ಭಾರತ ಸರ್ಕಾರವು ಭಾರತೀಯ ಸೇನೆಯಲ್ಲಿರುವ ಎಲ್ಲ ಸಿಖ್ಖರನ್ನೂ ವಜಾ ಮಾಡಲು ನಿರ್ಧರಿಸಿದೆ ಎಂಬ ಸುಳ್ಳು ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ದಳ ಐಎಸ್ಐನ ಟ್ವಿಟರ್ ಖಾತೆ ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಷನ್ಸ್ ಹಂಚಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರಿದ್ದ ಕಾರಿನ ಸಂಚಾರದ ವೇಳೆ ಬೆಳಕಿಗೆ ಬಂದ ಭದ್ರತಾ ವೈಫಲ್ಯದಿಂದ ಕೇಂದ್ರ ಸರ್ಕಾರ ಮತ್ತು ಪಂಜಾಬ್ ಸರ್ಕಾರದ ನಡುವೆ ಸಂಘರ್ಷ ಪರಿಸ್ಥಿತಿ ಉದ್ಭವಿಸಿದೆ. ಈ ಟ್ವೀಟ್ ಮೂಲಕ ಭಾರತದ ಬೆಳವಣಿಗೆಗಳ ದುರ್ಲಾಭ ಪಡೆಯಲು ಪಾಕಿಸ್ತಾನವು ಪ್ರಯತ್ನಿಸುತ್ತಿದೆ.
ಈ ಟ್ವಿಟರ್ ಖಾತೆಯನ್ನು (@heyanjaliii) ಕಳೆದ ವರ್ಷ ಅಕ್ಟೋಬರ್ನಲ್ಲಿ ರೂಪಿಸಲಾಗಿದೆ. ಅಂಜಲಿ ಕೌರ್ ಹೆಸರಿನಲ್ಲಿರುವ ಈ ಖಾತೆಯಲ್ಲಿ ಹಂಚಿಕೊಂಡಿದ್ದ ವಿಡಿಯೊದಲ್ಲಿ ಕೇಂದ್ರ ಸಚಿವರಾದ ಅನುರಾಗ್ ಠಾಕೂರ್, ಎಸ್.ಜೈಶಂಕರ್ ಸಿಖ್ಖರನ್ನು ಭಾರತೀಯ ಸೇನೆಯಿಂದ ತೆಗೆದುಹಾಕಲು ಸೂಚಿಸಿದ ಮಾತುಗಳಿವೆ ಎಂಬ ಒಕ್ಕಣೆ ಬರೆಯಲಾಗಿದೆ. ಭಾರತೀಯ ಸೇನೆಯಲ್ಲಿರುವ ಪಂಜಾಬ್ ಮೂಲದ ಎಲ್ಲ ಜನರಲ್ಗಳು, ಎಲ್ಲ ಸೈನಿಕರನ್ನು, ಮೇಲಿನಿಂದ ಕೆಳಗಿನವರೆಗೆ ಎಲ್ಲ ಪಂಜಾಬಿಗಳನ್ನೂ ತೆಗೆದು ಹಾಕಬೇಕು’ ಎಂಬ ಪುರುಷ ಧ್ವನಿ ವಿಡಿಯೊದಲ್ಲಿದೆ.
ಫ್ಯಾಕ್ಟ್ಚೆಕ್ ವೇಳೆ ಇದು ತಿರುಚಿದ ವಿಡಿಯೊ ಎಂಬ ಸಂಗತಿ ದೃಢಪಟ್ಟಿತು. ಬೇರೊಂದು ಮೂಲದಿಂದ ಪಡೆದುಕೊಂಡಿರುವ ಧ್ವನಿಯನ್ನು ಸಂಪುಟ ಸಭೆಯ ಸನ್ನಿವೇಶಕ್ಕೆ ಜೋಡಿಸಲಾಗಿದೆ. ಈ ವಿಡಿಯೊದಲ್ಲಿ ಬಳಸಿರುವ ಧ್ವನಿ ತುಣುಕಿನಲ್ಲಿರುವ ಯಾವುದೇ ಮಾತನ್ನು ಸಭೆಯಲ್ಲಿ ಆಡಿಲ್ಲ. ಈ ಧ್ವನಿಯ ತುಣುಕು ಕ್ಲಬ್ಹೌಸ್ ಚರ್ಚೆಯೊಂದರದ್ದು ಎಂದು ನಂತರದ ಪರಿಶೀಲನೆ ವೇಳೆ ತಿಳಿದು ಬಂತು. ಟ್ವಿಟರ್ನಲ್ಲಿಯೂ ಹಲವು ಬಳಕೆದಾರರು ಹಾಗೆಂದು ಕಾಮೆಂಟ್ ಮಾಡಿದ್ದಾರೆ.
ಕ್ಲಬ್ಹೌಸ್ ಚರ್ಚೆಯ ವೇಳೆ ವಿಕಾಸ್ ದುಬೆ ಎನ್ನುವವರು ಭಾರತೀಯ ಸೇನೆಯಿಂದ ಪಂಜಾಬಿಗಳನ್ನು ತೊಲಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಆಡಿಯೊ ಕ್ಲಿಪ್ ಅನ್ನು ಅದಾಗಲೇ ಹಲವರು ಟ್ವೀಟ್ ಮಾಡಿ ಖಂಡಿಸಿದ್ದರು. ಆದರೆ ಪಾಕಿಸ್ತಾನದ ಐಎಸ್ಐ ಈ ಆಡಿಯೊ ಕ್ಲಿಪ್ಗೆ ಬೇರೊಂದು ವಿಡಿಯೊ ಕ್ಲಿಪ್ ಜೋಡಿಸಿ ಭಾರತ ಸರ್ಕಾರದ ವಿರುದ್ಧ ಸಲ್ಲದ ಆರೋಪ ಹೊರಿಸಿದೆ.
ಪಾಕಿಸ್ತಾನದ ಈ ಟ್ವೀಟ್ಗೆ ಭಾರತದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ‘ಇದೊಂದು ಹಾಸ್ಯಾಸ್ಪದ ಟ್ವೀಟ್’ ಎಂದು ಪತ್ರಕರ್ತ ಶಿವ್ ಅರೊರ ಹೇಳಿದ್ದಾರೆ. ಈ ಟ್ವೀಟ್ಗೆ ಬಳಕೆಯಾಗಿರುವ ವಿಡಿಯೊ ಕಳೆದ ಡಿಸೆಂಬರ್ 9ನೇ ತಾರೀಖಿನದ್ದು. ಅಂದು ಸಿಡಿಎಸ್ ಬಿಪಿನ್ ರಾವತ್ ಹಠಾತ್ ನಿಧನದ ನಂತರ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿದ್ದರು. ಪ್ರೆಸ್ ಸರ್ಕಾರದ ಅಧೀನದಲ್ಲಿರುವ ಪ್ರೆಸ್ ಇನ್ಫರ್ಮೇಶನ್ ಬ್ಯೂರೊ (ಪಿಐಬಿ) ಸಹ ಈ ಟ್ವೀಟ್ಗೆ ಬಳಕೆಯಾಗಿರುವ ವಿಡಿಯೊದ ಸತ್ಯಾತ್ಯತೆಯ ವಿವರಣೆ ನೀಡಿದೆ. ‘ಈ ಟ್ವೀಟ್ಗೆ ತಿರುಚಿದ ವಿಡಿಯೊ ಬಳಸಲಾಗಿದೆ. ಇಂಥ ಯಾವುದೇ ಚರ್ಚೆ ಅಥವಾ ಸಭೆ ನಡೆದಿಲ್ಲ’ ಎಂದು ಪಿಐಬಿ ತಿಳಿಸಿದೆ.
ಇದನ್ನೂ ಓದಿ: ಇನ್ನೂ ಕೆಲ ಸಮಯ ಕೊರೊನಾ ಸೋಂಕಿನೊಂದಿಗೆ ಬದುಕುವುದು ಕಲಿಯಬೇಕಿದೆ: ದಕ್ಷಿಣ ಆಫ್ರಿಕಾದ ತಜ್ಞ ವೈದ್ಯೆ ಆಂಜೆಲಿಕ್ ಕೊಯೆಟ್ಜಿ