Uttarakhand Glacier Burst | ಉತ್ತರಾಖಂಡ ಮೃತರ ಸಂಖ್ಯೆ 31ಕ್ಕೆ ಏರಿಕೆ; ದುರಂತದ ಬಗ್ಗೆ ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿಕೆ
Uttarakhand Glacier Burst Death Toll: ಮೃತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಸೈನಿಕರಿಂದ ಅವಘಡದಲ್ಲಿ ನಾಪತ್ತೆಯಾದವರ ಹುಡುಕಾಟ ಕಾರ್ಯ ಮುಂದುವರಿದಿದೆ.
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನ ಸಮೀಪ ರೈಣಿ ಗ್ರಾಮದಲ್ಲಿ ಸಂಭವಿಸಿದ ಹಿಮಕುಸಿತದಿಂದಾಗಿ ಧೌಲಿಗಂಗಾ ನದಿಯಲ್ಲಿ ಉಂಟಾದ ಪ್ರವಾಹದಲ್ಲಿ ಮೃತರಾದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ITBP, NDRF ಹಾಗೂ ಭೂಸೇನೆಯ ಸೈನಿಕರಿಂದ ಅವಘಡದಲ್ಲಿ ನಾಪತ್ತೆಯಾಗಿದ್ದವರ ಹುಡುಕಾಟ ಕಾರ್ಯ ಮುಂದುವರಿದಿದೆ. ತಪೋವನ ಡ್ಯಾಂ ಬಳಿ, ಭಾರಿ ಪ್ರಮಾಣದ ಮಣ್ಣು ಕುಸಿದು ಸುರಂಗ ಮುಚ್ಚಿಹೋಗಿತ್ತು. ಸುರಂಗದಲ್ಲಿ ಮಣ್ಣಿನಡಿ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆ ಚುರುಕಿನಿಂದ ಸಾಗಿದೆ.
ತಪೋವನ-ವಿಷ್ಣುಗಡ್ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ 35 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಒಟ್ಟು 170 ಮಂದಿ ಕಣ್ಮರೆಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಸುರಂಗದಲ್ಲಿ ಸಿಲುಕಿರುವವರನ್ನು ರಕ್ಷಿಸಲು 300 ಇಂಡೊ ಟಿಬೆಟನ್ ಗಡಿ ಪೊಲೀಸರನ್ನು (ಐಟಿಬಿಪಿ) ನಿಯೋಜಿಸಲಾಗಿದೆ ಎಂದು ಐಟಿಬಿಪಿ ವಕ್ತಾರ ವಿವೇಕ್ ಪಾಂಡೆ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಇಂದು ರಾಜ್ಯಸಭೆಯಲ್ಲಿ ಉತ್ತರಾಖಂಡ್ ಘಟನೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕೇಂದ್ರ ಮತ್ತು ರಾಜ್ಯದ ಸಂಬಂಧಪಟ್ಟ ಇಲಾಖೆಗಳು ಉತ್ತರಾಖಂಡ್ ಪರಿಸ್ಥಿತಿಯನ್ನು ಅವಲೋಕಿಸುತ್ತಿವೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಮೃತರಾದವರಿಗೆ ರಾಜ್ಯಸಭಾ ಸದಸ್ಯರು ಸದನದಲ್ಲಿ ಸಂತಾಪ ಸೂಚಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಶಾ, ನಿರ್ವಹಣಾ ಕೊಠಡಿಗಳು ಮತ್ತು ಗೃಹ ಸಚಿವಾಲಯ ಉತ್ತರಾಖಂಡ್ ಪರಿಸ್ಥಿತಿಯನ್ನು ನಿಭಾಯಿಸಲು ಕೆಲಸ ಮಾಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಖುದ್ದು ವರದಿ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರಾಜ್ಯಕ್ಕೆ ಸೂಕ್ತ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇಂದು ಬೆಳಗ್ಗೆ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಹಿಮಕುಸಿತ ಹಾಗೂ ಪ್ರವಾಹದಿಂದ ಉಂಟಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.
ಸುಮಾರು 93 NTPC ಕಾರ್ಮಿಕರು ಕಣ್ಮರೆಯಾಗಿದ್ದಾರೆ. ಅದರಲ್ಲಿ 39 ಮಂದಿ ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ತಲುಪಲು ನಾವು ಶ್ರಮಿಸುತ್ತಿದ್ದೇವೆ. ಹಿಮಕುಸಿತದಂಥಾ ಅವಘಡಗಳ ಬಗ್ಗೆ ಮುನ್ಸೂಚನೆ ಪಡೆಯಲು ಮುನ್ನೆಚ್ಚರಿಕಾ ಸಾಧನಗಳನ್ನು ಅಳವಡಿಸಲು ಯೋಜಿಸಿದ್ದೇವೆ. ಹಿಮಕುಸಿತದಿಂದ ಮೃತರಾದವರಿಗೆ 20 ಲಕ್ಷ ರೂ.ಗಳ ಪರಿಹಾರ ನೀಡುತ್ತೇವೆ ಎಂದು ಕೇಂದ್ರ ಇಂಧನ ಸಚಿವ ಆರ್.ಕೆ. ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡ ದುರಂತಕ್ಕೆ ಏನು ಕಾರಣ? ಭೂಕುಸಿತವೇ? ಹಿಮನದಿ ಸ್ಫೋಟವೇ? ಇಲ್ಲಿದೆ ತಜ್ಞರ ವಿಶ್ಲೇಷಣೆ
ಸೈನಿಕರಿಂದ ರಕ್ಷಣಾ ಕಾರ್ಯಾಚರಣೆಯ ಚಿತ್ರಗಳು ಇಲ್ಲಿವೆ..
A joint team of ITBP, NDRF, SDRF & other agencies conducting rescue operation used drone camera to see feasibility to enter beyond cleared site inside Tapovan tunnel. They haven't been successful so far. Machines deployed to clear slush: ITBP #Uttarakhand pic.twitter.com/HZqjC1TzSt
— ANI (@ANI) February 9, 2021
ಸಹಾಯವಾಣಿ ಪ್ರವಾಹಕ್ಕೆ ಸಿಲುಕಿರುವ ಜನರು ಸಹಾಯಕ್ಕಾಗಿ ವಿಪತ್ತು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸುವಂತೆ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸೂಚಿಸಿದ್ದಾರೆ. ವಿಪತ್ತು ನಿರ್ವಹಣಾ ಕೇಂದ್ರದ ಸಂಪರ್ಕ ಸಂಖ್ಯೆಗಳು: 1070 ಮತ್ತು 95574 44486.
Uttarakhand Glacier Burst | ದೇವಭೂಮಿ ಉತ್ತರಾಖಂಡದ ನದಿಗಳು ಕೆರಳುವುದೇಕೆ?
Published On - 7:59 pm, Tue, 9 February 21