ಕೇರಳದ ವಂದೇ ಭಾರತ್ ಎಕ್ಸ್​​ಪ್ರೆಸ್ ಮೇಲೆ ಪಾಲಕ್ಕಾಡ್ ಸಂಸದನ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತರು; ಬಿಜೆಪಿ ಕಿಡಿ

Kerala Vande Bharat Express: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕಿಟಕಿಗಳಿಗೆ ಪಾಲಕ್ಕಾಡ್ ಸಂಸದ  ವಿಕೆ ಶ್ರೀಕಂಠನ್ ಅವರ ಫೋಟೊದೊಂದಿಗೆ ಅವರನ್ನು ಹೊಗಳಿರುವ ಪೋಸ್ಟರ್‌ಗಳನ್ನು ಪಕ್ಷದ ಕಾರ್ಯಕರ್ತರು ಅಂಟಿಸಿದ್ದಾರೆ.

ಕೇರಳದ ವಂದೇ ಭಾರತ್ ಎಕ್ಸ್​​ಪ್ರೆಸ್ ಮೇಲೆ ಪಾಲಕ್ಕಾಡ್ ಸಂಸದನ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತರು; ಬಿಜೆಪಿ ಕಿಡಿ
ಕೇರಳದ ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲಿನ ಮೇಲೆ ಕಾಂಗ್ರೆಸ್ ಸಂಸದನ ಪೋಸ್ಟರ್
Follow us
ರಶ್ಮಿ ಕಲ್ಲಕಟ್ಟ
|

Updated on: Apr 27, 2023 | 2:44 PM

ಕೇರಳದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ( Vande Bharat Express) ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಯವರು ಮಂಗಳವಾರ ಚಾಲನೆ ನೀಡಿದ ಕೆಲವೇ ಗಂಟೆಗಳ ನಂತರ, ಕಾಂಗ್ರೆಸ್ ಕಾರ್ಯಕರ್ತರು ಈ ರೈಲಿನ ಮೇಲೆ ಪೋಸ್ಟರ್ ಅಂಟಿಸಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕಿಟಕಿಗಳಿಗೆ ಪಾಲಕ್ಕಾಡ್ ಸಂಸದ  ವಿಕೆ ಶ್ರೀಕಂಠನ್ ಅವರ ಫೋಟೊದೊಂದಿಗೆ ಅವರನ್ನು ಹೊಗಳಿರುವ ಪೋಸ್ಟರ್‌ಗಳನ್ನು ಪಕ್ಷದ ಕಾರ್ಯಕರ್ತರು ಅಂಟಿಸಿದ್ದಾರೆ. ಕೇರಳದ (Kerala) ಪಾಲಕ್ಕಾಡ್‌ ಜಿಲ್ಲೆಯ ಶೊರ್ನೂರ್ ಜಂಕ್ಷನ್‌ಗೆ ರೈಲು ಬಂದಾಗ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕಿಟಕಿಗಳ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಕೇರಳದ ಬಿಜೆಪಿ ನಾಯಕ ಕೆ ಸುರೇಂದ್ರನ್ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕಿಟಕಿಗಳಲ್ಲಿ ಕಾಂಗ್ರೆಸ್ ಸಂಸದರ ಪೋಸ್ಟರ್‌ಗಳಿರುವ ಪೋಟೊವನ್ನು ಟ್ವೀಟ್ ಮಾಡಿದ್ದಾರೆ.

ಪಾಲಕ್ಕಾಡ್‌ನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ವಿರೂಪಗೊಳಿಸುವುದು ಕೇರಳ ಕಾಂಗ್ರೆಸ್ ಕಾರ್ಯಕರ್ತರ ಕೆಟ್ಟ ಕೆಲಸ. ಈ ಅಪರಾಧಿಗಳು ‘ಕಿರೀಟಧಾರಿ ರಾಜಕುಮಾರ’ನ ಅನುಯಾಯಿಗಳು. ನಾಚಿಕೆಗೇಡು ಎಂದು ಕೆ ಸುರೇಂದ್ರನ್ ಟ್ವೀಟ್ ಮಾಡಿದ್ದಾರೆ.

ಏತನ್ಮಧ್ಯೆ, ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ರೈಲಿನಲ್ಲಿ ತನ್ನ ಪೋಸ್ಟರ್‌ಗಳನ್ನು ಅಂಟಿಸಲು ಯಾರಿಗೂ ಅಧಿಕಾರ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕ ಶ್ರೀಕಂಠನ್ ಹೇಳಿದ್ದಾರೆ. ಬಿಜೆಪಿ ಉದ್ದೇಶಪೂರ್ವಕವಾಗಿ ವಿವಾದ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಘಟನೆಯ ನಂತರ ರೈಲ್ವೇ ರಕ್ಷಣಾ ಪಡೆ ಪ್ರಕರಣ ದಾಖಲಿಸಿಕೊಂಡಿದೆ.

ಕೇರಳದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್  ತಿರುವನಂತಪುರಂವನ್ನು ಕೇರಳದ ಉತ್ತರದ ಜಿಲ್ಲೆಯಾದ ಕಾಸರಗೋಡಿನೊಂದಿಗೆ ಸಂಪರ್ಕಿಸುತ್ತದೆ. ಸೆಮಿ-ಹೈ ಸ್ಪೀಡ್ ರೈಲು ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ ನಗರ, ತ್ರಿಶ್ಶೂರ್, ಶೊರ್ನೂರ್ ಜಂಕ್ಷನ್, ಕೋಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ನಿಲ್ಲುತ್ತದೆ.

ತಿರುವನಂತಪುರಂನಲ್ಲಿ ಸೆಮಿ-ಹೈ ಸ್ಪೀಡ್ ರೈಲಿಗೆ ಫ್ಲಾಗ್ ಆಫ್ ಮಾಡಿದ ಪ್ರಧಾನಿ ಮೋದಿ, ಕೇರಳದ ಪ್ರಮುಖ ರೈಲು ನಿಲ್ದಾಣಗಳು ಶೀಘ್ರದಲ್ಲೇ ಬಹುಮಾದರಿ ಸಾರಿಗೆ ಕೇಂದ್ರಗಳಾಗಿ ರೂಪಾಂತರಗೊಳ್ಳಲಿವೆ ಎಂದು ಹೇಳಿದರು.ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಉಲ್ಲೇಖಿಸಿದ ಅವರು, ಇದು ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶ್ಶೂರ್ ಮತ್ತು ಕಣ್ಣೂರಿನಂತಹ ಯಾತ್ರಾ ಸ್ಥಳಗಳಿಗೆ ಪ್ರಯಾಣವನ್ನು ಸುಲಭಗೊಳಿಸುವುದು ಮಾತ್ರವಲ್ಲದೆ ಪರಿಸರ ಸ್ನೇಹಿಯಾಗಿದೆ ಎಂದಿದ್ದಾರೆ.

ಪೋಸ್ಟರ್ ಅಂಟಿಸಿದವರ ಗುರುತು ಪತ್ತೆ

ವಂದೇಭಾರತ್ ಎಕ್ಸ್‌ಪ್ರೆಸ್ ರೈಲು ಶೊರ್ನೂರ್ ತಲುಪಿದಾಗ ಪೋಸ್ಟರ್ ಅಂಟಿಸಿದ್ದ ಆರು ಜನರನ್ನು ಗುರುತಿಸಿರುವುದಾಗಿ ವಿ.ಕೆ.ಶ್ರೀಕಂಠನ್ ಹೇಳಿದ್ದಾರೆ. ಅಟಪ್ಪಾಡಿ ಪುತ್ತೂರು ಪಂಚಾಯತ್ ಸದಸ್ಯ ಸೆಂಥಿಲ್ ಕುಮಾರ್ ಹಾಗೂ ಆರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದಾರೆ. ಪೋಸ್ಟರ್ ಹಾಕಿರುವುದು ಉದ್ದೇಶಪೂರ್ವಕವಲ್ಲ ಎಂದು ಸೆಂಥಿಲ್ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಪೋಸ್ಟರ್ ಅಂಟಿಸಿದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಂಸದ ವಿ.ಕೆ.ಶ್ರೀಕಂಠನ್ ತಿಳಿಸಿದರು. ಕ್ರಮ ಕೈಗೊಳ್ಳಲು ಕಾರ್ಯಕರ್ತರು ತಪ್ಪು ಮಾಡಿದ್ದೇವೆ ಎಂದು ಭಾವಿಸುವುದಿಲ್ಲ. ಪೋಸ್ಟರ್ ಹಾಕಲು ನಿಯೋಜಿಸಿಲ್ಲ. ಘಟನೆಗೆ ಸಂಬಂಧಿಸಿದ ಸೈಬರ್ ದಾಳಿಯ ವಿರುದ್ಧ ದೂರು ದಾಖಲಿಸಲಾಗುವುದು. ಇದು ಬಿಜೆಪಿಯ ಪ್ರಚಾರ ರಾಜಕಾರಣ ಎಂದು ವಿ.ಕೆ.ಶ್ರೀಕಂಠನ್ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತ ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್) ಪ್ರಕರಣ ದಾಖಲಿಸಿಕೊಂಡಿದೆ. ಈ ಪ್ರಕರಣವು ಆರ್‌ಪಿಎಫ್ ಕಾಯಿದೆಯ 145 ಸಿ (ಪ್ರಯಾಣಿಕರಿಗೆ ಕಿರುಕುಳ), 147 (ರೈಲ್ವೆ ಆವರಣದಲ್ಲಿ ಅತಿಕ್ರಮಣ) ಮತ್ತು 166 (ರೈಲುಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸುವುದು) ನಂತಹ ಜಾಮೀನು ಪಡೆಯಬಹುದಾದ ಸೆಕ್ಷನ್‌ಗಳ ಅಡಿಯಲ್ಲಿದೆ. 2000 ದಂಡದೊಂದಿಗೆ ಇದು ಶಿಕ್ಷಾರ್ಹ ಅಪರಾಧವಾಗಿದೆ. ಆದಾಗ್ಯೂ, ರೈಲು ನಿಲ್ದಾಣದಿಂದ ಹೊರಡುವ ಮೊದಲು ಆರ್‌ಪಿಎಫ್ ಪೋಸ್ಟರ್‌ಗಳನ್ನು ತೆಗೆದುಹಾಕಿದೆ.

ಇದನ್ನೂ ಓದಿಆನಂದ್​ಮೋಹನ್​ ಸಿಂಗ್​ರನ್ನು ಮರಳಿ ಜೈಲಿಗೆ ಕಳುಹಿಸುವಂತೆ ಮೃತ ಐಎಎಸ್ ಅಧಿಕಾರಿ ಪತ್ನಿ ಪ್ರಧಾನಿ ಮೋದಿಗೆ ಮನವಿ

ಪೋಸ್ಟರ್ ಅಂಟಿಸಿದ್ದರ ಹಿಂದೆ ಕಾರಣ?

ವಂದೇ ಭಾರತ್ ರೈಲಿಗೆ ಈ ಮೊದಲು ಶೊರ್ನೂರ್​​ನಲ್ಲಿ ನಿಲುಗಡೆ ಇರಲಿಲ್ಲ. ಮಲಪ್ಪುರಂ ಜಿಲ್ಲೆಯ ತಿರೂರ್​​ನಲ್ಲಿ ನಿಲುಗಡೆ ನೀಡಲಾಗಿತ್ತು. ಶೊರ್ನೂರ್ ನಲ್ಲಿ ನಿಲುಗಡೆ ಬೇಕು ಎಂದು ಅಲ್ಲಿನ ಕಾಂಗ್ರೆಸ್ ಸಂಸದರು ಆಗ್ರಹಿಸಿ ಈ ಬಗ್ಗೆ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಕೊನೇ ಗಳಿಗೆಯಲ್ಲಿ ತಿರೂರ್ ನಿಲುಗಡೆ ರದ್ದು ಮಾಡಿ ಶೊರ್ನೂರ್​​ನಲ್ಲಿ ನಿಲುಗಡೆಗೆ ಅನುಮತಿ ನೀಡಲಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ