AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rameshwaram Cafe: ಅವಧಿ ಮೀರಿದ ಆಹಾರ, ಸ್ವಚ್ಛತೆ ಕೊರತೆ; ರಾಮೇಶ್ವರಂ ಕೆಫೆ ಮೇಲೆ ದಾಳಿ

ತೆಲಂಗಾಣದ ಆಹಾರ ಸುರಕ್ಷತಾ ಇಲಾಖೆಯು ಮೇ ಗುರುವಾರ (ಮೇ 23) ಹೈದರಾಬಾದ್‌ನ ಮಾದಪುರ್ ಪ್ರದೇಶದಲ್ಲಿ ತಪಾಸಣೆ ನಡೆಸಿತು. ಅವರು ದಾಳಿ ನಡೆಸಿದ ಸ್ಥಳಗಳಲ್ಲಿ ಬೆಂಗಳೂರು ಮೂಲದ ಜನಪ್ರಿಯ ಹೋಟೆಲ್ ಬ್ರ್ಯಾಂಡ್ ಆಗಿರುವ ರಾಮೇಶ್ವರಂ ಕೆಫೆಯ ಶಾಖೆ ಕೂಡ ಒಂದು.

Rameshwaram Cafe: ಅವಧಿ ಮೀರಿದ ಆಹಾರ, ಸ್ವಚ್ಛತೆ ಕೊರತೆ; ರಾಮೇಶ್ವರಂ ಕೆಫೆ ಮೇಲೆ ದಾಳಿ
ಹೈದರಾಬಾದ್​ನ ರಾಮೇಶ್ವರಂ ಕೆಫೆImage Credit source: indian express
ಸುಷ್ಮಾ ಚಕ್ರೆ
|

Updated on:May 24, 2024 | 5:32 PM

Share

ಹೈದರಾಬಾದ್: ಹೈದರಾಬಾದ್‌ನಲ್ಲಿರುವ (Hyderabad) ಆಹಾರ ಸುರಕ್ಷತಾ ವಿಭಾಗವು ಬೆಂಗಳೂರು ಮೂಲದ ರಾಮೇಶ್ವರಂ ಕೆಫೆಯ (Rameshwaram Cafe) ಮೇಲೆ ದಾಳಿ ನಡೆಸಿದೆ. ದಕ್ಷಿಣ ಭಾರತದ ಪ್ರಸಿದ್ಧ ಹೋಟೆಲ್ ಆಗಿರುವ ರಾಮೇಶ್ವರಂ ಕೆಫೆ ಬೆಂಗಳೂರು ಮೂಲದ್ದಾಗಿದೆ. ಇತ್ತೀಚೆಗೆ ಬೆಂಗಳೂರಿನ ವೈಟ್​ಫೀಲ್ಡ್ ಬಳಿ ಇರುವ ರಾಮೇಶ್ವರಂ ಕೆಫೆಯ ಬ್ರಾಂಚ್​ನಲ್ಲಿ ಬಾಂಬ್ ಸ್ಫೋಟವಾಗಿತ್ತು. ಕೆಲವೇ ದಿನಗಳ ಹಿಂದಷ್ಟೇ ರಾಮೇಶ್ವರಂ ಕೆಫೆ ಹೈದರಾಬಾದ್​ನಲ್ಲೂ ಶಾಖೆಯನ್ನು ತೆರೆದಿತ್ತು.

ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ರಾಮೇಶ್ವರಂ ಕೆಫೆಯಲ್ಲಿ ಗುರುವಾರ ಹಲವಾರು ಉಲ್ಲಂಘನೆಗಳನ್ನು ಕಂಡುಹಿಡಿದಿದ್ದಾರೆ. ಏಕೆಂದರೆ ರೆಸ್ಟೋರೆಂಟ್ ಅವಧಿ ಮುಗಿದ ಮತ್ತು ಲೇಬಲ್ ಹಾಕದ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಆಹಾರ ಸುರಕ್ಷತಾ ಇಲಾಖೆ ಪ್ರಕಾರ, 16,000 ರೂ. ಮೌಲ್ಯದ 100 ಕೆ.ಜಿ ಉದ್ದಿನ ಬೇಳೆ, 10 ಕೆ.ಜಿ ನಂದಿನಿ ಮೊಸರು ಮತ್ತು 8 ಲೀಟರ್ ಅವಧಿ ಮುಗಿದ ಹಾಲು ಈ ಹೋಟೆಲ್​ನ ಅಡುಗೆಮನೆಯಲ್ಲಿ ಕಂಡುಬಂದಿದೆ.

ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಅಡುಗೆಮನೆಯಲ್ಲಿ ಅಸಮರ್ಪಕ ಮತ್ತು ಅಸ್ಪಷ್ಟ ಲೇಬಲ್ ಹೊಂದಿರುವ ಇತರ ಕೆಲವು ವಸ್ತುಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ. “ರಾಮೇಶ್ವರಂ ಕೆಫೆಯಿಂದ ಸರಿಯಾಗಿ ಲೇಬಲ್ ಮಾಡದ 450 ಕೆಜಿ ಅಕ್ಕಿ, 20 ಕೆಜಿ ಬಿಳಿ ಲೇಬಿಯಾ ಮತ್ತು 300 ಕೆಜಿ ಬೆಲ್ಲವನ್ನು ಸಹ ವಶಪಡಿಸಿಕೊಳ್ಳಲಾಗಿದೆ” ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ. ಆಹಾರ ನಿರ್ವಾಹಕರಿಗೆ ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರವನ್ನು ಸಲ್ಲಿಸಲಾಗಿಲ್ಲ ಮತ್ತು ರಾಮೇಶ್ವರಂ ಕೆಫೆಯಲ್ಲಿ ಡಸ್ಟ್‌ಬಿನ್‌ಗಳನ್ನು ಮುಚ್ಚಳದಿಂದ ಮುಚ್ಚಿಲ್ಲ ಎಂದು ಕೂಡ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ: ಬೆಂಗಳೂರಿನ ನಾಲ್ಕು ಕಡೆ ಎನ್​ಐಎ ಅಧಿಕಾರಿಗಳ ದಾಳಿ

ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೈದರಾಬಾದ್‌ನ ಅನೇಕ ಸ್ಥಳಗಳಲ್ಲಿ ದಾಳಿ ನಡೆಸುತ್ತಿದ್ದಾರೆ. ಈ ವೇಳೆ ಅನೇಕ ಜನಪ್ರಿಯ ತಿನಿಸುಗಳು ಸ್ವಚ್ಛತಾ ಮಾನದಂಡಗಳನ್ನು ನಿರ್ವಹಿಸದಿರುವುದು ಕಂಡುಬಂದಿದೆ. ಇದೇ ದಿನ, ಬಾಹುಬಲಿ ಕಿಚನ್ ಹೆಸರಿನ ರೆಸ್ಟೋರೆಂಟ್ ಮೇಲೆ ಕೂಡ ದಾಳಿ ನಡೆಸಲಾಯಿತು. ಅಲ್ಲಿ ಸಂಗ್ರಹಿಸಲಾದ ಆಹಾರ ಪದಾರ್ಥಗಳಲ್ಲಿ ಜಿರಳೆಗಳು ಕಂಡುಬಂದಿವೆ. ರೆಸ್ಟೋರೆಂಟ್‌ನ ಅಡುಗೆ ಕೋಣೆ ತುಂಬಾ ಅನೈರ್ಮಲ್ಯದಿಂದ ಕೂಡಿದ್ದು, ರೆಸ್ಟೋರೆಂಟ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ರಾಮೇಶ್ವರಂ ಕೆಫೆಯ ಬ್ರಾಂಚ್ ಅನ್ನು ಈ ವರ್ಷದ ಜನವರಿಯಲ್ಲಿ ಹೈದರಾಬಾದ್‌ನ ಮಾದಾಪುರ ಪ್ರದೇಶದಲ್ಲಿ ಪ್ರಾರಂಭಿಸಲಾಯಿತು. ಈ ಕೆಫೆಯು ತುಪ್ಪದ ಇಡ್ಲಿಗಳು ಮತ್ತು ದೋಸೆಗಳಿಗೆ ಹೆಸರುವಾಸಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಆಹಾರಪ್ರಿಯರಲ್ಲಿ ಇದು ಜನಪ್ರಿಯತೆಯನ್ನು ಗಳಿಸಿದೆ. ಸಂಪೂರ್ಣ ಜನಸಂದಣಿಯಿಂದ ಕೂಡಿರುವ ಈ ರೆಸ್ಟೊರೆಂಟ್‌ಗೆ ಅನೇಕ ಸೆಲೆಬ್ರಿಟಿಗಳು ಆಗಾಗ ಭೇಟಿ ನೀಡುತ್ತಿದ್ದು, ಇತ್ತೀಚೆಗೆ ಬೆಂಗಳೂರಿನ ವೈಟ್​ಫೀಲ್ಡ್ ಸಮೀಪದ ಶಾಖೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಿಂದ ಈ ರೆಸ್ಟೋರೆಂಟ್ ಸುದ್ದಿಯಾಗಿತ್ತು. ಮಾರ್ಚ್ 1ರಂದು ಬೆಂಗಳೂರಿನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 10 ಜನರು ಗಾಯಗೊಂಡಿದ್ದರು.

ಇದನ್ನೂ ಓದಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ​​: ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

ಹೈದರಾಬಾದ್​ನ ಬ್ರಾಂಚ್​ನಲ್ಲಿ ಆದ ದಾಳಿಯ ಬಗ್ಗೆ ರಾಮೇಶ್ವರಂ ಕೆಫೆಯ ಸಂಸ್ಥಾಪಕರಾದ ದಿವ್ಯಾ ರಾಘವೇಂದ್ರ ರಾವ್ ಮತ್ತು ರಾಘವೇಂದ್ರ ರಾವ್ ಪ್ರತಿಕ್ರಿಯಿಸಿದ್ದಾರೆ. “ಆಹಾರ ಸುರಕ್ಷತೆ ವಿಭಾಗದ ಕ್ರಮಗಳನ್ನು ಗಮನಿಸಿದ್ದೇವೆ. ನಾವು ಈಗಾಗಲೇ ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ. ವಾಸ್ತವಾಂಶವನ್ನು ಪರಿಶೀಲಿಸಲು ಮತ್ತು ಪ್ರತಿ ಔಟ್ಲೆಟ್ ಅನ್ನು ಪರಿಶೀಲಿಸಲು ಆಂತರಿಕ ತನಿಖೆಗೆ ಆದೇಶಿಸಿದ್ದೇವೆ. ನಾವು ಅಧಿಕಾರಿಗಳಿಗೆ ಎಲ್ಲಾ ಸಹಕಾರವನ್ನು ನೀಡುತ್ತೇವೆ. ನಮ್ಮ ಹೈದರಾಬಾದ್ ಔಟ್‌ಲೆಟ್‌ನಲ್ಲಿ ಬಳಕೆಯ ದೃಷ್ಟಿಕೋನದಿಂದ ನಮಗೆ ವಾರಕ್ಕೆ 500 ಕೆಜಿಗೂ ಹೆಚ್ಚು ಉದ್ದಿನಬೇಳೆ, ಪ್ರತಿದಿನ 300 ಲೀಟರ್ ಹಾಲು ಮತ್ತು 80ರಿಂದ 100 ಲೀಟರ್ ಮೊಸರು ಬೇಕಾಗುತ್ತದೆ. ಪತ್ತೆಯಾದ ಸ್ಟಾಕ್‌ಗಳನ್ನು ಸೀಲ್ ಮಾಡಲಾಗಿದೆ. ನಾವು ಅತ್ಯುತ್ತಮ ಮಾರಾಟಗಾರರಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪಡೆಯುತ್ತೇವೆ. ನಮ್ಮ ಅಡುಗೆಮನೆಯಲ್ಲಿ ಜಿರಳೆಗಳು ಕಂಡುಬಂದಿವೆ ಎಂದು ಕೆಲವು ವರದಿಗಳು ಸುಳ್ಳು ಹೇಳಿಕೆ ನೀಡಿವೆ. ಅಧಿಕೃತ ವರದಿಯು ಇದನ್ನು ಉಲ್ಲೇಖಿಸಿಲ್ಲ. ವಾಸ್ತವವಾಗಿ, ಜಿರಳೆಗಳು ಬೇರೆ ರೆಸ್ಟೋರೆಂಟ್‌ನಲ್ಲಿ ಕಂಡುಬಂದಿವೆ, ರಾಮೇಶ್ವರಂ ಕೆಫೆಯಲ್ಲಿ ಅಲ್ಲ. ನಮ್ಮ ಕೆಫೆಯಲ್ಲಿ, ನಾವು ನಮ್ಮ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಪ್ರತಿ ತಿಂಗಳು ಶುಚಿಗೊಳಿಸುವಿಕೆ ಮತ್ತು ಕೀಟ ನಿಯಂತ್ರಣವನ್ನು ನಡೆಸುವುದನ್ನು ಅನುಸರಿಸುತ್ತೇವೆ. ನಾವು ಅಧಿಕಾರಿಗಳಿಂದ ಯಾವುದೇ ಶೋಕಾಸ್ ಸೂಚನೆಯನ್ನು ಸ್ವೀಕರಿಸಿಲ್ಲ. ನಾವು ಅವರಿಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಎಂದು ಸ್ಪಷ್ಟಪಡಿಸಲು ಬಯಸುತ್ತೇವೆ. ರಾಜ್ಯಗಳಾದ್ಯಂತ ನಮ್ಮ ಎಲ್ಲಾ ಮಳಿಗೆಗಳನ್ನು ಪರಿಶೀಲಿಸಲಾಗುತ್ತದೆ. ನಮ್ಮ ಗ್ರಾಹಕರ ಹೃದಯ ಗೆಲ್ಲಲು ಆಹಾರ ಮತ್ತು ಸೇವೆಗಳ ಕೆಲವು ಮಾನದಂಡಗಳನ್ನು ನಿರ್ವಹಿಸುವುದು ಮುಖ್ಯವಾಗಿದೆ ಎಂದು ನಾವು ಯಾವಾಗಲೂ ನಂಬಿದ್ದೇವೆ.” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:30 pm, Fri, 24 May 24