ಮಕ್ಕಳಿಗೆ ಸಂಸ್ಕಾರ ಕಲಿಸದಿದ್ದರೆ ಲವ್ ಜಿಹಾದ್​ಗೆ ಬಲಿಯಾಗಬೇಕಾಗುತ್ತೆ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

RSS Sar Sanghchalak Mohan Bhagwat speaks on love jihad issue: ಲವ್ ಜಿಹಾದ್ ಬಗ್ಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಕ್ರಿಯಿಸಿದ್ದಾರೆ. ಯಾವುದೋ ತೃಣ ಆಕರ್ಷಣೆಗೆ ಒಳಗಾಗಿ ಹಿಂದೂ ಯುವಕ, ಯುವತಿಯು ಹೊರಗಿನವರ ಜೊತೆ ಹೋಗುತ್ತಾರೆ. ಸಂಸ್ಕಾರ ಕೊರತೆ ಇದಕ್ಕೆ ಕಾರಣ ಎಂದಿದ್ದಾರೆ. ಲವ್ ಜಿಹಾದ್​ಗೆ ಇಡೀ ಮುಸ್ಲಿಂ ಸಮಾಜವನ್ನು ಒಂದೇ ತಕ್ಕಡಿಗೆ ಹಾಕುವುದೂ ತಪ್ಪು ಎನ್ನುವ ಅಭಿಪ್ರಾಯ ನೀಡಿದ್ದಾರೆ ಆರೆಸ್ಸೆಸ್ ಮುಖ್ಯಸ್ಥರು.

ಮಕ್ಕಳಿಗೆ ಸಂಸ್ಕಾರ ಕಲಿಸದಿದ್ದರೆ ಲವ್ ಜಿಹಾದ್​ಗೆ ಬಲಿಯಾಗಬೇಕಾಗುತ್ತೆ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ಮೋಹನ್ ಭಾಗವತ್

Updated on: Nov 09, 2025 | 4:05 PM

ನವದೆಹಲಿ, ನವೆಂಬರ್ 9: ದೇಶದ ವಿವಿಧೆಡೆ ನಡೆಯುತ್ತಿದೆ ಎನ್ನಲಾದ ಲವ್ ಜಿಹಾದ್ (Love Jihad) ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ (RSS Chief Mohan Bhagwat) ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. ಲವ್ ಜಿಹಾದ್ ಯಶಸ್ಸಿಗೆ ಹಿಂದೂ ಜನರ ಸಂಸ್ಕಾರ ಕೊರತೆಯೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂದು ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಈ ವಿಚಾರದ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.

‘ಲವ್ ಜಿಹಾದ್, ಇದು ಹೇಗೆ ಆಗುತ್ತೆ? ನಮ್ಮ ರಕ್ತವನ್ನೇ ಹಂಚಿಕೊಂಡಿರುವ, ನಮ್ಮ ಹಿಂದೂ ಸಂಸ್ಕಾರದಲ್ಲೇ ಬೆಳೆದಿರುವ ಹುಡುಗ ಅಥವಾ ಹುಡುಗಿ ಯಾವುದೋ ಕ್ಷಣಿಕ ಆಕರ್ಷಣೆಗೆ ಒಳಗಾಗಿ ಹೊರಗಿನವರ ಜೊತೆ ಹೋಗಿಬಿಡುತ್ತಾರೆ. ಇದು ನಮಗಿರುವ ಕೊರತೆ. ನಮ್ಮ ಮಕ್ಕಳಿಗೆ ಸಂಸ್ಕಾರ ಮತ್ತು ಮರ್ಯಾದೆಯ ಅರಿವು ಕೊಡುವುದು ಹಮ್ಮ ಜವಾಬ್ದಾರಿ. ಅದರಲ್ಲಿ ವಿಫಲರಾಗಿದ್ದೇವೆ. ಅದರಿಂದಾಗಿ ಲವ್ ಜಿಹಾದ್ ಯಶಸ್ಸು ಪಡೆದಿದೆ’ ಎಂದು ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಜೇಮ್ಸ್ ವಾಟ್ಸನ್ ನಿಧನ

‘ಲವ್ ಜಿಹಾದ್ ಪ್ರಕರಣಗಳು ನಡೆದಾಗ ಇಡೀ ಮುಸ್ಲಿಮ್ ಸಮಾಜವನ್ನೇ ದೂಷಿಸುತ್ತೇವೆ. ಅದು ಒಳ್ಳೆಯದಲ್ಲ. ನಾವು ಹಿಂದೂಗಳು, ಆ ರೀತಿ ಆಲೋಚನೆ ಮಾಡುವುದಿಲ್ಲ’ ಎಂದು ಆರೆಸ್ಸೆಸ್ ಮುಖ್ಯಸ್ಥರು ಈ ಸಂವಾದದಲ್ಲಿ ಹೇಳಿದ್ದಾರೆ.

ಆರೆಸ್ಸೆಸ್ ಮತ್ತು ರಾಜಕೀಯ ಒಲವು…

‘ರಾಷ್ಟ್ರೀಯ ಸ್ವಯಂ ಸೇವಕ ಸಂಘ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ. ವೋಟ್ ಪೊಲಿಟಿಕ್ಸ್​ನಲ್ಲಿ ತೊಡಗುವುದಿಲ್ಲ. ನಾವು ನೀತಿಗಳಿಗೆ ಬೆಂಬಲ ನೀಡುತ್ತೇವೆ. ಸರಿಯಾದ ನೀತಿಯನ್ನು ಬೆಂಬಲಿಸಲು ಒತ್ತಡ ಹೇರುತ್ತೇವೆ. ವ್ಯಕ್ತಿಯಲ್ಲ, ಪಕ್ಷವನ್ನ, ನೀತಿ ಮುಖ್ಯ. ಉದಾಹರಣೆಗೆ, ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕಿತ್ತು. ನಮ್ಮ ಸ್ವಯಂಸೇವಕರು ಆ ಹೋರಾಟದಲ್ಲಿ ತೊಡಗಿದ್ದರು. ಬಿಜೆಪಿಯೂ ಜೊತೆಗೆ ನಿಂತಿತು. ಕಾಂಗ್ರೆಸ್ ಪಕ್ಷವೂ ಬೆಂಬಲಿಸಿದ್ದರೆ ನಮ್ಮ ಸ್ವಯಂಸೇವಕರು ಆ ಪಕ್ಷಕ್ಕೂ ವೋಟ್ ಹಾಕುತ್ತಿದ್ದರು’ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಇದನ್ನೂ ಓದಿ: ಹಿಂದೂ ಸಮಾಜವನ್ನು ಒಗ್ಗೂಡಿಸುವುದಷ್ಟೇ ಆರ್​ಎಸ್​ಎಸ್ ಉದ್ದೇಶ; ಮೋಹನ್ ಭಾಗವತ್

‘ಸಂಘದ ಪಕ್ಷ ಎಂಬುದಿಲ್ಲ. ಯಾವ ಪಕ್ಷವೂ ನಮ್ಮದಲ್ಲ. ಎಲ್ಲಾ ಪಕ್ಷಗಳೂ ಭಾರತೀಯ ಪಕ್ಷಗಳೇ ಆದ್ದರಿಂದ ಅವರೆಲ್ಲವೂ ನಮ್ಮವೇ. ನಾವು ರಾಷ್ಟ್ರನೀತಿಯನ್ನು ಬೆಂಬಲಿಸುತ್ತೇವೆಯೋ ಹೊರತು ರಾಜನೀತಿಯನ್ನಲ್ಲ’ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:00 pm, Sun, 9 November 25