ಇರಾನ್ನಲ್ಲಿನ ಭಾರತೀಯರು ತಕ್ಷಣ ದೇಶ ಬಿಟ್ಟು ಹೊರಡಿ; ಭಾರತ ಆದೇಶ
ಇರಾನ್ ಪ್ರದೇಶದಲ್ಲಿ ಇತ್ತೀಚಿನ ಉದ್ವಿಗ್ನ ಪರಿಸ್ಥಿತಿ ಮತ್ತು ಹೆಚ್ಚಿದ ಭದ್ರತಾ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಾಯಭಾರ ಕಚೇರಿಯು ಅಲ್ಲಿನ ಭಾರತೀಯರಿಗೆ ಹೊಸ ತುರ್ತು ಸಲಹೆಯನ್ನು ನೀಡಿದೆ. ಈ ಸಮಯದಲ್ಲಿ ಯಾವುದೇ ಭಾರತೀಯ ನಾಗರಿಕರು ಇರಾನ್‌ಗೆ ಪ್ರಯಾಣಿಸಬಾರದು ಮತ್ತು ಈಗಾಗಲೇ ಇರಾನ್‌ನಲ್ಲಿರುವ ಭಾರತೀಯರು ತಕ್ಷಣ ದೇಶವನ್ನು ತೊರೆಯಬೇಕು ಎಂದು ಒತ್ತಾಯಿಸಲಾಗಿದೆ. ಈ ಪ್ರದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಭಾರತೀಯ ಪ್ರಜೆಗಳು ಇರಾನ್‌ಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ.

ನವದೆಹಲಿ, ಜೂನ್ 8: ಇರಾನ್ (Iran War) ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಮಿಲಿಟರಿ ಸಂಘರ್ಷ ಹಾಗೂ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ತನ್ನ ನಾಗರಿಕರಿಗಾಗಿ ಹೊಸ ಎಚ್ಚರಿಕೆಗಳನ್ನು ನೀಡಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಭಾರತೀಯ ನಾಗರಿಕರಿಗೆ ಇರಾನ್‌ಗೆ ಪ್ರಯಾಣಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಎರಡೂ ದೇಶಗಳ ನಡುವೆ ಮಿಲಿಟರಿ ದಾಳಿ ನಿಲ್ಲುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮದ ಮಾತುಕತೆಗಳು ನಡೆಯುತ್ತಿದ್ದರೂ ಪರಸ್ಪರ ಇಂಧನ ಹಾಗೂ ಮಿಲಿಟರಿ ನೆಲೆಗಳ ಮೇಲೆ ದಾಳಿಗಳು ಮುಂದುವರಿದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ಪ್ರಸ್ತುತ ಇರಾನ್‌ನಲ್ಲಿ ವಾಸಿಸುತ್ತಿರುವ ಅಥವಾ ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸಕ್ಕಾಗಿ ಅಲ್ಲಿಗೆ ಹೋಗಿರುವ ಎಲ್ಲಾ ಭಾರತೀಯ ನಾಗರಿಕರು ತಕ್ಷಣವೇ ಇರಾನ್ ತೊರೆದು ಸುರಕ್ಷಿತವಾಗಿ ಭಾರತಕ್ಕೆ ಮರಳುವಂತೆ ಕೇಂದ್ರ ಸರ್ಕಾರ ಒತ್ತಾಯಿಸಿದೆ. ಇರಾನ್ ತನ್ನ ವಾಯುಪ್ರದೇಶವನ್ನು ಯಾವುದೇ ಕ್ಷಣದಲ್ಲಾದರೂ ಸಂಪೂರ್ಣವಾಗಿ ಮುಚ್ಚುವ ಸಾಧ್ಯತೆ ಇರುವುದರಿಂದ, ವಿಮಾನ ಯಾನ ಸೇವೆಗಳು ಸ್ಥಗಿತಗೊಳ್ಳುವ ಮುನ್ನವೇ ದೇಶ ತೊರೆಯಲು ಸೂಚಿಸಲಾಗಿದೆ.
— India in Iran (@India_in_Iran) June 8, 2026
ಇದನ್ನೂ ಓದಿ: ಅಮೆರಿಕವನ್ನು ನಂಬುವುದಿಲ್ಲ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸಲು ಭಾರತಕ್ಕೆ ಸಾಧ್ಯ; ಇರಾನ್ ವಿದೇಶಾಂಗ ಸಚಿವ ಅರಘ್ಚಿ
ಇರಾನ್‌ನಿಂದ ತಕ್ಷಣವೇ ಹೊರಬರಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ಭಾರತೀಯರಿಗೆ ಸರ್ಕಾರ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲು ತಿಳಿಸಿದೆ. ಇರಾನ್‌ನಲ್ಲಿರುವ ಎಲ್ಲಾ ಭಾರತೀಯರು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ತಕ್ಷಣವೇ ಸಂಪರ್ಕ ಸಾಧಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಸೂಚಿಸಿದೆ. ಇರಾನ್ ದೇಶದ ಒಳಗಡೆಯೂ ಅನಗತ್ಯವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಹೇಳಿದೆ. ವಸತಿ ಪ್ರದೇಶಗಳಿಂದ ದೂರವಿರದೆ, ಸುರಕ್ಷಿತ ಕಟ್ಟಡಗಳು ಅಥವಾ ಆಶ್ರಯ ತಾಣಗಳಲ್ಲಿ ಇರಬೇಕಾಗಿ ವಿನಂತಿಸಲಾಗಿದೆ.
ಇದನ್ನೂ ಓದಿ: ‘ನಮಗೆ ಬೇಕಾದ್ದು ದಕ್ಕದೇ ಹೋದರೆ ಬೇರೆ ಮಾರ್ಗದಲ್ಲಿ ಕೊನೆಗಾಣಿಸಬೇಕಾಗುತ್ತದೆ’- ಇರಾನ್‌ಗೆ ಟ್ರಂಪ್ ವಾರ್ನಿಂಗ್
ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು 24/7 ತುರ್ತು ಸಹಾಯವಾಣಿಯನ್ನು ತೆರೆದಿದ್ದು, ಯಾವುದೇ ಆಪತ್ತಿನ ಸಮಯದಲ್ಲಿ ಭಾರತೀಯ ನಾಗರಿಕರು ರಾಯಭಾರ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ. ಭಾರತ ಸರ್ಕಾರವು ಅಲ್ಲಿರುವ ತನ್ನ ನಾಗರಿಕರ ಸುರಕ್ಷತೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ.
ಪ್ರಸ್ತುತ ಇರಾನ್‌ನಲ್ಲಿ ಸುಮಾರು 7,500 ಭಾರತೀಯರು ಸಿಲುಕಿಕೊಂಡಿದ್ದಾರೆ, ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಕೆಲಸಕ್ಕೆ ಸಂಬಂಧಿಸಿದ ಕಾರಣಗಳಿಗಾಗಿ ಅಲ್ಲಿದ್ದಾರೆ. ಅರ್ಮೇನಿಯಾ ಮತ್ತು ಅಜೆರ್ಬೈಜಾನ್‌ನ ಭೂ ಗಡಿಗಳ ಮೂಲಕ ಸಾವಿರಾರು ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಭಾರತೀಯ ರಾಯಭಾರ ಕಚೇರಿ ಈಗಾಗಲೇ ಕ್ರಮಗಳನ್ನು ತೆಗೆದುಕೊಂಡಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




