ಸಿಂಘು ಗಡಿಯಲ್ಲಿ ಗುಂಪು ಹಲ್ಲೆ: ಪೊಲೀಸರಿಗೆ ಶರಣಾದ ಕೊಲೆ ಆರೋಪಿ

ಸಿಂಘು ಗಡಿಯಲ್ಲಿ ಗುಂಪು ಹಲ್ಲೆ: ಪೊಲೀಸರಿಗೆ ಶರಣಾದ ಕೊಲೆ ಆರೋಪಿ
ಸಿಂಘು ಗಡಿಯಲ್ಲಿ ನಿಹಾಂಗ್ ಪಂಥೀಯ

ರೈತ ಸಂಘಟನೆಗಳು ನಿಹಾಂಗ್ ಪಂಥ ಹಾಗೂ ಕೊಲೆಯಾದ ವ್ಯಕ್ತಿಯಿಂದ ಅಂತರ ಕಾಯ್ದುಕೊಂಡು ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದ್ದವು

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Oct 15, 2021 | 11:14 PM

ದೆಹಲಿ: ನಿಹಾಂಗ್​ ಸಿಖ್ ಪಂಥಕ್ಕೆ ಸೇರಿರುವ ಸರವ್​ಜೀತ್​ಸಿಂಗ್ ಎಂಬಾತ ಸಿಂಘು ಗಡಿಯಲ್ಲಿ ನಡೆದ ಗುಂಪುಹಲ್ಲೆ, ಕೊಲೆಯ ಆರೋಪ ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಕೃಷಿ ಕಾರ್ಮಿಕ ಲಖ್​ಬಿರ್ ಸಿಂಗ್ ಎಂಬಾತನನ್ನು ಗುಂಪುಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥಾ ಸಾಹಿಬವನ್ನು ಈತ ಅವಹೇಳನ ಮಾಡಿದ್ದ ಎಂದು ದೂರಲಾಗಿತ್ತು. ರೈತ ಸಂಘಟನೆಗಳು ನಿಹಾಂಗ್ ಪಂಥ ಹಾಗೂ ಕೊಲೆಯಾದ ವ್ಯಕ್ತಿಯಿಂದ ಅಂತರ ಕಾಯ್ದುಕೊಂಡು ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದ್ದವು.

ಸಿಂಘು ಗಡಿಯಲ್ಲಿ ಏನಾಗಿತ್ತು? ಪಂಜಾಬ್​ನ ತರಣ್ ತರಣ್ ಜಿಲ್ಲೆಯ ದಲಿತ ಕಾರ್ಮಿಕ ಲಖ್​ಬಿರ್​ ಸಿಂಗ್ ಅವರನ್ನು ಪೊಲೀಸ್ ಬ್ಯಾರಿಕೇಡ್​ಗೆ ಕಟ್ಟಿಹಾಕಿ ಕೊಲೆ ಮಾಡಲಾಗಿತ್ತು. ಈತ ಕೊಲೆಯಾದ ಸ್ಥಳವು ರೈತರು ಪ್ರತಿಭಟನೆ ನಡೆಸುತ್ತಿರುವ ಮುಖ್ಯ ವೇದಿಕೆಯ ಸಮೀಪದಲ್ಲಿಯೇ ಇತ್ತು. ಮೃತರ ಕೈ ಕತ್ತರಿಸಲಾಗಿತ್ತು. ಲಖ್​ಬಿರ್ ಸಿಂಗ್ ಅವರ ಕೊನೆಯ ದಿನಗಳು ಎಂದು ಹೇಳಲಾದ ವಿಡಿಯೊ ಒಂದು ವೈರಲ್ ಆಗಿತ್ತು. ಈ ವಿಡಿಯೊದಲ್ಲಿ ಎಡಕೈ ಕತ್ತರಿದ್ದ ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ನರಳುತ್ತಿದ್ದ. ಸಿಖ್ಖರ ಪವಿತ್ರ ಗ್ರಂಥವನ್ನು ಕೊಳಕು ಸ್ಥಳದಲ್ಲಿ ಇರಿಸಿದ ಎಂಬ ಕಾರಣಕ್ಕೆ ಲಖ್​ಬಿರ್​ಗೆ ಈ ಶಿಕ್ಷೆ ನೀಡಲಾಗಿದೆ ಎಂದು ನಿಹಾಂಗ್ ಪಂಥಿಗಳು ಹೇಳುತ್ತಿದ್ದ ವಿಡಿಯೊ ವೈರಲ್ ಆಗಿತ್ತು. ಶುಕ್ರವಾರ ನಸುಕಿನ 4.30ರ ವೇಳೆಯಲ್ಲಿ ಈ ಘಟನೆ ನಡೆದಿತ್ತು ಎನ್ನಲಾಗಿದೆ.

ನಿಹಾಂಗ್ ಎಂದರೆ​ ಯಾರು? ಸಿಖ್ಖರಲ್ಲಿ ಯೋಧರ ಪಂಥಕ್ಕೆ ಸೇರಿದವರನ್ನು ನಿಹಾಂಗ್ ಎನ್ನುತ್ತಾರೆ. ನೀಲಿ ಪೇಟಾದೊಂದಿಗೆ ಶಸ್ತ್ರಗಳನ್ನು ಹಿಡಿದು ಇವರು ಸಂಚರಿಸುತ್ತಾರೆ. ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ಆರಂಭಿಸಿದ ನಂತರ ಕುದುರೆ ಏರಿದ ನಿಹಾಂಗ್ ಸಿಖ್ಖರು ಪ್ರತಿಭಟನಾ ಸ್ಥಳದಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.

ಕ್ರೂರ ಹತ್ಯೆಯ ನಂತರ ಪ್ರತಿಭಟನಾ ಸ್ಥಳದಲ್ಲಿ ಉದ್ವಿಗ್ವ ವಾತಾವರಣ ನೆಲೆಸಿತ್ತು. ನಿಹಾಂಗ ಪಂಥಕ್ಕೂ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ ಎಂದು ರೈತ ಸಂಘಟನೆಗಳು ಹೇಳಿವೆ. ಮೃತ ವ್ಯಕ್ತಿಯೂ ಯಾವುದೇ ರೈತ ಸಂಘಟನೆಯೊಂದಿಗೆ ಸಂಬಂಧ ಹೊಂದಿರಲಿಲ್ಲ. ಪೊಲೀಸ್ ತನಿಖೆಗೆ ನಾವು ಸಹಕರಿಸುತ್ತೇವೆ. ನಾವು ಸ್ಥಳಕ್ಕೆ ಹೋಗುವ ಹೊತ್ತಿಗೆ ಆ ವ್ಯಕ್ತಿ ಮೃತಪಟ್ಟಿದ್ದ. ಸಾಯುವ ಮೊದಲು ತನಗೆ ₹ 30,000 ಕೊಟ್ಟು ಯಾರೋ ಇಲ್ಲಿಗೆ ಕಳಿಸಿದರು ಎಂದು ಹೇಳಿದ್ದ ಎಂದು ಕೆಲವರು ಹೇಳಿದ್ದರು. ಈ ಬಗ್ಗೆ ಸರ್ಕಾರ ವಿಸ್ತೃತ ತನಿಖೆ ನಡೆಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಜಗಜಿತ್ ಸಿಂಗ್ ದಲೆವಾಲ್ ಹೇಳಿದರು.

ಘಟನೆಯ ನಂತರ ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಪ್ರದೇಶದಲ್ಲಿ ಮುಂಜಾನೆ ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತು. ಪ್ರತಿಭಟನಾ ನಿರತರು ಕೊಲೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕಾನೂನು ಕೈಗೆ ತೆಗೆದುಕೊಳ್ಳುವುದು ತಪ್ಪು ಎಂದು ವರ್ಗ ಹೇಳಿದರೆ ಮತ್ತೊಂದು ವರ್ಗ ಗುರು ಗ್ರಂಥ ಸಾಹಿಬ್​ಗೆ ಅವಮಾನದ ವಿಚಾರ ಬಂದಾಗ ಭಾವುಕವಾಗಿ ಪ್ರತಿಕ್ರಿಯಿಸುವುದು ಸಹಜವಾಗಿದೆ ಎಂದು ಅಭಿಪ್ರಾಯಪಡುತ್ತಿದ್ದಾರೆ ಎಂದು ಸ್ಥಳದಲ್ಲಿದ್ದ ಸುಖ್ವಿಂದರ್ ಸಿಂಗ್ ಎನ್ನುವವರು ಪಿಟಿಐಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಹರಿಯಾಣ-ದೆಹಲಿ ಗಡಿಯಲ್ಲಿ ಕೈ ಕಡಿದು ವ್ಯಕ್ತಿ ಹತ್ಯೆ, ಸಾರ್ವಜನಿಕ ಪ್ರದರ್ಶನ: ಅಂತರ ಕಾಯ್ದುಕೊಂಡ ಕಿಸಾನ್ ಮೋರ್ಚಾ ಇದನ್ನೂ ಓದಿ: Singhu Border Murder ಸಿಂಘು ಗಡಿಯಲ್ಲಿ ರೈತನ ಬರ್ಬರ ಹತ್ಯೆ, ಕೈ ಕಾಲು ಕತ್ತರಿಸಿ ಬ್ಯಾರಿಕೇಡ್​​ಗೆ ಕಟ್ಟಿಹಾಕಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

Follow us on

Related Stories

Most Read Stories

Click on your DTH Provider to Add TV9 Kannada