
ನವದೆಹಲಿ, ಸೆಪ್ಟೆಂಬರ್ 9: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧದ ಕ್ರಿಮಿನಲ್ ಮಾನನಷ್ಟ ಪ್ರಕರಣದ ಶೀಘ್ರ ವಿಚಾರಣೆ ಕೋರಿದ್ದ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಖಡಕ್ ಸಂದೇಶ ನೀಡಿದ್ದು, “ನಮ್ಮ ಮುಂದೆ ಎಲ್ಲರೂ ಸಮಾನರು” ಎಂದು ಸ್ಪಷ್ಟಪಡಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶ ನೀಡಿದೆ.
ರಾಹುಲ್ ಗಾಂಧಿ ನೀಡಿದ್ದರೆನ್ನಲಾದ ಹೇಳಿಕೆಯೊಂದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮಾನನಷ್ಟ ಪ್ರಕರಣವನ್ನು ಶೀಘ್ರವೇ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಅರ್ಜಿದಾರರ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಮನವಿಯನ್ನು ವಜಾಗೊಳಿಸಿದ ಪೀಠವು, ನ್ಯಾಯಾಲಯದಲ್ಲಿ ಸಾವಿರಾರು ಸಾಮಾನ್ಯ ನಾಗರಿಕರ ಅರ್ಜಿಗಳು ಸರದಿಯಲ್ಲಿದ್ದು, ನಿಯಮಿತ ಕ್ರಮದಲ್ಲೇ ವಿಚಾರಣೆ ನಡೆಯಲಿದೆ ಎಂದಿದೆ. ಯಾವುದೇ ವ್ಯಕ್ತಿಯ ರಾಜಕೀಯ ಸ್ಥಾನಮಾನವನ್ನು ಆಧರಿಸಿ ಪ್ರಕರಣಗಳ ಆದ್ಯತೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ಹೊರಹಾಕಿದೆ.
ವಿಚಾರಣೆಯ ದಿನಾಂಕವನ್ನು ನ್ಯಾಯಾಲಯದ ರೋಸ್ಟರ್ ಮತ್ತು ನಿಯಮಿತ ಪ್ರಕ್ರಿಯೆಯಂತೆಯೇ ನಿಗದಿಪಡಿಸಲಾಗುವುದು ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.
ವಿವಿಐಪಿ ಸಂಸ್ಕೃತಿಗೆ ಆಕ್ಷೇಪ:
ವಕೀಲ ಗೌರವ್ ಭಾಟಿಯಾ ವಾದಿಸಿ, “ರಾಹುಲ್ ಗಾಂಧಿಯವರೇನು ವಿವಿಐಪಿ ಅಲ್ಲ. ಡಿಸೆಂಬರ್ನ ಕೋರ್ಟ್ ಆದೇಶದಂತೆ ಪ್ರಕರಣವನ್ನು ಏಪ್ರಿಲ್ 22ರಂದು ಪಟ್ಟಿ ಮಾಡಬೇಕಿತ್ತು. ಆದರೆ, 5 ತಿಂಗಳು ಕಳೆದರೂ ಇದನ್ನು ವಿಚಾರಣೆಗೆ ತೆಗೆದುಕೊಂಡಿಲ್ಲ” ಎಂದರು. ಅಲ್ಲದೆ ತಮ್ಮ ಪ್ರಕರಣವನ್ನು ‘ದಿ ವೈರ್’ ಮಾಧ್ಯಮದ ಪ್ರಕರಣದೊಂದಿಗೆ ತಪ್ಪಾಗಿ ಜೋಡಿಸಲಾಗಿದ್ದು, ಅದನ್ನು ಪ್ರತ್ಯೇಕಿಸಬೇಕೆಂದು ಒತ್ತಾಯಿಸಿದರು.
ನ್ಯಾಯಪೀಠ ಅಸಮಾಧಾನ:
ಇದಕ್ಕೆ ಖಡಕ್ಕಾಗಿ ಉತ್ತರಿಸಿದ ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠ, “ನಮ್ಮ ಮುಂದೆ ಪ್ರತಿಯೊಬ್ಬರೂ ಸಮಾನರು. ವಿಚಾರಣೆಯನ್ನು ಶೀಘ್ರವಾಗಿ ನಡೆಸಬೇಕಿದ್ದರೆ ನಿಯಮಿತ ಅರ್ಜಿ ಸಲ್ಲಿಸಿ. ಆಗ ನಾವು ಅದನ್ನು ಕೈಗೆತ್ತಿಕೊಳ್ಳುತ್ತೇವೆ” ಎಂದು ತಿಳಿಸಿತು.
ಇದನ್ನೂ ಓದಿ: ಲಕ್ನೋದಲ್ಲಿ ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಗಾಂಧಿ ಇದ್ದ ಏರ್ ಇಂಡಿಯಾ ವಿಮಾನ
ಏನಿದು ಪ್ರಕರಣ?:
2022ರ ಡಿಸೆಂಬರ್‌ನಲ್ಲಿ ನಡೆದ ‘ಭಾರತ್ ಜೋಡೋ ಯಾತ್ರೆ’ ವೇಳೆ, ಅರುಣಾಚಲ ಪ್ರದೇಶದ ತವಾಂಗ್ ವಲಯದಲ್ಲಿ ಚೀನಾ ಪಡೆಗಳು ಭಾರತದ 2,000 ಚದರ ಕಿಲೋಮೀಟರ್ ಭೂಮಿಯನ್ನು ವಶಪಡಿಸಿಕೊಂಡಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಈ ಹೇಳಿಕೆಯು ಭಾರತೀಯ ಸೇನೆಯ ಮನೋಬಲವನ್ನು ಕುಗ್ಗಿಸುವ ಮತ್ತು ದೇಶದ ಐಕ್ಯತೆಗೆ ಧಕ್ಕೆ ತರುವ ದುರುದ್ದೇಶಪೂರಿತ ಹೇಳಿಕೆ ಎಂದು ಆರೋಪಿಸಿ ಬಿಆರ್‌ಒ ಮಾಜಿ ನಿರ್ದೇಶಕ ಶ್ರೀವಾಸ್ತವ ಲಕ್ನೋ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಈ ಪ್ರಕರಣದಲ್ಲಿ ಲಕ್ನೋ ಕೋರ್ಟ್ ನೀಡಿದ್ದ ಸಮನ್ಸ್ ರದ್ದುಗೊಳಿಸಲು ಅಲ್ಲಾಹಾಬಾದ್ ಹೈಕೋರ್ಟ್ ಮೇ 2025ರಲ್ಲಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆಗಸ್ಟ್ 2025ರಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆಗೆ ತಡೆ ನೀಡಿತ್ತು. ರಾಹುಲ್ ಗಾಂಧಿ ತಮ್ಮ ಅರ್ಜಿಯಲ್ಲಿ, ತಮ್ಮ ವಿರುದ್ಧ ರಾಜಕೀಯ ದುರುದ್ದೇಶದಿಂದ ಹಲವು ಪ್ರಕರಣಗಳನ್ನು ದಾಖಲಿಸಲಾಗುತ್ತಿದ್ದು, ಇವು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತೋಟಿ ಮಾಡುವ ಯತ್ನ ಎಂದು ಆರೋಪಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ