
ಬೆಂಗಳೂರು (ಮೇ. 08): ಭಾರತ ಮಂಗಳವಾರ ತಡರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಜೆಕೆ) ದಲ್ಲಿರುವ ಭಯೋತ್ಪಾದಕ ಅಡಗುತಾಣಗಳ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಇದು ಕೆಲವು ಕಟ್ಟಡಗಳು ಬೆಂಕಿಯಲ್ಲಿ ಉರಿಯುತ್ತಿರುವುದನ್ನು ತೋರಿಸುತ್ತದೆ. ಕೆಲವು ಬಳಕೆದಾರರು ಇದನ್ನು ಹಂಚಿಕೊಂಡು, ಪಾಕಿಸ್ತಾನ ಮತ್ತು ಪಿಒಜೆಕೆಯಲ್ಲಿರುವ ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತೀಯ ಆರ್ಮಿ ಮಾಡಿರುವ ದಾಳಿಯ ವಿಡಿಯೋ ಎಂದು ಹೇಳಿಕೊಳ್ಳುತ್ತಿದ್ದಾರೆ.
ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಪೋಸ್ಟ್ ಮಾಡಿಕೊಂಡು, “ಭಾರತೀಯ ಯುದ್ಧ ವಿಮಾನವು ಮೇಲಿನಿಂದ ಬಾಂಬ್‌ಗಳನ್ನು ಬೀಳಿಸಿತು, ಈಗ ಇಡೀ ಪಾಕಿಸ್ತಾನ ನಾಶವಾಗುತ್ತಿದೆ, ಪಾಕಿಸ್ತಾನದ ಪ್ರಧಾನಿ ಕೂಡ ಆಘಾತಕ್ಕೊಳಗಾಗಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಟಿವಿ9 ಕನ್ನಡ ಇದನ್ನು ತನಿಖೆ ಮಾಡಿದಾಗ ವೈರಲ್ ಆದ ವಿಡಿಯೋ ಜಾರ್ಜಿಯಾದ ಮಾರುಕಟ್ಟೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತದ್ದಾಗಿದೆ ಎಂದು ಕಂಡುಬಂದಿದೆ. ಆದಾಗ್ಯೂ, ಪಹಲ್ಗಾಮ್ ದಾಳಿಯ ನಂತರ, ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಿಒಜೆಕೆಯಲ್ಲಿನ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡಿತ್ತು.
Fact Check: ಪಾಕಿಸ್ತಾನದ F17 ಜೆಟ್ ಅನ್ನು ಹೊಡೆದುರುಳಿಸಿದ ಭಾರತೀಯ ಸೇನೆ ಎಂದು ಗೇಮಿಂಗ್ ವೀಡಿಯೊ ವೈರಲ್
ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಆಗ ಈ ವಿಡಿಯೋಗೆ ಸಂಬಂಧಿಸಿದ ಸುದ್ದಿಯನ್ನು ಏಪ್ರಿಲ್ 30 ರಂದು Kanal13 NEWS ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವುದು ಸಿಕ್ಕಿದೆ. ವೈರಲ್ ವಿಡಿಯೋದ ಒಂದು ಭಾಗವನ್ನು ಇದರಲ್ಲಿ ಕಾಣಬಹುದು. ಇದರ ಪ್ರಕಾರ, ಜಾರ್ಜಿಯಾದ ರಾಜಧಾನಿ ಟಿಬಿಲಿಸಿಯ ರೈಲ್ವೆ ಮಾರುಕಟ್ಟೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು ಒಂದು ಡಜನ್ ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪಿದ ನಂತರ ಬೆಂಕಿಯನ್ನು ನಂದಿಸಲಾಯಿತು ಎಂಬ ಮಾಹಿತಿ ಇದರಲ್ಲಿದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸುದ್ದಿಯನ್ನು ಏಪ್ರಿಲ್ 30 ರಂದು OC ಮೀಡಿಯಾದ ಫೇಸ್‌ಬುಕ್ ಪುಟದಲ್ಲಿ ಕೂಡ ಪೋಸ್ಟ್ ಮಾಡಲಾಗಿದೆ. ವೈರಲ್ ವಿಡಿಯೋದ ಒಂದು ಭಾಗವನ್ನು ಹಂಚಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದರ ಪ್ರಕಾರ, ಟಿಬಿಲಿಸಿಯ ಸ್ಟೇಷನ್ ಸ್ಕ್ವೇರ್ ಮಾರುಕಟ್ಟೆಯಲ್ಲಿ ಸಂಭವಿಸಿದ ಭಾರಿ ಬೆಂಕಿಯಿಂದಾಗಿ ಹಲವಾರು ಗೋದಾಮುಗಳು ಸುಟ್ಟು ಭಸ್ಮವಾಗಿವೆ. ಇದರಲ್ಲಿ ಯಾವುದೇ ಸಾವುನೋವು ಸಂಭವಿಸಿದ ಸುದ್ದಿ ಇಲ್ಲ ಎಂದು ಬರೆಯಲಾಗಿದೆ. ಹೀಗಾಗಿ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ವೇಳೆ ರಾಷ್ಟ್ರೀಯ ಸನ್ನದ್ಧತೆ ಮತ್ತು ವಿವಿಧ ಸಚಿವಾಲಯಗಳ ನಡುವಿನ ಸಮನ್ವಯವನ್ನು ಪರಿಶೀಲಿಸಿದರು. ತುರ್ತು ಪ್ರತಿಕ್ರಿಯೆ, ಸಿದ್ಧತೆ ಮತ್ತು ಆಂತರಿಕ ಸಂವಹನ ಕಾರ್ಯವಿಧಾನಗಳಿಗೆ ಒತ್ತು ನೀಡುವ ಮೂಲಕ ತಮ್ಮ ಸಚಿವಾಲಯಗಳ ಕಾರ್ಯಾಚರಣೆಗಳ ಸಂಪೂರ್ಣ ಮೌಲ್ಯಮಾಪನವನ್ನು ನಡೆಸಲು ಪ್ರಧಾನಿ ಮೋದಿ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ನಾಗರಿಕ ರಕ್ಷಣಾ ಕಾರ್ಯವಿಧಾನಗಳನ್ನು ಬಲಪಡಿಸುವುದು, ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ಎದುರಿಸುವ ಪ್ರಯತ್ನಗಳು ಮತ್ತು ಮೂಲಸೌಕರ್ಯಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಸಭೆಯಲ್ಲಿ ಚರ್ಚಿಸಲಾದ ಮುಖ್ಯ ವಿಷಯಗಳಾಗಿವೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ