ಗಾಜಿಪುರ: ಉತ್ತರ ಪ್ರದೇಶದ ಗಾಜಿಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ರಾಂಪುರ ಗ್ರಾಮದಲ್ಲಿ ಪತ್ನಿಯ ಸಾವಿನ ಆಘಾತ ತಾಳಲಾರದೆ ಪತಿ ಕೂಡ ಕೆಲವೇ ಗಂಟೆಗಳ ಅಂತರದಲ್ಲಿ ನಿಧನರಾಗಿದ್ದಾರೆ. ಇದಾದ ಬಳಿಕ ಇಬ್ಬರ ಮೃತದೇಹಗಳನ್ನು ಒಟ್ಟಿಗೇ ಮೆರವಣಿಗೆ ಮಾಡಿ, ಒಂದೇ ಚಿತೆಯಲ್ಲಿಟ್ಟು ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಕ್ಷಣಕ್ಕೆ ಇಡೀ ಗ್ರಾಮಸ್ಥರು ಸಾಕ್ಷಿಯಾದರು.
ಈ ಗ್ರಾಮದ ಮುಂಭಾಗದ ಗಂಗಾನದಿಯ ದಡದಲ್ಲಿ ಅಲಂಕೃತವಾದ ಒಂದೇ ಚಿತೆಯಲ್ಲಿ ಪತಿ-ಪತ್ನಿ ಇಬ್ಬರ ಅಂತ್ಯಕ್ರಿಯೆಯನ್ನೂ ನೆರವೇರಿಸಲಾಯಿತು. ಸುಮಾರು 87 ವರ್ಷ ವಯಸ್ಸಿನ ಕಾಮೇಶ್ವರ ಉಪಾಧ್ಯಾಯ, ಕಂದಾಯ ಇಲಾಖೆಯಲ್ಲಿ ಅಕೌಂಟೆಂಟ್ ಹುದ್ದೆಯಿಂದ ನಿವೃತ್ತಿ ಹೊಂದಿದ್ದು, ಅವರ ಪತ್ನಿ ಸುಮಾರು 85 ವರ್ಷ ವಯಸ್ಸಿನ ಚಂಪಾ ಉಪಾಧ್ಯಾಯ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಬ್ಬರೂ ವಾರಣಾಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದ ನಂತರ ಕುಟುಂಬಸ್ಥರು ಅವರನ್ನು ಮನೆಗೆ ಕರೆತಂದಿದ್ದರು.
ಇದನ್ನೂ ಓದಿ: ಯುವಕನ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹತ್ಯೆಗೆ ಕಾರಣವಾಯ್ತಾ ವಿಧವೆಯೊಂದಿಗಿನ ಲವ್?
ಆದರೆ, ತಡರಾತ್ರಿ ಪತ್ನಿ ಚಂಪಾ ಸಾವನ್ನಪ್ಪಿದ್ದಾರೆ. ಪತ್ನಿಯ ಸಾವಿನ ಸುದ್ದಿ ತಿಳಿದ ಪತಿಗೆ ಆಘಾತ ತಡೆದುಕೊಳ್ಳಲಾಗಲಿಲ್ಲ. ಅದಾದ ಕೆಲವು ಗಂಟೆಗಳ ನಂತರ ಅವರೂ ಕೊನೆಯುಸಿರೆಳೆದಿದ್ದಾರೆ. ಪತಿ-ಪತ್ನಿಯರ ಶವಯಾತ್ರೆಯನ್ನು ಒಟ್ಟಿಗೆ ಮಾಡಲಾಗಿದ್ದು, ಈ ಘಟನೆಯ ಸುದ್ದಿ ಕೇಳಿ ಎಲ್ಲರೂ ಬೆಚ್ಚಿಬಿದ್ದರು. ಅಕ್ಕಪಕ್ಕದ ಜನರು ಜಮಾಯಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ