ಶೋಪಿಯಾನ್​ನಲ್ಲಿ ಸೇನೆಯಿಂದ ಮೂವರು ಉಗ್ರರ ಹತ್ಯೆ: ದೆಹಲಿಯಲ್ಲಿ ಓರ್ವ ಪಾಕ್ ನಾಗರಿಕ ಸೆರೆ, ಶಸ್ತ್ರಾಸ್ತ್ರ ವಶಕ್ಕೆ

ದೆಹಲಿಯಲ್ಲಿ ಪಾಕಿಸ್ತಾನದ ಓರ್ವ ನಾಗರಿಕನನ್ನು ಬಂಧಿಸಲಾಗಿದ್ದು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಉಗ್ರ ಚಟುವಟಿಕೆ ನಿಗ್ರಹಕ್ಕಾಗಿ ಎನ್‌ಐಎ ವಿವಿಧೆಡೆ ದಾಳಿ ನಡೆಸಿದೆ.

ಶೋಪಿಯಾನ್​ನಲ್ಲಿ ಸೇನೆಯಿಂದ ಮೂವರು ಉಗ್ರರ ಹತ್ಯೆ: ದೆಹಲಿಯಲ್ಲಿ ಓರ್ವ ಪಾಕ್ ನಾಗರಿಕ ಸೆರೆ, ಶಸ್ತ್ರಾಸ್ತ್ರ ವಶಕ್ಕೆ
ಪ್ರಾತಿನಿಧಿಕ ಚಿತ್ರ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸೋಮವಾರ (ಅ.11) ಉಗ್ರರ ದಾಳಿಯಿಂದ ಭಾರತೀಯ ಸೇನೆಯ ಐವರು ಸೈನಿಕರು ಸಾವನ್ನಪ್ಪಿ ಹುತಾತ್ಮರಾಗಿದ್ದರು. ಭಾರತೀಯ ಸೇನೆಯು ಮಂಗಳವಾರ (ಅ.12) ಉಗ್ರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಶೋಪಿಯಾನ್ ಜಿಲ್ಲೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ದೆಹಲಿಯಲ್ಲಿ ಪಾಕಿಸ್ತಾನದ ಓರ್ವ ನಾಗರಿಕನನ್ನು ಬಂಧಿಸಲಾಗಿದ್ದು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಉಗ್ರ ಚಟುವಟಿಕೆ ನಿಗ್ರಹಕ್ಕಾಗಿ ಎನ್‌ಐಎ ವಿವಿಧೆಡೆ ದಾಳಿ ನಡೆಸಿದೆ.

ಜಮ್ಮು ಕಾಶ್ಮೀರದ ಶಾಂತಿಗೆ ಮತ್ತೊಮ್ಮೆ ಭಂಗ ಬಂದಿದೆ. ಪಾಕಿಸ್ತಾನದ ಉಗ್ರರ ಜೊತೆಗೆ ಕಾಶ್ಮೀರದ ಹೈಬ್ರೀಡ್ ಉಗ್ರರು ಈಗ ದಾಳಿ ನಡೆಸುತ್ತಿದ್ದಾರೆ. ನೆನ್ನೆ ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಉಗ್ರರ ವಿರುದ್ಧದ ಕೂಂಬಿಂಗ್ ಕಾರ್ಯಾಚರಣೆಯ ವೇಳೆ ಭಾರತೀಯ ಸೇನೆಯ ಐವರು ಸೈನಿಕರು ಸಾವನ್ನಪ್ಪಿ ಹುತಾತ್ಮರಾಗಿದ್ದರು. ಬಳಿಕ ಭಾರತೀಯ ಸೇನೆಯು ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು. ಇಂದು ಶೋಪಿಯಾನ್ ಜಿಲ್ಲೆಯಲ್ಲಿ ಲಷ್ಕರ್ ಇ ತೋಯ್ಬಾ ಹಾಗೂ ದಿ ರೆಸಿಸ್ಟೆನ್ಸ್ ಫ್ರಂಟ್​ನ ಮೂವರು ಉಗ್ರಗಾಮಿಗಳನ್ನು ಭಾರತೀಯ ಸೇನೆಯು ಹೊಡೆದುರುಳಿಸಿದೆ. ಉಗ್ರರ ಬಳಿ ಇದ್ದ ಸ್ಫೋಟಕ ಸಾಮಗ್ರಿ, ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಉಗ್ರರ ಪೈಕಿ ಓರ್ವ ಗಂದೇರಬಾಲ್ ಜಿಲ್ಲೆಯ ಮುಕ್ತಾರ್ ಸಾ ಎಂದು ಜಮ್ಮು ಕಾಶ್ಮೀರದ ಐಜಿಪಿ ಹೇಳಿದ್ದಾರೆ.

ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಘಟಕವು ದೆಹಲಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಪಾಕಿಸ್ತಾನದ ಓರ್ವ ಉಗ್ರಗಾಮಿಯನ್ನು ಬಂಧಿಸಿದೆ. ದೆಹಲಿಯ ಲಕ್ಷ್ಮೀ ನಗರದ ರಮೇಶ್ ಪಾರ್ಕ್ ಪ್ರದೇಶದಲ್ಲಿ ಉಗ್ರಗಾಮಿ ಮೊಹ್ಮಮದ್ ಆಶ್ರಫ್​ನನ್ನು ಬಂಧಿಸಲಾಗಿದೆ. ಭಾರತದ ನಕಲಿ ಐಡಿ ಕಾರ್ಡ್ ಮಾಡಿಕೊಂಡು ಭಾರತೀಯ ನಾಗರಿಕನಂತೆ ಈತ ದೆಹಲಿಯಲ್ಲಿದ್ದ. ಭಾರತೀಯ ಮಹಿಳೆಯನ್ನು ಮದುವೆಯಾಗಿದ್ದ. ಮೊಹ್ಮಮದ್ ಆಶ್ರಫ್​ನಿಂದ ಒಂದು ಎಕೆ-47 ರೈಫಲ್, ಪಿಸ್ತೂಲ್, ಮದ್ದುಗುಂಡು, ಒಂದು ಹ್ಯಾಂಡ್ ಗ್ರೇನೇಡ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮೊಹಮ್ಮದ್ ಆಶ್ರಫ್, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದವನು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಈ ಉಗ್ರನ ಬಂಧನದಿಂದ ದೆಹಲಿಯಲ್ಲಿ ವಿಧ್ವಂಸಕ ಕೃತ್ಯವೊಂದನ್ನು ತಪ್ಪಿಸಿದಂತಾಗಿದೆ. ಉಗ್ರನ ವಿರುದ್ಧ ಯುಎಪಿಎ ಕಾಯಿದೆ, ಸ್ಪೋಟಕ ಕಾಯಿದೆ ಹಾಗೂ ಶಸ್ತ್ರಾಸ್ತ್ರ ಕಾಯಿದೆ ಸೇರಿದಂತೆ ಬೇರೆ ಬೇರೆ ಕಾಯಿದೆಗಳಡಿ ಕೇಸ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸ್ ಇಲಾಖೆಯ ಡಿಸಿಪಿ ಪ್ರಮೋದ್ ಕುಶ್ವಾಹ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನದ ಉಗ್ರ ಮೊಹ್ಮಮದ್ ಆಶ್ರಫ್ ಜಮ್ಮು ಕಾಶ್ಮೀರದಲ್ಲಿ ನಡೆದ ಹಲವು ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಕಳೆದೊಂದು ದಶಕದಿಂದ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದ. ಐಎಸ್‌ಐನಿಂದ ತರಬೇತಿ ಪಡೆದಿದ್ದ. ಭಾರತದ ಪಾಸ್​ಪೋರ್ಟ್ ಪಡೆದು, ವಿದೇಶಗಳಿಗೂ ಹೋಗಿದ್ದ.

ನಮ್ಮ ದೇಶದಲ್ಲಿ ಭಯೋತ್ಪಾದನಾ ಪ್ರಕರಣಗಳ ತನಿಖೆಗಾಗಿ ಆರಂಭವಾಗಿರುವ ಎನ್‌ಐಎ ಜಮ್ಮು ಕಾಶ್ಮೀರದ 16 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ನಡೆಸಿದೆ. ಶೋಪಿಯಾನ್, ಪುಲ್ವಾಮಾ, ಶ್ರೀನಗರ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ಶೋಧ ನಡೆಸಿದೆ. ದಿ ರೆಸಿಸ್ಟೆನ್ಸ್ ಫ್ರಂಟ್ ಭೂಗತ ಉಗ್ರರಿಗಾಗಿ ಶೋಧ ಕಾರ್ಯಾಚರಣೆಯನ್ನು ನಡೆಸಿದೆ. ಸ್ಥಳೀಯರನ್ನೇ ಈಗ ಉಗ್ರಗಾಮಿ ಚಟುವಟಿಕೆಗಳಿಗೆ ನೇಮಕ ಮಾಡಿ, ಸ್ಥಳೀಯರಿಂದಲೇ ಹಿಂದೂಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಹೀಗಾಗಿ ಇಂಥ ಭೂಗತ ಉಗ್ರರನ್ನು ಸೆರೆ ಹಿಡಿಯಲು ಎನ್‌ಐಎ ಕಾರ್ಯಾಚರಣೆ ನಡೆಸಿದೆ. ಕಳೆದ ಭಾನುವಾರ ಎನ್‌ಐಎ ಕಾರ್ಯಾಚರಣೆ ನಡೆಸಿ ಐಸಿಎಸ್ ಸಂಘಟನೆಯ ಜೊತೆ ನಂಟು ಹೊಂದಿದ್ದ ಮೂವರನ್ನು ಬಂಧಿಸಿತ್ತು.

ಇದನ್ನೂ ಓದಿ: ದೆಹಲಿಯಲ್ಲಿ ಪಾಕಿಸ್ತಾನದ ಉಗ್ರನ ಬಂಧನ; ಗನ್, ಮದ್ದುಗುಂಡುಗಳ ವಶ
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಪರ ಒಲವು ಹೊಂದಿದ್ದ 700 ಶಂಕಿತ ವ್ಯಕ್ತಿಗಳು ಭದ್ರತಾ ಪಡೆಗಳ ವಶಕ್ಕೆ

Read Full Article

Click on your DTH Provider to Add TV9 Kannada