ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಜೌರಿ ಸೆಕ್ಟರ್‌ನ ಪೂಂಚ್‌ನಲ್ಲಿ (Poonch) ಇಂದು (ಗುರುವಾರ) ಸೇನಾ ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ (Terrorists attack) ಐವರು ಯೋಧರು ಹುತಾತ್ಮರಾಗಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಿಂಬರ್ ಗಲಿ ಪ್ರದೇಶದ ಬಳಿ ಮಧ್ಯಾಹ್ನ 3 ಗಂಟೆಗೆ ಭಯೋತ್ಪಾದಕರು ವಾಹನದ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಗ್ರೆನೇಡ್ ದಾಳಿಯಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಸೇನೆ ತಿಳಿಸಿದೆ. ಅಪರಿಚಿತ ಭಯೋತ್ಪಾದಕರು ಸೇನಾ ವಾಹನದ ಮೇಲೆ ಗುಂಡು ಹಾರಿಸಿದ್ದಾರೆ.ಭಾರೀ ಮಳೆ ಮತ್ತು ಪ್ರದೇಶದಲ್ಲಿ ಕಡಿಮೆ ಗೋಚರತೆಯ ಲಾಭವನ್ನು ಪಡೆದು ಅವರು ಈ ಕೃತ್ಯವೆಸಗಿದ್ದಾರೆ ಎಂದು ಸೇನಾ ಪ್ರಧಾನ ಕಚೇರಿ, ನಾರ್ದರ್ನ್ ಕಮಾಂಡ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಭಯೋತ್ಪಾದಕರು ಗ್ರೆನೇಡ್‌ಗಳನ್ನು ಬಳಸಿರುವ ಸಾಧ್ಯತೆ ಇದ್ದು, ಇದರಿಂದ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅದು ಹೇಳಿದೆ.
VIDEO | Indian Army vehicle catches fire in Jammu and Kashmir’s Poonch sector. More details are awaited. pic.twitter.com/E4gyvthM54
— Press Trust of India (@PTI_News) April 20, 2023
ಈ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದ ರಾಷ್ಟ್ರೀಯ ರೈಫಲ್ಸ್ ಘಟಕದ ಐವರು ಸಿಬ್ಬಂದಿ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸೇನೆ ತಿಳಿಸಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೋರ್ವ ಯೋಧನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಕೋರರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.
ಏತನ್ಮಧ್ಯೆ, ಜೈಶ್ ಬೆಂಬಲಿತ ಭಯೋತ್ಪಾದಕ ಗುಂಪು ಪೀಪಲ್ಸ್ ಆಂಟಿ ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಮೂಲಗಳು ತಿಳಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಭಯೋತ್ಪಾದಕ ದಾಳಿಯ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮಾಹಿತಿ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಐವರು ಸೇನಾ ಯೋಧರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಪೂಂಚ್‌ನಲ್ಲಿ ನಡೆದ ದುರಂತ ಘಟನೆಯಲ್ಲಿ ಕೆಚ್ಚೆದೆಯ ಸೇನಾ ಸಿಬ್ಬಂದಿಯ ಸಾವಿನಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ರಾಷ್ಟ್ರಕ್ಕೆ ಅವರ ಸೇವೆಯನ್ನು ಎಂದಿಗೂ ಮರೆಯಲಾಗುವುದಿಲ್ಲ. ನನ್ನ ಪ್ರಾರ್ಥನೆಗಳು ದುಃಖಿತ ಕುಟುಂಬದೊಂದಿಗೆ ಇದೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಹೇಳಿದ್ದಾರೆ.
Anguished by the tragedy in Poonch District (J&K), where the Indian Army has lost its brave soldiers after a truck caught fire. In this tragic hour, my thoughts are with the bereaved families.
— Rajnath Singh (@rajnathsingh) April 20, 2023
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಟ್ರಕ್ ಗೆ ಬೆಂಕಿ ಹಚ್ಚಿಕೊಂಡ ದುರ್ಘಟನೆಯಲ್ಲಿ ಭಾರತೀಯ ಸೇನೆಯ ಯೋಧರನ್ನು ಕಳೆದುಕೊಂಡಿದ್ದು ದುಃಖವಾಗಿದೆ. ಈ ಕ್ಷಣದಲ್ಲಿ ದುಃಖಿತ ಕುಟುಂಬಗಳ ಜತೆ ನನ್ನ ಪ್ರಾರ್ಥನೆ ಇರುತ್ತದೆ ಎಂದು ರಾಜನಾಥ್ ಸಿಂಗ್ ಸಂತಾಪ ಸೂಚಿಸಿದ್ದಾರೆ.
ಗೋವಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಭೆಗಾಗಿ ತನ್ನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಅವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಾಕಿಸ್ತಾನ ಘೋಷಿಸಿದ ದಿನವೇ ಭಯೋತ್ಪಾದಕ ದಾಳಿ ನಡೆದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಳೆದ ವಾರ ಕೇಂದ್ರಾಡಳಿತ ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:23 pm, Thu, 20 April 23