ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಜೇಮ್ಸ್ ವಾಟ್ಸನ್ ನಿಧನ
ನೊಬೆಲ್ ಪ್ರಶಸ್ತಿ ವಿಜೇತ, ಡಿಎನ್‌ಎ ಡಬಲ್ ಹಿಲಿಕ್ಸ್ ಸಹ-ಆವಿಷ್ಕಾರಕ ಜೇಮ್ಸ್ ವಾಟ್ಸನ್ (97) ನಿಧನರಾಗಿದ್ದಾರೆ. 1953ರಲ್ಲಿ ಫ್ರಾನ್ಸಿಸ್ ಕ್ರಿಕ್ ಜೊತೆ ಡಿಎನ್‌ಎ ರಚನೆ ಗುರುತಿಸಿ, ಆಣ್ವಿಕ ಜೀವಶಾಸ್ತ್ರಕ್ಕೆ ಕ್ರಾಂತಿಗೆ ಕಾರಣರಾಗಿದ್ದ ಇವರು, ಹಲವು ವಿವಾದಗಳಿಂದಲೂ ಸುದ್ದಿಯಾಗಿದ್ದರು. ನೊಬೆಲ್ ಚಿನ್ನದ ಪದಕವನ್ನು 2014ರಲ್ಲಿ ಹರಾಜಿನಲ್ಲಿ ಇವರು ಮಾರಿದ್ದು ಕೂಡ ಜನರು ಹುಬ್ಬೇರುವಂತೆ ಮಾಡಿತ್ತು.

ನ್ಯೂಯಾರ್ಕ್, ನವೆಂಬರ್ 09: ನೊಬೆಲ್ ಪ್ರಶಸ್ತಿ ವಿಜೇತ ಅಮೆರಿಕನ್ ವಿಜ್ಞಾನಿ ಹಾಗೂ ಡಿಎನ್‌ಎ ರಚನೆಯ ಸಹ-ಆವಿಷ್ಕಾರಕರಾದ ಜೇಮ್ಸ್ ವಾಟ್ಸನ್ (97) ಇಹಲೋಕ ತ್ಯಜಿಸಿದ್ದಾರೆ. 1953ರಲ್ಲಿ ಬ್ರಿಟಿಷ್ ವಿಜ್ಞಾನಿ ಫ್ರಾನ್ಸಿಸ್ ಕ್ರಿಕ್ ಅವರೊಂದಿಗೆ ಸೇರಿ ಡಿಎನ್‌ಎಯ ಡಬಲ್-ಹಿಲಿಕ್ಸ್ ರಚನೆಯನ್ನು ಇವರು ಗುರುತಿಸಿದ್ದರು. ಇದರಿಂದ ಆಣ್ವಿಕ ಜೀವಶಾಸ್ತ್ರದ ಸಂಶೋಧನೆಗೆ ಹೊಸ ಮೈಲಿಗಲ್ಲು ಸಿಕ್ಕಿತ್ತು. ಜೇಮ್ಸ್ ವಾಟ್ಸನ್ ಅವರ ನಿಧನದ ವಿಷಯವನ್ನು ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬೊರೇಟರಿ ದೃಢಪಡಿಸಿದೆ.
ಜೇಮ್ಸ್ ವಾಟ್ಸನ್ ಅವರು 1928ರ ಏಪ್ರಿಲ್‌ನಲ್ಲಿ ಚಿಕಾಗೋದಲ್ಲಿ ಜನಿಸಿದ್ದು, ತಮ್ಮ 15ನೇ ವಯಸ್ಸಿನಲ್ಲಿ ಶಿಕಾಗೋ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿವೇತನ ಪಡೆದು ಸೇರಿದ್ದರು. ಆ ಬಳಿಕ ಡಿಎನ್‌ಎ ರಚನೆ ಕುರಿತು ಸಂಶೋಧನೆಗಾಗಿ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಲ್ಲಿ ಅಧ್ಯಯನ ನಡೆಸಿದ್ದು, ಅಲ್ಲಿಯೇ ಫ್ರಾನ್ಸಿಸ್ ಕ್ರಿಕ್ ಅವರ ಭೇಟಿಯೂ ಆಗಿತ್ತು. ತಮ್ಮ ವೈಜ್ಞಾನಿಕ ಸಾಧನೆಯ ನಂತರ, ವಾಟ್ಸನ್ ಮತ್ತು ಅವರ ಪತ್ನಿ ಎಲಿಜಬೆತ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ದಂಪತಿಯ ಇಬ್ಬರು ಪುತ್ರರ ಪೈಕಿ, ಓರ್ವನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸ್ಕಿಜೋಫ್ರೆನಿಯಾ ಎಂಬ ಮಾನಸಿಕ ಕಾಯಿಲೆ ಕಂಡುಬಂದಿತ್ತು. ಇದರಿಂದಾಗಿಯೇ ವಾಟ್ಸನ್ ಅವರಿಗೆ ಡಿಎನ್‌ಎ ಸಂಶೋಧನೆ ಬಗ್ಗೆ ಮತ್ತಷ್ಟು ಆಸಕ್ತಿ ಮೂಡಿತ್ತು.
ಇದನ್ನೂ ಓದಿ: ಬಿಹಾರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ; ಸಿಎಂ ಯೋಗಿ ಆದಿತ್ಯನಾಥ್ ವಿಶ್ವಾಸ
ವಿವಾದಗಳಿಗೂ ಗುರಿಯಾಗಿದ್ದ ವಾಟ್ಸನ್
ಕಪ್ಪು ಮತ್ತು ಬಿಳಿ ಜನರ ನಡುವೆ ಸರಾಸರಿ ಐಕ್ಯೂ ವ್ಯತ್ಯಾಸಕ್ಕೆ ಜೀನ್ಸ್ ಕಾರಣವೆಂದು ದೂರದರ್ಶನ ಕಾರ್ಯಕ್ರಮವೊಂದರಲ್ಲಿ ವಾಟ್ಸನ್ ಹೇಳಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. 2007ರಲ್ಲಿ ದಿ ಟೈಮ್ಸ್ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಆಫ್ರಿಕಾದ ಭವಿಷ್ಯದ ಬಗ್ಗೆ ನಾನೇನು ಆಶಾವಾದಿಯಾಗಿಲ್ಲ, ಏಕೆಂದರೆ ನಮ್ಮ ಎಲ್ಲಾ ಸಾಮಾಜಿಕ ನೀತಿಗಳು ಅವರ ಬುದ್ಧಿಮತ್ತೆ ನಮ್ಮಂತೆಯೇ ಇದೆ ಎಂಬ ನಂಬಿಕೆಗೆ ಆಧಾರಿತವಾಗಿದೆ. ಆದರೆ ಎಲ್ಲಾ ಪರೀಕ್ಷೆಗಳು ಅದು ಸರಿ ಅಲ್ಲ ಎಂದು ತೋರಿಸುತ್ತಿವೆ ಎಂದು ಹೇಳಿದ್ದರು. ಆ ಬಳಿಕ ಅವರು ಈ ಬಗ್ಗೆ ಕ್ಷಮೆ ಯಾಚಿಸಿದ್ದರೂ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬೊರೇಟರಿಯ ಚಾನ್ಸಲರ್ ಹುದ್ದೆಯಿಂದ ವಂಚಿತರಾಗಿದ್ದರು.
ವಾಟ್ಸನ್ ಅವರ ಸಹೋದ್ಯೋಗಿಗಳು ಹೇಳುವಂತೆ, ಅವರು 1950–60ರ ದಶಕಗಳಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಮಹಿಳಾ ವಿಜ್ಞಾನಿಗಳ ವೃತ್ತಿಜೀವನವನ್ನು ಉತ್ತೇಜಿಸಿದ್ದರು. ಆದರೆ ಅವರು ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆಗಳು ಮಾಡಿದ್ದರೆಂದು, ಮತ್ತು ತಮ್ಮ 1968ರ The Double Helix ಪುಸ್ತಕದಲ್ಲಿ ಸಂಶೋಧಕಿ ರೋಸಲಿಂಡ್ ಫ್ರ್ಯಾಂಕ್ಲಿನ್ ಅವರ ರೂಪದ ಕುರಿತು ಅಸಭ್ಯ ಟಿಪ್ಪಣಿಗಳನ್ನು ಬರೆದಿದ್ದರೆಂದು ಆರೋಪಗಳಿವೆ. ವಾಟ್ಸನ್ ಅವರು ಬದುಕಿದ್ದಾಗಲೇ ತಮ್ಮ ನೊಬೆಲ್ ಚಿನ್ನದ ಪದಕವನ್ನು 2014ರಲ್ಲಿ ಹರಾಜಿನಲ್ಲಿ ಮಾರಿದ್ದರು. ರಷ್ಯಾದ ಕೋಟ್ಯಾಧೀಶರೊಬ್ಬರು ಅದನ್ನು ಸುಮಾರು 38 ಕೋಟಿ ರೂ.ಗಳಿಗೆ ಖರೀಸಿದಿಸಿ, ಬಳಿಕ ವಾಟ್ಸನ್ ಅವರಿಗೆ ಹಿಂದಿರುಗಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:44 am, Sun, 9 November 25




