Defamation case ಮಾಜಿ ಸಚಿವೆ ಮನೇಕಾ ಗಾಂಧಿಗೆ ಮೈಸೂರು ಕೋರ್ಟ್ನಿಂದ ನೋಟಿಸ್
Mysuru Court Notice to Maneka Gandhi | ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿಗೆ ಮೈಸೂರಿನ 1ನೇ ಜಿಲ್ಲಾ & ಸೆಷನ್ಸ್ ಕೋರ್ಟ್ ಮಾರ್ಚ್ 1ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಮೈಸೂರು: ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿಗೆ ಕೋರ್ಟ್ನಿಂದ ನೋಟಿಸ್ ಜಾರಿಯಾಗಿದೆ. ಮೈಸೂರಿನ 1ನೇ ಜಿಲ್ಲಾ & ಸೆಷನ್ಸ್ ಕೋರ್ಟ್ ಮನೇಕಾ ಅವರನ್ನು ಮಾರ್ಚ್ 1ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ತಿಳಿಸಿದೆ. ಕರ್ನಾಟಕ & ಕೇರಳ ರಾಜ್ಯ ಉಸ್ತುವಾರಿ ಆಗಿದ್ದ, ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ ಸದಸ್ಯ ಮೈಸೂರು ನಿವಾಸಿ ಡಾ.ಎಸ್.ಕೆ.ಮಿತ್ತಲ್ರಿಂದ ಕೇಸ್ ದಾಖಲಾಗಿತ್ತು. ಈ ಸಂಬಂಧ ಮಾರ್ಚ್ 1ರಂದು ವಿಚಾರಣೆಗೆ ಹಾಜರಾಗುವಂತೆ ಮೈಸೂರು ಕೋರ್ಟ್ ನೋಟಿಸ್ ನೀಡಿದೆ.
ಪ್ರಕರಣ ಏನು? ಕಸಾಯಿಖಾನೆಗೆ ಭೇಟಿ ಸೇರಿದಂತೆ ಸಾಕಷ್ಟು ಕಾರ್ಯಗಳಲ್ಲಿ ಡಾ.ಎಸ್.ಕೆ.ಮಿತ್ತಲ್ ಸಮರ್ಪಕವಾಗಿ ಕೆಲಸಮಾಡಿಲ್ಲವೆಂದು ಮಿತ್ತಲ್ ವಿರುದ್ಧ ಮನೇಕಾ ಗಾಂಧಿ ಆರೋಪಿಸಿದ್ದರು. ಈ ಸಂಬಂಧ ಅಂದಿನ ಕೇಂದ್ರ ಪರಿಸರ ಸಚಿವರಾಗಿದ್ದ ಡಾ.ಹರ್ಷವರ್ಧನ್ಗೆ ಮಂಡಳಿ ಸದಸ್ಯರ ವಿರುದ್ಧ ಆರೋಪ ಮಾಡಿ ಪತ್ರ ಬರೆದಿದ್ದರು. ಈ ಆರೋಪಗಳಿಗೆ ಸಂಬಂಧಿಸಿದಂತೆ ಮನೇಕಾಗೆ ಪತ್ರ ಬರೆದು ಮಿತ್ತಲ್ ಸ್ಪಷ್ಟನೆ ನೀಡಿದ್ದರು. ಆದ್ರೂ ಮನೇಕಾ, ಮಿತ್ತಲ್ ವಿರುದ್ಧ ಆರೋಪ ಮಾಡುವುದನ್ನು ಮುಂದುವರಿಸಿದ್ದರು.
ಇದರಿಂದ ಬೇಸರಗೊಂಡು ಮಿತ್ತಲ್ ಮೈಸೂರಿನ JMFC ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಡಾ.ಎಸ್.ಕೆ.ಮಿತ್ತಲ್ರ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು. ನಂತರ ಮಿತ್ತಲ್ 1ನೇ ಜಿಲ್ಲಾ & ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ಮೇಲ್ಮನವಿ ವಿಚಾರಣೆಗೆ ಸ್ವೀಕರಿಸಿ ಮನೇಕಾ ಗಾಂಧಿಗೆ ನೋಟಿಸ್ ಜಾರಿ ಮಾಡಲಾಗಿದೆ. ಟಿವಿ9ಗೆ ಡಾ.ಮಿತ್ತಲ್ ಪರ ವಕೀಲ ಹೆಚ್.ಬಿ.ಪ್ರಭು ಮಾಹಿತಿ ನೀಡಿದ್ದಾರೆ.