ಜೆಎನ್ಯುಗೆ ಹೊಸ ಉಪ ಕುಲಪತಿ ನೇಮಕದ ಬೆನ್ನಲ್ಲೇ ಅನಕ್ಷರತೆಯ ಪ್ರದರ್ಶನ ಎಂದು ಟೀಕಿಸಿದ ಬಿಜೆಪಿ ಸಂಸದ
ಶಾಂತಿಶ್ರೀ ಧೂಳಿಪುಡಿ ಪಂಡಿತ್ ಜೆಎನ್ಯುಗೆ ನೇಮಕಗೊಂಡ ಬೆನ್ನಲ್ಲೇ ಒಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ, ನನಗೆ ಹೀಗೊಂದು ಅವಕಾಶ ಕೊಟ್ಟಿದ್ದಕ್ಕೆ, ಪ್ರಧಾನಿ ಮೋದಿ ಮತ್ತು ಉನ್ನತ ಶಿಕ್ಷಣೆ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು.
ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವ ವಿದ್ಯಾನಿಲಯದ ಉಪಕುಲಪತಿಯನ್ನಾಗಿ ಪ್ರೊ. ಶಾಂತಿಶ್ರೀ ಧೂಳಿಪುಡಿ ಪಂಡಿತ್ರನ್ನು ನೇಮಕ ಮಾಡಿದ ಬೆನ್ನಲ್ಲೇ, ಬಿಜೆಪಿ ಸಂಸದ ವರುಣ್ ಗಾಂಧಿ ಟೀಕಿಸಿದ್ದಾರೆ. ದೆಹಲಿ ಜೆಎನ್ಯುಗೆ ಹೊಸ ಉಪ ಕುಲಪತಿ ನೇಮಕಗೊಂಡ ಬೆನ್ನಲ್ಲೇ, ಅವರ ಹೆಸರಲ್ಲಿ ಒಂದು ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ಆದರೆ ಈ ಮಾಧ್ಯಮ ಪ್ರಕಟಣೆ ಸರಿಯಿಲ್ಲ ಎಂಬುದು ವರುಣ್ ಗಾಂಧಿ ವ್ಯಂಗ್ಯ. ಟ್ವೀಟ್ ಮಾಡಿರುವ ವರುಣ್ ಗಾಂಧಿ, ಜೆಎನ್ಯುದ ನೂತನ ವೈಸ್ ಚಾನ್ಸಲರ್ ಅವರು ಹೀಗೊಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಆದರೆ ಇದರಲ್ಲಿ ಗ್ರಾಮರ್ ಮಿಸ್ಟೇಕ್ಗಳು ತುಂಬಿ ಹೋಗಿವೆ. ಅನಕ್ಷರತೆಯ ಪ್ರದರ್ಶನವಾಗಿದೆ. ಹೀಗೆ ತಪ್ಪುತಪ್ಪಾಗಿ ಇಂಗ್ಲಿಷ್ ಬರೆಯುವವರ ನೇಮಕ ಮಾಡುವುದು ನಮ್ಮ ಯುವಜನರ ಭವಿಷ್ಯದ ಮೇಲೆ ಮಾರಕ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಎಲ್ಲಿ ತಪ್ಪಿದೆ? ಅದು ಏನಾಗಬೇಕಿತ್ತು ಎಂಬುದನ್ನೂ ವಿವರಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ would strive ಎಂದು ಬರೆಯಲಾಗಿದೆ. ಅಲ್ಲಿwill strive ಎಂದಾಗಬೇಕಿತ್ತು. ಇನ್ನೊಂದೆಡೆ students friendly ಎಂದು ಬರೆಯಲಾಗಿದೆ ಅದು student-friendly ಸರಿಯಾದ ಪ್ರಯೋಗ. ಹಾಗೇ Excellences ಎಂದು ಬರೆಯಲಾಗಿದ್ದು, ಅದು excellence ಸರಿಯಾದ ಕ್ರಮ ಎಂದು ವಿವರಿಸಿದ್ದಾರೆ.
This press release from the new JNU VC is an exhibition of illiteracy,littered with grammatical mistakes (would strive vs will strive;students friendly vs student-friendly;excellences vs excellence).Such mediocre appointments serve to damage our human capital & our youth’s future pic.twitter.com/tSanmy3VfR
— Varun Gandhi (@varungandhi80) February 8, 2022
ಅಂದಹಾಗೇ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು ಜೆಎನ್ಯು ವಿಶ್ವವಿದ್ಯಾಲಯದ ಮೊದಲ ಮಹಿಳಾ ಉಪಕುಲಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಹಾರಾಷ್ಟ್ರದ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು. ಜೆಎನ್ಯೂದ ಹಳೇ ವಿದ್ಯಾರ್ಥಿನಿಯೇ ಆಗಿದ್ದಾರೆ. 1962ರಲ್ಲಿ ರಷ್ಯಾದ ಸೇಂಟ್ ಪೀರ್ಸ್ಬರ್ಗ್ನಲ್ಲಿ ಜನಿಸಿದ್ದು, 1988ರಲ್ಲಿ ಗೋವಾ ವಿಶ್ವವಿದ್ಯಾಲಯದಿಂದ ಬೋಧನಾ ವೃತ್ತಿ ಶುರು ಮಾಡಿದರು. 1993 ರಲ್ಲಿ ಪುಣೆ ವಿಶ್ವವಿದ್ಯಾಲಯಕ್ಕೆ ತೆರಳಿದರು. ಅವರು ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಸ್ಥಾನವನ್ನು ಹೊಂದಿದ್ದಾರೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC), ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ (ICSSR) ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಸಂದರ್ಶಕರ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಶಾಂತಿಶ್ರೀ ತಮ್ಮ ಬೋಧನಾ ವೃತ್ತಿಜೀವನದಲ್ಲಿ 29 ಪಿಎಚ್ಡಿ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ನಿನ್ನೆ ತಾವು ಜೆಎನ್ಯುಗೆ ನೇಮಕಗೊಂಡ ಬೆನ್ನಲ್ಲೇ ಒಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ, ನನಗೆ ಹೀಗೊಂದು ಅವಕಾಶ ಕೊಟ್ಟಿದ್ದಕ್ಕೆ, ಪ್ರಧಾನಿ ಮೋದಿ ಮತ್ತು ಉನ್ನತ ಶಿಕ್ಷಣೆ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು. ಹಾಗೇ, ವಿದ್ಯಾರ್ಥಿ ಸ್ನೇಹಿ ವಾತಾವರಣ ಸೃಷ್ಟಿಸಲಾಗುವುದು. ಸ್ವಚ್ಛ ಆಡಳಿತಕ್ಕೆ ಆದ್ಯತೆ ನೀಡಲಾಗುವುದು ಎಂಬಿತ್ಯಾದಿ ವಿವರಣೆಗಳನ್ನು ನೀಡಿದ್ದರು. ಆದರೆ ಅದರಲ್ಲಿರುವ ಕೆಲವು ಸ್ಪೆಲ್ಲಿಂಗ್ ಮತ್ತು ಗ್ರಾಮರ್ ತಪ್ಪುಗಳನ್ನು ವರುಣ್ ಗಾಂಧಿ ಕಂಡು ಹಿಡಿದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಹಿಜಾಬ್ ವಿವಾದವನ್ನು ಸೃಷ್ಟಿಸಿ ಬಿಜೆಪಿ ತಲೆ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದೆ: ಕೆ ಎಸ್ ಈಶ್ವರಪ್ಪ