‘ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ, ಮಾತುಕತೆಗೆ ಬನ್ನಿ..’-ಮಳೆಯಿಂದ ಸಂಕಷ್ಟಕ್ಕೀಡಾದ ಪ್ರತಿಭಟನಾ ನಿರತ ರೈತರಿಂದ ಕೇಂದ್ರ ಸರ್ಕಾರಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ನಿಜಕ್ಕೂ ರೈತರ ಬಗ್ಗೆ ಕಾಳಜಿ ಇದ್ದರೆ, ಅವರ ಕಲ್ಯಾಣವನ್ನು ಬಯಸುತ್ತಿದ್ದರೆ ಕೂಡಲೇ ನಮ್ಮೊಂದಿಗೆ ಮಾತುಕತೆಗೆ ಬರಬೇಕು. ನಮ್ಮ ಬೇಡಿಕೆಯನ್ನು ನೆರವೇರಿಸಬೇಕು ಎಂದೂ ರೈತರು ಆಗ್ರಹಿಸಿದ್ದಾರೆ.
ಹೆಚ್ಚುತ್ತಿರುವ ಕೊರೊನಾ.. ಒಂದೇ ಸಮ ಸುರಿಯುತ್ತಿರುವ ಮಳೆಯ ನಡುವೆ ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ಮುಂದುವರಿದಿದೆ. ಕೇಂದ್ರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತು ತಮ್ಮ ಹೋರಾಟವನ್ನು ನಡೆಸಿದ್ದಾರೆ. ಆದರೆ ಇದೀಗ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಸಂಕಷ್ಟಕ್ಕೀಡಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ, ಮಾತುಕತೆಗೆ ಮುಂದಾಗಿ..ನಮ್ಮ ಬೇಡಿಕೆಯನ್ನು ಒಪ್ಪಿಕೊಳ್ಳಿ ಎಂದು ಹೇಳಿದೆ.
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್, ಉತ್ತರಪ್ರದೇಶ, ಹರ್ಯಾಣ ರಾಜ್ಯಗಳ ಸಾವಿರಾರು ರೈತರು ದೆಹಲಿ ಮೂರು ಗಡಿಗಳಾದ ಸಿಂಘು, ಟಿಕ್ರಿ, ಘಾಜಿಪುರ್ಗಳಲ್ಲಿ ಕಳೆದ ಆರು ತಿಂಗಳಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಕೇಂದ್ರದೊಂದಿಗೆ ಹಲವು ಸುತ್ತಿನ ಮಾತುಕತೆ ನಡೆದಿದ್ದು, ಸದ್ಯಕ್ಕೆ ಕೃಷಿ ಕಾಯ್ದೆಗಳನ್ನು ಜಾರಿ ಮಾಡುವುದಿಲ್ಲ ಎಂದೂ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಆದರೆ ಆ ಮೂರು ಕೃಷಿ ಕಾಯ್ದೆಗಳನ್ನೂ ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ರೈತರು ಹೋರಾಟವನ್ನು ಮುಂದುವರಿಸಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದಾಗಿನಿಂದ ಇಲ್ಲಿಯವರೆಗೆ ಸುಮಾರು 470 ರೈತರು ಸಾವನ್ನಪ್ಪಿದ್ದಾರೆ. ಇಲ್ಲಿರುವ ಅನೇಕರು ಪ್ರತಿಭಟನೆ ನಡೆಸುತ್ತ ತಮ್ಮ ಕೆಲಸ ಕಳೆದುಕೊಂಡವರು ಇದ್ದಾರೆ. ಶಿಕ್ಷಣ ಮೊಟಕುಗೊಳಿಸಿದವರಿದ್ದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ನಮ್ಮೆಡೆಗೆ ಲಕ್ಷ್ಯ ಹಾಕುತ್ತಿಲ್ಲ. ಇದು ಅಮಾನವೀಯ ವರ್ತನೆ. ಅನ್ನದಾತರಡೆಗೆ ಇಷ್ಟು ನಿಷ್ಕಾಳಜಿ, ನಿರ್ಲಕ್ಷ್ಯ ಸರಿಯಲ್ಲ ಎಂದು ಕಿಸಾನ್ ಮೋರ್ಚಾ ಸಂಘಟನೆ ಹೇಳಿದೆ.
ಕೇಂದ್ರ ಸರ್ಕಾರಕ್ಕೆ ನಿಜಕ್ಕೂ ರೈತರ ಬಗ್ಗೆ ಕಾಳಜಿ ಇದ್ದರೆ, ಅವರ ಕಲ್ಯಾಣವನ್ನು ಬಯಸುತ್ತಿದ್ದರೆ ಕೂಡಲೇ ನಮ್ಮೊಂದಿಗೆ ಮಾತುಕತೆಗೆ ಬರಬೇಕು. ನಮ್ಮ ಬೇಡಿಕೆಯನ್ನು ನೆರವೇರಿಸಬೇಕು ಎಂದೂ ಹೇಳಿದೆ. 12-18ತಿಂಗಳವರೆಗೆ ಮೂರು ಕೃಷಿ ಕಾಯ್ದೆಗಳನ್ನು ಅಮಾನತಿನಲ್ಲಿ ಇಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದ್ದರೂ ಅದನ್ನು ರೈತರು ತಿರಸ್ಕರಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ. ಇದೀಗ ತೌಕ್ತೆ ಚಂಡಮಾರುತದ ಪ್ರಭಾವದಿಂದ ದೆಹಲಿ ಸುತ್ತಮುತ್ತ ಕೂಡ ಸಿಕ್ಕಾಪಟೆ ಮಳೆಯಾಗುತ್ತಿದೆ. ಇದರಿಂದ ಪ್ರತಿಭಟನಾ ನಿರತ ರೈತರು ಸಂಕಷ್ಟಕ್ಕೀಡಾಗುವಂತಾಗಿದೆ.
ನಿರ್ದೇಶಕರಿಗೂ ಪ್ರೋತ್ಸಾಹ ಧನ ನೀಡಿ; ಸರ್ಕಾರಕ್ಕೆ ಮನವಿ ಮಾಡಿದ ಟೆಶಿ ವೆಂಕಟೇಶ್
Formers who protest in delhi borders urge the central government to initiate talks and accept demands
Published On - 4:27 pm, Thu, 20 May 21