Fact Check: ಸೋರುತಿಹುದು ಕೇರಳದ ವಂದೇ ಭಾರತ್ ರೈಲು ಚಾವಣಿ, ಛತ್ರಿ ಹಿಡಿದ ಲೋಕೋ ಪೈಲಟ್; ವೈರಲ್ ಚಿತ್ರದ ನಿಜ ಸಂಗತಿ ಇಲ್ಲಿದೆ
ಕೇರಳದ ಚೊಚ್ಚಲ ವಂದೇ ಭಾರತ್ ಯಾತ್ರೆಯ ಲೋಕೋ ಪೈಲಟ್ ಮಳೆ ನೀರು ಸೋರಿಕೆಯಾದಾಗ ಛತ್ರಿ ಹಿಡಿದು ಕುಳಿತುಕೊಂಡಿರುವುದು ಎಂಬ ಬರಹದೊಂದಿಗೆ ಈ ಫೋಟೊ ವೈರಲ್ ಆಗಿದೆ
ಏಪ್ರಿಲ್ 25 ರಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಕೇರಳದಲ್ಲಿ ಕಾಸರಗೋಡು-ತಿರುವನಂತಪುರಂ ನಡುವೆ ಸಂಚರಿಸುವ ಭಾರತದ 16 ನೇ ವಂದೇ ಭಾರತ್ ಎಕ್ಸ್ಪ್ರೆಸ್ಗೆ (Vande Bharat Express) ಹಸಿರು ನಿಶಾನೆ ತೋರಿಸಿದ್ದರು. ರೈಲಿನ ಚೊಚ್ಚಲ ಪ್ರಯಾಣದ ವೇಳೆ ಕಣ್ಣೂರಿನಲ್ಲಿ ನಿಲುಗಡೆ ಮಾಡುವಾಗ ರೈಲಿನೊಳಗೆ ಮಳೆ ನೀರು ಸೋರಿಕೆಯಾಗಿದ್ದು ವರದಿ ಆಗಿತ್ತು. ಈ ಸುದ್ದಿಯ ಬೆನ್ನಲ್ಲೇ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಲೋಕೋ ಪೈಲಟ್ (ರೈಲು ಚಾಲಕ) ಕೈಯಲ್ಲಿ ಛತ್ರಿ ಹಿಡಿದು ರೈಲಿನ ಎಂಜಿನ್‌ನೊಳಗೆ ಕುಳಿತಿರುವ ಫೋಟೊವನ್ನು ಹಂಚಿಕೊಳ್ಳುತ್ತಿದ್ದಾರೆ.ಕೇರಳದ (Kerala) ಚೊಚ್ಚಲ ವಂದೇ ಭಾರತ್ ಯಾತ್ರೆಯ ಲೋಕೋ ಪೈಲಟ್ ಮಳೆ ನೀರು ಸೋರಿಕೆಯಾದಾಗ ಛತ್ರಿ ಹಿಡಿದು ಕುಳಿತುಕೊಂಡಿರುವುದು ಎಂಬ ಬರಹದೊಂದಿಗೆ ಈ ಫೋಟೊ ವೈರಲ್ ಆಗಿದೆ.
ಪ್ರೀತಿಯ ನರೇಂದ್ರ ಮೋದಿಯವರೇ ನೀವು ವಸ್ತುಗಳನ್ನು ಮಾಡುವುದನ್ನು ನಿಲ್ಲಿಸಿ. ನೀವು ಏನನ್ನೂ ಸರಿಯಾಗಿ ಮಾಡಲು ಸಂಪೂರ್ಣವಾಗಿ ಮಾಡಲು ಅಸಮರ್ಥರಾಗಿದ್ದೀರಿ.’ವಂದೇ ಭಾರತ್’ ಉದ್ಘಾಟನೆಯ ಮೊದಲನೇ ದಿನವೇ ಕೇರಳದ ವಂದೇ ಭಾರತ್ ರೈಲಿನ ಚಾವಣಿಯಿಂದ ಮಳೆ ನೀರು ಸೋರಿಕೆಯಾಗಲು ಪ್ರಾರಂಭಿಸಿತು. ಒಂದು ಚಿತ್ರವು ಸಾವಿರ ಪದಗಳಿಗೆ ಸಮ ಎಂದು ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.
Dear @narendramodi please stop making things. Clearly you are utterly incapable to make anything right. ? “VANDE BHARAT” on the 1st day of inauguration rain water started leaking from the roof of VB in Kerala. A picture is worth a thousand words.#ModiFailsIndia pic.twitter.com/Vfsaq8qHYb
— Hisamuddin Khan (@Hisamud47588796) April 27, 2023
ಈ ವೈರಲ್ ಚಿತ್ರದ ಫ್ಯಾಕ್ಟ್ ಚೆಕ್ ಮಾಡಿದ ಇಂಡಿಯಾ ಟುಡೇ, ಈ ಚಿತ್ರವು ಹಲವಾರು ವರ್ಷಗಳಷ್ಟು ಹಳೆಯದ್ದು. ಇದು ವಂದೇ ಭಾರತ್ ರೈಲಿನದ್ದಲ್ಲ ಎಂದು ವರದಿ ಮಾಡಿದೆ.
ಫ್ಯಾಕ್ಟ್ ಚೆಕ್
ವೈರಲ್ ಫೋಟೊದ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಆಗಸ್ಟ್ 9, 2017 ರಂದು ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತರಾದ ಸುಚೇತಾ ದಲಾಲ್ ಅವರು ಟ್ವೀಟ್ ಮಾಡಿದ ವಿಡಿಯೊ ಸಿಕ್ಕಿದೆ. ಈ ವಿಡಿಯೊದಲ್ಲಿ ಲೋಕೋ ಪೈಲಟ್ ಛತ್ರಿ ಹಿಡಿದುಕೊಂಡಿರುವುದು ಇದೆ.ದಲಾಲ್ ಆ ಟ್ವೀಟ್‌ನಲ್ಲಿ ಆಗಿನ ರೈಲ್ವೆ ಸಚಿವ ಸುರೇಶ್ ಪ್ರಭು ಮತ್ತು ರೈಲ್ವೆ ಸಚಿವಾಲಯವನ್ನು ಟ್ಯಾಗ್ ಮಾಡಿದ್ದಾರೆ.
ವಿಡಿಯೊದಲ್ಲಿ, ಸಹಾಯಕ ಲೋಕೋ ಪೈಲಟ್ ಕಳಪೆ ಕೆಲಸದ ಪರಿಸ್ಥಿತಿಗಳ ಬಗ್ಗೆ ದೂರುತ್ತಿರುವ ಧ್ವನಿಯನ್ನು ಸಹ ಕೇಳಬಹುದು.
ವಿಡಿಯೊ ಎಲ್ಲಿಯದ್ದು?
ಈ ಬಗ್ಗೆ ಮತ್ತಷ್ಟು ಹುಡುಕಿದಾಗ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಇಂಡಿಯಾ ಟೈಮ್ಸ್‌ನಲ್ಲಿ ಇದೇ ರೀತಿಯ ಚಿತ್ರವನ್ನು ಒಳಗೊಂಡಿರುವ ಸುದ್ದಿ ಸಿಕ್ಕಿದೆ. ಆಗಸ್ಟ್ 11, 2017 ರಂದು ಪ್ರಕಟವಾದ ಸುದ್ದಿ ಅದು. ಜಾರ್ಖಂಡ್‌ನ ಧನ್‌ಬಾದ್ ಬಳಿ ವಿಡಿಯೊವನ್ನು ಸೆರೆಹಿಡಿಯಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದರ ಪೂರ್ತಿ ವಿಡಿಯೊ ಬಂಗಾಳಿ ಸುದ್ದಿಸಂಸ್ಥೆ ಸಂಗ್ಬಾದ್ ಪ್ರತಿದಿನ್‌ನ YouTube ಚಾನಲ್‌ನಲ್ಲಿದೆ.
ಈ ವಿಡಿಯೊದ ಸುಮಾರು 20 ಸೆಕೆಂಡ್‌ಗಳಲ್ಲಿ ಕ್ಯಾಮೆರಾದ ಹಿಂದಿರುವ ವ್ಯಕ್ತಿ, ಲೋಕೋ ಪೈಲಟ್ ಜಾರ್ಖಂಡ್‌ನ ಬೊಕಾರೊ ಜಿಲ್ಲೆಯ ಚಂದ್ರಾಪುರದಿಂದ ಬಿಕೆ ಮಂಡಲ್ ಎಂದು ಹೇಳಿದ್ದಾರೆ. ಈ ವಿಡಿಯೊದ ಒಂದು ನಿಮಿಷ 17-ಸೆಕೆಂಡ್‌ಗಳ ಟೈಮ್‌ಸ್ಟ್ಯಾಂಪ್‌ನಲ್ಲಿ ಬರ್ಮೊ ನಿಲ್ದಾಣದ ಸಂಕೇತವನ್ನು ಸಹ ಕಾಣಬಹುದು. ಬರ್ಮೊ ರೈಲು ನಿಲ್ದಾಣವು ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿದೆ. ಇದು ಪೂರ್ವ-ಮಧ್ಯ ರೈಲ್ವೆ ವಲಯದ ಧನ್‌ಬಾದ್ ರೈಲ್ವೆ ವಿಭಾಗದ ಅಡಿಯಲ್ಲಿ ಬರುತ್ತದೆ.
Important to see this @sureshpprabhu Not go by just what your officers tell you https://t.co/jZovsr5m2Y
— Sunil Jain (@thesuniljain) August 9, 2017
ಆಗ ಈ ವಿಡಿಯೊಗೆ ಪ್ರತಿಕ್ರಿಯಿಸಿದ ರೈಲ್ವೇ ಸಚಿವಾಲಯದ ಟ್ವೀಟ್‌ನಲ್ಲಿ ಇಂಜಿನ್ ಕೆಲಸ ಮಾಡುತ್ತಿಲ್ಲ. ಮತ್ತೊಂದು ಎಂಜಿನ್ ಮುಂಭಾಗದಿಂದ ಎಳೆಯುತ್ತಿದೆ ಎಂದು ಹೇಳಿದೆ.
ಇದನ್ನೂ ಓದಿ: ಕೇರಳದ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಪಾಲಕ್ಕಾಡ್ ಸಂಸದನ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತರು; ಬಿಜೆಪಿ ಕಿಡಿ
ಕೇರಳದ ವಂದೇ ಭಾರತ್ನಲ್ಲಿ ಸೋರಿಕೆ
ಕೇರಳದ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಮಳೆ ನೀರು ಸೋರಿಕೆಯಾಗಿರುವುದು ವರದಿ ಆಗಿತ್ತು. ಆದರೆ ಈ ವರದಿಗಳಲ್ಲಿ ಲೋಕೋ ಪೈಲಟ್ ಛತ್ರಿ ಹಿಡಿದಿರುವ ಬಗ್ಗೆ ಸುದ್ದಿಯಾಗಿಲ್ಲ. ಏಷ್ಯಾನೆಟ್ ಮತ್ತು ಮಾತೃಭೂಮಿಯ ವರದಿಗಳ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಉದ್ಘಾಟನಾ ದಿನವಾದ ಏಪ್ರಿಲ್ 25 ರಂದು ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಅಂದು ರಾತ್ರಿ ರೈಲು ಕಾಸರಗೋಡಿನಿಂದ ಕಣ್ಣೂರಿಗೆ ಬಂದ ನಂತರ ಸೋರಿಕೆಯಾಗಿರುವುದು ಕಂಡುಬಂದಿದೆ.
ವರದಿಯ ಪ್ರಕಾರ, ಎಸಿ ವೆಂಟ್ ಮೂಲಕ ಸೋರಿಕೆ ಕಂಡುಬಂದಿದೆ. ಎಸಿ ವೆಂಟ್‌ನಲ್ಲಿ ಸೋರಿಕೆಯಾಗಿದ್ದು, ಏಪ್ರಿಲ್ 26 ರ ಬೆಳಿಗ್ಗೆ ದುರಸ್ತಿ ಕಾರ್ಯ ಪೂರ್ಣಗೊಂಡಿದೆ ಎಂದು ಪಾಲಕ್ಕಾಡ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ದೇವಧನಂ ಇಂಡಿಯಾ ಟುಡೇಗೆ ಖಚಿತಪಡಿಸಿದ್ದಾರೆ.
ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ