ದೆಹಲಿ: ಕೊವಿಡ್ ಲಸಿಕೆಯ (Covid-19) ಮೊದಲ ಮುಂಜಾಗರೂಕತೆ ಲಸಿಕೆ (precautionary dose)ಯಾವಾಗ ಪಡೆಯಬಹುದು ಎಂಬುದರ ಬಗ್ಗೆ ಕೊವಿನ್ ಪ್ಲಾಟ್‌ಫಾರ್ಮ್ (CoWIN platform) ಮುಖ್ಯಸ್ಥ ಡಾ ಆರ್ ಎಸ್ ಶರ್ಮಾ (Dr RS Sharma) ವಿವರಿಸಿದ್ದಾರೆ. ಶರ್ಮಾ ಅವರ ಪ್ರಕಾರ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಈ ಡೋಸ್ ನೀಡಲಾಗುತ್ತಿದ್ದು ಇವರು 9 ತಿಂಗಳ ಹಿಂದೆ ಎರಡನೇ ಡೋಸ್ ಪಡೆದಿರಬೇಕು. ಅಂದರೆ ಕೊವಿಡ್ ಲಸಿಕೆಯ (Covid Vaccine) 2ನೇ ಡೋಸ್ ಪಡೆದು 9 ತಿಂಗಳಾಗಿದ್ದರೆ ಮೂರನೇ ಡೋಸ್‌ಗೆ ನೋಂದಣಿ ಮಾಡಬಹುದು. ಲಸಿಕೆ ಪಡೆಯಲು ನೋಂದಣಿ ಪ್ರಕ್ರಿಯೆ ಈ ಹಿಂದಿನಂತೆಯೇ ಇರುತ್ತದೆ. ಇದರರ್ಥ ಮುಂಜಾಗರೂಕತೆ ಲಸಿಕೆಯನ್ನು ಸ್ವೀಕರಿಸುವವರಲ್ಲಿ ಮೊದಲನೆಯವರು ಈ ವರ್ಷದ ಏಪ್ರಿಲ್‌ನೊಳಗೆ ತಮ್ಮ ಎರಡನೇ ಡೋಸ್ ಲಸಿಕೆ ಪಡೆದಿರಬೇಕು.
The process will be exactly the same. If you are above 60 years of age and have taken both doses and the gap between the second dose and the day you are registering is more than 9 months (39 weeks) then you are eligible: Dr RS Sharma, CoWIN platform Chief on precaution dose pic.twitter.com/AHwpP2dSDc
— ANI (@ANI) December 27, 2021
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ಫರಿದಾಬಾದ್‌ನ ಟ್ರಾನ್ಸ್ ಲೇಷನಲ್ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (THSTI) ನಡೆಸಿದ ಐದು ವೈಜ್ಞಾನಿಕ ಅಧ್ಯಯನಗಳ ಸಂಶೋಧನೆಗಳ ಆಧಾರದ ಮೇಲೆ ಎರಡನೇ ಮತ್ತು ಮೂರನೇ ಡೋಸ್‌ಗಳ ನಡುವಿನ ಮಧ್ಯಂತರವನ್ನು ಒಂಬತ್ತು ತಿಂಗಳುಗಳಲ್ಲಿ ಇರಿಸುವ ನಿರ್ಧಾರವನ್ನು ಮಾಡಲಾಗಿದೆ ಎಂದು ಚರ್ಚೆಯ ಭಾಗವಾಗಿದ್ದ ಉನ್ನತ ಸರ್ಕಾರಿ ಮೂಲಗಳು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ.
15 ರಿಂದ 18 ವರ್ಷದೊಳಗಿನ ಮಕ್ಕಳು ಜನವರಿ 1 ರಿಂದ CoWIN ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಲು ಸಾಧ್ಯವಾಗುತ್ತದೆ ಎಂದು ಶರ್ಮಾ ಹೇಳಿದರು. ನೋಂದಣಿಗಾಗಿ ಮಕ್ಕಳು ಆಧಾರ್ ಅಥವಾ ಯಾವುದೇ ಗುರುತಿನ ಚೀಟಿಗಳನ್ನು ಹೊಂದಿಲ್ಲದಿದ್ದರೆ ಅವರ ವಿದ್ಯಾರ್ಥಿ ಗುರುತಿನ ಚೀಟಿಯನ್ನು ಬಳಸಲು ಅನುಮತಿಸಲಾಗಿದೆ ಎಂದು ಕೊವಿನ್ ಪ್ಲಾಟ್‌ಫಾರ್ಮ್ ಮುಖ್ಯಸ್ಥ ಡಾ ಆರ್ ಎಸ್ ಶರ್ಮಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಕ್ರಿಸ್ಮಸ್ ರಾತ್ರಿ ಭಾಷಣದ ಕೆಲವು ದಿನಗಳ ನಂತರ ಈ ಪ್ರಕಟಣೆಯು ಬಂದಿದೆ. ಮುಂಚೂಣಿಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ಸಹವರ್ತಿ ರೋಗಗಳನ್ನು ಹೊಂದಿರುವವರು ಶೀಘ್ರದಲ್ಲೇ ಮೂರನೇ ‘ಮುಂಜಾಗರೂಕತೆ ಲಸಿಕೆ’ ಅಥವಾ ಲಸಿಕೆಯ ಬೂಸ್ಟರ್ ಡೋಸ್‌ಗೆ ಅರ್ಹರಾಗುತ್ತಾರೆ ಎಂದು ಮೋದಿ ಹೇಳಿದ್ದರು.
ವಾರಾಂತ್ಯದಲ್ಲಿ 15-18 ವರ್ಷದೊಳಗಿನ ಮಕ್ಕಳು ಸಹ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದರು. ಒಮಿಕ್ರಾನ್‌ನ ಆತಂಕದ ಮಧ್ಯೆಯೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬದಲಾದ ನಿಯಮಗಳೊಂದಿಗೆ 2007 ರ ಮೊದಲು ಜನಿಸಿದ ಎಲ್ಲರಿಗೂ ಜನವರಿ 1 ರಿಂದ ಲಸಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ.
15ರಿಂದ 18 ವರ್ಷದ ಮಕ್ಕಳಿಗೆ ದೇಶದಲ್ಲಿ ಲಸಿಕೆ ನೀಡುತ್ತೇವೆ. 3ನೇ ಜನವರಿ ಸೋಮವಾರದಿಂದ ಮಕ್ಕಳಿಗೆ ಲಸಿಕೆ ವಿತರಣೆ ಆರಂಭವಾಗಲಿದೆ. ಆರೋಗ್ಯ ಕಾರ್ಯಕರ್ತರಿಗೆ ಜನವರಿ 10ರಿಂದ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಡಿಸೆಂಬರ್ 25ರಂದು ದೇಶವನ್ನು ಉದ್ದೇಶಿಸಿ ತುರ್ತು ಭಾಷಣ ಮಾಡಿದ ಪ್ರಧಾನಿ, ಒಮಿಕ್ರಾನ್ ಬಗ್ಗೆ ಆತಂಕಿತರಾಗಬೇಡಿ, ಆದರೆ ಎಚ್ಚರ ವಹಿಸಿ ಎಂದು ಕಿವಿಮಾತು ಹೇಳಿದರು.
ಶಾಲಾ, ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ವ್ಯಾಕ್ಸಿನ್ ನೀಡುತ್ತೇವೆ. ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಪ್ರಿಕಾಶನ್ ಡೋಸ್ (ಮುಂಜಾಗರೂಕತೆ ಲಸಿಕೆ) ನೀಡುತ್ತೇವೆ. ದೇಶದಲ್ಲಿ ಲಸಿಕಾಕರಣ ಪ್ರಕ್ರಿಯೆ ಆರಂಭವಾಗಿ 11 ತಿಂಗಳಾಗಿದೆ. ಸಾಮೂಹಿಕ ಇಚ್ಛಾಶಕ್ತಿಯಿಂದ ಕೊರೊನಾ ವಿರುದ್ಧ ನಾವು ಹೋರಾಟ ಮುಂದುವರಿಸಬೇಕಿದೆ. ಕೊವಿಡ್, ಒಮಿಕ್ರಾನ್ ಬಗ್ಗೆ ಆತಂಕಬೇಡ, ಎಚ್ಚರಿಕೆ ಇರಲಿ. ದೇಶದಲ್ಲಿ ಈವರೆಗೆ 141 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಶೇ 61ರಷ್ಟು ಯುವಕರಿಗೆ ಲಸಿಕೆ ನೀಡಲಾಗಿದೆ. ಜನರನ್ನು ಆರೋಗ್ಯವಾಗಿ ಇರಿಸಲು ನಿರಂತರ ಶ್ರಮಿಸುತ್ತಿದ್ದೇವೆ. ಲಸಿಕಾ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.
ಇದನ್ನೂ ಓದಿ: 15-18 ವಯಸ್ಸಿನ ಮಕ್ಕಳಿಗೆ ಕೊವಿಡ್ ಲಸಿಕೆಗಾಗಿ CoWIN ಫ್ಲಾಟ್ಫಾರ್ಮ್ನಲ್ಲಿ ನೋಂದಣಿ ಹೇಗೆ?
Published On - 1:50 pm, Mon, 27 December 21