Fact Check: ಧೀರೇಂದ್ರ ಕೃಷ್ಣ ಶಾಸ್ತ್ರಿ ಪಾದಯಾತ್ರೆ ಎಂದು ಚಿತ್ರದುರ್ಗದ ಗಣೇಶ ವಿಸರ್ಜನೆ ಮೆರವಣಿಗೆ ವಿಡಿಯೋ ವೈರಲ್
ವೈರಲ್ ವಿಡಿಯೋ ಧೀರೇಂದ್ರ ಕೃಷ್ಣ ಶಾಸ್ತ್ರಿಯವರ ಸನಾತನ ಹಿಂದೂ ಏಕತಾ ಪಾದಯಾತ್ರೆಯದ್ದಲ್ಲ. ಬದಲಾಗಿ ಇದು ಸೆಪ್ಟೆಂಬರ್ 2024 ರಲ್ಲಿ ಕರ್ನಾಟಕದ ಚಿತ್ರದುರ್ಗದಲ್ಲಿ ಗಣೇಶ ವಿಸರ್ಜನೆಯ ಸಮಯದಲ್ಲಿ ತೆಗೆದ ಮೆರವಣಿಗೆಯ ವಿಡಿಯೋ ಆಗಿದೆ.
ಹಿಂದೂ ಐಕ್ಯತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಾಗೇಶ್ವರ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿಯವರು ಹಮ್ಮಿಕೊಂಡಿದ್ದ ಏಕತಾ ಪಾದಯಾತ್ರೆ ಇತ್ತೀಚೆಗಷ್ಟೆ ಮುಕ್ತಾಯಗೊಂಡಿತು. ಬಾಗೇಶ್ವರ ಧಾಮದಿಂದ 160 ಕಿಮೀ ಪಾದಯಾತ್ರೆ ಮಾಡಿ ಮಧ್ಯಪ್ರದೇಶದ ಓರ್ಚಾದಲ್ಲಿ ಕೊನೆಗೊಳಿಸಿದರು. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ರಸ್ತೆಯಲ್ಲಿ ಜನರ ದೊಡ್ಡ ಗುಂಪನ್ನು ಕಾಣಬಹುದು. ಕೆಲವರು ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದು, ಇದು ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಹಿಂದೂ ಏಕತಾ ಪಾದಯಾತ್ರೆ ಎಂದು ಹೇಳುತ್ತಿದ್ದಾರೆ.
ವೈರಲ್ ಪೋಸ್ಟ್ನಲ್ಲಿ ಏನಿದೆ?:
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, “ಹಿಂದೂ ಏಕತಾ ಪಾದಯಾತ್ರೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ, ಇದು ಇಲ್ಲಿಯವರೆಗಿನ ಅತಿದೊಡ್ಡ ಪಾದಯಾತ್ರೆ. ಜೈ ಶ್ರೀ ರಾಮ್ ಜೈ ಶ್ರೀ ಬಾಗೇಶ್ವರ ಸರ್ಕಾರ್ ಹಿಂದುತ್ವ ನನ್ನ ಆತ್ಮ” ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವಾಸ್ತವವಾಗಿ, ವೈರಲ್ ವಿಡಿಯೋ ಧೀರೇಂದ್ರ ಕೃಷ್ಣ ಶಾಸ್ತ್ರಿಯವರ ಸನಾತನ ಹಿಂದೂ ಏಕತಾ ಪಾದಯಾತ್ರೆಯದ್ದಲ್ಲ. ಬದಲಾಗಿ ಇದು ಸೆಪ್ಟೆಂಬರ್ 2024 ರಲ್ಲಿ ಕರ್ನಾಟಕದ ಚಿತ್ರದುರ್ಗದಲ್ಲಿ ಗಣೇಶ ವಿಸರ್ಜನೆಯ ಸಮಯದಲ್ಲಿ ತೆಗೆದ ಮೆರವಣಿಗೆಯ ವಿಡಿಯೋ ಆಗಿದೆ. ಇದನ್ನು ಸದ್ಯ ಸನಾತನ ಹಿಂದೂ ಏಕತಾ ಪಾದಯಾತ್ರೆಗೆ ಸಂಬಂಧಿಸಿದಂತೆ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಕ್ಲಿಪ್‌ನ ಸತ್ಯವನ್ನು ತಿಳಿಯಲು, ಮೊದಲನೆಯದಾಗಿ ಅದರ ಹಲವಾರು ಪ್ರಮುಖ ಫ್ರೇಮ್‌ಗಳನ್ನು ತೆಗೆದುಕೊಂಡು ಗೂಗಲ್ ಲೆನ್ಸ್ ಟೂಲ್ ಮೂಲಕ ಹುಡುಕಿದ್ದೇವೆ. ಆಗ RSY & VK ಹೆಸರಿನ ಎಕ್ಸ್ ಹ್ಯಾಂಡಲ್‌ನಲ್ಲಿ ನಾವು ಇದೇ ವಿಡಿಯೋವನ್ನು ಕಂಡುಕೊಂಡಿದ್ದೇವೆ. ಅಕ್ಟೋಬರ್ 1, 2024 ರಂದು ಇವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಚಿತ್ರದುರ್ಗದಲ್ಲಿ ಗಣೇಶ ವಿರ್ಜನೆಯ ಮೆರವಣಿಗೆಯಲ್ಲು ಜನ ಸಾಗರ ಎಂಬಂತೆ ಬರೆಯಲಾಗಿದೆ.
CHITRADURGA HINDU MAHA GANAPATHI 🙏✨
Biggest Ganapati Procession in Karnataka 🥵🥶 https://t.co/xLkjr1hJ8y pic.twitter.com/uNWH4OXhPt
— RSY & VKᵀᵒˣᶦᶜ (@RSY_VK_01) October 1, 2024
ಹಾಗೆಯೆ ನಮಗೆ ಹಿಂದೂ ಮಹಾ ಗಣಪತಿ ಚಿತ್ರದುರ್ಗ 2023 ಎಂಬ ಹೆಸರಿನ ಫೇಸ್‌ಬುಕ್ ಪುಟದಲ್ಲಿ ಕುಡ ಇದೇ ವಿಡಿಯೋ ಕಂಡುಬಂದಿದೆ. ಅಕ್ಟೋಬರ್ 2, 2024 ರಂದು ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ, ಇದು ಚಿತ್ರದುರ್ಗದಲ್ಲಿ ಗಣೇಶ ವಿಸರ್ಜನೆಯ ಮೆರವಣಿಗೆ ಎಂದು ಹೇಳಲಾಗಿದೆ.
ಹೀಗೆ ಅನೇಕ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಹ್ಯಾಂಡಲ್‌ನಲ್ಲಿ ನಾವು ಈ ವಿಡಿಯೋವನ್ನು ಕಂಡುಕೊಂಡಿದ್ದು, ಎಲ್ಲ ವಿಡಿಯೋದಲ್ಲಿ ಇದನ್ನು ಚಿತ್ರದುರ್ಗ ಹಿಂದೂ ಮಹಾ ಗಣಪತಿ ನಿಮಜ್ಜನ ಎಂದು ವಿವರಿಸಲಾಗಿದೆ.
ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ಸ್ಥಳೀಯ ಪತ್ರಕರ್ತರಿಗೆ ವಿಡಿಯೋವನ್ನು ಕಳುಹಿಸಿ ಕೇಳಿದ್ದೇವೆ. ಈ ವಿಡಿಯೋ ಕರ್ನಾಟಕದ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ನಿಮಜ್ಜನದ ಸಮಯದ್ದಾಗಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ವೈರಲ್ ವಿಡಿಯೋ ಧೀರೇಂದ್ರ ಕೃಷ್ಣ ಶಾಸ್ತ್ರಿಯವರ ಸನಾತನ ಹಿಂದೂ ಏಕತಾ ಪಾದಯಾತ್ರೆಯದ್ದಲ್ಲ ಎಂದು ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಕಂಡುಕೊಂಡಿದೆ. ವಾಸ್ತವವಾಗಿ, ಈ ವಿಡಿಯೋ ಕರ್ನಾಟಕದ ಚಿತ್ರದುರ್ಗದಲ್ಲಿ ಗಣೇಶ ವಿಸರ್ಜನೆ ಸಮಯದಲ್ಲಿ ತೆಗೆದ ಶೋಭಾ ಯಾತ್ರೆಯ ವಿಡಿಯೋವಾಗಿದೆ. ಅದನ್ನು ಈಗ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ನಟ ಪಂಕಜ್ ತ್ರಿಪಾಠಿ ಬಿಜೆಪಿಗೆ ಮತ ಹಾಕಬೇಡಿ ಎಂದು ಪ್ರಚಾರ ಮಾಡಿರುವುದು ನಿಜವೇ?
ಕಳೆದ ವಾರ ಕೂಡ ಧೀರೇಂದ್ರ ಶಾಸ್ತ್ರಿ ಅವರ ಪಾದಯಾತ್ರೆಯ ಸಮಯದಲ್ಲಿ ಕೆಲವರು ಔರಂಗಜೇಬ್ ಅವರ ಪೋಸ್ಟರ್‌ಗಳನ್ನು ತೋರಿಸಿದ್ದಾರೆ ಮತ್ತು ಔರಂಗಜೇಬ್ ಜಿಂದಾಬಾದ್ ಎಂದು ಘೋಷಣೆಗಳನ್ನು ಜನರು ಕೂಗಿದರು ಎಂದು ಹೇಳಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆದರೆ, ಇದು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯದ್ದು. ಇದನ್ನು ಧೀರೇಂದ್ರ ಶಾಸ್ತ್ರಿ ಅವರ ಪಾದಯಾತ್ರೆಗೆ ಲಿಂಕ್ ಮಾಡಿ ದಾರಿತಪ್ಪಿಸುವ ರೀತಿಯಲ್ಲಿ ಶೇರ್ ಮಾಡಲಾಗಿತ್ತು.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ