Uttarakhand Glacier Burst | ದೇವಭೂಮಿ ಉತ್ತರಾಖಂಡದ ನದಿಗಳು ಕೆರಳುವುದೇಕೆ?
ಉತ್ತರಾಖಂಡ ಜನರ ಪ್ರಕಾರ 2013ರ ಮೇಘಸ್ಫೋಟಕ್ಕೆ ಧಾರೀದೇವಿಯ ಮುನಿಸು ಕಾರಣ. ನಮಗೆ ಚಾಮುಂಡಿ ನಾಡದೇವಿಯಿದ್ದಂತೆ ಅವರಿಗೆ ಧಾರೀದೇವಿ. ಜನರ ನಂಬಿಕೆ ಏನೇ ಇರಲಿ, ಅಭಿವೃದ್ಧಿ ಒತ್ತಡವನ್ನು ಹಿಮಾಲಯ ತಾಳುತ್ತಿಲ್ಲ ಎನ್ನುವುದು ಸತ್ಯ.
ಅಭಿವೃದ್ದಿಯ ನೆಪದಲ್ಲಿ ಪ್ರಕೃತಿಯ ಮೇಲೆ ಮಾನವನು ನಡೆಸುತ್ತಿರುವ ಅತ್ಯಾಚಾರದಿಂದಾಗಿಯೇ ಉತ್ತರಾಖಂಡದಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ ಎಂದು ಪರಿಸರ ತಜ್ಞರು ಮತ್ತೆಮತ್ತೆ ಎಚ್ಚರಿಕೆ ಕೊಡುತ್ತಲೇ ಇದ್ದಾರೆ. 2013ರಂದು ನಡೆದ ಮೇಘಸ್ಪೋಟಕ್ಕೆ ಇಡೀ ಉತ್ತರಾಖಂಡ ಒತ್ತರೆ ಆಗಿಹೋಗಿದ್ದು ನಿಮಗೆ ನೆನಪಿರಬಹುದು. ಅಂದು, ಅಂದರೆ 2013ರ ಜೂನ್ 16ರಂದು ಆರಂಭವಾದ ಮಳೆ ಸತತ ಐದು ದಿನಗಳ ಕಾಲ ಸುರಿದು ನದಿಗಳೆಲ್ಲಾ ತಮ್ಮ ಪಾತ್ರ ಮೀರಿ ಹರಿದು ಇಕ್ಕೆಲಗಳಲ್ಲಿದ್ದ ಕಟ್ಟಡಗಳನ್ನೆಲ್ಲಾ ಆಪೋಶನ ತೆಗೆದುಕೊಂಡಿತ್ತು.
ಆದರೆ ಮೊನ್ನೆ, ಅಂದರೆ 2021ರ ಫೆ. 7ರಂದು ಮಳೆಸುರಿಯಲಿಲ್ಲ. ಬದಲಾಗಿ ಹಿಮಪಾತವಾಯ್ತು (Uttarakhand Glacier Burst). ಹಿಮನದಿ ಸ್ಫೋಟ, ಹಿಮಕಟ್ಟೆ ಒಡೆದು ಕೋಡಿ ಹರಿಯಿತು ಎಂದೆಲ್ಲಾ ಕನ್ನಡ ಮಾಧ್ಯಮಗಳಲ್ಲಿ ವಿವರಗಳು ಬಂತು. ನಂದಾದೇವಿ ಪರ್ವತ ಶ್ರೇಣಿಯಲ್ಲಿರುವ ಹಿಮಬಂಡೆಗಳು ಒಡೆದು ಉರುಳುತ್ತಾ ಬಂದು ದವಳಗಿರಿಯ ಕಣಿವೆಯಾಳದಲ್ಲಿ ನೀರಾಗಿ ಹರಿಯತೊಡಗಿತು. ಆ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಅಣೆಕಟ್ಟನ್ನು ಉರುಳಿಸಿ ಅಲ್ಲಿ ಕೆಲಸಮಾಡುತ್ತಿದ್ದ ಕಾರ್ಮಿಕರನ್ನು ಆಪೋಶನ ತೆಗೆದುಕೊಳ್ಳುತ್ತಾ ಮುಂದೊತ್ತಿ ಜೋಶಿಮಠದತ್ತ ಮುನ್ನುಗ್ಗಿ ಬಂದಿತ್ತು. ಈ ಪ್ರವಾಹ ಮಳೆಗಾಲದ ಪ್ರವಾಹದಂತೆ ನಿರಂತರವಾಗಿ ಹರಿಯಲಿಲ್ಲ. ಆದರೆ ಒಮ್ಮೆಲೆ ಹುಚ್ಚೆದ್ದು ಕುಣಿದ ರಭಸಕ್ಕೆ ಆಗಬಹುದಾದ ಅನಾಹುತವೆಲ್ಲಾ ಕ್ಷಣಾರ್ಧದಲ್ಲಿ ನಡೆದು ಹೋಯ್ತು.
ಯಾಕೆ ಹೀಗಾಯ್ತು? ಇದಕ್ಕೆ ಪರಿಸರವಾದಿಗಳು, ಹವಾಮಾನ ತಜ್ಞರು ಅಂಕಿಅಂಶಗಳನ್ನಿಟ್ಟುಕೊಂಡು ವಿವರಣೆಗಳನ್ನು ಕೊಡುತ್ತಾರೆ. ಆದರೆ ಯಾವುದೋ ಒಂದು ನಿಗೂಢ ಶಕ್ತಿಯಮೇಲೆ, ದೈವದಮೇಲೆ ನಂಬಿಕೆಯನ್ನಿಟ್ಟ ಜನಸಾಮಾನ್ಯರು ಬೇರೆಯೇ ರೀತಿಯಲ್ಲಿ ಇದನ್ನು ವ್ಯಾಖ್ಯಾನಿಸುತ್ತಾರೆ.
ಇದನ್ನೂ ಓದಿ: ಉತ್ತರಾಖಂಡ್ ಮೇಲೆ ನಿಸರ್ಗ ಮುನಿದಿದ್ದು ಇದೇ ಮೊದಲಲ್ಲ; 1991ರಿಂದ ಈವರೆಗೆ ಏನೆಲ್ಲಾ ಆಯ್ತು?
ಪ್ರತಿವರ್ಷ ಹಿಮಾಲಯಕ್ಕೆ ಚಾರಣ ಹೋಗುವ ಒಂದು ಪುಟ್ಟ ತಂಡವನ್ನು ನಾನು ಕಟ್ಟಿಕೊಂಡಿದ್ದೇನೆ. 2013ರ ಆಗಸ್ಟ್ನಲ್ಲಿ ಪಾಂಡವರು ಸಶರೀರವಾಗಿ ಸ್ವರ್ಗಕ್ಕೆ ಹೋದರೆಂದು ನಂಬಲಾಗಿದ್ದ ದಾರಿಯಲ್ಲಿ ಹೋಗಿ ಕೊನೆಗೆ ಧರ್ಮರಾಯನು ಸ್ವರ್ಗಕ್ಕೆ ಹೋದ ಸತೋಪಂಥ್ಗೆ ಹೋಗುವುದೆಂದು ತೀರ್ಮಾನಿಸಿದ್ದೆವು. ಅದಕ್ಕಾಗಿ ಪೂರ್ವತಯಾರಿಯನ್ನೂ ಮಾಡಿಕೊಂಡಿದ್ದೆವು. ಆದರೆ ಜೂನ್ನಲ್ಲಿ ಸುರಿದ ಮಹಾಮಳೆಗೆ ಉತ್ತಾರಾಖಂಡ ಮತ್ತೆ ಹಲವಾರು ವರ್ಷಗಳ ಕಾಲ ಚೇತರಿಸಿಕೊಳ್ಳಲಾರದಷ್ಟು ಮಟ್ಟಿಗೆ ನಲುಗಿಹೋಗಿತ್ತು.
ದೇವಭೂಮಿಯೆಂದು ಕರೆಯಲ್ಪಡುವ ಉತ್ತರಾಖಂಡಕ್ಕೆ ಪ್ರವಾಸೋದ್ಯಮವೇ ಆದಾಯದ ಮೂಲ. ಆದರೆ ಆ ವರ್ಷ ಅದು ಸಂಪೂರ್ಣ ಸ್ಥಗಿತಗೊಂಡಿತ್ತು. ಯಾಕೆಂದರೆ ರಸ್ತೆಗಳನ್ನೆ ನದಿಗಳು ನುಂಗಿ ನೊಣೆದಿದ್ದವು. ಭೂಮಿ ಬಾಯ್ದೆರೆದು ಕಟ್ಟಡಗಳನ್ನೇ ನುಂಗಿದ್ದವು. ಹಾಗಾಗಿ ನಮ್ಮ ಪ್ರವಾಸ ಕ್ಯಾನ್ಸಲ್ ಮಾಡಲೇ ಬೇಕಾಯ್ತು. ಆದರೆ ಒಮ್ಮೆ ಹಿಮಾಲಯದ ಮೋಹಕ್ಕೆ ಬಿದ್ದರೆ ಅದು ಸುಮ್ಮನೆ ಬಿಡುತ್ತದೆಯೇ? ಮತ್ತೆ ಮತ್ತೆ ನಮ್ಮನ್ನು ತನ್ನತ್ತ ಸೆಳೆಯುತ್ತಲೇ ಇರುತ್ತದೆ. ‘ಒಮ್ಮೆ ಹೀಗೆ ಹೋಗಿ ಹಾಗೆ ಬಂದುಬಿಡೋಣ ಅಂತ ಅಕ್ಟೋಬರ್ ತಿಂಗಳಿನಲ್ಲಿ ಹತ್ತು ದಿನಗಳ ಪ್ರವಾಸದ ರೂಪುರೇಶೆ ಹಾಕಿಕೊಂಡು ರೈಲ್ ಹತ್ತಿಯೇ ಬಿಟ್ಟೆವು.
ಇದನ್ನೂ ಓದಿ: ಉತ್ತರಾಖಂಡ ದುರಂತಕ್ಕೆ ಏನು ಕಾರಣ? ಭೂಕುಸಿತವೇ? ಹಿಮನದಿ ಸ್ಫೋಟವೇ? ಇಲ್ಲಿದೆ ತಜ್ಞರ ವಿಶ್ಲೇಷಣೆ
ಆ ಹತ್ತು ದಿನಗಳ ಕಾಲ ನಾವು ನೋಡಿದ್ದು ಮಂದಾಕಿನಿ, ಭಾಗೀರಥಿ, ಅಲಕಾನಂದೆಯರು ಹುಚ್ಚೆದ್ದು ಕುಣಿದು ಕುಪ್ಪಳಿಸಿ ಅಬ್ಬರಿಸಿ ಹಾಳುಗೆಡವಿದ ದೇವಭೂಮಿಯನ್ನು. ಅಲ್ಲಿಯ ಕಟ್ಟಡಗಳ ಅವಶೇಷಗಳ ಸಾಕ್ಷ್ಯ ಇಲ್ಲದಿರುತ್ತಿದ್ದರೆ, ಈಗ ತಣ್ಣನೆ ಹರಿಯುತ್ತಿದ್ದ ಈ ನದಿಗಳೇ ಈ ಅವಾಂತರಗಳಿಗೆ ಕಾರಣ ಎಂದರೆ ಯಾರೂ ನಂಬುತ್ತಿರಲಿಲ್ಲ. ದೊಡ್ಡದೊಡ್ಡ ಜೆಸಿಬಿಗಳೇ ನದಿಯ ನಡುವೆ ಮರಳಿನಲ್ಲಿ ಹುದುಗಿಕೊಂಡಿದ್ದವು. ಕೆಲವು ಕಟ್ಟಡಗಳು ನಜ್ಜುಗುಜ್ಜಾದರೆ ಇನ್ನುಕೆಲವು ಭೂಮಿಯಲ್ಲಿ ಹುದುಗಿಕೊಂಡಿದ್ದವು. ಕೆಲವು ಕಟ್ಟಡಗಳ ಅವಶೇಷಗಳೇ ಇರಲಿಲ್ಲ. ರಸ್ತೆಗಳ ಕುರುಹುಗಳೇ ಇರಲಿಲ್ಲ.
ಒಂದೇ ಒಂದು ಉದಾಹರಣೆ ಕೊಡಬೇಕಾದ್ರೆ ಬದರಿನಾಥಕ್ಕೆ ಹೋಗುವ ದಾರಿಯಲ್ಲಿ japee ಕಂಪೆನಿಯು ಅಲಕಾನಂದ ಒಂದು ಜಲವಿದ್ಯುತ್ ಯೋಜನೆಯ ಘಟಕ ಹೊಂದಿತ್ತು. ಅಲ್ಲೊಂದು ಹೆಲಿಪ್ಯಾಡ್ ಕೂಡಾ ನಿರ್ಮಿಸಿತ್ತು, ಅದು ತನ್ನ ಸಾವಿರಾರು ಕಾರ್ಮಿಕರಿಗಾಗಿ ಅಲ್ಲಿ ಒಂದು ಜನವಸತಿ ನಿಲಯವನ್ನು ನಿರ್ಮಿಸಿತ್ತು. ಅಲ್ಲಿಯ ನಿವಾಸಿಗಳಿಗೆಂದು ಒಂದು ಉದ್ಯಾನವನ, ಹರ ಹರ ಮಹಾದೇವ ಎಂಬ ಒಂದು ದೇವಸ್ಥಾನವನ್ನು ನಿರ್ಮಿಸಿತ್ತು. ನಾವು ನೋಡಿದಾಗ ಆ ದೇವಸ್ಥಾನ ಒಂದು ಆಟಿಕೆಯಂತೆ ಬೃಹತ್ ಬಂಡೆಗಳ ಮಧ್ಯೆ ಸಿಕ್ಕಿಹಾಕಿಕೊಂಡಿತ್ತು. ಅಲ್ಲಿ ಜನವಸತಿಯಿದ್ದ ಚಿಕ್ಕ ಕುರುಹು ಕೂಡಾ ಇರಲಿಲ್ಲ. ಅಲ್ಲಿಯೇ ಸ್ವಲ್ಪ ಕೆಲಗೆ ಇದ್ದ ಸಿಖ್ ಸಮುದಾಯದ ಗೋವಿಂದ ಘಾಟ್ ಪಳೆಯುಳಿಕೆಯಂತಿತ್ತು. ಭಾಗೀರಥಿ ಉತ್ತರಕಾಶಿಯಲ್ಲಿ ರುದ್ರನರ್ತನ ಮಾಡಿತ್ತು.
ಇದನ್ನೂ ಓದಿ: Explainer | ಉತ್ತರಾಖಂಡ್ನಲ್ಲಿ ಹಠಾತ್ ಪ್ರವಾಹ: ಏನಿದು ಹಿಮಕುಸಿತ? ಹೇಗೆ ಸಂಭವಿಸುತ್ತೆ?
ನಮ್ಮ ಉತ್ತರಾಖಂಡದ ಎಲ್ಲಾ ಚಾರಣಗಳಲ್ಲಿ ನಮಗೆ ಮಾರ್ಗದರ್ಶಿಯಾಗಿದ್ದವರು ಬ್ರಿಜ್ ಮೋಹನ್ ಜೋಷಿ ಮತ್ತು ಡ್ರೈವರ್ ಸಂದೀಪ್. ಅವರಿಬ್ಬರು ಉತ್ತರಾಖಂಡದಲ್ಲಿ ಜನರ ನಡುವೆ ಇದ್ದ ನಂಬಿಕೆಯೊಂದನ್ನು ನಮ್ಮಲ್ಲಿ ಹಂಚಿಕೊಂಡಿದ್ದರು.
(2013ರ) ಮೇಘಸ್ಪೋಟಕ್ಕೆ ಕಾರಣವಾಗಿದ್ದು ಧಾರೀದೇವಿಯ ಕೋಪವಂತೆ. ಮೈಸೂರು ಪ್ರಾಂತ್ಯಕ್ಕೆ ತಾಯಿ ಚಾಮುಂಡಿ ಹೇಗೆ ನಾಡದೇವತೆಯೋ ಹಾಗೆ ಇಡೀ ಉತ್ತರಾಖಂಡಕ್ಕೆ ಧಾರೀ ದೇವಿ ರಕ್ಷಕ ದೇವತೆಯಂತೆ. ಶ್ರೀನಗರ ಎಂಬಲ್ಲಿ ಅಲಕಾನದಿಯ ದಂಡೆಯ ಮೇಲೆ ಆಕೆಯ ದೇವಸ್ಥಾನವಿತ್ತು. ಅಲಕಾನಂದಕ್ಕೆ ಅಣೆಕಟ್ಟನ್ನು ಕಟ್ಟಿದಾಗ ಆಕೆಯನ್ನು ಸ್ಥಳಾಂತರಿಸುವುದಕ್ಕೆ ಉದ್ದೇಶಿಸಲಾಗಿತ್ತು. ಆದರೆ ಇದಕ್ಕೆ ಸ್ಥಳೀಯರಿಂದ ಬಲವಾದ ವಿರೋಧ ಬಂತು. ಆದರೆ ಸರಕಾರವು ಜೂನ್ ಹದಿನೈದನೇ ತಾರೀಖಿನಂದು ಆಕೆಯನ್ನು ಅಲ್ಲಿಂದ ಕಿತ್ತು ನಡಿ ಮಧ್ಯದಲ್ಲಿ ಸ್ತಂಭಗಳ ಮೇಲೆ ಕಟ್ಟಲಾಗಿದ್ದ ದೇವಸ್ಥಾನಕ್ಕೆ ಸ್ಥಳಾಂತರಿಸಿತು. ಅಂದೇ ಮೇಘಸ್ಪೋಟ ಸಂಭವಿಸಿತ್ತು.
ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿದ್ದ ವ್ಯಕ್ತಿ ರಕ್ಷಣೆ; ಸೇನಾ ಕಾರ್ಯಾಚರಣೆಗೆ ದೇಶದ ಸೆಲ್ಯೂಟ್
ಮೇಘಸೋಟ ಕೇವಲ ಧಾರೀ ದೇವಿಯ ಶಿರೋಭಾಗವಿರುವ ಅಲಕಾನಂದೆಯ ಹರಿವಿನ ಇಕ್ಕೆಲ್ಲಗಳಲ್ಲಿ ಸಂಭವಿಸಲಿಲ್ಲ. ಆಕೆಯ ಶ್ರೀಚಕ್ರ ಪೀಠವಿರುವ ಕಾಳಿಮಠದಲ್ಲಿಯೂ ಮಂದಾಕಿನಿ ಮುನಿದು ಮಹಾಭೂಕುಸಿತ ಉಂಟಾಯಿತು. ದುಸ್ತರವಾದ ದಾರಿಯಲ್ಲಿ ಕಾಳಿಮಠಕ್ಕೆ ನಮ್ಮನ್ನು ಬ್ರಿಜ್ ಮೋಹನ್ ಕರೆದುಕೊಂಡು ಹೋಗಿ ಧಾರೀ ದೇವಿಯ ದರ್ಶನ ಮಾಡಿಸಿದ್ದರು. ದಾರಿಯುದ್ದಕ್ಕೂ ಯಾತ್ರಾರ್ಥಿಗಳು ಅಲ್ಲಲ್ಲಿ ಬಿಟ್ಟು ಹೋಗಿದ್ದ ಕಾರುಗಳು ಅನಾಥವಾಗಿ ನಿಂತುಕೊಂಡಿರುವುದನ್ನು ಕಂಡೆವು.
ಹಿಮಾಲಯದ ನದಿಗಳೇ ಹಾಗೆ. ಇಲ್ಲಿ ಭೂಮಿಯ ಧಾರಣಶಕ್ತಿ ಅತ್ಯಂತ ಕಡಿಮೆ ಮಟ್ಟದಲ್ಲಿದೆ. ನಾವು ಹೋಲಿಕೆಗಳ ಮುಖಾಂತರ ಮಾತಾಡಿದರೆ ಹೆಚ್ಚು ಸ್ಪಷ್ಟವಾಗುತ್ತದ. ಪಶ್ಚಿಮಘಟ್ಟದ ಹುಟ್ಟು ಮತ್ತು ಹಿಮಾಲಯದ ಹುಟ್ಟಿನ ಬಗ್ಗೆ ಹೋಲಿಸಿದರೆ ಹಿಮಾಲಯ ಇನ್ನೂ ಶೈಶವಾವಸ್ಥೆಯಲ್ಲಿದೆ. ಹಾಗಾಗಿ ಅಲ್ಲಿ ದೊಡ್ಡಮಟ್ಟದ ಮಾನವ ಚಟುವಟಿಕೆಗಳು ನಡೆಯಬಾರದು. ಮುಖ್ಯವಾಗಿ ದೊಡ್ಡದೊಡ್ಡ ಅಣೆಕಟ್ಟುಗಳನ್ನು ಕಟ್ಟಲೇಬಾರದು. ಹಿಮಾಲಯದ ದೊಡ್ಡದೊಡ್ಡ ಅಣೆಕಟ್ಟುಗಳು ಎಂದಿಗಿದ್ದರೂ ಸಂಕಷ್ಟದ ಹೊರೆಯನ್ನು ಹೊತ್ತುಕೊಂಡೆ ಇರುತ್ತವೆ.
Published On - 5:50 pm, Tue, 9 February 21