Nupur Sharma controversy: ನೂಪುರ ಶರ್ಮಾ ಆಕ್ಷೇಪಾರ್ಹ ಮಾತು, ದಿಢೀರ್ ಪ್ರತಿಭಟನೆಯ ಕಾವು ತಣ್ಣಗಾಗ್ತಿದೆ, ದೇಶದಲ್ಲಿ ಇಂದಿನ ಪರಿಸ್ಥಿತಿ ಹೇಗಿದೆ?
Prophet Muhammad: ಬಿಜೆಪಿ ಮಾಜಿ ವಕ್ತಾರೆ ನೂಪುರ ಶರ್ಮಾ, ಪ್ರವಾದಿ ಮೊಹಮ್ಮದ್ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನಾಡಿದ್ದನ್ನು ಖಂಡಿಸಿ ನಿನ್ನೆ ದೇಶಾದ್ಯಂತ ಆರಂಭವಾದ ಪ್ರತಿಭಟನೆಯ ಕಾವು ಇಂದು ತಣ್ಣಗಾಗಿದೆ. ಆದರೆ, ಇಂದು ಅನೇಕ ನಗರಗಳಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹೌರಾದಲ್ಲಿ ಇಂದು ಕೂಡ ಕಲ್ಲುತೂರಾಟ ನಡೆದಿದೆ. ಪಕ್ಕದ ಜಾರ್ಖಂಡ್ ನಲ್ಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬಿಜೆಪಿ ಮಾಜಿ ವಕ್ತಾರೆ ನೂಪುರ ಶರ್ಮಾ (Nupur Sharma), ಪ್ರವಾದಿ ಮೊಹಮ್ಮದ್ (Prophet Muhammad) ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನಾಡಿದ್ದನ್ನು ಖಂಡಿಸಿ ನೆನ್ನೆ ದೇಶಾದ್ಯಂತ ಆರಂಭವಾದ ಪ್ರತಿಭಟನೆ ಕಾವು ಇಂದು ತಣ್ಣಗಾಗಿದೆ. ಆದರೆ, ದೇಶದಲ್ಲಿ ಇಂದು ಅನೇಕ ನಗರಗಳಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಪಶ್ಚಿಮ ಬಂಗಾಳದ ಹೌರಾದಲ್ಲಿ ಇಂದು ಕೂಡ ಕಲ್ಲುತೂರಾಟ ನಡೆದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪಕ್ಕದ ಜಾರ್ಖಂಡ್ ರಾಜ್ಯದಲ್ಲೂ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ (Nupur Sharma controversy).
ಪಶ್ಚಿಮ ಬಂಗಾಳದ ಹೌರಾದಲ್ಲಿ ಇಂದು ಮತ್ತೆ ಗಲಭೆ: ಪ್ರವಾದಿ ಮೊಹಮ್ಮದ್ ಬಗ್ಗೆ ಬಿಜೆಪಿ ಮಾಜಿ ವಕ್ತಾರೆ ನೂಪುರ ಶರ್ಮಾ ಮಾತನಾಡಿದ್ದರ ವಿರುದ್ದ ನೆನ್ನೆ ದೇಶಾದ್ಯಂತ ಪ್ರತಿಭಟನೆ ನಡೆದಿತ್ತು. ಇಂದು ದೇಶದಲ್ಲಿ ಶಾಂತ ಪರಿಸ್ಥಿತಿ ಇದ್ದರೂ, ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತೆ ಇದೆ. ಪಶ್ಚಿಮ ಬಂಗಾಳದ ಹೌರಾದಲ್ಲಿ ಇಂದು ಕೂಡ ಪ್ರತಿಭಟನೆ ಮುಂದುವರಿದಿದೆ. ಹೌರಾದಲ್ಲಿ ಮುಸ್ಲಿಂ ಸಮುದಾಯದ ಜನರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹೌರಾ ಪಂಚಲ್ ಪ್ರದೇಶದ ಸ್ಥಳೀಯ ಕ್ಲಬ್ ಗೆ ನುಗ್ಗಿ ದಾಂಧಲೆ ನಡೆಸಲು ಯತ್ನಿಸಿದಾಗ ಪೊಲೀಸರು ತಡೆದಿದ್ದಾರೆ. ಆಗ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದರು. ಪ್ರತಿಯಾಗಿ ಪೊಲೀಸರು ಗಾಳಿಯಲ್ಲಿ ಆಶ್ರುವಾಯು ಸಿಡಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಯತ್ನ ನಡೆಸಿದ್ದರು.
ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಹೌರಾದಲ್ಲಿ ಜೂನ್ 15ರವರೆಗೆ ಸೆಕ್ಷನ್ 144 ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಹೌರಾ ಉಪವಿಭಾಗದ ರೈಲ್ವೇ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಹೌರಾದಲ್ಲಿ ಘರ್ಷಣೆ ಸತತ ಎರಡನೇ ದಿನವೂ ಮುಂದುವರಿದಿರುವುದರ ಹಿಂದೆ ಕೆಲ ರಾಜಕೀಯ ಪಕ್ಷಗಳಿವೆ ಎಂದು ಸಿಎಂ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. ಆದರೇ, ಇದನ್ನು ಸಹಿಸಲು ಸಾಧ್ಯವಿಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುತ್ತೆ. ಇದು ಬಿಜೆಪಿಯ ಪಾಪದ ಕೆಲಸ, ಆದರೇ, ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆಕ್ರೋಶದಿಂದ ಟ್ವೀಟ್ ಮಾಡಿದ್ದಾರೆ.
ಹೌರಾಗೆ ಹೊರಟಿದ್ದ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತಾ ಮಜುಂದಾರ್ ರನ್ನು ಪೊಲೀಸರು ಬಂಧಿಸಿದ್ದಾರೆ. ಹಿಂಸಾಚಾರಪೀಡಿತ ಪ್ರದೇಶಕ್ಕೆ ರಾಜಕೀಯ ನಾಯಕರ ಭೇಟಿಯನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಹೌರಾದ ಪೊಲೀಸ್ ವರಿಷ್ಠಾಧಿಕಾರಿಯನ್ನು ಪಶ್ಚಿಮ ಬಂಗಾಳದ ಮಮತಾ ದೀದಿ ಸರ್ಕಾರ ಎತ್ತಂಗಡಿ ಮಾಡಿದೆ. ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಮಂಗಳವಾರವರೆಗೂ ವದಂತಿ ಹರಡದಂತೆ ತಡೆಯಲು ಇಂಟರ್ ನೆಟ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ರಾಂಚಿಯಲ್ಲಿ ನೆನ್ನೆ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಆಂಜನೇಯ ದೇವಾಲಯವನ್ನು ಒಡೆಯಲಾಗಿದೆ. ದೇವಾಲಯದ ಮೇಲೆ ಉದ್ರಿಕ್ತ ಜನರು ಕಲ್ಲುತೂರಾಟ ನಡೆಸಿದ್ದಾರೆ. ದೇವಾಲಯದ ಮೇಲೆ ಕಲ್ಲುತೂರಾಟ ನಡೆಸಿದ್ದನ್ನು ಖಂಡಿಸಿ ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ. ರಾಂಚಿಯ 12 ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸೆಕ್ಷನ್ 144 ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ರಾಂಚಿಯಲ್ಲಿ ನಾಳೆ ಬೆಳಿಗ್ಗೆಯವರೆಗೂ ಇಂಟರ್ ನೆಟ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ನೆನ್ನೆ ರಾಂಚಿಯಲ್ಲಿ ಗಲಭೆ ನಡೆದ ಸ್ಥಳಗಳ ಸಿಸಿಟಿವಿಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವಿಡಿಯೋ ಸಾಕ್ಷ್ಯದ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ.
ಇನ್ನೂ ಉತ್ತರಪ್ರದೇಶದ ವಿವಿಧ ಜಿಲ್ಲೆಯಲ್ಲಿ ನೆನ್ನೆ ನಡೆದ ಕಲ್ಲು ತೂರಾಟ ಪ್ರಕರಣಗಳಲ್ಲಿ 220 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಯಾಗ್ ರಾಜ್ ಹಿಂಸಾಚಾರ ಪ್ರಕರಣದಲ್ಲಿ 70 ಮಂದಿಯ ಹೆಸರುನ್ನು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಆದರೇ, ಎಫ್.ಐ.ಆರ್ ನಲ್ಲಿ ಉಲ್ಲೇಖ ಮಾಡದ 5 ಸಾವಿರ ಮಂದಿ ಆರೋಪಿಗಳಿದ್ದಾರೆ. ಅಂಥವರ ಮೇಲೆ ಗ್ಯಾಂಗ್ ಸ್ಟರ್ ಕಾಯಿದೆ, ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಯಾಗರಾಜ್ ಎಸ್‌ಎಸ್ಪಿ ಅಜಯ ಕುಮಾರ್ ಹೇಳಿದ್ದಾರೆ. ಪ್ರಯಾಗರಾಜ್ ಗಲಭೆಯ ಹಿಂದಿನ ಮಾಸ್ಟರ್ ಮೈಂಡ್ ಜಾವೇದ್ ಅಹ್ಮದ್ ರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆತನ ಅನಧಿಕೃತ ಕಟ್ಟಡವನ್ನು ಜೆಸಿಬಿ ಬಳಸಿ ಧ್ವಂಸಗೊಳಿಸಲಾಗಿದೆ.
ಒಟ್ಟಿನಲ್ಲಿ ನೂಪುರ ಶರ್ಮಾ ಹೇಳಿಕೆ ನೀಡಿದ 15 ದಿನದ ಬಳಿಕ ಭಾರತದಲ್ಲಿ ಭಾರಿ ಪ್ರತಿಭಟನೆಗಳು ನಡೆದಿವೆ. ಗಲ್ಪ್ ರಾಷ್ಟ್ರಗಳು ನೂಪುರ ಶರ್ಮಾ ಹೇಳಿಕೆ ವಿರೋಧಿಸಿ, ಖಂಡಿಸಿದ ಬಳಿಕ ಭಾರತದಲ್ಲಿ ದೊಡ್ಡ ಪ್ರತಿಭಟನೆ ನಡೆದಿರುವುದು ಗಮನಾರ್ಹ. ಗಲಭೆಗಳು ಪೂರ್ವನಿಯೋಜಿತವೇ, ಧಿಡೀರನೇ ನಡೆದವೇ, ಈ ಹಿಂದಿನ ಶಕ್ತಿಗಳು ಯಾರು ಎನ್ನುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:58 pm, Sat, 11 June 22