ದೆಹಲಿ: ಅಫ್ಘಾನಿಸ್ತಾನದ ನೆಲವು ತೀವ್ರವಾದಿಗಳು ಹಾಗೂ ಭಯೋತ್ಪಾದಕರ ನೆಲೆವೀಡಾಗಬಾರದು ಎಂದು ಇಟಲಿಯ ಪ್ರಧಾನಿ ಮಾರಿಯೊ ಡ್ರಾಗಿ ಆಯೋಜಿಸಿದ್ದ ಜಿ20 ಸಮಾವೇಶದ ವಿಡಿಯೊ ಕಾನ್ಫರೆನ್ಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಸುಧಾರಿಸಲು ವಿಶ್ವಸಂಸ್ಥೆಯ ನಿರ್ಣಯದ ಆಧಾರದ ಮೇಲೆ ಅಂತರರಾಷ್ಟ್ರೀಯ ಸಮುದಾಯ ಪ್ರತಿಕ್ರಿಯಿಸಬೇಕಿದೆ ಎಂದು ಅವರು ಸಲಹೆ ಮಾಡಿದರು. ಜಿ20 ಸಮಾವೇಶದ ಮಾತುಕತೆ ವಿವರವನ್ನು ಟ್ವಿಟರ್ ಮೂಲಕ ಹಂಚಿಕೊಂಡ ಪ್ರಧಾನಿ ಮೋದಿ, ಅಫ್ಘಾನಿಸ್ತಾನದ ನಾಗರಿಕರಿಗೆ ನೆರವಾಗಲು ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.
ಅಫ್ಘಾನಿಸ್ತಾನದಲ್ಲಿ ಮಹಿಳೆ ಮತ್ತು ಅಲ್ಪಸಂಖ್ಯಾತರಿಗೂ ಅವಕಾಶ ಇರುವ ಎಲ್ಲರನ್ನೂ ಒಳಗೊಳ್ಳುವ ಆಡಳಿತ ಬರಬೇಕು. ಕಳೆದ 20 ವರ್ಷಗಳಲ್ಲಿ ಅಫ್ಘಾನಿಸ್ತಾನವು ಸಾಧಿಸಿರುವ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ತೀವ್ರವಾದಿಗಳಿಂದ ಹಾಳಾಗಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಕಾಳಜಿಯ ಮಾತುಗಳನ್ನು ಆಡಿದರು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಹೇಳಿದೆ. ಆಗಸ್ಟ್ 30ರಂದು ಭಾರತದ ಅಧ್ಯಕ್ಷತೆಯಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯು ಅಂಗೀಕರಿಸಿದ್ದ ನಿರ್ಣಯದಲ್ಲಿ ಅಫ್ಘಾನಿಸ್ತಾನವು ತನ್ನ ನೆಲವನ್ನು ಭಯೋತ್ಪಾದನೆಗೆ ಸಂಬಂಧಿಸಿದ ಕೆಲಸಗಳಿಗೆ ಬಳಸಲು ಅವಕಾಶ ಕೊಡಬಾರದು ಎಂದು ಒತ್ತಿ ಹೇಳಿತ್ತು.
ದಕ್ಷಿಣ ಏಷ್ಯಾ ವಲಯದಲ್ಲಿ ಮೂಲಭೂತವಾದ, ಭಯೋತ್ಪಾದನೆ, ಮಾದಕದ್ರವ್ಯಗಳು ಹಾಗೂ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಗೆ ಅವಕಾಶ ಸಿಗಬಾರದು ಎಂದು ಪ್ರಧಾನಿ ನರೇಂದ್ರ ಒತ್ತಿ ಹೇಳಿದರು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಸಹ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಅಫ್ಘಾನಿಸ್ತಾನದಲ್ಲಿ ಪಾಶ್ಚಿಮಾತ್ಯ ದೇಶಗಳು ಕಾರ್ಯಾಚರಣೆ ನಡೆಸುತ್ತಿದ್ದಾಗ ನೆರವಾಗಿದ್ದ ಸಾಕಷ್ಟು ಜನರು ಇಂದಿಗೂ ಅಲ್ಲಿದ್ದಾರೆ. ಅವರಿಗೆ ಇತರ ದೇಶಗಳಲ್ಲಿ ನೆಲೆ ಕಲ್ಪಿಸಿಕೊಡಲು ಆದ್ಯತೆ ಸಿಗಬೇಕು. ಅಫ್ಘಾನಿಸ್ತಾನದ ರಕ್ಷಣೆಗೆ ಮತ್ತು ಸ್ಥಳೀಯರ ನೆಮ್ಮದಿಗೆ ಪೂರಕವಾಗಿ ನೆರವಿನ ಹಸ್ತ ಚಾಚಬೇಕಿದೆ ಎಂದು ವಿಶ್ವನಾಯಕರು ಪ್ರತಿಪಾದಿಸಿದರು.
ಸಮಾವೇಶದಲ್ಲಿ ಮಾತನಾಡಿದ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅಫ್ಘಾನಿಸ್ತಾನಕ್ಕೆ 6 ಕೋಟಿ ಯೂರೊ ನೆರವು ಘೋಷಿಸಿದರು. ಆದರೆ ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ರಚಿಸಲು ತಾಲಿಬಾನ್ ವಿಫಲವಾಗಿದೆ. ಹೀಗಾಗಿ ಸದ್ಯದ ಮಟ್ಟಿಗೆ ಸರ್ಕಾರಕ್ಕೆ ಮಾನ್ಯತೆ ನೀಡುವ ವಿಚಾರ ಜರ್ಮನಿಯ ಮುಂದೆ ಇಲ್ಲ ಎಂದರು.
Participated in the G20 Summit on Afghanistan. Stressed on preventing Afghan territory from becoming the source of radicalisation and terrorism.
Also called for urgent and unhindered humanitarian assistance to Afghan citizens and an inclusive administration.
— Narendra Modi (@narendramodi) October 12, 2021
ಇದನ್ನೂ ಓದಿ: ₹100 ಲಕ್ಷ ಕೋಟಿ ಮೌಲ್ಯದ ಗತಿಶಕ್ತಿ ಮಾಸ್ಟರ್ ಪ್ಲಾನ್ಗೆ ಅ.13ರಂದು ಪ್ರಧಾನಿ ಮೋದಿ ಚಾಲನೆ; ಏನಿದು ಯೋಜನೆ?
ಇದನ್ನೂ ಓದಿ: ಫಾಸ್ಟ್ ಟ್ರ್ಯಾಕ್ ಕೋರ್ಟ್, ಸಂಬಳ ಸಹಿತ ಹೆರಿಗೆ ರಜೆ, ತ್ರಿವಳಿ ತಲಾಖ್ ಕಾನೂನು: ಮಹಿಳಾ ಸಬಲೀಕರಣದ ಸಾಧನೆ ಪಟ್ಟಿ ಮಾಡಿದ ಮೋದಿ
Published On - 9:45 pm, Tue, 12 October 21