Farmers Union Meeting: ಇಂದು ಬೆಳಗ್ಗೆ 10ಗಂಟೆಗೆ ತುರ್ತು ಸಭೆ ಕರೆದ ರೈತ ಮುಖಂಡರು; ಪ್ರತಿಭಟನೆ ಮುಕ್ತಾಯದ ಘೋಷಣೆ ಸಾಧ್ಯತೆ
ನಿನ್ನೆ ಕೂಡ ಸಂಯುಕ್ತ ಕಿಸಾನ್ ಮೋರ್ಚಾ ಸಭೆ ನಡೆಸಿತ್ತು. ಸಭೆ ಬಳಿಕ ಮಾತನಾಡಿದ್ದ ರೈತ ಮುಖಂಡ ಕುಲ್ವಂತ್ ಸಿಂಗ್ ಸಂಧು, ನಮ್ಮ ಬಹುತೇಕ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಲು ಒಪ್ಪಿಕೊಂಡಿದೆ ಎಂದಿದ್ದರು.
ಕೇಂದ್ರ ಸರ್ಕಾರ ಕೃಷಿ ಕಾಯ್ದೆ (3 Farm Laws) ಗಳನ್ನು ವಾಪಸ್ ಪಡೆದಿದ್ದರೂ ಇನ್ನೂ ದೆಹಲಿಯ ಗಡಿ ಭಾಗಗಳಲ್ಲಿ ಪ್ರತಿಭಟನೆ ಮುಂದುವರಿಸಿದ್ದ ರೈತರು ಇದೀಗ ತಮ್ಮ ಧರಣಿಯನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರ (Central Government) ರೈತರ ಎಲ್ಲ ಬೇಡಿಕೆಗಳನ್ನೂ ಈಡೇರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಅವರು ಆಂದೋಲನ ಮುಕ್ತಾಯ ಮಾಡುತ್ತಿದ್ದಾರೆ. ಇನ್ನು ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಒಟ್ಟು 40 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (SKM)ದ ಐವರು ಸದಸ್ಯರನ್ನೊಳಗೊಂಡ ಸಮಿತಿ ಇಂದು ಬೆಳಗ್ಗೆ 10 ಗಂಟೆಗೆ ತುರ್ತು ಸಭೆ ಕರೆದಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಈ ಸಭೆಯ ಬಳಿಕ ರೈತ ಸಂಘಟನೆಗಳು ತಮ್ಮ ಪ್ರತಿಭಟನೆ ಮುಕ್ತಾಯಗೊಳಿಸುವ ಬಗ್ಗೆ ಘೋಷಣೆ ಮಾಡುತ್ತಾರೆ ಎಂದು ಹೇಳಲಾಗಿದೆ.
ನಿನ್ನೆ ಕೂಡ ಸಂಯುಕ್ತ ಕಿಸಾನ್ ಮೋರ್ಚಾ ಸಭೆ ನಡೆಸಿತ್ತು. ಸಭೆ ಬಳಿಕ ಮಾತನಾಡಿದ್ದ ರೈತ ಮುಖಂಡ ಕುಲ್ವಂತ್ ಸಿಂಗ್ ಸಂಧು, ನಮ್ಮ ಬಹುತೇಕ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಲು ಒಪ್ಪಿಕೊಂಡಿದೆ. ಈ ಸಂಬಂಧ ಕೇಂದ್ರ ಸರ್ಕಾರ ಕಳಿಸಿದ ಪತ್ರ ನಮಗೆ ಬಂದು ತಲುಪಿದೆ. ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಒಮ್ಮತ ಮೂಡಿದೆ. ಹೀಗಾಗಿ ಪ್ರತಿಭಟನೆ ಹಿಂಪಡೆಯುವ ಸಂಬಂಧ ಬುಧವಾರ (ಇಂದು) ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಹೇಳಿದ್ದರು.
ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದ್ದರೂ ರೈತರು ಪ್ರತಿಭಟನೆ ಮುಂದುವರಿಸಿದ್ದರು. ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಭರವಸೆ ನೀಡದ ಹೊರತು, ಪ್ರತಿಭಟನಾ ನಿರತ ರೈತರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆದ ವಿನಃ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿತ್ತು. ಅಷ್ಟೇ ಅಲ್ಲ, ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಅಗತ್ಯ ಇರುವವರಿಗೆ ಸರ್ಕಾರಿ ಉದ್ಯೋಗ ಕೊಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನೂ ಮುಂದಿಟ್ಟಿತ್ತು. ಹೀಗಾಗಿ ಕೇಂದ್ರ ಸರ್ಕಾರ ರೈತರನ್ನು ಮಾತುಕತೆಗೆ ಆಹ್ವಾನಿಸಿತ್ತು. ಸರ್ಕಾರದೊಟ್ಟಿಗೆ ಮಾತುಕತೆ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ಐವರು ಮುಖಂಡರನ್ನೊಳಗೊಂಡ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿ ಕೇಂದ್ರದೊಂದಿಗೆ ಮಾತುಕತೆ ನಡೆಸಿದೆ. ಹಾಗೇ, ಇಂದು ಬೆಳಗ್ಗೆ ಕೂಡ ಸಭೆ ನಡೆಸಲಿದ್ದು, ತಮ್ಮ ಅಂತಿಮ ನಿರ್ಧಾರ ಪ್ರಕಟಿಸಲಿದೆ.
Samyukt Kisan Morcha’s 5-member committee to hold an urgent meeting in New Delhi at 10 am today
— ANI (@ANI) December 8, 2021
ಇದನ್ನೂ ಓದಿ: ಕಳ್ಳರಿಗೆ ರಾಯಚೂರಿನ ಈ ಸರ್ಕಾರಿ ಶಾಲೆಯೇ ಟಾರ್ಗೆಟ್; ಒಂದಲ್ಲ, ಎರಡಲ್ಲ ನಾಲ್ಕು ಬಾರಿ ಕಳ್ಳತನ
Published On - 9:11 am, Wed, 8 December 21