ನಮಗೆ ದೇಶ ಮೊದಲು, ಕೆಲವರಿಗೆ ಮೋದಿಯೇ ಮೊದಲು; ಶಶಿ ತರೂರ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಪರೋಕ್ಷ ವಾಗ್ದಾಳಿ

ಮೋದಿ ಸರ್ಕಾರದಿಂದ ಭಯೋತ್ಪಾದನೆ ವಿರುದ್ಧ ಭಾರತದ ನಿಲುವನ್ನು ಬೇರೆ ದೇಶಗಳಿಗೆ ತಿಳಿಸಲು ಸಂಸದರ ನಿಯೋಗ ರಚಿಸಲಾಗಿತ್ತು. ಆ ನಿಯೋಗಗಳಲ್ಲಿ ಒಂದರ ನೇತೃತ್ವ ವಹಿಸಲು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರನ್ನು ಆಯ್ಕೆ ಮಾಡಿದ ನಂತರ ಶಶಿ ತರೂರ್ ಮತ್ತು ಕಾಂಗ್ರೆಸ್ ನಡುವೆ ಶೀತಲ ಸಮರ ಹೆಚ್ಚಾಗಿದೆ. ವಿದೇಶದಿಂದ ಬಂದ ನಂತರವೂ ಶಶಿ ತರೂರ್ ಪ್ರಧಾನಿ ಮೋದಿಯನ್ನು ಹೊಗಳುತ್ತಿರುವುದಕ್ಕೆ ಕಾಂಗ್ರೆಸ್ ಅಸಮಾಧಾನಗೊಂಡಿದ್ದು, ಅದು ಆಗಾಗ ಬಹಿರಂಗವಾಗಿಯೇ ವ್ಯಕ್ತವಾಗುತ್ತಿದೆ. ಇದೀಗ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪರೋಕ್ಷವಾಗಿ ಶಶಿ ತರೂರ್​​ಗೆ ಟಾಂಗ್ ನೀಡಿದ್ದಾರೆ.

ನಮಗೆ ದೇಶ ಮೊದಲು, ಕೆಲವರಿಗೆ ಮೋದಿಯೇ ಮೊದಲು; ಶಶಿ ತರೂರ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಪರೋಕ್ಷ ವಾಗ್ದಾಳಿ
Mallikarjun Kharge

Updated on: Jun 25, 2025 | 7:31 PM

ನವದೆಹಲಿ, ಜೂನ್ 25: ಕೇಂದ್ರ ಸರ್ಕಾರ ರಚಿಸಿದ್ದ ಸಂಸದರ ನಿಯೋಗದಿಂದ ವಿದೇಶಕ್ಕೆ ಹೋಗಿ ಬಂದ ನಂತರ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಬಿಜೆಪಿ ಜೊತೆ ಆಪ್ತವಾಗಿ ಗುರುತಿಸಿಕೊಂಡಿದ್ದಾರೆ. ಇದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ. ಸದ್ಯದ ಮಟ್ಟಿಗೆ ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿರುವ ಶಶಿ ತರೂರ್ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿಲ್ಲ. ಹಾಗೇ, ಆಗಾಗ ಪ್ರಧಾನಿ ಮೋದಿಯನ್ನು ಹೊಗಳುತ್ತಿರುವುದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವೇ ದಿನಗಳ ಹಿಂದಷ್ಟೇ ಪ್ರಧಾನಿ ಮೋದಿಯವರನ್ನು ಶಶಿ ತರೂರ್ ಭಾರತದ ದೊಡ್ಡ ಆಸ್ತಿ, ಅವರಿಗೆ ಸರಿಯಾದ ಬೆಂಬಲ ಬೇಕಿದೆ ಎಂದು ದಿನಪತ್ರಿಕೆಯೊಂದರಲ್ಲಿ ಬರೆದ ಅಂಕಣದಲ್ಲಿ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಶಶಿ ತರೂರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಪದೇ ಪದೇ ಹೊಗಳಿದ್ದಕ್ಕಾಗಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸಿದ್ದು, “ನಮಗೆ ದೇಶ ಮೊದಲು. ಆದರೆ, ಕೆಲವರಿಗೆ ಮೋದಿಯೇ ಮೊದಲು” ಎಂದು ಲೇವಡಿ ಮಾಡಿದ್ದಾರೆ.

ತಿರುವನಂತಪುರಂ ಸಂಸದ ಶಶಿ ತರೂರ್ ಅವರನ್ನು ಆಪರೇಷನ್ ಸಿಂಧೂರದ ಬಳಿಕ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಲು ಆಯ್ಕೆ ಮಾಡಲಾಗಿತ್ತು. ಅದಾದ ನಂತರ ಶಶಿ ತರೂರ್ ಮತ್ತು ಕಾಂಗ್ರೆಸ್ ನಡುವಿನ ಬಿಕ್ಕಟ್ಟಿನ ನಡುವೆ ಮಲ್ಲಿಕಾರ್ಜುನ ಖರ್ಗೆ ಅವರ ಈ ಹೇಳಿಕೆ ಹೊರಬಿದ್ದಿದೆ. ಶಶಿ ತರೂರ್ ಕೂಡ ಕಳೆದ ವಾರ ತಮ್ಮ ಹಾಗೂ ಕಾಂಗ್ರೆಸ್ ನಾಯಕತ್ವದ ನಡುವೆ ಭಿನ್ನಾಭಿಪ್ರಾಯಗಳಿರುವುದು ನಿಜ ಎಂದು ಒಪ್ಪಿಕೊಂಡಿದ್ದರು.


ಇದನ್ನೂ ಓದಿ: ಭಾರತದ ಪ್ರಮುಖ ಆಸ್ತಿ; ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಶಶಿ ತರೂರ್

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, “ಶಶಿ ತರೂರ್ ಅವರ ಭಾಷೆ ತುಂಬಾ ಚೆನ್ನಾಗಿದೆ. ಅದಕ್ಕಾಗಿಯೇ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿಯೇ ಉಳಿಸಿಕೊಳ್ಳಲಾಗಿದೆ. ನಾವು ದೇಶಕ್ಕಾಗಿ ಒಟ್ಟಾಗಿ ನಿಂತಿದ್ದೇವೆ ಎಂದು ನಾನು ಗುಲ್ಬರ್ಗದಲ್ಲಿ ಹೇಳಿದ್ದೆ. ಆಪರೇಷನ್ ಸಿಂಧೂರ್‌ನಲ್ಲಿ ನಾವು ಒಟ್ಟಾಗಿ ನಿಂತಿದ್ದೇವೆ. ದೇಶ ಮೊದಲು ಎಂದು ನಾವು ಹೇಳಿದ್ದೇವೆ, ಆದರೆ ಕೆಲವರು ಮೋದಿಯೇ ಮೊದಲು ಎನ್ನುತ್ತಿದ್ದಾರೆ. ಅವರಿಗೆ ಮೋದಿಯಾದ ನಂತರ ದೇಶ ಬರುತ್ತದೆ. ಹಾಗಾದರೆ, ನಾವು ಏನು ಮಾಡಬೇಕು?” ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ಊಟ ಚೆನ್ನಾಗಿತ್ತು ಅನ್ಸುತ್ತೆ; ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ

“ನಾನು ಚುನಾವಣೆಗಳನ್ನು ಗೆಲ್ಲುತ್ತೇನೆ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ನಾನು ಮತ್ತೆ ಮತ್ತೆ ಗೆಲ್ಲುತ್ತೇನೆ ಎಂದು ಅವರು ಬಿಹಾರದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಈಗ ನಿಮ್ಮ ಕೈಗೊಂಬೆಯಾಗಿದೆ ಮೋದಿಯವರೇ. ನೀವು ಚುನಾವಣೆಯಲ್ಲಿ ಗೆಲ್ಲುತ್ತಿಲ್ಲ. ನಿಮ್ಮ ಯಂತ್ರ ಗೆಲ್ಲುತ್ತಿದೆ” ಎಂದು ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.


ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಅವರ ಈ ಹೇಳಿಕೆಗಳು ಬಂದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ