Fact Check: ಹೈದರಾಬಾದ್​ನಲ್ಲಿ ದುರ್ಗಾ ದೇವಿಯ ಮೂರ್ತಿಗೆ ಹಾನಿ ಮಾಡಿದ್ದು ನಿಜಕ್ಕೂ ಮುಸ್ಲಿಮರೇ?

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯಾವುದೇ ಕೋಮುವಾದಿ ಅಂಶವಿಲ್ಲ. ಮಾನಸಿಕ ಅಸ್ವಸ್ಥನೊಬ್ಬ ಅಜಾಗರೂಕತೆಯಿಂದ ಪ್ರಸಾದ ಮತ್ತು ದುರ್ಗಾದೇವಿಯ ವಿಗ್ರಹಕ್ಕೆ ಹಾನಿ ಮಾಡಿದ ಘಟನೆಯನ್ನು ಕೋಮುವಾದದ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

Fact Check: ಹೈದರಾಬಾದ್​ನಲ್ಲಿ ದುರ್ಗಾ ದೇವಿಯ ಮೂರ್ತಿಗೆ ಹಾನಿ ಮಾಡಿದ್ದು ನಿಜಕ್ಕೂ ಮುಸ್ಲಿಮರೇ?
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Oct 15, 2024 | 3:40 PM

ಫೇಸ್​ಬುಕ್, ಎಕ್ಸ್ ಸೇರಿದಂತೆ ಎಲ್ಲ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದನ್ನು ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ದುರ್ಗಾ ದೇವಿಯ ವಿಗ್ರಹವು ಕಾಣಿಸುತ್ತಿದ್ದು, ವಿಗ್ರಹದ ಕೆಳಗೆ ಕೆಲವು ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಇದು ಬಾಂಗ್ಲಾದೇಶದ ಘಟನೆಯಲ್ಲ, ಹೈದರಾಬಾದ್‌ನಲ್ಲಿ ಮುಸ್ಲಿಮರು ನಡೆಸಿರುವ ಘಟನೆ ಎಂದು ಹೇಳುವ ಮೂಲಕ ಕೋಮು ಬಣ್ಣದೊಂದಿಗೆ ಅನೇಕರು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.

ವೈರಲ್ ಆಗುತ್ತಿರುವುದೇನು?

ಎಕ್ಸ್ ಬಳಕೆದಾರರೊಬ್ಬರು ಈ ವೈರಲ್ ವಿಡಿಯೋವನ್ನು ಹಂಚಿಕೊಂಡು, ‘‘ಇದು ಪಾಕಿಸ್ತಾನ, ಬಾಂಗ್ಲಾದೇಶ ಅಲ್ಲ.. ಇದು ಹೈದರಾಬಾದ್. ಹೈದರಾಬಾದ್‌ನಲ್ಲಿ ಮಾತೆ ದುರ್ಗಾ ಮೂರ್ತಿ ಧ್ವಂಸ ಮಾಡಿದ ಜಿಹಾದಿ ಮುಸ್ಲಿಮರು. ಗಣೇಶನ ಮೂರ್ತಿ ಆಯಿತು ಈಗ ದುರ್ಗಾ ಮೂರ್ತಿ.. ಹಿಂದೂಗಳೆ ಇನ್ನಾದರು ಎಚ್ಚೆತ್ತುಕೊಳ್ಳಿ ಇಲ್ಲದಿದ್ದರೆ ಸನಾತನ ಧರ್ಮ ನಾಶ ನಿಶ್ಚಿತ,’’ ಎಂದು ಬರೆದುಕೊಂಡಿದ್ದಾರೆ.

ಇದೇ ಹೇಳಿಕೆಯೊಂದಿಗೆ ವಿಭಿನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವೀಡಿಯೊವನ್ನು ಹರಿದಾಡುತ್ತಿದೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ಆಗುತ್ತಿರುವ ವಿಡಿಯೋ ಹೈದರಾಬಾದ್‌ನದ್ದು ನಿಜ. ಆದರೆ ಇದರಲ್ಲಿ ಯಾವುದೇ ಕೋಮು ಕೋನವಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ಹೆಸರು ಕೃಷ್ಣಯ್ಯ ಗೌರ್. ಈತ ಮಾನಸಿಕ ಅಸ್ವಸ್ಥ. ಪೊಲೀಸರು ಆರೋಪಿಯನ್ನು ಬಂಧಿಸಿ ಪರೀಕ್ಷೆಗೊಳಪಡಿಸಿ ಮಾನಸಿಕ ಆಸ್ಪತ್ರೆಗೆ ಕಳುಹಿಸಿದ್ದಾರೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಈ ಘಟನೆಯನ್ನು ಉಲ್ಲೇಖಿಸಿರುವ ಹಲವಾರು ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. “ದುರ್ಗಾ ದೇವಿಯ ವಿಗ್ರಹಕ್ಕೆ ಹಾನಿ ಮಾಡಿದ ಆರೋಪದ ಮೇಲೆ ಓರ್ವನನ್ನು ಬಂಧಿಸಲಾಗಿದ್ದು, ಕಾರ್ಯಕ್ರಮದ ಆಯೋಜಕರ ಮೇಲೂ ಪ್ರಕರಣ ದಾಖಲಾಗಿದೆ” ಎಂದು ಅಕ್ಟೋಬರ್ 12 ರಂದು ANI ವರದಿ ಮಾಡಿದೆ. ಆರೋಪಿಯನ್ನು ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ನಿವಾಸಿ ಕೃಷ್ಣಯ್ಯ ಎಂದು ಗುರುತಿಸಲಾಗಿದೆ.

ಹಾಗೆಯೆ ನ್ಯೂಸ್9 ಕೂಡ ಈ ಕುರಿತು ವರದಿ ಮಾಡಿದ್ದು, ನೀವು ಇಲ್ಲಿ ಓದಬಹುದು. ಓದಲು ಇಲ್ಲಿ ಕ್ಲಿಕ್​ ಮಾಡಿ

ಇನ್ನು ಹೈದರಾಬಾದ್‌ನ ಕೇಂದ್ರ ವಲಯದ ಡಿಸಿಪಿ ಅಕ್ಷಾಂಶ್ ಯಾದವ್ ಅವರು ಎಎನ್​ಐಗೆ ನೀಡಿರುವ ಹೇಳಿಕೆ ಕೂಡ ನಮಗೆ ಸಿಕ್ಕಿದೆ. ಅವರ ಪ್ರಕಾರ, ‘ಬೆಳಿಗ್ಗೆ ಸುಮಾರು 6:00 ಗಂಟೆಗೆ ವಸ್ತುಪ್ರದರ್ಶನ ಮೈದಾನದಲ್ಲಿ ಇರಿಸಲಾಗಿದ್ದ ದುರ್ಗಾ ಮಾತೆಯ ವಿಗ್ರಹದ ಬಲಗೈ ಹಾನಿಯಾಗಿದೆ ಎಂದು ನಮಗೆ ಕರೆ ಬಂತು. ನಮ್ಮ ತಂಡವು ತಕ್ಷಣವೇ ಅಲ್ಲಿಗೆ ತಲುಪಿ ಸಿಸಿಟಿವಿ ದೃಶ್ಯಾವಳಿಗಳನ್ನು ಪುರಾವೆಗಳ ಹುಡುಕಾಟದಲ್ಲಿ ಶೋಧಿಸಿ ಒಬ್ಬ ಆರೋಪಿಯನ್ನು ಬೆಳಿಗ್ಗೆ 8.15 ರ ಸುಮಾರಿಗೆ ಬಂಧಿಸಿದೆ. ಆರೋಪಿಯ ಹೆಸರು ಕೃಷ್ಣಯ್ಯ, ಅವರು ಹಸಿವಿನಿಂದ ಆಹಾರವನ್ನು ಹುಡುಕುತ್ತಾ ಇಲ್ಲಿದೆ ಬಂದಿದ್ದರು. ಈತ ಮಾನಸಿಕ ಅಸ್ವಸ್ಥ,’’ ಎಂದು ಹೇಳಿದ್ದಾರೆ.

ಹೀಗಾಗಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯಾವುದೇ ಕೋಮುವಾದಿ ಅಂಶವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಮಾನಸಿಕ ಅಸ್ವಸ್ಥನೊಬ್ಬ ಅಜಾಗರೂಕತೆಯಿಂದ ಪ್ರಸಾದ ಮತ್ತು ದುರ್ಗಾದೇವಿಯ ವಿಗ್ರಹಕ್ಕೆ ಹಾನಿ ಮಾಡಿದ ಘಟನೆಯನ್ನು ಕೋಮುವಾದದ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ