
ನವದೆಹಲಿ, ಮೇ 12: ‘‘ಯುದ್ಧ ಬಾಲಿವುಡ್ ಸಿನಿಮಾ ಅಲ್ಲ’’ ಎಂದು ಭಾರತೀಯ ಸೇನಾ ಮಾಜಿ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ(Manoj Mukund Naravane) ಹೇಳಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿ ಯಾವುದೇ ದುಸ್ಸಾಹಸಕ್ಕೆ ಕೈ ಹಾಕದಂತೆ ಭಾರತವು ಪಾಕಿಸ್ತಾನಕ್ಕೆ ಬಲವಾದ ಸಂದೇಶವನ್ನು ರವಾನಿಸಿದೆ. ಉಗ್ರರು ಮಾಡಿದ ಪಾಪಕ್ಕೆ ಬೆಲೆ ತೆತ್ತಿದ್ದಾರೆ ಎಂದು ನರವಾಣೆ ಹೇಳಿದರು.
ಯುದ್ಧವು ಬಾಲಿವುಡ್ ಸಿನಿಮಾ ಅಲ್ಲ, ಅದು ಎರಡು ದೇಶಗಳ ಗಂಭೀರ ವ್ಯವಹಾರ, ದಾಳಿಗಳಲ್ಲಿ ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದಾರೆ, ಯುವಕರು, ಮಕ್ಕಳೆಲ್ಲಾ ಶೆಲ್ ದಾಳಿಗೆ ಒಳಗಾಗಿದ್ದಾರೆ. ಯುದ್ಧಗಳು ಜನರನ್ನು ಹೇಗೆ ಆಘಾತಗೊಳಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ, ಯುದ್ಧದಿಂದ ವ್ಯವಹಾರದ ನಷ್ಟಗಳು ಕೂಡ ಸಂಭವಿಸಿವೆ ಎಂದರು.
ಯುದ್ಧದ ಆರ್ಥಿಕ ನಷ್ಟದ ಬಗ್ಗೆ ಮಾತನಾಡುತ್ತಾ, ಲಕ್ಷಾಂತರ ಡಾಲರ್ ಮೌಲ್ಯದ ಮಿಲಿಟರಿ ಉಪಕರಣಗಳ ನಷ್ಟ ಮತ್ತು ಯುದ್ಧಗಳು \ ಆರ್ಥಿಕ ಹೊರೆಯನ್ನು ಹೇಗೆ ಉಂಟು ಮಾಡುತ್ತವೆ ಎಂಬುದರ ಬಗ್ಗೆ ಹೇಳಿದರು. ಸಂಘರ್ಷವನ್ನು ತಪ್ಪಿಸಲು ರಕ್ಷಣೆ ಮತ್ತು ಮಿಲಿಟರಿಯಲ್ಲಿ ಹೂಡಿಕೆ ಮಾಡುವುದು ಮುಖ್ಯ.
ಮತ್ತಷ್ಟು ಓದಿ: ಭಾರತ-ಪಾಕ್ ಕದನ ವಿರಾಮದ ಬಳಿಕ, ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಟ್ರೋಲ್ ಆಗಿದ್ದೇಕೆ?
ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯಕ್ಕೆ ವಿರುದ್ಧವಾಗಿ ರಕ್ಷಣೆಗೆ ಎಷ್ಟು ಹಣ ಖರ್ಚು ಮಾಡಬೇಕೆಂಬ ಚರ್ಚೆ ಬಹಳ ಹಿಂದಿನಿಂದಲೂ ಇದೆ. ರಕ್ಷಣಾ ವೆಚ್ಚವು ವ್ಯರ್ಥವಾಗುವುದಿಲ್ಲ. ಬದಲಾಗಿ ದೇಶಕ್ಕೆ ಅಗತ್ಯವಿದೆ. ಯುದ್ಧವು ದುಬಾರಿಯಾಗಿದೆ ಮತ್ತು ಅದರ ಪರಿಣಾಮಗಳು ಇನ್ನೂ ಹೆಚ್ಚು ದುಬಾರಿಯಾಗಿದೆ. ಆದ್ದರಿಂದ, ಅಂತಹ ಹೂಡಿಕೆ ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು.
ಭಾರತ ಪಾಕಿಸ್ತಾನದ ವಿರುದ್ಧ ಏಕೆ ಸಂಪೂರ್ಣ ಯುದ್ಧಕ್ಕೆ ಹೋಗಲಿಲ್ಲ ಎಂಬ ಚರ್ಚೆಗೆ ಪ್ರತಿಕ್ರಿಯಿಸುತ್ತಾ, ಯುದ್ಧದ ಸಮಯದಲ್ಲಿ ರಾಜತಾಂತ್ರಿಕತೆಯ ಅಗತ್ಯವನ್ನು ಜನರಲ್ ನರವಾಣೆ ಒತ್ತಿ ಹೇಳಿದರು. ಯುದ್ಧ ಮಾಡುವುದು ಅವರ ಮೊದಲ ಆಯ್ಕೆಯಾಗಿರುವುದಿಲ್ಲ ಮತ್ತು ರಾಜತಾಂತ್ರಿಕತೆಯು ಮೊದಲ ವಿಧಾನವಾಗಿರಬೇಕು ಎಂದು ಅವರು ಹೇಳಿದರು. ಒಬ್ಬ ಮಿಲಿಟರಿ ವ್ಯಕ್ತಿಯಾಗಿ, ಆದೇಶ ಬಂದರೆ, ನಾನು ಯುದ್ಧಕ್ಕೆ ಹೋಗುತ್ತೇನೆ. ಆದರೆ ಅದು ನನ್ನ ಮೊದಲ ಆಯ್ಕೆಯಾಗಿರುವುದಿಲ್ಲ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ