Fact Check: ನಾಮಪತ್ರ ಸಲ್ಲಿಸುವ ಮುನ್ನ ಪ್ರಿಯಾಂಕಾ ಗಾಂಧಿ ದೇವಸ್ಥಾನಕ್ಕೆ ತೆರಳಿ ಧ್ಯಾನ ಮಾಡಿದ್ದು ನಿಜವೇ..?

ವಯನಾಡು ಲೋಕಸಭಾ ಉಪಚುನಾವಣೆ ವೇಳೆ ಪ್ರಿಯಾಂಕ ಗಾಂಧಿ ಅವರು ನಾಮಪತ್ರ ಸಲ್ಲಿಸುವುದಕ್ಕೂ ಈ ವಿಡಿಯೋಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಸುಮಾರು ಮೂರು ವರ್ಷಗಳ ಹಳೆಯದು.

Fact Check: ನಾಮಪತ್ರ ಸಲ್ಲಿಸುವ ಮುನ್ನ ಪ್ರಿಯಾಂಕಾ ಗಾಂಧಿ ದೇವಸ್ಥಾನಕ್ಕೆ ತೆರಳಿ ಧ್ಯಾನ ಮಾಡಿದ್ದು ನಿಜವೇ..?
ಪ್ರಿಯಾಂಕ ಗಾಂಧಿ ವೈರಲ್​​ ಫೋಟೋ
Updated By: ಅಕ್ಷಯ್​ ಪಲ್ಲಮಜಲು​​

Updated on: Oct 29, 2024 | 11:33 AM

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಕಳೆದ ಬುಧವಾರ ವಯನಾಡು ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಸದ್ಯ ವಯನಾಡ್ ಉಪಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೋಟೋಗಳು, ವಿಡಿಯೋಗಳು ಹರಿದಾಡುತ್ತಿವೆ. ಇದರಲ್ಲಿ ಅನೇಕ ಹಲವು ಹಳೆಯ ಚಿತ್ರಗಳು ಮತ್ತು ವಿಡಿಯೋಗಳು ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇದೀಗ ಪ್ರಿಯಾಂಕ ಗಾಂಧಿ ಅವರ ಕುರಿತು ಸುಳ್ಳು ಹೇಳಿಕೆಯೊಂದು ಇಂಟರ್ನೆಟ್​ನಲ್ಲಿ ಸಂಚಲನ ಸೃಷ್ಟಿಸಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಪ್ರಿಯಾಂಕಾ ಗಾಂಧಿ ಧ್ಯಾನ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡು, ‘‘ಪ್ರಿಯಾಂಕಾ ಗಾಂಧಿ ವಯನಾಡು ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ದೇವಸ್ಥಾನಕ್ಕೆ ತೆರಳಿ ಧ್ಯಾನ ಮಾಡುತ್ತಿರುವುದು. ಇದು ಕಾಂಗ್ರೆಸ್​ನ ಹೊಸ ನಾಟಕ, ಹಿಂದೂಗಳ ಓಟಿಗೆ ಹೊಸ ನಾಟಕ.. ಕೇರಳ ಹಿಂದೂಗಳೇ ಇದಕ್ಕೆ ನೀವು ಮರಳಾಗದಿರಿ..’’ ಎಂದು ಬರೆದುಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವಯನಾಡು ಲೋಕಸಭಾ ಉಪಚುನಾವಣೆ ವೇಳೆ ಪ್ರಿಯಾಂಕ ಗಾಂಧಿ ಅವರು ನಾಮಪತ್ರ ಸಲ್ಲಿಸುವುದಕ್ಕೂ ಈ ವಿಡಿಯೋಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ.

ನಿಜಾಂಶವನ್ನು ತಿಳಿಯಲು ನಾವು ಈ ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ಮೊದಲು ರಿವರ್ಸ್ ಇಮೇಜ್ ಮೂಲಕ ಸರ್ಚ್ ಮಾಡಿದ್ದೇವೆ. ಆಗ ಇದು 2021 ರಂದೇ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೆ ಎಂಬುದು ಕಂಡುಬಂತು. ಈ ಪೈಕಿ ಕಾಂಗ್ರೆಸ್ ನ ಅಧಿಕೃತ ಎಕ್ಸ್ ಹ್ಯಾಂಡಲ್ ನಿಂದ ಫೆಬ್ರವರಿ 10, 2021 ರಂದು ಇದೇ ವಿಡಿಯೋ ಹಂಚಿಕೊಂಡಿರುವುದು ನಮಗೆ ಸಿಕ್ಕಿತು.

“ಪ್ರಿಯಾಂಕಾ ಗಾಂಧಿ ಶಕ್ತಿಪೀಠ ಶಾಕುಂಭರಿ ದೇವಿ ದೇವಸ್ಥಾನದಲ್ಲಿ ಧ್ಯಾನ ಮಾಡುತ್ತಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಈ ಸುಳಿವು ಪಡೆದುಕೊಂಡು ನಾವು ಕೀವರ್ಡ್ ಮೂಲಕ ಗೂಗಲ್​ನಲ್ಲಿ ಹುಡುಕಾಟ ನಡೆಸಿದ್ದೇವೆ. ಆಗ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಈ ದೇವಸ್ಥಾನ ಇರುವುದು ಪತ್ತೆಯಾಗಿದೆ. ನಂತರ ಈ ಘಟನೆಗೆ ಸಂಬಂಧಿಸಿದ ಸುದ್ದಿ ಕೂಡ ನಮಗೆ ಕಂಡಿದೆ. ಈ ಸಂಬಂಧ ಟಿವಿ9 ಭಾರತ್ ವರ್ಷ್ ಫೆಬ್ರವರಿ 10, 2021 ರಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವುದು ಕಂಡುಬಂದಿದೆ.

ನಂತರ ಇನ್ನಷ್ಟು ಹುಡುಕಿದಾಗ ಟಿವಿ9 ಹಿಂದಿ ಫೆಬ್ರವರಿ 10, 2021 ರಂದು ಈ ಕುರಿತು ಸುದ್ದಿ ಪ್ರಕಾರ ಮಾಡಿದ್ದು, ಪ್ರಿಯಾಂಕಾ ಗಾಂಧಿ ಕಿಸಾನ್ ಮಹಾ ಪಂಚಾಯತ್‌ನಲ್ಲಿ ಭಾಗವಹಿಸಲು ಸಹರಾನ್‌ಪುರಕ್ಕೆ ಬಂದಿದ್ದಾರೆ. ಈ ಸಮಯದಲ್ಲಿ ಅವರು ಶಾಕುಂಭರಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಕಿಸಾನ್ ಮಹಾಪಂಚಾಯತ್ ರೈತಾಪಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮವಾಗಿತ್ತು ಎಂಬ ಮಾಹಿತಿ ಇದರಲ್ಲಿದೆ.

https://www.tv9hindi.com/trending/congress-secretary-priyanka-gandhi-video-viral-users-criticised-533184.html

ಈ ಎಲ್ಲ ಮಾಹಿತಿ ಆಧಾರದ ಮೇಲೆ ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಸುಮಾರು ಮೂರು ವರ್ಷಗಳ ಹಳೆಯದು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಸದ್ಯದ ವಯನಾಡು ಲೋಕಸಭಾ ಉಪಚುನಾವಣೆಗೂ ಈ ವಿಡಿಯೋಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಟಿವಿ9 ಕನ್ನಡ ತನಿಖೆಯಿಂದ ಕಂಡುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ