ಸ್ವತಂತ್ರ ಹಕ್ಕಿಯೂ ಆಕಾಶ ನೋಡಲೇಬೇಕು; ಶಶಿ ತರೂರ್ ನಿಗೂಢ ಪೋಸ್ಟ್‌ಗೆ ಕಾಂಗ್ರೆಸ್ ಪ್ರತಿಕ್ರಿಯೆ

ಶಶಿ ತರೂರ್ "ಹಾರಲು ಅನುಮತಿ ಕೇಳಬೇಡಿ. ರೆಕ್ಕೆಗಳು ನಿಮ್ಮವು, ಆಕಾಶ ಯಾರದ್ದೂ ಅಲ್ಲ" ಎಂದು ಎಕ್ಸ್​​ನಲ್ಲಿ ಹಕ್ಕಿಯ ಫೋಟೋವನ್ನು ಹಂಚಿಕೊಂಡ ನಂತರ ಮಾಣಿಕಮ್ ಟ್ಯಾಗೋರ್ ಅವರ ಪ್ರತಿಕ್ರಿಯೆ ಬಂದಿದೆ. ಕಾಂಗ್ರೆಸ್ ಪಕ್ಷದ ನಾಯಕ ಮಾಣಿಕಮ್ ಟ್ಯಾಗೋರ್ "ಹಾರಲು ಅನುಮತಿ ಕೇಳಬೇಡಿ" ಎಂಬ ರಹಸ್ಯ ಪೋಸ್ಟ್ ಅನ್ನು ಹಂಚಿಕೊಂಡಿದ್ದ ಶಶಿ ತರೂರ್ ಅವರ ವಿರುದ್ಧವೂ 'ಪಕ್ಷಿಗಳ ಪೋಸ್ಟ್' ಹಂಚಿಕೊಂಡಿದ್ದಾರೆ. ಶಶಿ ತರೂರ್ ಅವರ ಈ ಪೋಸ್ಟ್ ನಂತರ ಕಾಂಗ್ರೆಸ್ ಪಕ್ಷದಲ್ಲಿ ಬಿರುಕು ಹೆಚ್ಚಾಯಿತು.

ಸ್ವತಂತ್ರ ಹಕ್ಕಿಯೂ ಆಕಾಶ ನೋಡಲೇಬೇಕು; ಶಶಿ ತರೂರ್ ನಿಗೂಢ ಪೋಸ್ಟ್‌ಗೆ ಕಾಂಗ್ರೆಸ್ ಪ್ರತಿಕ್ರಿಯೆ
Shashi Tharoor

Updated on: Jun 26, 2025 | 7:08 PM

ನವದೆಹಲಿ, ಜೂನ್ 26: ಶಶಿ ತರೂರ್ ಮತ್ತು ಕಾಂಗ್ರೆಸ್ ನಾಯಕರ ನಡುವೆ ಇದ್ದ ಭಿನ್ನಾಭಿಪ್ರಾಯ ಇದೀಗ ಬಹಿರಂಗವಾಗಿಯೇ ಗೋಚರವಾಗುತ್ತಿದೆ. ಶಶಿ ತರೂರ್ (Shashi Tharoor) ಮತ್ತು ಕಾಂಗ್ರೆಸ್ ಹೈಕಮಾಂಡ್ ನಿಗೂಢ ಅರ್ಥದಲ್ಲಿ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದಾರೆ. ನಿನ್ನೆ ಮಲ್ಲಿಕಾರ್ಜುನ ಖರ್ಗೆ “ನಮಗೆ ದೇಶ ಮೊದಲು, ಆದರೆ ಕೆಲವರಿಗೆ ಮೋದಿಯೇ ಮೊದಲು” ಎಂದು ಶಶಿ ತರೂರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಅದಕ್ಕೆ ಶಶಿ ತರೂರ್ ಸೋಷಿಯಲ್ ಮೀಡಿಯಾದಲ್ಲಿ “ರೆಕ್ಕೆ ನಿಮ್ಮದು, ಹಾರಲು ಯಾರ ಅನುಮತಿಯೂ ಬೇಕಾಗಿಲ್ಲ. ಆಕಾಶ ಯಾರದ್ದೂ ಅಲ್ಲ” ಎಂದು ಮಾರ್ಮಿಕ ಪೋಸ್ಟ್ ಮಾಡಿದ್ದರು. ಇದೀಗ ಅದಕ್ಕೆ ಮತ್ತೆ ತಿರುಗೇಟು ನೀಡಿರುವ ಕಾಂಗ್ರೆಸ್ ಸಂಸದ ಮಾಣಿಕಮ್ ಟ್ಯಾಗೋರ್ ಶಶಿ ತರೂರ್ ಅವರ ನಿಗೂಢವಾದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಇದು ಪಕ್ಷದೊಳಗಿನ ಆಂತರಿಕ ಉದ್ವಿಗ್ನತೆಯನ್ನು ಸೂಚಿಸುತ್ತದೆ.

“ಹಾರಲು ಅನುಮತಿ ಕೇಳಬೇಡಿ. ಪಕ್ಷಿಗಳು ಮೇಲೇರಲು ಅನುಮತಿ ಅಗತ್ಯವಿಲ್ಲ ಎಂಬುದು ನಿಜ. ಆದರೆ ಇಂದಿನ ದಿನಗಳಲ್ಲಿ ಸ್ವತಂತ್ರ ಹಕ್ಕಿಯೂ ಆಕಾಶವನ್ನು ನೋಡಬೇಕು. ಏಕೆಂದರೆ, ಗಿಡುಗಗಳು, ರಣಹದ್ದುಗಳು ಮತ್ತು ‘ಹದ್ದುಗಳು’ ಯಾವಾಗಲೂ ಬೇಟೆಯಾಡುತ್ತಲೇ ಇರುತ್ತವೆ. ಸ್ವಾತಂತ್ರ್ಯವು ಎಲ್ಲರಿಗೂ ಮುಕ್ತವಲ್ಲ. ವಿಶೇಷವಾಗಿ ಪರಭಕ್ಷಕಗಳು ದೇಶಭಕ್ತಿಯನ್ನು ಗರಿಗಳಾಗಿ ಧರಿಸಿದಾಗ ಸ್ವಾತಂತ್ರ್ಯ ಮುಕ್ತವಲ್ಲ” ಎಂದು ಪೋಸ್ಟ್ ಮಾಡಿದ್ದಾರೆ.


ಇದನ್ನೂ ಓದಿ: ಹಾರಲು ಯಾರ ಅನುಮತಿಯೂ ಕೇಳಬೇಡಿ, ರೆಕ್ಕೆ ನಿಮ್ಮದು; ಖರ್ಗೆ ಟೀಕೆ ಬೆನ್ನಲ್ಲೇ ಶಶಿ ತರೂರ್ ಮಾರ್ಮಿಕ ಪೋಸ್ಟ್

ಈ ಪೋಸ್ಟ್‌ನಲ್ಲಿ 6 ಬೇಟೆಯ ಪಕ್ಷಿಗಳು, ಬಾಲ್ಡ್ ಈಗಲ್, ರೆಡ್-ಟೇಲ್ಡ್ ಹಾಕ್, ಆಸ್ಪ್ರೇ, ಅಮೇರಿಕನ್ ಕೆಸ್ಟ್ರೆಲ್, ಟರ್ಕಿ ರಣಹದ್ದು ಮತ್ತು ಗ್ರೇಟ್ ಹಾರ್ನ್ಡ್ ಗೂಬೆಯನ್ನು ತೋರಿಸಲಾಗಿದೆ. “ಪರಭಕ್ಷಕ” ಎಂಬ ಪದದ ಉಲ್ಲೇಖವು ಶಶಿ ತರೂರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಬಹುದೇ ಎಂಬ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿವೆ.


4 ಬಾರಿ ತಿರುವನಂತಪುರಂ ಸಂಸದರಾಗಿರುವ ಶಶಿ ತರೂರ್ ಅವರನ್ನು ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂದೂರ್‌ನಲ್ಲಿ ಸರ್ವಪಕ್ಷ ನಿಯೋಗವನ್ನು ಮುನ್ನಡೆಸಲು ಸರ್ಕಾರ ಆಯ್ಕೆ ಮಾಡಿದ ನಂತರ ಶಶಿ ತರೂರ್ ಮತ್ತು ಕಾಂಗ್ರೆಸ್ ನಡುವೆ ಉದ್ವಿಗ್ನತೆ ಉಂಟಾಯಿತು. ಅಂದಿನಿಂದ, ಶಶಿ ತರೂರ್ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸರ್ಕಾರವನ್ನು ಪದೇ ಪದೇ ಹೊಗಳಿದ್ದಾರೆ, ಇದು ಕಾಂಗ್ರೆಸ್ ಪಕ್ಷವನ್ನು ಅಸಮಾಧಾನಗೊಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ