ದೆಹಲಿ ಚಲೋ ಮುಗಿಸಿಕೊಂಡು ಊರಿಗೆ ಮರಳುತ್ತಿದ್ದ ಇಬ್ಬರು ರೈತರು ಅಪಘಾತಕ್ಕೆ ಬಲಿ
ದೆಹಲಿ ಚಲೋದಿಂದ ಊರಿಗೆ ಮರಳುತ್ತಿದ್ದ ಇಬ್ಬರು ರೈತರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹರ್ಯಾಣದ ಕರ್ನಾಲ್ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದ್ದು, ಎಂಟು ಮಂದಿ ರೈತರು ಗಾಯಗೊಂಡಿದ್ದಾರೆ.
ದೆಹಲಿ: ಕೇಂದ್ರದ ಹೊಸ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿ ರಾಷ್ಟ್ರ ರಾಜಧಾನಿಯಿಂದ ಮರಳುತ್ತಿದ್ದ ಇಬ್ಬರು ರೈತರು ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ದೆಹಲಿಯಿಂದ ಪಟಿಯಾಲಾಕ್ಕೆ ವಾಪಾಸಾಗುತ್ತಿದ್ದ ವೇಳೆ ಟ್ರಾಕ್ಟರ್ ಗೆ ಟ್ರಕ್ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಹರ್ಯಾಣದ ಕರ್ನಾಲ್ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದ್ದು, ಎಂಟು ಮಂದಿ ರೈತರು ಗಾಯಗೊಂಡಿದ್ದಾರೆ.
ಮೃತರನ್ನು ಗುರ್ಪ್ರೀತ್ ಸಿಂಗ್ (22) ಮತ್ತು ಲಾಭ್ ಸಿಂಗ್ (62) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಪಟಿಯಾಲಾ ಮತ್ತು ಕರ್ನಾಲ್ನ ಮೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಟ್ರಕ್ ಚಾಲಕ ನಿದ್ರೆಗೆ ಜಾರಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತ ನಡೆದ ಸ್ಥಳದಿಂದ ಟ್ರಕ್ ಚಾಲಕ ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ, ಭಾರತೀಯ ಕಿಸಾನ್ ಯೂನಿಯನ್ನ ಮುಕ್ತ್ಸರ್ ಜಿಲ್ಲಾ ಅಧ್ಯಕ್ಷ ಪೂರನ್ ಸಿಂಗ್ (75) ಎಂಬವರು ಕೂಡ ಟಿಕ್ರಿ ಗಡಿಭಾಗದಲ್ಲಿ ಕಾರ್ ಅಪಘಾತಕ್ಕೆ ಒಳಗಾಗಿದ್ದರು. ಪ್ರತಿಭಟನೆಯಲ್ಲಿ ತೊಡಗಿದ್ದ ಅವರು ಶೌಚಾಲಯಕ್ಕೆ ತೆರಳಲು ರಸ್ತೆ ದಾಟುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಪೂರನ್ ಸಿಂಗ್ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
Published On - 5:06 pm, Tue, 15 December 20