ವಾಕ್ ಸ್ವಾತಂತ್ರ್ಯದ ದುರುಪಯೋಗ; ಪ್ರಧಾನಿ ಕುರಿತ ಪೋಸ್ಟ್‌ಗೆ ಕಾರ್ಟೂನಿಸ್ಟ್ಗೆ ಸುಪ್ರೀಂ ಕೋರ್ಟ್ ತರಾಟೆ
ವ್ಯಂಗ್ಯಚಿತ್ರಕಾರ ಹೇಮಂತ್ ಮಾಳವೀಯ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ. ವ್ಯಂಗ್ಯಚಿತ್ರಕಾರರು ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸೇರಿದಂತೆ ಕೆಲವು ಕಲಾವಿದರು ವಾಕ್ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕೋರ್ಟ್ ಹೇಳಿದೆ. ಕಾರ್ಟೂನಿಸ್ಟ್ ಒಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ ಎಂಬ ಆರೋಪಕ್ಕೆ ಸುಪ್ರೀಂ ಕೋರ್ಟ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಿಯವರ ಕುರಿತಾದ ಪೋಸ್ಟ್‌ಗಳಿಗೆ ಕ್ಷಮೆ ಯಾಚಿಸಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ನವದೆಹಲಿ, ಜುಲೈ 14: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅವರ ಆಕ್ಷೇಪಾರ್ಹ ವ್ಯಂಗ್ಯಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ವ್ಯಂಗ್ಯಚಿತ್ರಕಾರ ಹೇಮಂತ್ ಮಾಳವೀಯ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ವನ್ನು ಗುರಿಯಾಗಿಸಿಕೊಂಡು ಅವಮಾನಕಾರಿಯಾದ ವ್ಯಂಗ್ಯಚಿತ್ರ ರಚಿಸಿದ್ದಕ್ಕಾಗಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಹೇಮಂತ್ ಮಾಳವೀಯ ಎಂಬ ಕಾರ್ಟೂನಿಸ್ಟ್ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು “ಅವರಲ್ಲಿ ಇನ್ನೂ ಪ್ರಬುದ್ಧತೆ ಇಲ್ಲ. ಇದು ನಿಜಕ್ಕೂ ಉದ್ರಿಕ್ತವಾಗಿದೆ. ವಾಕ್ ಸ್ವಾತಂತ್ರ್ಯವನ್ನು ಈ ವ್ಯಂಗ್ಯಚಿತ್ರಕಾರರು, ಸ್ಟ್ಯಾಂಡ್-ಅಪ್ ಹಾಸ್ಯನಟರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.
ಹೇಮಂತ್ ಮಾಳವೀಯ ಅವರನ್ನು ಬಂಧಿಸದಂತೆ ಯಾವುದೇ ಮಧ್ಯಂತರ ಆದೇಶವನ್ನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಜುಲೈ 15ರಂದು ಹೆಚ್ಚಿನ ವಿಚಾರಣೆಗೆ ಈ ಪ್ರಕರಣವನ್ನು ಮುಂದೂಡಿತು. ಇದಕ್ಕೂ ಮೊದಲು ಜುಲೈ 3ರಂದು ಮಧ್ಯಪ್ರದೇಶದ ಹೈಕೋರ್ಟ್ ಹೇಮಂತ್ ಮಾಳವೀಯ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಅವರು “ವಾಕ್ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ” ಎಂದು ಕೋರ್ಟ್ ಟೀಕಿಸಿತ್ತು.
ಇದನ್ನೂ ಓದಿ: ಭಾರತಕ್ಕೆ ಇನ್ನೇನೂ ಮಾಡಲು ಸಾಧ್ಯವಿಲ್ಲ; ನಿಮಿಷಾ ಪ್ರಿಯಾ ಮರಣದಂಡನೆ ಕುರಿತು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಮಂತ್ ಮಾಳವೀಯ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಕಾರ್ಟೂನ್ ಅನ್ನು ಮೂಲತಃ COVID-19 ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಕಟಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಅವಧಿಯಲ್ಲಿ ಲಸಿಕೆ ಸುರಕ್ಷತೆಯ ಬಗ್ಗೆ ವ್ಯಾಪಕ ತಪ್ಪು ಮಾಹಿತಿ ಮತ್ತು ಸಾರ್ವಜನಿಕ ಆತಂಕವಿತ್ತು. ಕಾರ್ಟೂನ್ ಒಂದು ರೀತಿಯ ವಿಡಂಬನಾತ್ಮಕ ಸಾಮಾಜಿಕ ವ್ಯಾಖ್ಯಾನವಾಗಿದ್ದು, ಸಂಪೂರ್ಣ ಕ್ಲಿನಿಕಲ್ ಪ್ರಯೋಗಗಳ ಕೊರತೆಯ ಹೊರತಾಗಿಯೂ ಕೆಲವು ಲಸಿಕೆಗಳನ್ನು ಸುರಕ್ಷಿತ ನೀರಿಗೆ ಹೋಲಿಸುವ ಸಾರ್ವಜನಿಕ ಹೇಳಿಕೆಗಳನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ ಎಂದು ಅವರು ವಾದಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:50 pm, Mon, 14 July 25




