ದೊಡ್ಲ ಡೇರಿಯ ಫುಲ್ ಕ್ರೀಮ್ ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ ಪತ್ತೆ: ಕಾನೂನು ಕ್ರಮಕ್ಕೆ ಸೂಚನೆ
ಕರ್ನಾಟಕದಲ್ಲೂ ಡೇರಿ ಹೊಂದಿರುವ ದೊಡ್ಲ ಡೈರಿ ಲಿಮಿಟೆಡ್ನ ಫುಲ್ ಕ್ರೀಮ್ ಹಾಲಿನ ಮಾದರಿಯಲ್ಲಿ ಡಿಟರ್ಜೆಂಟ್ ಅಥವಾ ಕಾಸ್ಟಿಕ್ ಸೋಡಾ ಪತ್ತೆಯಾಗಿದ್ದು, ಹಾಲಿನ ಕೊಬ್ಬಿನ ಅಂಶವೂ ನಿಗದಿತ ಮಟ್ಟಕ್ಕಿಂತ ಕಡಿಮೆ ಇರುವುದು ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಎಫ್ಎಸ್ಎಸ್ಎಐ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಲಾಗಿದೆ.

ಮುಖ್ಯಾಂಶಗಳು
- ದೊಡ್ಲ ಡೈರಿ ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ ಪತ್ತೆ
- ಹಾಲಿನಲ್ಲಿ ಕೊಬ್ಬಿನ ಅಂಶ ನಿಗದಿತ ಮಟ್ಟಕ್ಕಿಂತ ಕಡಿಮೆ
- ದೊಡ್ಲ ಡೈರಿ ವಿರುದ್ಧ ಕಾನೂನು ಕ್ರಮಕ್ಕೆ ಎಫ್ಎಸ್ಎಸ್ಎಐ ಸೂಚನೆ
ಬೆಂಗಳೂರು, ಅಕ್ಟೋಬರ್ 17: ಕರ್ನಾಟಕದಲ್ಲೂ ಡೇರಿ ಹೊಂದಿರುವ ‘ದೊಡ್ಲ ಡೈರಿ ಲಿಮಿಟೆಡ್’ಗೆ ಸಂಬಂಧಿಸಿದ ಫುಲ್ ಕ್ರೀಮ್ ಹಾಲಿನ ಮಾದರಿಯಲ್ಲಿ ಡಿಟರ್ಜೆಂಟ್ ಅಥವಾ ಕಾಸ್ಟಿಕ್ ಸೋಡಾ ಪತ್ತೆಯಾಗಿದ್ದು, ಈ ಉತ್ಪನ್ನದ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಹಾಲಿನ ಮಾದರಿಯ ಪರೀಕ್ಷೆಯಲ್ಲಿ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಲಾಗಿದೆ.
ಪ್ರಯೋಗಾಲಯ ಪರೀಕ್ಷೆಯಲ್ಲಿ ಲೋಪ ದೃಢ
ದೊಡ್ಲ ಡೈರಿ ಲಿಮಿಟೆಡ್ನ ಫುಲ್ ಕ್ರೀಮ್ ಹಾಲಿನ ಮಾದರಿಯನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಪರೀಕ್ಷೆಗೆ ಸಂಗ್ರಹಿಸಿದ್ದರು. ಮೊದಲ ಹಂತದ ಪರೀಕ್ಷೆಯಲ್ಲಿ ಹಾಲಿನಲ್ಲಿನ ಕೊಬ್ಬಿನ ಅಂಶವು ಆಹಾರ ಸುರಕ್ಷತಾ ನಿಯಮಗಳಲ್ಲಿ ನಿಗದಿಪಡಿಸಿರುವ ಮಾನದಂಡಕ್ಕೆ ಹೊಂದಿಕೆಯಾಗದ ಕಾರಣ ಅದನ್ನು ಕಳಪೆ ಗುಣಮಟ್ಟದ ಉತ್ಪನ್ನ ಎಂದು ಗುರುತಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಆಹಾರ ಉದ್ಯಮದ ಸಂಸ್ಥೆ ಮೇಲ್ಮನವಿ ಸಲ್ಲಿಸಿದ ಬಳಿಕ ಮಾದರಿಯನ್ನು ರೆಫರಲ್ ಫುಡ್ ಲ್ಯಾಬೊರೇಟರಿಗೆ ಕಳುಹಿಸಲಾಗಿತ್ತು. ಅಲ್ಲಿನ ಪರೀಕ್ಷೆಯಲ್ಲಿ ಹಾಲಿನಲ್ಲಿ ಡಿಟರ್ಜೆಂಟ್ ಅಥವಾ ಕಾಸ್ಟಿಕ್ ಸೋಡಾ ಇರುವುದನ್ನು ದೃಢಪಡಿಸಲಾಗಿದೆ ಎಂದು ಎಫ್ಎಸ್ಎಸ್ಎಐ ತಿಳಿಸಿದೆ. ಅಲ್ಲದೆ, ಹಾಲಿನಲ್ಲಿನ ಕೊಬ್ಬಿನ ಅಂಶವೂ ನಿಗದಿತ ಕನಿಷ್ಠ ಮಿತಿಗಿಂತ ಕಡಿಮೆ ಇರುವುದು ಪತ್ತೆಯಾಗಿದೆ.
ಈ ಪ್ರಯೋಗಾಲಯದ ವರದಿಯ ಆಧಾರದಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಸುರಕ್ಷತೆಯಿಲ್ಲದ ಹಾಗೂ ಗುಣಮಟ್ಟದ ಮಾನದಂಡಗಳನ್ನು ಪೂರೈಸದ ಆಹಾರಕ್ಕೆ ಸಂಬಂಧಿಸಿದ ಉಲ್ಲಂಘನೆಗಳು ನಡೆದಿರುವುದಾಗಿ ಪ್ರಾಧಿಕಾರ ತಿಳಿಸಿದೆ. ಉತ್ಪನ್ನದ ತಯಾರಿಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ದೊಡ್ಲ ಡೈರಿ ಸೇರಿದಂತೆ ಇತರ ಸಂಬಂಧಿತ ಆಹಾರ ಉದ್ಯಮ ಸಂಸ್ಥೆಗಳ ವಿರುದ್ಧವೂ ವಿಚಾರಣೆ ಹಾಗೂ ಕಾನೂನು ಕ್ರಮ ಮುಂದುವರಿಸಲು ಅನುಮತಿ ನೀಡಲಾಗಿದೆ.
ಎಫ್ಎಸ್ಎಸ್ಎಐ ಎಕ್ಸ್ ಸಂದೇಶ
FSSAI has initiated legal proceedings for prosecution against M/s Surya Food & Agro Ltd. (Priyagold Biscuits), M/s Dodla Dairy Limited, and M/s Ueir Organic Foods Pvt Ltd for serious food safety violations. 1(2) #FSSAINotice https://t.co/xokBtvH2OZ
— FSSAI (@fssaiindia) October 17, 2026
ಸೂರ್ಯ ಫುಡ್ ಆ್ಯಂಡ್ ಆಗ್ರೋ ಲಿಮಿಟೆಡ್ ಸೇರಿ ಇತರ ಕಂಪನಿಗಳ ವಿರುದ್ಧವೂ ಕ್ರಮ
ದೊಡ್ಲ ಡೈರಿ ಲಿಮಿಟೆಡ್ ಮಾತ್ರವಲ್ಲದೆ, ಪ್ರಿಯಗೋಲ್ಡ್ ಬಿಸ್ಕತ್ ತಯಾರಿಸುವ ಸೂರ್ಯ ಫುಡ್ ಆ್ಯಂಡ್ ಆಗ್ರೋ ಲಿಮಿಟೆಡ್ ಹಾಗೂ ಯುಇಐಆರ್ ಆರ್ಗ್ಯಾನಿಕ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧವೂ ಗಂಭೀರ ಆಹಾರ ಸುರಕ್ಷತಾ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಆರಂಭಿಸಲಾಗಿದೆ ಎಂದು ಎಫ್ಎಸ್ಎಸ್ಎಐ ತಿಳಿಸಿದೆ.
ಇದಲ್ಲದೆ, ನರ್ಪಧಾಮ್ ಫುಡ್ಸ್, ಸನ್ ರಿಡ್ಜಸ್ ಹೆಲ್ತ್ ಕೇರ್ಸ್ ಮತ್ತು ಶಾ ಕಾಂತಿಲಾಲ್ ಜಯಂತಿಲಾಲ್ ಸಂಸ್ಥೆಗಳಿಗೆ ನೋಟಿಸ್ಗಳನ್ನು ಜಾರಿಗೊಳಿಸಲಾಗಿದೆ. ಆಹಾರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




