ರಾಜ್ಯಸಭೆಯಲ್ಲಿ ನೀರಿನ ಬಾಟಲ್ ನೀಡಿದ ಸುಧಾ ಮೂರ್ತಿ; ಮಾತೃತ್ವಕ್ಕೆ ಸಲಾಂ ಎಂದ ಕೇಂದ್ರ ಸಚಿವ ರಾಮಮೋಹನ್ ನಾಯ್ಡು
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ರಾಜ್ಯಸಭಾ ಸದಸ್ಯೆಯೂ ಹೌದು. ಸುಧಾ ಮೂರ್ತಿಯ ಸರಳತೆಯ ಬಗ್ಗೆ ಒಂದೆಡೆ ಭಾರೀ ಮೆಚ್ಚುಗೆ ವ್ಯಕ್ತವಾದರೆ ಇನ್ನೊಂದೆಡೆ ಸುಧಾ ಮೂರ್ತಿ ಸರಳ ವ್ಯಕ್ತಿಯಂತೆ ನಾಟಕವಾಡುತ್ತಾರೆ ಎಂಬ ಟೀಕೆಯೂ ಹರಿದಾಡುತ್ತಲೇ ಇರುತ್ತವೆ. ಆದರೆ, ಸುಧಾ ಮೂರ್ತಿ ಮತ್ತೊಮ್ಮೆ ತಾವು ಎಷ್ಟು ಸರಳ ವ್ಯಕ್ತಿಯೆಂಬುದನ್ನು ಸಾಬೀತುಪಡಿಸಿದ್ದಾರೆ.
ನವದೆಹಲಿ: ರಾಜ್ಯಸಭೆಯಲ್ಲಿ ಕುತೂಹಲಕಾರಿ ದೃಶ್ಯವೊಂದು ನಡೆದಿದೆ. ಕೇಂದ್ರ ಸಚಿವ ರಾಮಮೋಹನ್ ನಾಯ್ಡು ಮಾತನಾಡುವಾಗ ಅವರಿಗೆ ಗಂಟಲು ಒಣಗಿದೆ. ಆಗ ಅಲ್ಲಿನ ಸಿಬ್ಬಂದಿಗೆ ನೀರು ತರಲು ಹೇಳಿದ್ದಾರೆ. ಅವರು ನೀರು ತರುವಷ್ಟರಲ್ಲಿ ಸುಧಾ ಮೂರ್ತಿಯವರೇ ನೀರಿನ ಬಾಟಲ್ ನೀಡಿದ್ದಾರೆ. ಅದಕ್ಕೆ ಧನ್ಯವಾದ ಹೇಳಿದ ರಾಮಮೋಹನ್ ನಾಯ್ಡು ನೀವು ನಮಗೆಲ್ಲ ತಾಯಿ ಸ್ವರೂಪರಾಗಿದ್ದೀರಿ. ನಿಮ್ಮ ಮಾತೃತ್ವವನ್ನು ಸದಾ ಸಾಬೀತುಪಡಿಸುತ್ತಲೇ ಇರುತ್ತೀರಿ ಎಂದು ನಮಸ್ಕರಿಸಿದ್ದಾರೆ.
ಸುಧಾಮೂರ್ತಿ ಅವರ ವಾತ್ಸಲ್ಯಕ್ಕೆ ಮನಸೋತ ಕೇಂದ್ರ ಸಚಿವ ರಾಮಮೋಹನ್ ನಾಯ್ಡು ಅವರಿಗೆ ಎರಡೂ ಕೈಗಳಿಂದ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ಸದಾ ತನ್ನನ್ನು ತನ್ನ ತಾಯಿಯಂತೆಯೇ ನಡೆಸಿಕೊಂಡಿರುವುದಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಸದ್ಯ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಸಂಸತ್ತಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಬಿಸಿ ಬಿಸಿ ಚರ್ಚೆಯಲ್ಲಿ ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಖ್ಯಾತ ಸಾಮಾಜಿಕ ಕಾರ್ಯಕರ್ತೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು ರಾಜ್ಯಸಭೆಯಲ್ಲಿ ತೋರಿದ ಮಾತೃ ಪ್ರೇಮಕ್ಕೆ ಸಂಸತ್ತಿನ ಎಲ್ಲ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಕೈ ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Sudha Murthy: ದೇಶದ ಶ್ರೀಮಂತ ಮಹಿಳೆ ಸುಧಾ ಮೂರ್ತಿ 300 ಪುಸ್ತಕಗಳ ಲೇಖಕಿಯೂ ಹೌದು!
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಅವರು ಭಾರತೀಯ ವಾಯು ಯಾನ ವಿಧೇಯಕ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದಾರೆ. ಆದರೆ, ಗುರುವಾರದ ಚರ್ಚೆಗೆ ಉತ್ತರ ನೀಡುವಾಗ ಅವರಿಗೆ ಬಾಯಾರಿಕೆಯಾಯಿತು. ಸಭಾಧ್ಯಕ್ಷರ ಆಸನದಲ್ಲಿದ್ದ ಉಪ ಸಭಾಪತಿ ಹರಿವಂಶ್ ಅವರಿಗೆ ನೀರು ತರಿಸಲು ಹೇಳಿದರು. ಕೂಡಲೇ ಸ್ಪಂದಿಸಿದ ಅವರು ಅಲ್ಲಿನ ಸಿಬ್ಬಂದಿಗೆ ನೀರು ತರುವಂತೆ ಆದೇಶಿಸಿದರು.
ಆದರೆ, ರಾಜ್ಯಸಭಾ ಸಿಬ್ಬಂದಿ ನೀರು ತರುವ ಮುನ್ನವೇ ಸದನದಲ್ಲಿದ್ದ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಆಸನದಿಂದ ಎದ್ದು ಬಂದು ತನ್ನಲ್ಲಿದ್ದ ನೀರಿನ ಬಾಟಲಿಯನ್ನು ಕೇಂದ್ರ ಸಚಿವ ರಾಮಮೋಹನ್ ನಾಯ್ಡು ಅವರಿಗೆ ನೀಡಿದರು. ಸುಧಾಮೂರ್ತಿಯ ವಾತ್ಸಲ್ಯಕ್ಕೆ ಎರಡೂ ಕೈಗಳಿಂದ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದ ರಾಮಮೋಹನ್ ನಾಯ್ಡು ಅವರ ಮಾತೃತ್ವಕ್ಕೆ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ: Fact Check: ದಿನಕ್ಕೆ ಒಂದು ಲಕ್ಷ ಸಂಪಾದನೆ ಮಾಡಲು ಸುಧಾ ಮೂರ್ತಿ ಹೇಳಿದ್ದಾರೆಂಬ ವಿಡಿಯೋ ವೈರಲ್
73 ವರ್ಷದ ಸುಧಾ ಮೂರ್ತಿ ಪ್ರಸ್ತುತ ಮೂರ್ತಿ ಟ್ರಸ್ಟ್‌ನ ಅಧ್ಯಕ್ಷೆಯಾಗಿದ್ದಾರೆ. ಅವರು ಲೇಖಕಿ, ಶಿಕ್ಷಣತಜ್ಞ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿ ದೇಶಾದ್ಯಂತ ಬಹಳ ಜನಪ್ರಿಯರಾಗಿದ್ದಾರೆ. ಸುಧಾ ಮೂರ್ತಿ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸುಧಾ ಮೂರ್ತಿ ಅವರು ಇನ್ಫೋಸಿಸ್ ಫೌಂಡೇಷನ್ ಮೂಲಕ ಹಲವಾರು ಅನಾಥಾಶ್ರಮಗಳನ್ನು ಸ್ಥಾಪಿಸಿದ್ದಾರೆ. ಅವರು ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರು ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಮತ್ತು ಗ್ರಂಥಾಲಯ ಸೌಲಭ್ಯಗಳನ್ನು ಒದಗಿಸಿದ್ದಾರೆ. ಆಕೆಯ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರವು 2006ರಲ್ಲಿ ಪದ್ಮಶ್ರೀ ಮತ್ತು 2023ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ