ತದೆ. ಹೊರಡುವ ಮೊದಲು ತಾನು ಭಾರತದ ಸುಪ್ರೀಮ್​ ಕೊರ್ಟ್​ನ ಅಧೀನದಲ್ಲಿರುವುದು ಮುಂದುವರಿಯುತ್ತದೆ ಎಂದು ಮುಚ್ಚಳಿಕೆ ಬರೆದುಕೊಡುವಂತೆ ಅವನಿಗೆ ತಿಳಿಸಲಾಗುತ್ತದೆ.

ಅದೆ ವರ್ಷದ ಸೆಪ್ಟಂಬರ್​ನಲ್ಲಿ ಭಾರತದಲ್ಲಿ ಇಟಲಿಯ ನಾವಿಕರ ವಿಚಾರಣೆ ಆರಂಭವಾಗುವವರೆಗೆ ಅವರಿಬ್ಬರೂ ಇಟಲಿಯಲ್ಲಿರುವುದಕ್ಕೆ ತನ್ನ ಅಭ್ಯಂತರವಿಲ್ಲವೆಂದು ಕೇಂದ್ರ ಸುಪ್ರೀಮ್​ ಕೊರ್ಟ್​ಗೆ ತಿಳಿಸುತ್ತದೆ

ಜುಲೈ 2020:

ಪರ್ಮನೆಂಟ್​ ಕೋರ್ಟ್​ ಆಫ್ ಆರ್ಬಿಟ್ರೇಷನ್ (ಪಿಸಿಎ) ತೀರ್ಪನ್ನು ಪ್ರಕಟಿಸಿ ಭಾರತಕ್ಕೆ ವಿಚಾರಣಯನ್ನು ನಿಲ್ಲಿಸುವಂತೆ ಮತ್ತು ಇಟಲಿಗೆ ಮೀನುಗಾರರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಸೂಚಿಸುತ್ತದೆ
ಪಿಸಿಎ ತೀರ್ಪನ್ನು ಅಂಗೀಕರಿಸಿಸಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಮ್​ ಕೊರ್ಟ್​ಗೆ ತಿಳಿಸುತ್ತದೆ

ಆಗಸ್ಟ್​ 2020

ಸಂತ್ರಸ್ತರ ವಿಚಾರಣೆ ನಡೆಸದ ಹೊರತು ಇಟಲಿ ನಾವಿಕರ ಪ್ರಕರಣವನ್ನು ರದ್ದು ಮಾಡುವುದಿಲ್ಲವೆಂದು ಭಾರತದ ಆಗಿನ ಮುಖ್ಯ ನ್ಯಾಯಾಧಿಶ ನ್ಯಾಯಮೂರ್ತಿ ಎಸ್​ ಎ ಬೋಬ್ಡೆ ಅವರ ನೇತೃತ್ವದ ಸುಪ್ರೀಮ್​ ಕೊರ್ಟ್​ನ ಪೀಠ ಹೇಳುತ್ತದೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ನೋಟೀಸ ಜಾರಿ ಮಾಡಲಾಗುತ್ತದೆ.

ಆಗಸ್ಟ್​ 2020

ಪಿಎಸಿ ತನ್ನ ತೀರ್ಪಿನ ಹಿಂದಿನ ಕಾರಣಗಳನ್ನು ವಿವರಿಸುತ್ತದೆ

ಏಪ್ರಿಲ್ 2021

ರಿಪಬ್ಲಿಕ್ ಆಫ್ ಇಟಲಿಯ ರೂ. 10 ಕೋಟಿಗಳ ಪರಿಹಾರ ನೀಡಲು ಒಪ್ಪಿದ್ದು ಭಾರತ ಸರ್ಕಾರ ಮತ್ತು ಸಂತ್ರಸ್ತ ಕುಟುಂಬಗಳು ಅದಕ್ಕೆ ಸಮ್ಮತಿಸವೆ ಎಂದು ಕೇಂದ್ರ ಸುಪ್ರೀಮ್​ ಕೊರ್ಟ್​ಗೆ ತಿಳಿಸುತ್ತದೆ. ರೂ 10 ಕೋಟಿಯಲ್ಲಿ ತಲಾ 4 ಕೋಟಿ ರೂಪಾಯಿ ಸಂತ್ರಸ್ತ ಮೀನುಗಾರ ಕುಟುಂಬಗಳಿಗೆ ಮತ್ತು ರೂ 2 ಕೋಟಿ ನಾವೆಯ ಮಾಲೀಕ ಫ್ರೆಡ್ಡಿಗೆ ನೀಡಲಾಗುತ್ತದೆ ಎಂದು ಕೇರಳ ಸರ್ಕಾರ ಸುಪ್ರೀಮ್​ ಕೊರ್ಟ್ ಗಮನಕ್ಕೆ ತರುತ್ತದೆ.

ಪರಿಹಾರದ ಮೊತ್ತವನ್ನು ಇಟಲಿಯು ಸುಪ್ರೀಮ್​ ಕೊರ್ಟ್​ನ ರೆಜಿಸ್ಟ್ರಿಯಲ್ಲಿ ಜಮಾ ಮಾಡಿದ ನಂತರವೇ ತಾನು ಪ್ರಕರಣವನ್ನು ರದ್ದು ಮಾಡುವುದಾಗಿ ಸುಪ್ರೀಮ್​ ಕೊರ್ಟ್ ಹೇಳುತ್ತದೆ.

ಜೂನ್ 2021

ಇಟಲಿ ದೇಶವು ಪರಿಹಾರದ ಮೊತ್ತವನ್ನು ಡಿಪಾಸಿಟ್ ಮಾಡುತ್ತದೆ ಮತ್ತು ಸುಪ್ರೀಮ್ ಕೋರ್ಟ್ ಇಟಲಿ ನಾವಿಕರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದು ಮಾಡುತ್ತದೆ.

ಈಗಾಗಲೇ ಡಿಪಾಸಿಟ್ ಮಾಡಲಾಗಿರುವ ರೂ. 10 ಕೋಟಿಗಳ ಪರಿಹಾರ ಮೊತ್ತ ಸಂತ್ರಸ್ತ ಕುಟುಂಬಗಳ ವಾರಸುದಾರರಿಗೆ ಸೂಕ್ತ ಪರಿಹಾರವೆಂದು ನಾವು ಭಾವಿಸುತ್ತೇವೆ. ಇನ್ನು ಈ ಪ್ರಕರಣವು ಮುಚ್ಚಲು ಯೋಗ್ಯವಾಗಿದ್ದು ಸಸದರಿ ಪ್ರಕರಣ ಎಫ್​ಐಆರ್ 2/2012 ಅನ್ನು ರದ್ದು ಮಾಡುತ್ತೇವೆ ಎಂದು,’ ಸುಪ್ರಿಮ್ ಕೋರ್ಟ್ ಪೀಠ ಹೇಳಿದೆ.

ಇದನ್ನೂ ಓದಿ: ಎನ್ರಿಕಾ ಲೆಕ್ಸಿ ಪ್ರಕರಣ: ₹10 ಕೋಟಿ ಪರಿಹಾರ ನೀಡಿದ ಇಟಲಿ; ಇಟಾಲಿಯನ್ ನೌಕಾಪಡೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ರದ್ದು ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್

Published On - 12:04 pm, Wed, 16 June 21