ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ದಂಗಲ್.. ಗಣರಾಜ್ಯೋತ್ಸವ ಕಾರ್ಯಕ್ರಮ ಮುಗೀತಿದ್ದಂತೆ ರ‍್ಯಾಲಿ ಶುರು
ದೆಹಲಿಯಲ್ಲಿ ಐತಿಹಾಸಿಕ ಟ್ರ್ಯಾಕ್ಟರ್ ಪರೇಡ್ ನಡೆಸಲು ರೈತರು ಸಿದ್ಧರಾಗಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿ ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಈ ರೀತಿ ಪ್ರತಿಭಟನಾ ಱಲಿ ನಡೀತಿದೆ.
ದೆಹಲಿಯ ಮೂರು ಗಡಿಗಳು.. ಅಂದ್ರೆ ಸಿಂಘು, ಟಿಕ್ರಿ, ಘಾಜಿಪುರ್ ಗಡಿಗಳು ರೈತರ ಹಾಟ್ಸ್ಪಾಟ್ ಆಗಿವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರೋ ಮೂರು ಕೃಷಿ ಕಾಯ್ದೆಗಳನ್ನ ವಿರೋಧಿಸಿ ಪಂಜಾಬ್ ಮತ್ತು ಹರಿಯಾಣದ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸ್ತಿದ್ದಾರೆ. ಈವರೆಗೆ ಕೇಂದ್ರ ಸರ್ಕಾರದ ಜೊತೆಗೆ 11 ಬಾರಿ ಸಂಧಾನ ಸಭೆ ನಡೆದ್ರೂ ಯಾವುದೇ ಪರಿಹಾರ ಸಿಕ್ಕಿಲ್ಲ.
ಇದೇ ಕಾರಣಕ್ಕೆ ಗಣರಾಜ್ಯೋತ್ಸವದ ಅತ್ಯಂತ ಮಹತ್ವದ ದಿನ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೈತರು ಟ್ರ್ಯಾಕ್ಟರ್ ಱಲಿ ನಡೆಸ್ತಿದ್ದಾರೆ. ಅದು ನೂರಲ್ಲ.. ಇನ್ನೂರಲ್ಲ.. ಸಾವಿರವೂ ಅಲ್ಲ.. ಬದಲಿಗೆ 2 ಲಕ್ಷ ಟ್ರ್ಯಾಕ್ಟರ್ಗಳು ದೆಹಲಿಯ ಗಡಿ ತಲುಪಿದ್ದು 250 ಕಿಲೋಮೀಟರ್ಗೂ ಹೆಚ್ಚು ದೂರ ರೈತರು ಱಲಿ ನಡೆಸಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ದೆಹಲಿಯ ರಾಜಪಥದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಮುಗೀತಿದ್ದಂತೆ ಟ್ರ್ಯಾಕ್ಟರ್ ಪರೇಡ್ ಆರಂಭವಾಗಲಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ದಂಗಲ್ ಅಸಲಿಗೆ ರೈತ ಕ್ರಾಂತಿಯ ಕಹಳೆ ಮೊಳಗಿರೋದೇ ದೆಹಲಿಯಲ್ಲಿ. ಇಂದು ದೆಹಲಿಯಲ್ಲಿ ಕಿಸಾನ್ ಕ್ರಾಂತಿ ಕಹಳೆ ಮೊಳಗಲಿದೆ. ರಾಷ್ಟ್ರ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ದಂಗೆ ಶುರುವಾಗಲಿದೆ. ಭಾರತದ ಇತಿಹಾಸದಲ್ಲಿ, ಗಣರಾಜ್ಯೋತ್ಸವದ ದಿನ ಹಸಿರು ಸೇನಾನಿಗಳು ಕಂಡು ಕೇಳರಿಯದಂಥಾ ಪ್ರತಿಭಟನಾ ಱಲಿ ನಡೆಸಲಿದ್ದಾರೆ. ದೆಹಲಿಯ ರಾಜಪಥದಲ್ಲಿ ನಡೆಯಲಿರೋ ಗಣರಾಜ್ಯೋತ್ಸವ ಪರೇಡ್ಗೆ ಸಿದ್ಧತೆ ಪೂರ್ಣಗೊಂಡಿದೆ. ಜೊತೆ ಜೊತೆಗೆ ರೈತರ ಟ್ರ್ಯಾಕ್ಟರ್ ಪರೇಡ್ಗೆ ಭರ್ಜರಿ ಸಿದ್ಧತೆ ನಡೆದಿದೆ. ಇಂದು ಗಣರಾಜ್ಯೋತ್ಸವ ಪರೇಡ್ ಮುಗಿದ ಕೆಲವೇ ಕ್ಷಣಗಳಲ್ಲಿ ರೈತರ ಟ್ರಾಕ್ಟರ್ ಪರೇಡ್ ಆರಂಭವಾಗಲಿದೆ. ದೆಹಲಿಯ ಹೊರವಲಯದಲ್ಲಿ 2 ಲಕ್ಷಕ್ಕೂ ಅಧಿಕ ಟ್ರಾಕ್ಟರ್ ಬಂದು ಸೇರಿದ್ದು, ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರಪ್ರದೇಶದಿಂದ ಲಕ್ಷಾಂತರ ಟ್ರ್ಯಾಕ್ಟರ್ಗಳು ದೆಹಲಿ ಗಡಿಯಲ್ಲಿ ಜಮಾವಣೆಯಾಗಿವೆ.
ಬೆಳಗ್ಗೆ 11.30ರಿಂದ ಶುರುವಾಗಲಿದೆ ರೈತರ ಟ್ರ್ಯಾಕ್ಟರ್ ಱಲಿ! ಇಂದು ಬೆಳಗ್ಗೆ 11.30ರಿಂದ ರೈತರ ಟ್ರ್ಯಾಕ್ಟರ್ ಪರೇಡ್ ಆರಂಭವಾಗಲಿದೆ. ರಾಜಪಥದಲ್ಲಿ ಗಣರಾಜ್ಯೋತ್ಸವ ಪರೇಡ್ ಮುಗಿಯುತ್ತಿದ್ದಂತೆ ದೆಹಲಿ ಸಂಪರ್ಕಿಸುವ 3 ಗಡಿಗಳನ್ನ ಓಪನ್ ಮಾಡಲಾಗುತ್ತೆ. ಘಾಜಿಪುರ್, ಸಿಂಘು, ಟಿಕ್ರಿ ಬಾರ್ಡರ್ನಿಂದ ಟ್ರ್ಯಾಕ್ಟರ್ಗಳು ದೆಹಲಿ ಪ್ರವೇಶಿಸಲಿವೆ. ದೆಹಲಿ ಹೊರವಲಯದ ರಸ್ತೆಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ಪೊಲೀಸರು ಅವಕಾಶ ನೀಡಿದ್ದಾರೆ. ಸಿಂಘು ಬಾರ್ಡರ್ನಿಂದ 100 ಕಿಲೋ ಮೀಟರ್, ಟಿಕ್ರಿ ಬಾರ್ಡರ್ನಿಂದ 125 ಕಿಲೋಮೀಟರ್, ಘಾಜಿಪುರ್ ಬಾರ್ಡರ್ನಿಂದ ಸುಮಾರು 50 ಕಿಲೋ ಮೀಟರ್ ಮೆರವಣಿಗೆ ನಡೆಯಲಿದೆ. ಒಟ್ಟು 250 ರಿಂದ 270 ಕಿಲೋ ಮೀಟರ್ವರೆಗೆ ಟ್ರ್ಯಾಕ್ಟರ್ ಪರೇಡ್ ನಡೆಯಲಿದೆ. 10 ರಿಂದ 12 ಗಂಟೆ ಱಲಿ ನಡೆಸಲು ಸಂಘಟಕರು ತೀರ್ಮಾನಿಸಿದ್ದಾರೆ.
ಮೊದಲ ಟ್ರ್ಯಾಕ್ಟರ್ ಹೊರಲಿದೆ ಪವಿತ್ರ ‘ಗುರು ಗ್ರಂಥ ಸಾಹೀಬ್’ ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಱಲಿಗೆ ಅನುಮತಿ ನೀಡಿರೋ ಪೊಲೀಸರು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು 5 ಹಂತದ ಭದ್ರತಾ ವ್ಯವಸ್ಥೆ ಮಾಡಿದ್ದಾರೆ. ದೆಹಲಿಯ ಗಡಿಯಲ್ಲಿ, ದೆಹಲಿ ಹೃದಯ ಭಾಗ, ದೆಹಲಿಯ ಮಧ್ಯಭಾಗ, ದೆಹಲಿಯ ಹೊರಭಾಗದಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದೆ. ಇನ್ನು ಟ್ರ್ಯಾಕ್ಟರ್ ಱಲಿಯಲ್ಲಿ ಪಾಲ್ಗೊಳ್ಳುವ ಮೊದಲ ಟ್ರ್ಯಾಕ್ಟರ್ನಲ್ಲಿ ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹೀಬವನ್ನ ಹೊತ್ತು ಸಾಗಲಿದೆ. ಇದರ ಜೊತೆಗೆ ಪವಿತ್ರ ಗ್ರಂಥವನ್ನ ಹೊರುವ ಟ್ರ್ಯಾಕ್ಟರ್ನಲ್ಲಿ ಶಹೀದ್ ಬಾಬಾ ದೀಪ್ ಸಿಂಗ್, ಬಾಬಾ ಬಂದಾ ಸಿಂಗ್ ಬಹಾದ್ದೂರು, ಗುರು ತೇಗ್ ಬಹಾದ್ದೂರ್ ಅವರ ಭಾವಚಿತ್ರಗಳನ್ನ ಈ ಟ್ರ್ಯಾಲಿಗೆ ಅಂಟಿಸಲಾಗಿದೆ.
ಟ್ರ್ಯಾಕ್ಟರ್ ಱಲಿಗೆ ತಡೆಯುಂಟು ಮಾಡಲು ಪಾಕ್ನಿಂದ ಯತ್ನ ಟ್ರ್ಯಾಕ್ಟರ್ ಱಲಿ ಪ್ರಾರಂಭವಾದ ಬಳಿಕ ಯಾವುದೇ ಊಹಾಪೋಹಗಳು ಹರಡದಂತೆ ತಡೆಯಲು ರೈತ ನಾಯಕರು, ಸ್ವಯಂಸೇವಕರನ್ನ ನಿಯೋಜಿಸಿದ್ದಾರೆ. ಯಾರಾದರೂ ಊಹಾಪೋಹಗಳನ್ನ ಹರಡಲು ಯತ್ನಿಸಿದ್ರೆ, ಇವರು ರೈತರು ಅದನ್ನ ನಂಬದಂತೆ ತಡೆಯುವ ಕೆಲಸ ಮಾಡಲಿದ್ದಾರೆ. ಈಗಾಗಲೇ ಯಾವುದೇ ಊಹಾಪೋಹವನ್ನ ನಂಬಬಾರದು ರೈತರಿಗೆ ತಿಳುವಳಿಕೆ ಮೂಡಿಸುವ ಕೆಲಸವನ್ನ ರೈತ ನಾಯಕರು ಮಾಡಿದ್ದಾರೆ. ದೆಹಲಿ ಗುಪ್ತಚರ ವಿಶೇಷ ಕಮಿಷನರ್ ದೀಪೇಂದ್ರ ಪಾಠಕ್ ಪ್ರಕಾರ, ದೆಹಲಿಯ ಟ್ರ್ಯಾಕ್ಟರ್ ಱಲಿಯನ್ನ ಅಸ್ತವ್ಯಸ್ತಗೊಳಿಸಲು ಪಾಕಿಸ್ತಾನಿ ಮೂಲದ 300 ಟ್ವಿಟ್ಟರ್ ಖಾತೆಗಳಿಂದ ಪ್ರಯತ್ನಿಸಲಾಗ್ತಿದೆ ಅಂತಾ ಹೇಳಿದ್ದಾರೆ. ಈ ಐತಿಹಾಸಿಕ ರೈತ ಗಣರಾಜ್ಯೋತ್ಸವಕ್ಕೆ ರೈತರು ತಮಗೆ ತಾವೇ ಮಾರ್ಗಸೂಚಿಗಳನ್ನು ಅಳವಡಿಕೊಂಡಿದ್ದಾರೆ.
ಟ್ರ್ಯಾಕ್ಟರ್ ಱಲಿ ಗೈಡ್ಲೈನ್ಸ್ ದೆಹಲಿಯಲ್ಲಿ ನಡೆಯೋ ಟ್ರ್ಯಾಕ್ಟರ್ ಱಲಿಗೆ ಎಂಜಿನ್ ತರೋದಕ್ಕೆ ಮಾತ್ರ ಅವಕಾಶ ಇದ್ದು, ಯಾರೂ ಟ್ರಾಲಿ ತರುವಂತಿಲ್ಲ. ಅಷ್ಟೇ ಅಲ್ಲ ಱಲಿ ಆರಂಭವಾದ ನಂತರ ಯಾರೂ ಓವರ್ ಟೇಕ್ ಮಾಡದೇ, ರೈತ ಮುಖಂಡರ ಕಾರುಗಳನ್ನ ಹಿಂಬಾಲಿಸಬೇಕು. ಱಲಿ ಸುಗಮವಾಗಿ ನಡೆಯಲು ಸ್ವಯಂಸೇವಕರನ್ನ ನಿಯೋಜಿಸಲಾಗಿದ್ದು, ಅವರು ನೀಡುವ ನಿರ್ದೇಶನಗಳನ್ನು ಪಾಲಿಸಬೇಕು. ಚಾಲಕ ಸೇರಿ 1 ಟ್ರ್ಯಾಕ್ಟರ್ನಲ್ಲಿ ಗರಿಷ್ಟ 5 ಜನರಿಗೆ ಅವಕಾಶ ನೀಡಲಾಗಿದ್ದು, ಟ್ರ್ಯಾಕ್ಟರ್ ಬಾನೆಟ್, ಬಂಪರ್, ರೂಫ್ನಲ್ಲಿ ಕೂರಬಾರದು. ಜೊತೆಗೆ ಟ್ರ್ಯಾಕ್ಟರ್ಗಳಲ್ಲಿ ಸಂಗೀತ ಹಾಕಬಾರದು. ಟ್ರ್ಯಾಕ್ಟರ್ ಪರೇಡ್ ವೇಳೆ ಮಾದಕವಸ್ತು ಸೇವಿಸಬಾರದು. ಟ್ರ್ಯಾಕ್ಟರ್ಗಳಲ್ಲಿ ರೈತ ಸಂಘಟನೆ ಧ್ವಜ & ತ್ರಿವರ್ಣ ಧ್ವಜ ಮಾತ್ರ ಇರಬೇಕು, ಯಾವುದೇ ರಾಜಕೀಯ ಪಕ್ಷದ ಧ್ವಜವನ್ನ ಅಳವಡಿಸುವಂತಿಲ್ಲ. ಟ್ರ್ಯಾಕ್ಟರ್ ಪರೇಡ್ ವೇಳೆ ರೈತರು ಶಸ್ತ್ರಾಸ್ತ್ರಗಳನ್ನ ತರುವಂತಿಲ್ಲ.
ಬಜೆಟ್ ದಿನ ರೈತರು ನಡೆಸಲಿದ್ದಾರೆ ಪಾರ್ಲಿಮೆಂಟ್ ಚಲೋ ಕೇಂದ್ರ ಸರ್ಕಾರ ಜಾರಿಗೆ ತಂದಿರೋ ಮೂರು ಕಾಯ್ದೆಗಳನ್ನ ವಾಪಸ್ ಪಡೆಯಲೇಬೇಕು ಅಂತಾ ರೈತರು ಪಟ್ಟು ಹಿಡಿದಿದ್ದಾರೆ. ಇಂದು ರೈತರು ಟ್ರ್ಯಾಕ್ಟರ್ ಱಲಿ ನಡೆಸ್ತಿದ್ರೆ, ಫೆಬ್ರವರಿ 1ರಂದು ಅಂದ್ರೆ ಕೇಂದ್ರ ಬಜೆಟ್ ಮಂಡನೆಯಾಗುವ ದಿನ ರೈತರು ಪಾರ್ಲಿಮೆಂಟ್ ಚಲೋ ನಡೆಲು ಸಿದ್ಧರಾಗಿದ್ದಾರೆ. ದೆಹಲಿಯ ವಿವಿಧ ಭಾಗಗಳಿಂದ ರೈತರು ಸಂಸತ್ ಭವನದ ಬಳಿ ಬಂದು ಸೇರಲಿದ್ದಾರೆ. ಈ ಮೂಲಕ ರೈತರ ಪ್ರತಿಭಟನೆ ಪಂಜಾಬ್ ಮತ್ತು ಹರಿಯಾಣಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಇಡೀ ದೇಶಾದ್ಯಂತ ರೈತರು ಹೋರಾಟ ನಡೆಸ್ತಿದ್ದಾರೆ ಅನ್ನೋದನ್ನ ತೋರಿಸಲಿದೆ. ಜೊತೆಗೆ ರೈತರ ಶಕ್ತಿ ಏನು ಅನ್ನೋದಕ್ಕೆ ನಿದರ್ಶನವಾಗಲಿದೆ ಅಂತಾ ರೈತ ನಾಯಕರು ಹೇಳಿದ್ದಾರೆ.
ಭಾರತದ ಇತಿಹಾಸದಲ್ಲಿ ಇಂದು ಮರೆಯಲಾಗದ ದಿನವಾಗಿದ್ದು, ರೈತರ ಟ್ರ್ಯಾಕ್ಟರ್ ಱಲಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೈತರು ಸಜ್ಜಾಗಿದ್ದಾರೆ.
ದೇಶದಲ್ಲಿ ಗಣರಾಜ್ಯೋತ್ಸವ ಸಂಭ್ರಮ.. ‘ಅಮರ್ ಜವಾನ್ ಜ್ಯೋತಿ’ಗೆ ಪ್ರಧಾನಿ ಮೋದಿ ನಮನ
Published On - 6:56 am, Tue, 26 January 21