ಬಿಜೆಪಿ ಟೋಪಿ ಧರಿಸಿ ಮದ್ಯ ನೀಡುತ್ತಿರುವ ವ್ಯಕ್ತಿ; ವೈರಲ್ ವಿಡಿಯೊ ಬಿಹಾರ ಉಪಚುನಾವಣೆಯದ್ದಲ್ಲ, ಹಳೇದು

ವೈರಲ್ ಟ್ವೀಟ್‌ಗಳ ಅಡಿಯಲ್ಲಿ, ಈ ವಿಡಿಯೊ ಕ್ಲಿಪ್ ಹಳೆಯದು ಎಂದು ಹಲವರು ಕಾಮೆಂಟ್ ಮಾಡಿದ್ದರು. ಇದಕ್ಕೆ ಸಂಬಂಧಿತ ಕೀವರ್ಡ್‌ಗಳೊಂದಿಗೆ Twitter ನಲ್ಲಿ ಹುಡುಕಾಡಿದಾಗ 2021 ರಲ್ಲಿ ಹಂಚಿಕೊಂಡ ವಿಡಿಯೊಗಳು ಸಿಕ್ಕಿವೆ

ಬಿಜೆಪಿ ಟೋಪಿ ಧರಿಸಿ ಮದ್ಯ ನೀಡುತ್ತಿರುವ ವ್ಯಕ್ತಿ; ವೈರಲ್ ವಿಡಿಯೊ ಬಿಹಾರ ಉಪಚುನಾವಣೆಯದ್ದಲ್ಲ, ಹಳೇದು
ವೈರಲ್ ವಿಡಿಯೊದ ದೃಶ್ಯ
Updated By: ರಶ್ಮಿ ಕಲ್ಲಕಟ್ಟ

Updated on: Dec 06, 2022 | 9:46 PM

ಡಿಸೆಂಬರ್ 5 ರಂದು, ಬಿಹಾರದ (Bihar) ಕುರ್ಹಾನಿ ( Kurhani)ಸೇರಿದಂತೆ ಒಂದು ಲೋಕಸಭಾ ಸ್ಥಾನ ಮತ್ತು ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿತ್ತು. ವರದಿಯ ಪ್ರಕಾರ, ಡಿಸೆಂಬರ್ 3 ರಂದು, ಲೋಕ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಮತ್ತು ಬಿಜೆಪಿ(BJP) ಸಂಸದ ರವಿ ಕಿಶನ್, ಕುರ್ಹಾನಿಯಲ್ಲಿ ಪ್ರಚಾರ ಮಾಡುವಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೊವೊಂದರಲ್ಲಿ ವ್ಯಕ್ತಿಯೊಬ್ಬರು ಬಿಜೆಪಿ ಕ್ಯಾಪ್ ಮತ್ತು ಸ್ಕಾರ್ಫ್ ಧರಿಸಿ ಮದ್ಯ ಹಂಚುತ್ತಿರುವುದನ್ನು ತೋರಿಸುತ್ತದೆ. ಅಂದಹಾಗೆ ಈ ದೃಶ್ಯ ಕುರ್ಹಾನಿಯಲ್ಲಿ ಬಿಜೆಪಿ ಮತ್ತು ಎಲ್‌ಜೆಪಿ ರ್ಯಾಲಿಯದ್ದು ಎಂದು ಹಲವರು ಇದನ್ನು ಶೇರ್ ಮಾಡಿದ್ದಾರೆ. ಅಂತಹ ಒಂದು ಟ್ವೀಟ್ ಹಿಂದಿಯಲ್ಲಿದ್ದು, ಅದರಲ್ಲಿ ಈ ರೀತಿ ಬರೆಯಲಾಗಿದೆ. 93-ಕುರ್ಹಾನಿ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಪೂರ್ಣ ರೂಪ ಬದಲಾಗಿದೆ. ಬಿ=ಬಾಟಲ್, ಜೆ=ಜಮ್ಕೆ, ಪಿ=ಪಿಯೋ. ಇಂದು ಕೆರ್ಮಾ ಮೈದಾನದಲ್ಲಿ ಚುನಾವಣಾ ರ್ಯಾಲಿಯಲ್ಲಿ ಬಿಜೆಪಿ ಮತ್ತು ಚಿರಾಗ್ ಜಿ ಮದ್ಯ ಮತ್ತು ಮತ ಪ್ರಚಾರವನ್ನು ಪ್ರಾರಂಭಿಸಿದ್ದಾರೆ ಎಂದು ಟ್ವೀಟಿಗರು ಬರೆದಿದ್ದಾರೆ.ಮಖ್ದುಂಪುರದ ರಾಷ್ಟ್ರೀಯ ಜನತಾ ದಳದ ಶಾಸಕ ಸತೀಶ್ ಕುಮಾರ್ ಕೂಡ ಇದೇ ವಿಡಿಯೊ ಹಂಚಿಕೊಂಡಿದ್ದರು. ಈ ವಿಡಿಯೊ ಬಗ್ಗೆ ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ಮಾಡಿದ್ದು ವೈರಲ್ ಆಗಿರುವ ವಿಡಿಯೊ ಕುರ್ಹಾನಿ ಉಪಚುನಾವಣೆಗೆ ಸಂಬಂಧಿಸಿದ್ದಲ್ಲ, ಇದು ಹಳೆಯದು ಎಂದು ವರದಿ ಮಾಡಿದೆ.


ಫ್ಯಾಕ್ಟ್ ಚೆಕ್

ವೈರಲ್ ಟ್ವೀಟ್‌ಗಳ ಅಡಿಯಲ್ಲಿ, ಈ ವಿಡಿಯೊ ಕ್ಲಿಪ್ ಹಳೆಯದು ಎಂದು ಹಲವರು ಕಾಮೆಂಟ್ ಮಾಡಿದ್ದರು. ಇದಕ್ಕೆ ಸಂಬಂಧಿತ ಕೀವರ್ಡ್‌ಗಳೊಂದಿಗೆ Twitter ನಲ್ಲಿ ಹುಡುಕಾಡಿದಾಗ 2021 ರಲ್ಲಿ ಹಂಚಿಕೊಂಡ ವಿಡಿಯೊಗಳು ಸಿಕ್ಕಿವೆ. ಡಿಸೆಂಬರ್ 20, 2021 ರಂದು, ಉತ್ತರ ಪ್ರದೇಶ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಅದೇ ದಿನ ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪಗಢಿ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ ಕೂಡ ಇದೇ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಹರಿದ್ವಾರದಲ್ಲಿ ಜೆಪಿ ನಡ್ಡಾ ರ್ಯಾಲಿಯಲ್ಲಿ ಈ ಘಟನೆ ನಡೆದಿದೆ ಎಂದು ಶ್ರೀನಿವಾಸ್ ಹೇಳಿಕೊಂಡಿದ್ದಾರೆ.


ದೈನಿಕ್ ಭಾಸ್ಕರ್ ವರದಿ ಪ್ರಕಾರ ಈ ಘಟನೆಯು ಹರಿದ್ವಾರದಲ್ಲಿ ಜೆಪಿ ನಡ್ಡಾ ಅವರ ರ್ಯಾಲಿಯದ್ದು ಎಂದು ಹೇಳಲಾಗಿದೆ. ಡಿಸೆಂಬರ್ 21, 2021 ರಂದು, ಯುಪಿ ತಕ್ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ “ಆಜ್ ಕ್ಯಾ ಹೈ ವೈರಲ್” ವಿಭಾಗದಲ್ಲಿ ಅದೇ ವಿಡಿಯೊವನ್ನು ಹಂಚಿಕೊಂಡಿದೆ.

ಆದಾಗ್ಯೂ, ಯಾವುದೇ ಸುದ್ದಿ, ವರದಿಗಳಲ್ಲಿ ಸ್ಥಳ ಮತ್ತು ಘಟನೆಯ ದಿನಾಂಕವನ್ನು ಖಚಿತವಾಗಿ ಗುರುತಿಸಲು ಸಾಧ್ಯವಾಗಲಿಲ್ಲ. ಮಾಧ್ಯಮಗಳು ಟ್ವೀಟ್‌ಗಳು ಹೇಳಿಕೊಂಡದ್ದನ್ನು ಮಾತ್ರ ವರದಿ ಮಾಡಿದೆ. ಸುಳ್ಳು ಹೇಳಿಕೆಗಳೊಂದಿಗೆ ಈ ವಿಡಿಯೊ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ವಕೀಲ ಪ್ರಶಾಂತ್ ಭೂಷಣ್ ಮತ್ತು ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ ಅವರು ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜುಲೈ 4 ರ ರ್ಯಾಲಿಯಲ್ಲಿನ ಘಟನೆ ಎಂದು ಹೇಳಿತ್ತು. ಹಾಗಾಗಿ ವೈರಲ್ ಆಗಿರುವ ವಿಡಿಯೊ ಕುರ್ಹಾನಿ ಉಪಚುನಾವಣೆಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ