ಹಿಟ್ ಆ್ಯಂಡ್ ರನ್: 300 ಕೋಟಿ ರೂ. ಆಸ್ತಿಗಾಗಿ ಮಾವನ ಹತ್ಯೆಗೆ ಸುಪಾರಿ ಕೊಟ್ಟಿದ್ದ ಸೊಸೆ
ಮಾವನ ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಮಹಿಳಾ ನಗರ ಯೋಜನಾ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ನಾಗ್ಪುರ ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 300 ಕೋಟಿ ಮೌಲ್ಯದ ಆಸ್ತಿಯ ಮೇಲೆ ಅವರ ದೃಷ್ಟಿ ನೆಟ್ಟಿತ್ತು. ಮೇ 22 ರಂದು ಬಾಲಾಜಿ ನಗರದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಪುರುಷೋತ್ತಮ್ ಪುಟ್ಟೇವಾರ್ (82) ಸಾವನ್ನಪ್ಪಿದ್ದರು, ಆದರೆ ತನಿಖೆ ಮತ್ತು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳು ಕೊಲೆ ಪ್ರಕರಣ ಎಂದು ತಿಳಿದುಬಂದಿದೆ.
ನಾಗ್ಪುರದಲ್ಲಿ ನಡೆದ ಅಪಘಾತ(Accident)ವೊಂದರಲ್ಲಿ ವೃದ್ಧರೊಬ್ಬರು ಸಾವನ್ನಪ್ಪಿದ್ದರು. ಮೇಲ್ನೋಟಕ್ಕೆ ಇದು ಹಿಟ್ ಆ್ಯಂಡ್ ರನ್ನಂತೆ ಕಂಡರೂ ಪೊಲೀಸರಿಗೆ ಒಳಗೊಳಗೇ ಅನುಮಾನ ಮೂಡಿತ್ತು. ಈ ಅಪಘಾತ ಕಾಕತಾಳೀಯವಲ್ಲ, ಯೋಜಿತ ಸಂಚು ಎಂಬುದು ಪೊಲೀಸರ ನಂಬಿಕೆಯಾಗಿತ್ತು, ಇದೀಗ ಬಂದಿರುವ ಮಾಹಿತಿ ಪ್ರಕಾರ ಅದು ಯೋಜಿತ ಕೊಲೆ ಆ ಕೊಲೆಗೆ ಸುಪಾರಿ ಕೊಟ್ಟವಳು ಮೃತ ವೃದ್ಧರ ಸೊಸೆ ಎಂಬುದು ತಿಳಿದುಬಂದಿದೆ.
ಅರ್ಚನಾ ಪುಟ್ಟೇವಾರ್ ಎಂಬಾಕೆ ತನ್ನ ಮಾವ ಪುರುಷೋತ್ತಮ್ ಪುಟ್ಟೇವಾರ್ ಮೇಲೆ ಹಲ್ಲೆ ನಡೆಸಲು ಜನರನ್ನು ನೇಮಿಸಿಕೊಂಡಿದ್ದಳು. ಇದಕ್ಕಾಗಿ ಸುಮಾರು ಒಂದು ಕೋಟಿ ರೂ. ಖರ್ಚು ಮಾಡಿದ್ದಳು. ಡಿಕ್ಕಿ ಹೊಡೆಸಲು ಹಳೆ ಕಾರನ್ನು ಖರೀದಿಸಲು ಆಕೆ ಆರೋಪಿಗೆ ಹಣ ಕೊಟ್ಟಿದ್ದಳು. ಇದರಿಂದ ಈ ಕೊಲೆ ಅಪಘಾತದಂತೆ ಕಂಡಿತ್ತು.
300 ಕೋಟಿ ರೂ. ಮೌಲ್ಯದ ಆಸ್ತಿ ದೋಚಲು ಮಹಿಳೆ ಇಷ್ಟೆಲ್ಲಾ ಮಾಡಿದ್ದಾಳೆ, ಈ ಪ್ರಕರಣದಲ್ಲಿ ಮಹಿಳೆಯ ಪತಿಯ ಕಾರು ಚಾಲಕ ಬಾಗ್ಡೆ ಸೇರಿದಂತೆ ಮತ್ತಿಬ್ಬರು ಭಾಗಿಯಾಗಿದ್ದಾರೆ. ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಆರೋಪಿಗಳ ವಿರುದ್ಧ ಕೊಲೆ, ಮೋಟಾರು ವಾಹನ ಕಾಯ್ದೆ ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಿಂದ ಎರಡು ಕಾರು, ಚಿನ್ನಾಭರಣ ಹಾಗೂ ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮತ್ತಷ್ಟು ಓದಿ: ಮದ್ಯದ ನಶೆಯಲ್ಲಿ ಮಗನ ಬಾಯಿಗೆ ಪೇಪರ್ ತುರುಕಿ ಕೊಲೆ ಮಾಡಿದ ತಂದೆ
ವಯೋವೃದ್ಧ ಪುರುಷೋತ್ತಮ ಪುಟ್ಟೇವಾರ್ ಅವರು ಪತ್ನಿ ಶಕುಂತಲಾ ಅವರನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ವಾಪಸಾಗುತ್ತಿದ್ದಾಗ ಘಟನೆ ನಡೆದಿದೆ. ಆಕೆಯ ಮಗ ಮತ್ತು ಅರ್ಚನಾಳ ಪತಿ ಮನೀಶ್ ವೈದ್ಯರಾಗಿದ್ದಾರೆ.
ಅರ್ಚನಾ ನಗರ ಯೋಜನಾ ವಿಭಾಗದ ಅಧಿಕಾರಿಯೂ ಆಗಿದ್ದು, ಹಲವು ಅಕ್ರಮಗಳನ್ನು ನಡೆಸಿದ್ದಾರೆ. ಇದಲ್ಲದೇ ಅರ್ಚನಾ ತನ್ನ ಕೆಲಸವನ್ನು ಸರಿಯಾಗಿ ಮಾಡಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಅವರ ಕೆಲಸದಲ್ಲೂ ಹಲವು ಅಕ್ರಮಗಳು ಕಂಡುಬಂದಿವೆ. ಅವರ ವಿರುದ್ಧ ಹಲವು ದೂರುಗಳು ಬಂದಿದ್ದವು. ರಾಜಕೀಯ ವ್ಯಕ್ತಿಗಳೊಂದಿಗೆ ಆಕೆ ಸಂಪರ್ಕದಲ್ಲಿದ್ದ ಕಾರಣ ಯಾರೂ ಆಕೆಯ ವಿರುದ್ಧವಾಗಿ ಕ್ರಮ ಕೈಗೊಂಡಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ