ದೆಹಲಿ: ರೈತ ಚಳುವಳಿಯು ಹೀಗೆಯೇ ಯಶಸ್ವಿಯಾಗಿ ಮುಂದುವರಿಯುತ್ತದೆ ಮತ್ತು ದೇಶದ ಇತರೆಡೆಗಳಿಗೂ ವ್ಯಾಪಿಸಿ ಬೆಳೆಯುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ತಿಳಿಸಿದರು. ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ಪೆಹೊವಾದಲ್ಲಿ ನಡೆದ ‘ಕಿಸಾನ್ ಮಹಾಪಂಚಾಯತ್’ನಲ್ಲಿ ಇಂದು (ಫೆ.9) ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಉಲ್ಲೇಖಿಸಿದ ‘ಆಂದೋಲನ್ ಜೀವಿ’ ಎಂಬ ಪದಕ್ಕೆ ಸಂಬಂಧಿಸಿ ರಾಕೇಶ್ ಟಿಕಾಯತ್ ಇಂದು ಪ್ರತಿಕ್ರಿಯೆ ನೀಡಿದರು.
ನರೇಂದ್ರ ಮೋದಿ ತಮ್ಮ ಜೀವನದಲ್ಲಿ ಯಾವೊಂದು ಚಳುವಳಿಯಲ್ಲೂ ಭಾಗವಹಿಸಿಲ್ಲ. ದೇಶ ಒಡೆಯುವ ಕೆಲಸವನ್ನೇ ಮಾಡಿದ್ದಾರೆ. ಅವರಿಗೆ ಆಂದೋಲನ ಜೀವಿಗಳ ಬಗ್ಗೆ ಏನು ತಿಳಿದಿರಬೇಕು ಎಂದು ಪ್ರಶ್ನಿಸಿದ್ದಾರೆ. ಭಗತ್ ಸಿಂಗ್ ಹಾಗೂ ಲಾಲ್ಕೃಷ್ಣ ಅಡ್ವಾಣಿ ಕೂಡ ಆಂದೋಲನದ ಭಾಗವಾಗಿದ್ದವರೇ. ಸರ್ಕಾರ ರೈತ ಅಹವಾಲುಗಳಿಗೆ ಮನ್ನಣೆ ನೀಡದೇ ಹೋದರೆ, ನಾಲ್ಕು ಲಕ್ಷ ಟ್ರ್ಯಾಕ್ಟರ್ಗಳಲ್ಲ, 40 ಲಕ್ಷ ಟ್ರ್ಯಾಕ್ಟರ್ಗಳ ಚಳುವಳಿ ನಡೆಸುತ್ತೇವೆ ಎಂದು ಗುಡುಗಿದರು.
ಕೇಂದ್ರದ ನೂತನ ಕೃಷಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯು ಅಕ್ಟೋಬರ್ 2ರ ವರೆಗೂ ಮುಂದುವರಿಯುತ್ತದೆ. ಅಂದರೆ, ಆ ಬಳಿಕ ಹೋರಾಟ ನಿಲ್ಲುತ್ತದೆ ಎಂದಲ್ಲ. ಬೇಡಿಕೆ ಈಡೇರದಿದ್ದರೆ ಆ ನಂತರವೂ ಚಳುವಳಿ ನಡೆಸುತ್ತೇವೆ. ಪ್ರತಿಭಟನಾ ಸ್ಥಳಕ್ಕೆ ರೈತರು ತಂಡ ತಂಡವಾಗಿ ಬರುತ್ತೇವೆ ಎಂದು ತಿಳಿಸಿದರು.
ಬಾನುವಾರ, ರಾಜಸ್ಥಾನದ ಭವಾನಿ ಜಿಲ್ಲೆಯಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ನಲ್ಲಿ ರಾಕೇಶ್ ಟಿಕಾಯತ್ ಭಾಗವಹಿಸಿದ್ದರು. ಹರ್ಯಾಣದ ಜಿಂದ್ ಜಿಲ್ಲೆಯಲ್ಲೂ ಮಹಾಪಂಚಾಯತ್ ಕಾರ್ಯಕ್ರಮದಲ್ಲಿ ಟಿಕಾಯತ್ ಮಾತನಾಡಿದ್ದರು.
ಸರ್ಕಾರ ಪ್ರತಿಭಟನಾ ನಿರತ ರೈತರನ್ನು ಹರ್ಯಾಣ ಮತ್ತು ಪಂಜಾಬ್ ಎಂಬ ನೆಲೆಯಲ್ಲಿ ಒಡೆಯಲು ಪ್ರಯತ್ನಿಸಿದೆ. ನಾವು ಇಂತಹ ಕ್ರಮಗಳ ವಿರುದ್ಧ ದೃಢ ನಿರ್ಧಾರ ಕೈಗೊಳ್ಳಬೇಕು. ಇಬ್ಬರು ಸರ್ಕಾರಿ ಅಧಿಕಾರಿಗಳು ನಿನ್ನೆ ನನ್ನನ್ನು ಭೇಟಿಯಾಗಲು ಬಂದರು. ಆದರೆ, ಪ್ರತಿ ಸಭೆ ಕೂಡ ಕಿಸಾನ್ ಮೋರ್ಚಾದ 40 ಸದಸ್ಯರ ಸಮ್ಮುಖದಲ್ಲಿ ನಡೆಯಬೇಕು. ಹಾಗಾಗಿ, ನನ್ನೊಬ್ಬನ ಜೊತೆಯ ಮಾತುಕತೆಗೆ ನಾನು ಒಪ್ಪಲಿಲ್ಲ ಎಂದು BKU ನಾಯಕ ರಾಕೇಶ್ ಟಿಕಾಯತ್ ಹೇಳಿದರು.
ರೈತ ಸಮುದಾಯದ 40 ಸಂಘಟನೆಗಳ ಪೈಕಿ, ಭಾರತೀಯ ಕಿಸಾನ್ ಯೂನಿಯನ್ನ ರಾಕೇಶ್ ಟಿಕಾಯತ್ ರೈತ ಹೋರಾಟದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ಈವೆರೆಗೆ ನಡೆದಿರುವ 11 ಸುತ್ತಿನ ಮಾತುಕತೆಗಳಲ್ಲೂ ಟಿಕಾಯತ್ ಭಾಗವಹಿಸಿದ್ದಾರೆ.
Farmers Protest: ರೈತ ಹೋರಾಟ ಸಂಘಟನೆಗೆ ಹರ್ಯಾಣದಲ್ಲಿ ‘ಮಹಾಪಂಚಾಯತ್’; ಸಹಸ್ರಾರು ರೈತರು ಭಾಗಿ
Published On - 8:52 pm, Tue, 9 February 21