ಅಮೆರಿಕದಲ್ಲಿ ಭೀಕರ ಕಾರ್ ಅಪಘಾತ; ಭಾರತ ಮೂಲದ ಒಂದೇ ಕುಟುಂಬದ ನಾಲ್ವರ ಸಾವು
Indian origin family members killed in accident in US: ಅಮೆರಿಕದ ಡಾಲಸ್ನಲ್ಲಿ ವಾಸವಾಗಿದ್ದ ಹೈದರಾಬಾದ್ ಮೂಲದ ಕುಟುಂಬದ ನಾಲ್ವರು ವ್ಯಕ್ತಿಗಳು ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ. ಅಟ್ಲಾಂಟಾದಿಂದ ಡಾಲಸ್ಗೆ ಕಾರಿನಲ್ಲಿ ಬರುತ್ತಿದ್ದಾಗ ಅಲಬಾಮದ ಗ್ರೀನ್ ಕೌಂಟಿ ಬಳಿ ಅಪಘಾತವಾಗಿದೆ. ವೇಗವಾಗಿ ಬಂದ ಮಿನಿ ಟ್ರಕ್ವೊಂದು ನೇರವಾಗಿ ಗುದ್ದಿದಾಗ ಇವರ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.

ನವದೆಹಲಿ, ಜುಲೈ 8: ಅಮೆರಿಕದ ಅಲಬಾಮ ರಾಜ್ಯದ ಗ್ರೀನ್ ಕೌಂಟಿಯಲ್ಲಿ (Green county, Alabama) ಕಳೆದ ವಾರಾಂತ್ಯದಲ್ಲಿ ಸಂಭವಿಸಿದ ಭೀಕರ ಕಾರ್ ಅಪಘಾತದಲ್ಲಿ ಭಾರತ ಮೂಲದ ನಾಲ್ವರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಎಲ್ಲಾ ನಾಲ್ವರೂ ಕೂಡ ಹೈದರಾಬಾದ್ ಮೂಲದವರಾಗಿದ್ದು, ಒಂದೇ ಕುಟುಂಬಕ್ಕೆ ಸೇರಿದವರೆನ್ನಲಾಗಿದೆ. ಅಟ್ಲಾಂಟಾದಲ್ಲಿ ಸಂಬಂಧಿಕರನ್ನು ಭೇಟಿ ಮಾಡಿ ಡಾಲಸ್ನಲ್ಲಿರುವ ತಮ್ಮ ನಿವಾಸಕ್ಕೆ ಮರಳುತ್ತಿರುವಾಗ, ಮಾರ್ಗಮಧ್ಯೆ ಶನಿವಾರ ರಾತ್ರಿ ಈ ಅಪಘಾತ ಸಂಭವಿಸಿದೆ.
ವೆಂಕಟ್ ಬೇಜುಗಮ್, ಅವರ ಪತ್ನಿ ತೇಜಸ್ವಿನಿ ಚೊಲ್ಲೇತಿ, ಹಾಗೂ ಅವರ ಇಬ್ಬರು ಮಕ್ಕಳಾದ ಸಿದ್ಧಾರ್ಥ್ ಮತ್ತು ಮೃದಾ ಬೇಜುಗಮ್ ಅವರು ಮೃತ ನಾಲ್ವರು.
ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ನಿಂದ ಸದ್ಯ ಬಚಾವಾದ ಭಾರತ; ಅಮೆರಿಕದಿಂದ 14 ದೇಶಗಳ ಮೇಲೆ ಆಮದು ಸುಂಕ ಹೇರಿಕೆ
ಗ್ರೀನ್ ಕೌಂಟಿ ಬಳಿ ಈ ನಾಲ್ವರು ಕಾರಿನಲ್ಲಿ ಹೋಗುತ್ತಿದ್ದಾಗ ಮಿನಿ ಟ್ರಕ್ವೊಂದು ನಿಗದಿತ ಲೇನ್ ಬಿಟ್ಟು ಬೇರೆ ಲೇನ್ನಲ್ಲಿ ಬಂದು ಇವರ ಕಾರಿಗೆ ಗುದ್ದಿದೆ. ಇದರ ಪರಿಣಾಮವಾಗಿ ಕಾರು ನಜ್ಜುಗುಜ್ಜಾಗಿ ಬೆಂಕಿ ಹೊತ್ತಿಕೊಂಡಿದೆ. ಎಲ್ಲಾ ನಾಲ್ವರೂ ಕೂಡ ಸುಟ್ಟು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತೀವ್ರ ಮಟ್ಟದಲ್ಲಿ ದೇಹ ಸುಟ್ಟಿರುವುದರಿಂದ ಮೇಲ್ನೋಟಕ್ಕೆ ಚಹರೆ ಗುರುತು ಹಿಡಿಯಲು ಸಾಧ್ಯವಾಗಿಲ್ಲ. ಡಿಎನ್ಎ ಪರೀಕ್ಷೆ, ಹಲ್ಲಿನ ಪರೀಕ್ಷೆ ಸೇರಿದಂತೆ ಫೋರೆನ್ಸಿಕ್ ಪರೀಕ್ಷೆ ನಡೆಸಲಾಗುತ್ತಿದ್ದು, ಈ ನಾಲ್ವರ ಗುರುತು ಖಚಿತವಾದ ಬಳಿಕ ಸಂಬಂಧಿಕರಿಗೆ ಮೃತದೇಹಗಳನ್ನು ಒಪ್ಪಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ವಾಮಾಚಾರದ ಆರೋಪ; ಬಿಹಾರದ ಪುರ್ನಿಯಾದಲ್ಲಿ ಒಂದೇ ಕುಟುಂಬದ ಐವರ ಸಜೀವ ದಹನ
ವೆಂಕಟ್ ಬೇಜುಗಮ್ ಕುಟುಂಬದವರು ಡಾಲಸ್ನ ಔಬ್ರೇ ಪಟ್ಟಣದ ಸಟ್ಟನ್ ಫೀಲ್ಡ್ಸ್ ಎಂಬಲ್ಲಿ ವಾಸವಿದ್ದದರು. ಟೀಮ್ ಏಡ್ ಎನ್ನುವ ಸಮಾಜ ಸೇವಾ ಸಂಸ್ಥೆಯು ಮೃತ ಕುಟುಂಬದ ಸಂಬಂಧಿಕರ ನೆರವಿಗೆ ಧಾವಿಸಿದ್ದು, ಮೃತದೇಹಗಳನ್ನು ಹಿಂಪಡೆಯುವ ಕಾನೂನು ಕ್ರಮಗಳಲ್ಲಿ ಸಹಾಯವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:51 am, Tue, 8 July 25




