Breaking News ಪಂಜಾಬ್ನಲ್ಲಿ ಸಂಭವಿಸಿದ ಮೋದಿ ಭದ್ರತಾ ಲೋಪಕ್ಕೆ ಫಿರೋಜ್‌ಪುರ ಎಸ್‌ಎಸ್‌ಪಿ ಹೊಣೆ: ಸುಪ್ರೀಂಕೋರ್ಟ್
ಪ್ರಧಾನಿ ಮೋದಿಯವರ ಬೆಂಗಾವಲು ವಾಹನ ಮಾರ್ಗವನ್ನು ಪ್ರವೇಶಿಸಲು ಎರಡು ಗಂಟೆಗಳ ಮೊದಲು ಅವರಿಗೆ ತಿಳಿಸಲಾಯಿತು. ಆದರೆ ಸಾಕಷ್ಟು ಸಿಬ್ಬಂದಿಗಳು ಲಭ್ಯವಿದ್ದರೂ ಅವನೀತ್ ಹನ್ಸ್ ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಜನವರಿ 5 ರಂದು ಪಂಜಾಬ್‌ಗೆ (Punjab) ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಭದ್ರತಾ ಲೋಪಕ್ಕೆ (PM security breach) ಫಿರೋಜ್‌ಪುರ ಎಸ್‌ಎಸ್‌ಪಿ ಅವನೀತ್ ಹನ್ಸ್ ಹೊಣೆಗಾರರೆಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ. ಪ್ರಧಾನಿ ಮೋದಿಯವರ ಬೆಂಗಾವಲು ವಾಹನ ಮಾರ್ಗವನ್ನು ಪ್ರವೇಶಿಸಲು ಎರಡು ಗಂಟೆಗಳ ಮೊದಲು ಅವರಿಗೆ ತಿಳಿಸಲಾಯಿತು. ಆದರೆ ಸಾಕಷ್ಟು ಸಿಬ್ಬಂದಿಗಳು ಲಭ್ಯವಿದ್ದರೂ ಅವನೀತ್ ಹನ್ಸ್ ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಸಮಿತಿಯು ಸಲ್ಲಿಸಿದ ವರದಿಯನ್ನು ಕೇಂದ್ರ ಮತ್ತು ಪಂಜಾಬ್ ಸರ್ಕಾರಗಳಿಗೆ ಕಳುಹಿಸಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ನಂತರ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು ಪ್ರಕರಣ ಮುಕ್ತಾಯಗೊಳಿಸಿದೆ ಎಂದು ಘೋಷಿಸಿತು.
PM security breach in Punjab in January 2022 | Supreme Court reads report filed by five-member Committee headed by a retired top court judge, Justice Indu Malhotra, as per which Ferozepur SSP failed to discharge his duty to maintain law and order. pic.twitter.com/1DoaKY1mFq
— ANI (@ANI) August 25, 2022
ನಿನ್ನೆ (ಬುಧವಾರ) ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಪ್ರಧಾನಿ ಮೋದಿಯನ್ನು ಮೊಹಾಲಿಗೆ ಸ್ವಾಗತಿಸುವಾಗ, ಘಟನೆಯನ್ನು “ದುರದೃಷ್ಟಕರ” ಎಂದು ಹೇಳಿದ್ದರು. ಜನವರಿ 5 ರಂದು ಪಿಎಂ ಮೋದಿ ಅವರ ಬೆಂಗಾವಲು ವಾಹನ ಭಟಿಂಡಾದಲ್ಲಿ ಸ್ವಲ್ಪ ಹೊತ್ತು ಸ್ಥಗಿತವಾಗಿತ್ತು. ಪ್ರಧಾನಿಯವರು ರ್ಯಾಲಿಯೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಮೋದಿ ಆ ಕಾರ್ಯಕ್ರಮದಲ್ಲಿ ಭಾಗವಹಿಸದೇ ತೆರಳಿದ್ದರು. ಕೆಲವು ಪ್ರತಿಭಟನಾಕಾರರ ದಿಗ್ಬಂಧನದ ನಂತರ ಹುಸೇನಿವಾಲಾದಿಂದ ಸುಮಾರು 30 ಕಿಮೀ ದೂರದಲ್ಲಿರುವ ಫ್ಲೈಓವರ್‌ನಲ್ಲಿ 20 ನಿಮಿಷಗಳ ಕಾಲ ಮೋದಿ ವಾಹನ ಸ್ಥಗಿತವಾಗಿತ್ತು.
ಭದ್ರತಾ ಲೋಪ ಬಗ್ಗೆ ಭಾರೀ ರಾಜಕೀಯ ಗದ್ದಲವುಂಟಾಗಿದ್ದು ಗೃಹ ಸಚಿವರು ಭದ್ರತಾ ವ್ಯವಸ್ಥೆಗಳಲ್ಲಿನ ಗಂಭೀರ ಲೋಪಗಳ ಬಗ್ಗೆ ತನಿಖೆ ನಡೆಸಲು ಮೂರು ಸದಸ್ಯರ ಸಮಿತಿಯನ್ನು ಸ್ಥಾಪಿಸಿದರು. ಘಟನೆಯಲ್ಲಿ ಯಾವುದೇ ಕ್ರಿಮಿನಲ್ ಪಿತೂರಿ ನಡೆದಿದ್ದರೆ ಮತ್ತು ಪಂಜಾಬ್ ಪೊಲೀಸ್ ಅಧಿಕಾರಿಗಳ ಪಾತ್ರವನ್ನು ತನಿಖೆ ಮಾಡಲು ಜನವರಿಯಲ್ಲಿ ಸುಪ್ರೀಂಕೋರ್ಟ್, ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ನೇತೃತ್ವದ ಸಮಿತಿಯನ್ನು ನೇಮಿಸಿತು. ಈ ವಿಷಯವನ್ನು ಏಕಪಕ್ಷೀಯ ವಿಚಾರಣೆಗೆ ಬಿಡಲಾಗುವುದಿಲ್ಲ ಎಂದು ಆಗ ಸುಪ್ರೀಂಕೋರ್ಟ್ ಹೇಳಿತ್ತು.
ಜನವರಿ 5 ರ ಪ್ರಧಾನಿಯವರ ಭೇಟಿಗಾಗಿ ಪಂಜಾಬ್ ಸರ್ಕಾರವು ಮಾಡಿದ ಭದ್ರತಾ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಎಲ್ಲಾ ದಾಖಲೆಗಳನ್ನು ಸಮಿತಿಗೆ ನೀಡುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
ಭದ್ರತಾ ಲೋಪಕ್ಕೆ ಪಂಜಾಬ್‌ನ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆರೋಪಿಸಿದೆ. ಆದರೆ, ಕೊನೆಯ ಕ್ಷಣದಲ್ಲಿ ಪ್ರಧಾನಿ ತಮ್ಮ ಮಾರ್ಗವನ್ನು ಬದಲಾಯಿಸಿದ್ದಾರೆ ಎಂದು ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿತ್ತು.
ಪಂಜಾಬ್‌ನ ಫಿರೋಜ್ಪುರದಲ್ಲಿ ಜನವರಿ 5ರಂದು ರ್ಯಾಲಿಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಬೇಕಿತ್ತು. ಹಾಗೇ, ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮಾಡಬೇಕಿತ್ತು. ಆದರೆ ಅಂದು ಭಟಿಂಡಾ ವಿಮಾನ ನಿಲ್ದಾಣದಿಂದ ವಾಯು ಮಾರ್ಗದಲ್ಲಿ ಹೋಗಲು ಹವಾಮಾನ ಸರಿಯಿಲ್ಲದ ಕಾರಣ ಪ್ರಧಾನಿ ಮೋದಿ ರಸ್ತೆ ಮಾರ್ಗದಲ್ಲಿ ಹೊರಟಿದ್ದರು. ಆದರೆ ಹುಸ್ಸೇನಿವಾಲಾ ಬಳಿ ಫ್ಲೈಓವರ್ ಸಮೀಪ ರೈತರು ಪ್ರತಿಭಟನೆ ನಡೆಸುತ್ತಿದ್ದ ಕಾರಣ, ಅದೇ ಫ್ಲೈಓವರ್ ಮೇಲೆ ಪ್ರಧಾನಿ ಮೋದಿ ಸುಮಾರು 20 ನಿಮಿಷ ಕಾದು, ನಂತರ ದೆಹಲಿಗೆ ವಾಪಸ್ ಬಂದಿದ್ದರು. ಭಟಿಂಡಾ ಏರ್ಪೋರ್ಟ್ಗೆ ಬಂದ ಬಳಿಕ, ಸ್ಥಳೀಯ ಅಧಿಕಾರಿಗಳಿಗೆ, ನಾನು ಇಲ್ಲಿಯವರೆಗೆ ಜೀವಂತವಾಗಿಯಾದರೂ ಬಂದೆನಲ್ಲ, ಅದಕ್ಕಾಗಿ ನಿಮ್ಮ ಸಿಎಂಗೆ ಧನ್ಯವಾದ ಸಲ್ಲಿಸಿದ್ದಾಗಿ ಹೇಳಿ ಎಂದಿದ್ದರು.
Published On - 11:38 am, Thu, 25 August 22