ಕೊವಿಡ್ 19 ಲಸಿಕೆ 2ನೇ ಡೋಸ್, ಬೂಸ್ಟರ್ ಡೋಸ್ ನಡುವಿನ ಅಂತರ 9-12 ತಿಂಗಳುಗಳು; ಆರೋಗ್ಯ ತಜ್ಞರ ಹೇಳಿಕೆ
ಕೊವಿಶೀಲ್ಡ್ ಲಸಿಕೆಯ ಮೊದಲ ಡೋಸ್ಗೂ -ಎರಡನೇ ಡೋಸ್ಗೂ ನಡುವಿನ ಅಂತರ 12-16 ವಾರಗಳಿದ್ದರೆ, ಕೊವ್ಯಾಕ್ಸಿನ್ ಡೋಸ್ಗಳ ಅಂತರ 6-8ವಾರಗಳು.
ಕೊವಿಡ್ 19 ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕಾರ್ಯಕರ್ತರಿಗೆ ಮತ್ತು 60 ವರ್ಷ ಮೇಲ್ಪಟ್ಟವರಿಗೆ ವೈದ್ಯರ ಸಲಹೆ ಮೇರೆಗೆ 2022ರ ಜನವರಿ 10ರಿಂದ ಕೊವಿಡ್ 19 ಲಸಿಕೆ (Covid 19 Vaccine) ಮೂರನೇ ಡೋಸ್ ನೀಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ನಿನ್ನೆ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡುವಾಗ ಘೋಷಿಸಿದ್ದಾರೆ. ಹೀಗೆ ನೀಡಲಾಗುವದ ಬೂಸ್ಟರ್ ಡೋಸ್ಗೆ ಬೇರೆಯದ್ದೇ ಲಸಿಕೆ ಬಳಸಲು, ಅಂದರೆ ಈಗಾಗಲೇ ಎರಡು ಡೋಸ್ ನೀಡಲಾದ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಬಳಸದಿರಲು ಆರೋಗ್ಯ ತಜ್ಞರ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ. ಇದೀಗ ಎದುರಾಗಿರುವ ಪ್ರಶ್ನೆ, ಹೀಗೆ ಬೂಸ್ಟರ್ ಡೋಸ್ ತೆಗೆದುಕೊಳ್ಳುವವರಿಗೆ ಕೊರೊನಾ ಲಸಿಕೆಯ ಎರಡನೇ ಡೋಸ್ಗೂ ಮತ್ತು ಈ ಮುನ್ನೆಚ್ಚರಿಕಾ ಡೋಸ್ಗೂ ನಡುವೆ ಎಷ್ಟು ಸಮಯಗಳ ಅಂತರವಿರಬೇಕು ಎಂಬುದು.
ಕೊವಿಡ್ 19 ಲಸಿಕೆ ಎರಡನೇ ಡೋಸ್ ಮತ್ತು ಮುನ್ನೆಚ್ಚರಿಕಾ ಡೋಸ್ ನಡುವಿನ ಅಂತರ 9 ರಿಂದ 12 ತಿಂಗಳ ಕಾಲ ಇರಬೇಕು ಎಂದು ಅಧಿಕಾರಿಗಳು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ. ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ನೀಡಲಾದ ಲಸಿಕೆಗಳೆಂದರೆ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ಗಳು. ಇವೆರಡೂ ಭಾರತದಲ್ಲೇ ತಯಾರಾದ ಕೊರೊನಾ ಲಸಿಕೆಗಳು. ಕೊವಿಶೀಲ್ಡ್ ಲಸಿಕೆಯ ಮೊದಲ ಡೋಸ್ಗೂ -ಎರಡನೇ ಡೋಸ್ಗೂ ನಡುವಿನ ಅಂತರ 12-16 ವಾರಗಳಿದ್ದರೆ, ಕೊವ್ಯಾಕ್ಸಿನ್ ಡೋಸ್ಗಳ ಅಂತರ 6-8ವಾರಗಳು. ಈ ಲಸಿಕೆಗಳಲ್ಲಿ ಒಂದು ಲಸಿಕೆಯ ಎರಡೂ ಡೋಸ್ ಪಡೆದ ಆರೋಗ್ಯ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಮೂರನೇ ಡೋಸ್ ನೀಡುವ ಅಭಿಯಾನ ಜನವರಿ 10 ರಿಂದ ಶುರುವಾಗಲಿದೆ. ಸದ್ಯ ಭಾರತದಲ್ಲಿ ಶೇ.61ರಷ್ಟು ಜನರಿಗೆ ಎರಡೂ ಡೋಸ್ ಕೊರೊನಾ ಲಸಿಕೆ ನೀಡಲಾಗಿದ್ದು, ಶೇ.90ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದಾರೆ.
ಶನಿವಾರದವರೆಗೆ 60 ವರ್ಷ ಮೇಲ್ಪಟ್ಟ 12.04 ಕೋಟಿ ಜನರಿಗೆ ಕೊವಿಡ್ 19 ಲಸಿಕೆ ನೀಡಲಾಗಿದೆ. ಅದರಲ್ಲಿ 9.21 ಜನರು ಸಂಪೂರ್ಣ ಡೋಸ್ ಪಡೆದವರು. ಹಾಗೇ, 1.03 ಕೋಟಿ ಆರೋಗ್ಯ ಕಾರ್ಯಕರ್ತರು ಕೊರೊನಾ ಲಸಿಕೆ ಪಡೆದಿದ್ದು, ಅದರಲ್ಲಿ 96 ಲಕ್ಷ ಜನರಿಗೆ ಎರಡೂ ಡೋಸ್ ಮುಕ್ತಾಯವಾಗಿದೆ. ಹಾಗೇ, 1.83 ಕೋಟಿ ಮುಂಚೂಣಿ ಕಾರ್ಯಕರ್ತರು ಕೊರೊನಾ ಲಸಿಕೆ ಪಡೆದಿದ್ದು, ಅದರಲ್ಲಿ 1.68 ಕೋಟಿ ಜನರಿಗೆ ಎರಡೂ ಡೋಸ್ ಆಗಿದೆ. ಎರಡೂ ಡೋಸ್ ಕೊರೊನಾ ಲಸಿಕೆ ಪಡೆದವರಿಗೆ ಮಾತ್ರ ಮೂರನೇ ಡೋಸ್ ಅಂದರೆ ಬೂಸ್ಟರ್ ಡೋಸ್ ಕೊಡಲು ಸಾಧ್ಯ. ಇದೀಗ ಸರ್ಕಾರ ಬಿಡುಗಡೆ ಮಾಡಿರುವ ಡಾಟಾ ಪ್ರಕಾರ ಸದ್ಯ ಮೂರನೇ ಡೋಸ್ ಪಡೆಯುವ ಫಲಾನುಭವಿಗಳು 11 ಕೋಟಿ ಮಂದಿ ಇದ್ದಾರೆ.
ಇದನ್ನೂ ಓದಿ: ‘ಪೈರಸಿ ಮೂಲಕ ‘ರೈಡರ್’ ನೋಡ್ಬೇಡಿ’; ಕೈ ಮುಗಿದು ಮನವಿ ಮಾಡಿದ ನಿಖಿಲ್ ಕುಮಾರ್
Published On - 7:35 pm, Sun, 26 December 21