ಚೆನ್ನೈ: ಬ್ಯಾಂಕ್ ಸಿಬ್ಬಂದಿಯ ಸೋಗಿನಲ್ಲಿ ಗ್ರಾಹಕರಿಗೆ ಕಾಲ್ ಮಾಡಿ ಅವರ ಎಟಿಎಂ ಪಿನ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆದು ಮೋಸಮಾಡುವುದನ್ನು ನಾವೆಲ್ಲರೂ ಸಾಕಷ್ಟು ಬಾರಿ ನೋಡಿದ್ದೀವಿ. ಆದರೆ, ಪ್ರತಿಷ್ಠಿತ ಬ್ಯಾಂಕ್ನ ಹೆಸರು ಬಳಸಿಕೊಂಡು ನಕಲಿ ಬ್ರಾಂಚ್ ತೆರೆದು ಸಾವಿರಾರು ಜನರಿಗೆ ನಾಮ ಹಾಕಿರೋ ಬಗ್ಗೆ ನೀವೆಂದಾದರೂ ಕೇಳಿದ್ದೀರಾ? ಹೌದು, ಇದು ನಂಬಲು ಕೊಂಚ ಕಷ್ಟವಾದರೂ ಇಂಥ ಒಂದು ಘಟನೆ ತಮಿಳುನಾಡಿನಲ್ಲಿರುವ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.
ದೇಶದ ಪ್ರತಿಷ್ಠಿತ ಭಾರತೀಯ ಸ್ಟೇಟ್ ಬ್ಯಾಂಕ್ನ (SBI) ಹೆಸರು ಬಳಸಿಕೊಂಡು ಕಡಲೂರು ಜಿಲ್ಲೆಯ ಪನ್ರುತ್ತಿಯಲ್ಲಿ ಮೂವರು ಆಸಾಮಿಗಳು ನಕಲಿ ಬ್ರಾಂಚ್ ನಡೆಸಿ ಜನರಿಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಚ್ಚರಿಯೆಂದರೆ, ಆರೋಪಿಗಳು ಕಳೆದ ಮೂರು ತಿಂಗಳಿಂದ ನಕಲಿ ಶಾಖೆಯನ್ನು ನಡೆಸುತ್ತಿದ್ದರೂ ಯಾರಿಗೂ ಅನುಮಾನವೇ ಬಂದಿಲ್ಲ!
ನಕಲಿ SBI ಶಾಖೆ ಪತ್ತೆಯಾಗಿದ್ದಾದ್ರೂ ಹೇಗೆ? ಅಂದ ಹಾಗೆ, ಈ ನಕಲಿ ಶಾಖೆಯು ಅಧಿಕಾರಿಗಳ ಗಮನಕ್ಕೆ ಬಂದಿದ್ದು ಆಕಸ್ಮಿಕವಾಗಿ. ಹೌದು, ನಕಲಿ ಶಾಖೆಯಲ್ಲಿ ಬ್ಯಾಂಕ್ ಖಾತೆ ತೆರೆದಿದ್ದ ಗ್ರಾಹಕರೊಬ್ಬರು ಬ್ಯಾಂಕ್ ವ್ಯವಹಾರದ ವಿಚಾರವಾಗಿ ಮತ್ತೊಂದು SBI ಬ್ಯಾಂಕ್ನ ಬ್ರಾಂಚ್ ಮ್ಯಾನೇಜರ್ ಜೊತೆ ಒಮ್ಮೆ ಚರ್ಚಿಸುತ್ತಿದ್ದರಂತೆ. ಈ ನಡುವೆ ಆ ಬ್ಯಾಂಕ್ ಮ್ಯಾನೇಜರ್ಗೆ ಈ ನಕಲಿ ಶಾಖೆಯ ಬಗ್ಗೆ ಅನುಮಾನ ಹುಟ್ಟಿದೆ. ಕೂಡಲೇ ತನ್ನ ಹಿರಿಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ತದ ನಂತರ ನಕಲಿ ಶಾಖೆಗೆ ಅಧಿಕಾರಿಗಳು ಭೇಟಿಕೊಟ್ಟ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳು ನಕಲಿ ಬ್ಯಾಂಕ್ ತೆರೆಯಲು ಕಾರಣವೇನು? ಕೂಡಲೇ ಅಧಿಕಾರಿಗಳು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಬ್ಯಾಂಕ್ ನಡೆಸುತ್ತಿದ್ದ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ನಡುವೆ, ಅರೆಸ್ಟ್ ಆದ ಮೂವರಲ್ಲಿ ಓರ್ವ SBIನಲ್ಲಿ ಕೆಲಸ ನಿರ್ವಹಿಸಿದ್ದ ಮಾಜಿ ಸಿಬ್ಬಂದಿಯ ಮಗನಂತೆ. ಅಚ್ಚರಿಯ ಸಂಗತಿಯೆಂದರೆ, ತಂದೆಯ ನಿಧನದ ನಂತರ ಅವರ ಕೆಲಸಕ್ಕೆ ಈತ ಅರ್ಜಿ ಹಾಕಿದ್ದ. ಆದರೆ, ಇದಕ್ಕೆ ಬ್ಯಾಂಕ್ ಆಡಳಿತ ಮಂಡಳಿ ಸ್ಪಂದಿಸಿರಲಿಲ್ಲ. ಹಾಗಾಗಿ, ಸಿಟ್ಟಿಗೆದ್ದ ಆರೋಪಿ ತಾನೇ ಯಾಕೆ ಬ್ಯಾಂಕ್ ಶುರುಮಾಡಬಾರದು ಎಂದು ಯೋಚಿಸಿ ಕೃತ್ಯಕ್ಕೆ ಕೈಹಾಕಿದ್ದಾನೆ.
ಚಿಕ್ಕವನಿದ್ದಾಗ ತಂದೆಯೊಟ್ಟಿಗೆ ಬ್ಯಾಂಕ್ಗೆ ಭೇಟಿಕೊಡುತ್ತಿದ್ದ ಆರೋಪಿ ಬ್ಯಾಂಕ್ ವ್ಯವಹಾರದ ಬಗ್ಗೆ ಕೂಲಂಕುಷವಾಗಿ ತಿಳಿದುಕೊಂಡಿದ್ದ. ಜೊತೆಗೆ, SBI ಬ್ಯಾಂಕ್ನ ಚಲಾನ್, ರಬ್ಬರ ಸ್ಟಾಂಪ್ ಮತ್ತು ಇತರೆ ದಾಖಲೆಗಳನ್ನು ಮುದ್ರಿಸುತ್ತಿದ್ದ ಮತ್ತೊಬ್ಬ ಆರೋಪಿಯ ಜೊತೆ ಕೈಜೋಡಿಸಿ ನಕಲಿ ಬ್ರಾಂಚ್ಗೆ ಬೇಕಾದ ಅಗತ್ಯ ವಸ್ತುಗಳನ್ನು ತಯಾರಿಸಿ ಶಾಖೆಯ ದೈನಂದಿನ ಚಟುವಟಿಕೆಗಳನ್ನ ಯಾವುದೇ ರೀತಿ ಸಂಶಯ ಬಾರದ ಹಾಗೆ ನಡೆಸುತ್ತಿದ್ದನಂತೆ.