‘ಸಭೆಯಲ್ಲಿ ನಾವೆಲ್ಲ ಅವರ ಕೈಗೊಂಬೆಗಳಂತೆ ಕುಳಿತಿರಬೇಕು..ಇದು ದೊಡ್ಡ ಅವಮಾನ’-ಪ್ರಧಾನಿ ಮೋದಿ ವಿರುದ್ಧ ದೀದಿ ಅಸಮಾಧಾನ
ಈ ತಿಂಗಳ ಪ್ರಾರಂಭದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್ ಕೂಡ ಇದೇ ಆರೋಪ ಮಾಡಿದ್ದರು. ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳಿಗೆ ಮಾತಾಡಲು ಅವಕಾಶ ಕೊಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆ ಪೂರ್ತಿ ವಿಫಲವಾಗಿದೆ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನನ್ನನ್ನೂ ಸೇರಿಸಿ, ಉಳಿದ ಯಾವುದೇ ಮುಖ್ಯಮಂತ್ರಿಗಳಿಗೂ ಮಾತನಾಡಲು ಅವಕಾಶ ಕೊಡಲಿಲ್ಲ ಎಂದು ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೊವಿಡ್ 19 ಪರಿಸ್ಥಿತಿಯನ್ನು ಅವಲೋಕಿಸಲು ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಮಾತನಾಡಿದ ಮಮತಾ ಬ್ಯಾನರ್ಜಿ, ನಾವೆಲ್ಲರೂ ಅವರ ಕೈಗೊಂಬೆಗಳಂತೆ ಕುಳಿತಿದ್ದೆವು. ದೇಶದಲ್ಲಿ ಸರ್ವಾಧಿಕಾರ ಜಾರಿಯಲ್ಲಿದೆ ಎಂಬುದಕ್ಕೇ ಇದೇ ಸಾಕ್ಷಿ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಆಯಾ ರಾಜ್ಯದ ಕೊವಿಡ್ 19 ಪರಿಸ್ಥಿತಿ, ಬೇಕು-ಬೇಡಗಳನ್ನು ಗಮನಿಸಲೆಂದೇ ಸಭೆ ಕರೆಯುತ್ತಾರೆ. ಆದರೆ ನಮಗೆ ಯಾರಿಗೂ ಮಾತನಾಡಲು ಅವಕಾಶ ಮಾಡಿಕೊಡುವುದಿಲ್ಲ. ಎಲ್ಲರೂ ಸುಮ್ಮನೆ ಕುಳಿತಿರಬೇಕು. ಹೀಗಾದರೆ ನಾವು ನಮ್ಮ ಅಗತ್ಯಗಳನ್ನು ಹೇಳುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿಯವರ ಈ ಕ್ರಮದಿಂದ ನಮಗೆ ಅವಮಾನವಾಗಿದೆ. ಅವರಲ್ಲಿ ಯಾವುದೋ ಒಂದು ಅಭದ್ರತೆ ಕಾಡುತ್ತಿದೆ. ಮುಖ್ಯಮಂತ್ರಿಗಳನ್ನು ಮಾತನಾಡಲೂ ಬಿಡದಷ್ಟು ಭಯ ಅವರಿಗೆ ಯಾಕೆ ಎಂದು ಗೊತ್ತಾಗುತ್ತಿಲ್ಲ ಎಂದೂ ದೀದಿ ಹೇಳಿದ್ದಾರೆ.
ದೇಶದಲ್ಲಿ ಉಂಟಾಗಿರುವ ಕೊವಿಡ್ 19 ಪರಿಸ್ಥಿತಿಯನ್ನು ಪ್ರಧಾನಿ ಮೋದಿ ತೀರ ಹಗುರವಾಗಿ ಪರಿಗಣಿಸಿದ್ದಾರೆ. ಲಸಿಕೆ, ಆಮ್ಲಜನಕ, ಔಷಧಿಗಳ ಬಗ್ಗೆ ರಾಜ್ಯಗಳು ಕೇಳುವ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.
ಈ ತಿಂಗಳ ಪ್ರಾರಂಭದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೆನ್ ಕೂಡ ಇದೇ ಆರೋಪ ಮಾಡಿದ್ದರು. ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳಿಗೆ ಮಾತಾಡಲು ಅವಕಾಶ ಕೊಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ರೆಡ್ಡಿ, ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಕೊವಿಡ್ ವಿರುದ್ಧ ಹೋರಾಟದಲ್ಲಿ ನಾವೆಲ್ಲರೂ ಪಕ್ಷಭೇದ ಮರೆತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಿಲ್ಲೋಣ ಎಂದು ಬುದ್ಧಿ ಮಾತು ಹೇಳಿದ್ದರು.
ಇದನ್ನೂ ಓದಿ: ಕೊರೊನಾ ಕಾಲದಲ್ಲಿ ಮಾರ್ಗಸೂಚಿ ಉಲ್ಲಂಘನೆ: ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ FIR ಸಾಧ್ಯತೆ- ಹೈಕೋರ್ಟ್ ಅಭಿಪ್ರಾಯ
ಅಗತ್ಯವಿರೋದು 4.55 ಲಕ್ಷ ಕೊವ್ಯಾಕ್ಸಿನ್, ಲಭ್ಯವಿರೋದು 97 ಸಾವಿರ ಮಾತ್ರ; ಏನ್ಮಾಡ್ತೀರಿ? ಹೈಕೋರ್ಟ್ ಪ್ರಶ್ನೆ
(Feel insulted says West Bengal chief minister Mamata Banerjee after Covid 19 meetin with PM Narendra Modi)
Published On - 3:17 pm, Thu, 20 May 21