ತನ್ನ ಮೇಲೆ ಅತ್ಯಾಚಾರ ನಡೆಯುವ ಎರಡು ದಿನಕ್ಕೂ ಮೊದಲು ಅತ್ಯಾಚಾರವೆಂದರೇನು ಎಂದು ಬಾಲಕಿ ಮನೆಯಲ್ಲಿ ಕೇಳಿದ್ದಳು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಅಸ್ಸಾಂನ ನಾಗಾಂವ್ನಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಘಟನೆಯ ಎರಡು ದಿನದ ಮೊದಲು ತನ್ನ ಚಿಕ್ಕಮ್ಮನ ಬಳಿ ಅತ್ಯಾಚಾರವೆಂದರೇನು ಎಂದು ಆಕೆ ಕೇಳಿದ್ದಳಂತೆ.
ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ತಿಳಿದ ಬಾಲಕಿ ಅತ್ಯಾಚಾರದ ಬಗ್ಗೆ ಪ್ರಶ್ನೆ ಮಾಡಿದ್ದಳು ಎಂದು ಬಾಲಕಿ ಸಂಬಂಧಿ ತಿಳಿಸಿದ್ದಾರೆ. ಈ ಘಟನೆ ಬಳಿಕ ಮನಸ್ಸು ಛಿದ್ರ ಛಿದ್ರವಾಗಿದೆ ಎಂದಿದ್ದಾರೆ. ಇಷ್ಟೊಂದು ಘೋರ ಘಟನೆ ನಡೆಯುತ್ತದೆ ಎಂದು ಎಂದೂ ಯೋಚಿಸಿರಲಿಲ್ಲ, ಆಕೆಯನ್ನು ರಕ್ಷಣೆ ಮಾಡುವುದರಲ್ಲಿ ನಾನು ಸೋತಿದ್ದೇನೆ ಎಂದು ಕಣ್ಣೀರಿಟ್ಟಿದ್ದಾರೆ.
ಆಕೆ ಪೊಲೀಸ್ ಅಧಿಕಾರಿಯಾಗುವ ಕನಸು ಹೊತ್ತಿದ್ದಳು, ಆಗಸ್ಟ್ 22ರಂದು ಟ್ಯೂಷನ್ನಿಂದ ಹಿಂದಿರುಗುತ್ತಿದ್ದಾಗ ಬಾಲಕಿಯನ್ನು ಎಳೆದೊಯ್ದು ಮನೆಯಿಂದ 1 ಕಿ.ಮೀ ದೂರದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಮತ್ತಷ್ಟು ಓದಿ: ಅಸ್ಸಾಂನಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಬಾಲಕಿ ತನ್ನ ಚಿಕ್ಕಮ್ಮ ಹಾಗೂ ಅಜ್ಜಿಂಯೊಂದಿಗೆ ವಾಸವಾಗಿದ್ದಳು, ಸಾಮಾನ್ಯವಾಗಿ ಚಿಕ್ಕಮ್ಮ ಅಥವಾ ರಿಕ್ಷಾದಲ್ಲಿ ಮನೆಗೆ ಬರುತ್ತಿದ್ದಳು, ಆದರೆ ಅಂದು ಸೈಕಲ್ನಲ್ಲಿ ಟ್ಯೂಷನ್ಗೆ ಹೋಗಿದ್ದಳು ಸಂಜೆ 6 ಗಂಟೆ ಸಮಯದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಮೂವರು ಕಾಡಿಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಕಂಡು ಸ್ಥಳೀಯರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಅಸ್ಸಾಂನಲ್ಲಿ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿದ್ದು, ಆಕೆಗೆ ನ್ಯಾಯ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿದರು. ಬಾಲಕಿ ತಂದೆ ಗುವಾಹಟಿಯಲ್ಲಿದ್ದಾರೆ, ಅವರು ಆರ್ಥಿಕವಾಗಿ ಅಷ್ಟು ಸಬಲರಲ್ಲದ ಕಾರಣ ಚಿಕ್ಕಮ್ಮನ ಮನೆಗೆ ಓದಲು ಕಳುಹಿಸಿದ್ದರು.
ಚಿಕ್ಕಮ್ಮ ತಿಂಗಳಿಗೆ 10 ಸಾವಿರ ರೂ. ಸಂಪಾದಿಸುತ್ತಿದ್ದು, ಶಿಕ್ಷಣ ಹಾಗೂ ಮೂಲಭೂತ ಅಗತ್ಯಗಳನ್ನು ನೋಡಿಕೊಳ್ಳುತ್ತಿದ್ದರು.
ಆಸ್ಪತ್ರೆಯಲ್ಲಿ ಮಾತನಾಡಲು ಸಾಧ್ಯವಾಗದ ಮಗಳ ಸ್ಥಿತಿ ನೋಡಿ ತುಂಬಾ ಕಷ್ಟವಾಯಿತು ಎಂದು ತಂದೆ ಹೇಳಿದ್ದಾರೆ. ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ತಫಾಜುಲ್ ಇಸ್ಲಾಂ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೊಳಕ್ಕೆ ಹಾರಿ ಸಾವನ್ನಪ್ಪಿದ್ದಾನೆ ಎಂದು ಅವರು ಹೇಳಿದರು. ಹೆಚ್ಚಿನ ತನಿಖೆ ಮುಂದುವರೆದಿದ್ದು, ಇತರ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:20 am, Mon, 26 August 24