
ನವದೆಹಲಿ, ಅಕ್ಟೋಬರ್ 18: ಆಹಾರ ಉತ್ಪನ್ನಗಳ ಪ್ಯಾಕೆಟ್ ಮೇಲೆ ಏನು ಬರೆಯಲಾಗಿದೆ ಎಂಬುದನ್ನು ನಂಬಿ ಗ್ರಾಹಕರು ಖರೀದಿ ಮಾಡುತ್ತಾರೆ. ಆದರೆ ಉತ್ಪನ್ನಗಳ ಬಗ್ಗೆ ನೀಡುವ ಕೆಲವು ಜಾಹೀರಾತುಗಳು ಮತ್ತು ಆರೋಗ್ಯದ ಭರವಸೆಗಳು ನಿಜವೇ? ಈ ಪ್ರಶ್ನೆ ಈಗ ಎದ್ದಿದೆ. ಹಾರ್ಲಿಕ್ಸ್, ನೆಸ್ಕೆಫೆ ಸೇರಿದಂತೆ ಜನಪ್ರಿಯ ಉತ್ಪನ್ನಗಳ ಲೇಬಲ್ ಹಾಗೂ ಜಾಹೀರಾತುಗಳಲ್ಲಿ ಗ್ರಾಹಕರನ್ನು ದಾರಿತಪ್ಪಿಸುವ ವಿಚಾರಗಳಿವೆ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಎಫ್ಎಸ್ಎಸ್ಎಐ, ನೆಸ್ಲೆ ಇಂಡಿಯಾ ಮತ್ತು ಹಿಂದೂಸ್ತಾನ್ ಯೂನಿಲಿವರ್‌ಗೆ ಶೋಕಾಸ್ ನೋಟಿಸ್ ನೀಡಿದೆ.
ಆಹಾರ ಉತ್ಪನ್ನಗಳ ಪ್ಯಾಕೆಟ್‌ಗಳು ಮತ್ತು ಆನ್‌ಲೈನ್ ಜಾಹೀರಾತುಗಳಲ್ಲಿ ನೀಡುವ ಆರೋಗ್ಯದ ಭರವಸೆಗಳ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಪರಿಶೀಲನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ನೆಸ್ಲೆ ಇಂಡಿಯಾ ಮತ್ತು ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL) ಕಂಪನಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಹಾರ್ಲಿಕ್ಸ್‌ನ ಕೆಲವು ಪೌಷ್ಟಿಕ ಪಾನೀಯಗಳು, ನೆಸ್ಕೆಫೆಯ ರೆಡಿ-ಟು-ಡ್ರಿಂಕ್ ಕಾಫಿ ಉತ್ಪನ್ನಗಳು ಹಾಗೂ ನೆಸ್ಲೆಯ ವೈದ್ಯಕೀಯ ಆಹಾರ ಉತ್ಪನ್ನಗಳ ಲೇಬಲ್ ಮತ್ತು ಜಾಹೀರಾತುಗಳ ಬಗ್ಗೆ ಪ್ರಾಧಿಕಾರ ಆಕ್ಷೇಪ ವ್ಯಕ್ತಪಡಿಸಿದೆ. ಶೋಕಾಸ್ ನೋಟಿಸ್ ಎಂದರೆ ಏನು? ನಿಯಮ ಉಲ್ಲಂಘನೆ ನಡೆದಿದೆ ಎಂಬ ಅನುಮಾನವಿದ್ದಾಗ, ಸಂಬಂಧಪಟ್ಟ ಸಂಸ್ಥೆಯಿಂದ ಅದರ ಬಗ್ಗೆ ಅಧಿಕೃತ ವಿವರಣೆ ಮತ್ತು ದಾಖಲೆಗಳನ್ನು ಕೇಳುವುದು. ಇದು ಅಂತಿಮ ಶಿಕ್ಷೆಯಲ್ಲ, ಕಂಪನಿಗಳ ಉತ್ತರ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಇದನ್ನೂ ಓದಿ: ದೊಡ್ಲ ಡೇರಿಯ ಫುಲ್ ಕ್ರೀಮ್ ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ ಪತ್ತೆ: ಕಾನೂನು ಕ್ರಮಕ್ಕೆ ಸೂಚನೆ
ಎಚ್ಯುಎಲ್ಗೆ ಸೇರಿದ ಹಾರ್ಲಿಕ್ಸ್ ವುಮೆನ್ಸ್ ಪ್ಲಸ್ ಚಾಕೊಲೇಟ್ ಉತ್ಪನ್ನದಲ್ಲಿ ಮಾಲ್ಟೋಡೆಕ್ಸ್ಟ್ರಿನ್ ಎಂಬ ಕಾರ್ಬೋಹೈಡ್ರೇಟ್ ಅಂಶವಿದೆ. ಆದರೂ ಪ್ಯಾಕೆಟ್ ಮೇಲೆ ‘ಸಕ್ಕರೆ ಸೇರಿಸಿಲ್ಲ’ ಎಂದು ಹೇಳಿರುವುದಕ್ಕೆ FSSAI ಆಕ್ಷೇಪಿಸಿದೆ. ಇದರ ಜೊತೆಗೆ, ಹಾರ್ಲಿಕ್ಸ್ ಉತ್ಪನ್ನಗಳು ಆರು ತಿಂಗಳಲ್ಲಿ ಮೂಳೆಗಳ ಬಲ ಹೆಚ್ಚಿಸುತ್ತವೆ, ಸ್ನಾಯುಗಳನ್ನು ಆರೋಗ್ಯಕರವಾಗಿಡುತ್ತವೆ ಎಂಬಂತಹ ಹೇಳಿಕೆಗಳಿಗೆ ಸೂಕ್ತ ಆಧಾರವಿದೆಯೇ ಎಂಬುದನ್ನೂ ಪ್ರಾಧಿಕಾರ ಪ್ರಶ್ನಿಸಿದೆ.
ಹಾರ್ಲಿಕ್ಸ್ ಮದರ್ಸ್ ಪ್ಲಸ್ ಉತ್ಪನ್ನದ ಮೇಲೆ ‘ಮಗುವಿನ ಆರೋಗ್ಯಕರ ತೂಕಕ್ಕಾಗಿ’ ಎಂಬ ಹೇಳಿಕೆಯ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ಇಂತಹ ಹೇಳಿಕೆಗಳು ಆಹಾರ ಜಾಹೀರಾತುಗಳಿಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಬೇಕು ಎಂದು FSSAI ತಿಳಿಸಿದೆ.
ನೆಸ್ಲೆ ಇಂಡಿಯಾದ ನೆಸ್ಕೆಫೆ ಇಂಟೆನ್ಸ್ ಕೆಫೆ, ಚೊಕೊ ಮೋಚಾ ಮತ್ತು ಚಿಲ್ಡ್ ಲ್ಯಾಟೆ ಉತ್ಪನ್ನಗಳ ಲೇಬಲ್‌ಗಳಲ್ಲಿನ ಮಾಹಿತಿ ಬಗ್ಗೆ ಪ್ರಾಧಿಕಾರ ಪ್ರಶ್ನೆ ಎತ್ತಿದೆ. ಉತ್ಪನ್ನಗಳ ಪ್ಯಾಕೆಟ್ ಮುಂಭಾಗದಲ್ಲಿ ‘ಫ್ಲೇವರ್ಡ್ ಮಿಲ್ಕ್’ ಎಂದು ನಮೂದಿಸಿದ್ದರೆ, ಹಿಂಭಾಗದಲ್ಲಿ ‘ಡೈರಿ ಆಧಾರಿತ ಪಾನೀಯ’ ಎಂದು ವಿವರಿಸಲಾಗಿದೆ. ಇ-ಕಾಮರ್ಸ್ ತಾಣಗಳಲ್ಲಿಯೂ ಇವುಗಳನ್ನು ಕಾಫಿ ಫ್ಲೇವರ್ಡ್ ಹಾಲು ಎಂದು ಪ್ರಚಾರ ಮಾಡಲಾಗುತ್ತಿದೆ ಎಂಬುದು ಆಕ್ಷೇಪ. ಈ ಉತ್ಪನ್ನಗಳನ್ನು ತಯಾರಿಸುವ ಶ್ರೈಬರ್ ಡೈನಾಮಿಕ್ಸ್ ಡೈರೀಸ್ ಮತ್ತು ಲೋಟಸ್ ಡೈರಿ ಪ್ರಾಡಕ್ಟ್ಸ್ ಸಂಸ್ಥೆಗಳಿಗೂ ವಿವರಣೆ ಕೇಳಲಾಗಿದೆ.
ನೆಸ್ಲೆಯ ‘ರಿಸೋರ್ಸ್ ರೆನಲ್ ವೆನಿಲ್ಲಾ’ ಪೌಡರ್ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಇರುವವರಿಗೆ ವಿಶೇಷ ಆಹಾರವಾಗಿ ಬಳಸಲಾಗುತ್ತದೆ. ಇದು ವಿಶೇಷ ವೈದ್ಯಕೀಯ ಉದ್ದೇಶಗಳ ಆಹಾರ ನಿಯಮಗಳ ವ್ಯಾಪ್ತಿಗೆ ಬರುತ್ತದೆ. ಇಂತಹ ಉತ್ಪನ್ನಕ್ಕೆ ಅಗತ್ಯವಾದ ಪೂರ್ವಾನುಮತಿ ಪಡೆದಿರುವ ಬಗ್ಗೆ ಹಾಗೂ ಪ್ಯಾಕೆಟ್ ಮೇಲಿನ ಸಸ್ಯಾಹಾರಿ ಅಥವಾ ಮಾಂಸಾಹಾರಿ ಗುರುತಿನ ಚಿಹ್ನೆಗಳ ಬಗ್ಗೆ FSSAI ಸ್ಪಷ್ಟನೆ ಕೇಳಿದೆ.
ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಬ್ಲಿಂಕಿಟ್‌ನಂತಹ ಆನ್‌ಲೈನ್ ಮಾರಾಟ ತಾಣಗಳಲ್ಲಿ ಉತ್ಪನ್ನಗಳ ವಿವರಣೆ ಮತ್ತು ಜಾಹೀರಾತುಗಳು ಸರಿಯಾಗಿವೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ತಪ್ಪು ಅಥವಾ ನಿಯಮಗಳಿಗೆ ವಿರುದ್ಧವಾದ ಹೇಳಿಕೆಗಳಿದ್ದರೆ ಅವುಗಳನ್ನು ಸರಿಪಡಿಸುವಂತೆ ಸೂಚಿಸಲಾಗಿದೆ. ಕಂಪನಿಗಳು ನಿಗದಿತ ಅವಧಿಯಲ್ಲಿ ದಾಖಲೆಗಳೊಂದಿಗೆ ಉತ್ತರ ನೀಡಬೇಕಿದೆ. ಉತ್ತರ ಸಮರ್ಪಕವಾಗಿಲ್ಲದಿದ್ದರೆ ನಿಯಮಾನುಸಾರ ದಂಡ ಅಥವಾ ಇತರ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಕಳೆದ ವರ್ಷ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ತಾಣಗಳಲ್ಲಿ ಬೋರ್ನ್‌ವಿಟಾ ಮತ್ತು ಹಾರ್ಲಿಕ್ಸ್‌ನಂತಹ ಮಾಲ್ಟ್ ಆಧಾರಿತ ಪಾನೀಯಗಳನ್ನು ‘ಹೆಲ್ತ್ ಡ್ರಿಂಕ್’ ವಿಭಾಗದಲ್ಲಿ ಪಟ್ಟಿ ಮಾಡದಂತೆ ಸೂಚಿಸಿತ್ತು. ಆಹಾರ ಉತ್ಪನ್ನಗಳ ವರ್ಗೀಕರಣ ಮತ್ತು ಅವುಗಳ ಆರೋಗ್ಯದ ಕುರಿತ ಹೇಳಿಕೆಗಳು ಗ್ರಾಹಕರಿಗೆ ಸ್ಪಷ್ಟವಾಗಿರಬೇಕು ಎಂಬುದು ಇದರ ಉದ್ದೇಶ.
– ಪ್ಯಾಕೆಟ್ ಮೇಲೆ ‘ಸಕ್ಕರೆ ಸೇರಿಸಿಲ್ಲ’ ಎಂದು ಬರೆದಿದ್ದರೂ, ಪೌಷ್ಟಿಕಾಂಶಗಳ ಪಟ್ಟಿಯನ್ನು ಪರಿಶೀಲಿಸಿ.
– ಉತ್ಪನ್ನವು ಮೂಳೆ ಬಲ, ಸ್ನಾಯುಗಳ ಆರೋಗ್ಯ ಅಥವಾ ಇತರ ವೈದ್ಯಕೀಯ ಪ್ರಯೋಜನಗಳನ್ನು ನೀಡುತ್ತದೆ ಎಂಬ ಹೇಳಿಕೆಗಳನ್ನು ಮಾತ್ರ ನಂಬಿ ನಿರ್ಧಾರ ಮಾಡಬೇಡಿ.
– ಮಧುಮೇಹ ಅಥವಾ ಮೂತ್ರಪಿಂಡದ ಕಾಯಿಲೆಯಂತಹ ಸಮಸ್ಯೆಗಳಿದ್ದರೆ, ಆಹಾರ ಉತ್ಪನ್ನ ಆಯ್ಕೆ ಮಾಡುವ ಮೊದಲು ವೈದ್ಯರು ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆಯಿರಿ.
ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಸೂಚನೆ: ಅಮೆಜಾನ್, ಫ್ಲಿಪ್‌ಕಾರ್ಟ್, ಬ್ಲಿಂಕಿಟ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಸಂಸ್ಥೆಗಳು ತಮ್ಮ ಸೈಟ್‌ಗಳಲ್ಲಿ ಇಂತಹ ಅಸಮರ್ಪಕ ಹಕ್ಕುಗಳುಳ್ಳ ವಿವರಣೆಗಳನ್ನು ತಕ್ಷಣವೇ ಸರಿಪಡಿಸುವಂತೆ ಆಹಾರ ಸುರಕ್ಷತಾ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
‘ಆರೋಗ್ಯ ಪಾನೀಯ’ ಹಣೆಪಟ್ಟಿ ತೆಗೆದುಹಾಕಿದ್ದ ಕೇಂದ್ರ: ಕಳೆದ ವರ್ಷವಷ್ಟೇ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ನಿಯಮಗಳನ್ನು ಕಟ್ಟುನಿಟ್ಟಾಗಿಸಿ, ಬೋರ್ನ್‌ವಿಟಾ, ಹಾರ್ಲಿಕ್ಸ್ ಸೇರಿದಂತೆ ಯಾವುದೇ ಮಾಲ್ಟ್ ಆಧಾರಿತ ಪಾನೀಯಗಳನ್ನು ಇ-ಕಾಮರ್ಸ್ ಸೈಟ್‌ಗಳಲ್ಲಿ ‘ಹೆಲ್ತ್ ಡ್ರಿಂಕ್ಸ್’ಎಂಬ ವರ್ಗದಡಿ ಪಟ್ಟಿ ಮಾಡಬಾರದು ಎಂದು ನಿರ್ದೇಶನ ನೀಡಿತ್ತು.
ಅನೇಕ ಆಹಾರ ಕಂಪನಿಗಳು ‘ಸಕ್ಕರೆ ಮುಕ್ತ’ಎಂದು ಲೇಬಲ್ ಹಾಕಿ ಮಾಲ್ಟೋಡೆಕ್ಸ್ಟ್ರಿನ್ ಅನ್ನು ಸೇರಿಸುತ್ತವೆ. ಇದರ ಗ್ಲೈಸೆಮಿಕ್ ಇಂಡೆಕ್ಸ್ ಸಾಮಾನ್ಯ ಸಕ್ಕರೆಗಿಂತಲೂ ಹೆಚ್ಚಿದ್ದು, ಮಧುಮೇಹಿಗಳು ಮತ್ತು ರಕ್ತದೊತ್ತಡ ಇರುವವರ ದೇಹದಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತದೆ ಎಂದು ಪೌಷ್ಟಿಕತಜ್ಞರು ಎಚ್ಚರಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ