ಕೆಂಪುಕೋಟೆ ಘಟನೆ ಬಗ್ಗೆ ಉನ್ನತ ಮಟ್ಟದ ಸಭೆ, ಕೆಂಪುಕೋಟೆ ಸ್ಥಳ ಪರಿಶೀಲನೆ ಮಾಡಿದ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್

ಘಟನೆಯ ಬಗ್ಗೆ ಪೊಲೀಸ್ ಆಯುಕ್ತರ ನೇತೃತ್ವದಲ್ಲಿಇಂದು ಮಧ್ಯಾಹ್ನ 2.30ಕ್ಕೆ ಸುದ್ದಿಗೋಷ್ಠಿ ನಡೆಯಲಿದೆ. ನಿನ್ನೆ ನಡೆದ ದುರ್ಘಟನೆಯ ವಿವರಗಳನ್ನು ಪೊಲೀಸರು ಈ ವೇಳೆ ಹಂಚಿಕೊಳ್ಳುವ, ವಿಸ್ತೃತ ವರದಿ ನೀಡುವ ಸಾಧ್ಯತೆ ಅಂದಾಜಿಸಲಾಗಿದೆ.

  • TV9 Web Team
  • Published On - 14:19 PM, 27 Jan 2021
Red fort flag
ಗಣರಾಜ್ಯೋತ್ಸವದಂದು ಕೆಂಪುಕೋಟೆಯಲ್ಲಿ ಅನ್ಯಧ್ವಜ ಹಾರಾಡಿಸಿದ ಪ್ರಕರಣವನ್ನು ಪೊಲೀಸರು ಬೆನ್ನತ್ತಿದ್ದಾರೆ.

ದೆಹಲಿ: ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆಂಪುಕೋಟೆಗೆ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್, ಕೆಂಪುಕೋಟೆಗೆ ಆಗಿರುವ ಹಾನಿಯ ಬಗ್ಗೆ ಪರಿಶೀಲನೆ ಮಾಡಿದ್ದಾರೆ.

ನಿನ್ನೆಯ ಹಿಂಸಾಚಾರದ ಬಳಿಕ ಸರ್ಕಾರ ಹಾಗೂ ಪೊಲೀಸರು ಜಾಗೃತರಾಗಿದ್ದಾರೆ. ಘಟನೆಯ ಪೂರ್ತಿ ವಿವರಗಳನ್ನು ಪಡೆದುಕೊಂಡು ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲು ಉನ್ನತ ಮಟ್ಟದ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಈ ಬಗ್ಗೆ, ಪ್ರಧಾನಿ ಹಾಗೂ ಗೃಹ ಸಚಿವರ ನೇತೃತ್ವದಲ್ಲಿಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿನಿನ್ನೆ ನಡೆದ ಘಟನೆಯ ಕುರಿತು ಕೇಂದ್ರ ಗೃಹ ಸಚಿವರು ವಿವರಣೆ ನೀಡಲಿದ್ದಾರೆ.

ಬಳಿಕ, ಸಂಪುಟ ಸಭೆಯಲ್ಲಿ ದೆಹಲಿ ಹಿಂಸಾಚರದ ಬಗ್ಗೆ ಚರ್ಚೆಯಾಗಲಿದೆ. ದೆಹಲಿ ಪೊಲೀಸರು ಗೃಹ ಇಲಾಖೆಯ ವ್ಯಾಪ್ತಿಗೆ ಬರುತ್ತಾರೆ. ಹೀಗಾಗಿ ದೆಹಲಿಯಲ್ಲಿ ನಿನ್ನೆ ನಡೆದ ಹಿಂಸಾಚಾರ, ಗಲಾಟೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಅಲ್ಲಿ ವಿವರಣೆ ಪಡೆಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಘಟನೆಯ ಬಗ್ಗೆ ಪೊಲೀಸ್ ಆಯುಕ್ತರ ನೇತೃತ್ವದಲ್ಲಿಇಂದು 4 ಗಂಟೆಗೆ ಸುದ್ದಿಗೋಷ್ಠಿ ನಡೆಯಲಿದೆ. ನಿನ್ನೆ ನಡೆದ ದುರ್ಘಟನೆಯ ವಿವರಗಳನ್ನು ಪೊಲೀಸರು ಈ ವೇಳೆ ಹಂಚಿಕೊಳ್ಳುವ, ವಿಸ್ತೃತ ವರದಿ ನೀಡುವ ಸಾಧ್ಯತೆ ಅಂದಾಜಿಸಲಾಗಿದೆ. ಹಿಂಸಾಚಾರದಲ್ಲಿ ಭಾಗಿಯಾದವರ ಪಾತ್ರದ ಬಗ್ಗೆ, ದೆಹಲಿ ಪೊಲೀಸ್ ಇಲಾಖೆಯ ಕ್ರೈಮ್ ಬ್ರಾಂಚ್​ನಿಂದ ತನಿಖೆ ನಡೆಸುವ ಕುರಿತಾಗಿ ಮಾಹಿತಿ ದೊರಕಿದೆ. ಗ್ಯಾಂಗ್ ಸ್ಟರ್ ಲಖಾ ಸಿದಾನಾ ಹಾಗೂ ಪಂಜಾಬಿ ನಟ ದೀಪ್ ಸಿಧು ಪಾತ್ರದ ಬಗ್ಗೆಯೂ ತನಿಖೆ ನಡೆಯುವ ಸಾಧ್ಯತೆ ಇದೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ, 22 FIR ದಾಖಲು
ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬಳಿಕ, ಪೊಲೀಸರು ನಿನ್ನೆ ರಾತ್ರಿ ಪೂರ್ತಿ ನಿದ್ದೆ ಇಲ್ಲದೆ ಕಣ್ಗಾವಲು ವಹಿಸಿದ್ದಾರೆ. ಗಡಿಗಳಲ್ಲಿ ಹೆಚ್ಚುವರಿ ಪೊಲೀಸ್ ಭದ್ರೆತೆ ನೀಡಿ ಕೇಂದ್ರ ಸರ್ಕಾರ ಕೂಡ ಎಚ್ಚರಿಕೆ ವಹಿಸಿದೆ. ಟಿಕ್ರಿ ಗಡಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆಯಾಗಿದೆ. ಜೊತೆಗೆ, ಪಂಜಾಬ್ ಹಾಗೂ ಹರ್ಯಾಣದಲ್ಲೂ ಹೆಚ್ಚುವರಿ ಪೊಲೀಸರು ಕಣ್ಗಾವಲಿನಲ್ಲಿದ್ದಾರೆ.

ದೆಹಲಿಯ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ನಿನ್ನೆ ಘರ್ಷಣೆ ನಡೆದಿದ್ದ ಐಟಿಒ ​ಸರ್ಕಲ್​ ಕೂಡ ಬಂದ್ ಮಾಡಲಾಗಿದೆ. ಐಟಿಒ ಮೂಲಕ ಕನ್ಹಟ್ ಪ್ಲೇಸ್​ಗೆ ಹೋಗುವ ಮಾರ್ಗ ಹಾಗೂ ಐಟಿಒ ಮೂಲಕ ಇಂಡಿಯಾ ಗೇಟ್​ಗೆ ಹೋಗುವ ರಸ್ತೆ ಮುಚ್ಚಲಾಗಿದೆ. ಇನ್ನು ಯಾವುದೇ ರೀತಿಯ ದುರ್ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಇಂದು ರಾಷ್ಟ್ರ ರಾಜಧಾನಿಯಲ್ಲಿ ಇಂಟರ್​ನೆಟ್ ವೇಗವನ್ನು ಕಡಿಮೆ ಮಾಡಲಾಗಿದೆ.

ಘಟನೆಗೆ ಸಂಬಂಧಿಸಿ ಪೊಲೀಸರು 22 FIR ದಾಖಲಿಸಿದ್ದಾರೆ. FIRನಲ್ಲಿ ರೈತ ಸಂಘಟನೆಗಳ ನಾಯಕರ ಹೆಸರು ಉಲ್ಲೇಖಿಸಲಾಗಿದೆ. ಘಟನೆಯಲ್ಲಿ ಭಾಗಿಯಾದ 200 ಜನರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಿಂಸಾಚಾರದಲ್ಲಿ 300ಕ್ಕೂ ಹೆಚ್ಚು ಪೊಲೀಸರಿಗೆ ಗಾಯವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ದೆಹಲಿಯಲ್ಲಿ ನಿನ್ನೆ ತೀವ್ರ ಸ್ವರೂಪ ಪಡೆದ ರೈತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿ, ನ್ಯಾಯಾಂಗ ತನಿಖೆ ನಡೆಯಬೇಕು ಎಂದು ವಕೀಲರು ಮನವಿ ಮಾಡಿದ್ದಾರೆ. ಪ್ರಕರಣದ ನ್ಯಾಯಾಂಗ ತನಿಖೆ ಕೋರಿ, ವಕೀಲರು ಸುಪ್ರೀಂ ಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ.

Explainer | ಕೆಂಪುಕೋಟೆಯಲ್ಲಿ ರೈತ ಪ್ರತಿಭಟನಾಕಾರರು ಹಾರಿಸಿದ ಕೇಸರಿ ಧ್ವಜ ಯಾವುದು?

ಕೆಂಪುಕೋಟೆ ಮೇಲೆ ಸಿಖ್ ಧ್ವಜ ಹಾರಾಟ: ಪ್ರಕರಣ ಹಿಂದಿದೆ ಬಿಜೆಪಿ ಬೆಂಬಲಿಗ, ನಟ ದೀಪ್‌ ಸಿಧು ಕೈವಾಡ?