ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ: 44 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
Jammu and Kashmir Assembly elections 2024 BJP list: ಜಮ್ಮು ಕಾಶ್ಮೀರದಲ್ಲಿ ಸೆಪ್ಟೆಂಬರ್ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ 44 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈಗಾಗಲೇ ಚುನಾವಣಾ ದಿನಾಂಕ ಘೋಷಣೆಯಾಗಿದ್ದು ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ.
ಮುಂದಿನ ತಿಂಗಳು ಜಮ್ಮು ಕಾಶ್ಮೀರದಲ್ಲಿ ನಡೆಯಲಿರುವ ವಿಧಾನಸಭಾ ಚುಣಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.14 ಮುಸ್ಲಿಂ ಹೆಸರುಗಳೂ ಪಟ್ಟಿಯಲ್ಲಿ ಸೇರಿವೆ. ಇದಕ್ಕೂ ಮುನ್ನ ದೆಹಲಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿಗಳ ಹೆಸರನ್ನು ಅನುಮೋದಿಸಿತ್ತು.
ಶ್ರೀ ಮಾತಾ ವೈಷ್ಣೋದೇವಿ ಕ್ಷೇತ್ರದಿಂದ ರೋಹಿತ್ ದುಬೆ ಅವರಿಗೆ ಟಿಕೆಟ್ ನೀಡಲಾಗಿದೆ. ಸುನೀಲ್ ಶರ್ಮಾ ಕಿಶ್ತ್ವಾರ್ ನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದರು. ಈ ಬಾರಿ ಬಿಜೆಪಿ ಹೊಸ ತಂತ್ರದೊಂದಿಗೆ ಚುನಾವಣಾ ಕಣಕ್ಕೆ ಇಳಿದಿರುವುದು ಪಟ್ಟಿಯಿಂದ ಸ್ಪಷ್ಟವಾಗಿದೆ.
ಪಕ್ಷವು ತನ್ನ ಹಲವು ಹಳೆಯ ನಾಯಕರ ಟಿಕೆಟ್‌ಗಳನ್ನು ರದ್ದುಗೊಳಿಸಿದೆ. ಬೇರೆ ಪಕ್ಷಗಳ ಯುವ ನಾಯಕರಿಗೂ ಬಿಜೆಪಿ ಅವಕಾಶ ನೀಡಿದೆ. ಮೊದಲ ಹಂತದ ನಾಮಪತ್ರ ಸಲ್ಲಿಕೆಗೆ ಆಗಸ್ಟ್ 27 ಕೊನೆಯ ದಿನವಾಗಿರುವುದರಿಂದ ಸೋಮವಾರವೇ ಪಟ್ಟಿ ಬಿಡುಗಡೆ ಮಾಡುವುದು ಬಿಜೆಪಿಗೆ ಅನಿವಾರ್ಯವಾಗಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 90 ವಿಧಾನಸಭಾ ಸ್ಥಾನಗಳಿದ್ದು, ಮೂರು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಮೊದಲ ಹಂತದಲ್ಲಿ ಸೆಪ್ಟೆಂಬರ್ 18 ರಂದು 24 ಸ್ಥಾನಗಳಿಗೆ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ ಸೆಪ್ಟೆಂಬರ್ 25 ರಂದು 26 ಸ್ಥಾನಗಳಿಗೆ ಮತದಾನ ನಡೆಯಲಿದೆ. ಮೂರನೇ ಹಂತದಲ್ಲಿ ಅಕ್ಟೋಬರ್ 1 ರಂದು 40 ಸ್ಥಾನಗಳಿಗೆ ಮತದಾನ ನಡೆಯಲಿದೆ. ಅಕ್ಟೋಬರ್ 4 ರಂದು ಹರಿಯಾಣ ಜೊತೆಗೆ ಮತ ಎಣಿಕೆ ನಡೆಯಲಿದೆ.
ಮತ್ತಷ್ಟು ಓದಿ: ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ: ಬಿಜೆಪಿ 60-70 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ
ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ಇದಕ್ಕೂ ಮುನ್ನ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದ್ದು, ಮೊದಲ ಹಂತದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಬಿಜೆಪಿ ಮೂಲಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ 90 ಸ್ಥಾನಗಳಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಇನ್ನೂ ಕೆಲವು ಸ್ಥಾನಗಳಲ್ಲಿ ಒಮ್ಮತ ಮೂಡಿಲ್ಲ. ಇದೀಗ ಆಗಸ್ಟ್ 29 ರಂದು ದೆಹಲಿಯಲ್ಲಿ ಮತ್ತೊಮ್ಮೆ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ನಂತರ ಉಳಿದ ಹೆಸರುಗಳಿಗೂ ಅನುಮೋದನೆ ದೊರೆಯಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:42 am, Mon, 26 August 24