ಜೈಪುರ: ರಾಜಸ್ಥಾನದಲ್ಲಿ (Rajasthan) ಸ್ಟಾಂಪ್ ಪೇಪರ್‌ಗಳ ಮೇಲೆ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು 8 ವರ್ಷದ ಹುಡುಗಿಯರನ್ನು ಮಾರಾಟ ಮಾಡಲಾಗಿದೆ. ನಂತರ ಈ ಪ್ರಕರಣದ ಬಗ್ಗೆ ಎದ್ದ ವಿವಾದಗಳನ್ನು ಇತ್ಯರ್ಥಗೊಳಿಸಲು ಗ್ರಾಮ ಜಾತಿ ಮಂಡಳಿಗಳ ಆದೇಶದ ಮೇರೆಗೆ ಆ ಬಾಲಕಿಯರ ತಾಯಂದಿರ ಮೇಲೆ ಅತ್ಯಾಚಾರ (Rape) ಎಸಗಲಾಗಿದೆ. ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದ್ದು, ರಾಜಸ್ಥಾನದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಈ ಬಗ್ಗೆ ಬುಧವಾರ ವರದಿ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ನೋಟಿಸ್ ನೀಡಿದೆ.
ಭಿಲ್ವಾರದಂತಹ ಸ್ಥಳಗಳಲ್ಲಿನ ಜನರು ತಮ್ಮ ವಿವಾದಗಳನ್ನು ಬಗೆಹರಿಸಿಕೊಳ್ಳಲು ಪೋಲೀಸರ ಬಳಿಗೆ ಹೋಗುವ ಬದಲು ಜಾತಿ ಮಂಡಳಿಗಳ ಮೊರೆ ಹೋಗುತ್ತಾರೆ. ಆ ಭಾಗದಲ್ಲಿ ಸಾಲ ತೀರಿಸಲಾಗದ ಮನೆಯವರ ಹೆಣ್ಣು ಮಕ್ಕಳನ್ನು ಮಾರಾಟ ಮಾಡಲಾಗುತ್ತದೆ. ಅಲ್ಲದೆ, ಅವರ ತಾಯಂದಿರ ಮೇಲೂ ಅತ್ಯಾಚಾರ ನಡೆಸಲಾಗುತ್ತದೆ. ಇಡೀ ಸಮಾಜ ತಲೆತಗ್ಗಿಸಬೇಕಾದ ಇಂತಹ ವಿಕೃತ ಆಚರಣೆಯೊಂದು ರಾಜಸ್ಥಾನದಲ್ಲಿ ಬಹಳ ಕಾಲದಿಂದಲೂ ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿದೆ.
ಜಾತಿ ಮಂಡಳಿಯು ವ್ಯಕ್ತಿಯೊಬ್ಬನಿಗೆ ಮೊದಲು ತನ್ನ ಸಹೋದರಿಯನ್ನು ಮಾರಾಟ ಮಾಡಿ, ನಂತರ ಅವನ 12 ವರ್ಷದ ಮಗಳನ್ನು 15 ಲಕ್ಷ ರೂ. ಸಾಲಕ್ಕೆ ಬದಲಾಗಿ ಮಾರಾಟ ಮಾಡಬೇಕೆಂದು ಸೂಚಿಸಿತ್ತು. ಮತ್ತೊಬ್ಬ ಬಾಲಕಿಯನ್ನು 6 ಲಕ್ಷ ರೂ.ಗೆ ಮಾರಾಟ ಮಾಡಿ ಆಗ್ರಾಕ್ಕೆ ಕರೆದೊಯ್ಯಲಾಗಿತ್ತು. ಅವಳನ್ನು ಮತ್ತೆ 3 ಬಾರಿ ಮಾರಲಾಗಿತ್ತು. ಆ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದರಿಂದ ಆಕೆ 4 ಬಾರಿ ಗರ್ಭಿಣಿಯಾಗಿದ್ದಳು. ಆಕೆಯ ತಂದೆ ತನ್ನ ಹೆಂಡತಿಯ ಚಿಕಿತ್ಸೆಗಾಗಿ ತೆಗೆದುಕೊಂಡ 6 ಲಕ್ಷ ರೂ. ಹಣ ವಾಪಾಸ್ ನೀಡಲು ಮತ್ತೆ ಆ ಬಾಲಕಿಯನ್ನು ಮಾರಾಟ ಮಾಡಲಾಗಿತ್ತು. ಆಕೆಯ ಮೇಲಾದ ನಿರಂತರ ದೌರ್ಜನ್ಯದಿಂದ ಆಕೆ ಸಾವನ್ನಪ್ಪಿದ್ದಳು.
ಇದನ್ನೂ ಓದಿ: ನಿರಂತರ ಅತ್ಯಾಚಾರ, 5 ಬಾರಿ ಗರ್ಭಪಾತ: ಚಳ್ಳಕೆರೆ CPI ವಿರುದ್ಧ ರೇಪ್ ಕೇಸ್ ದಾಖಲಿಸಿ ಈಗ ಉಲ್ಟಾ ಹೊಡೆದ ಯುವತಿ
ಹಣಕಾಸಿನ ವಹಿವಾಟು ಮತ್ತು ಸಾಲದ ವಿವಾದಗಳ ಸಂದರ್ಭದಲ್ಲಿ ಹಣವನ್ನು ವಸೂಲಿ ಮಾಡಲು ಹುಡುಗಿಯರನ್ನು ಹರಾಜು ಮಾಡಲಾಗಿದೆ. ಆ ಬಾಲಕಿಯರನ್ನು ವಿದೇಶಕ್ಕೆ ಸಾಗಿಸಲಾಗುತ್ತಿತ್ತು. ಅಲ್ಲಿ ಅವರಿಗೆ ದೈಹಿಕ ಕಿರುಕುಳ, ಚಿತ್ರಹಿಂಸೆ, ಲೈಂಗಿಕ ದೌರ್ಜನ್ಯ ನೀಡಲಾಗುತ್ತಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆ ವರದಿಯ ವಿಷಯಗಳು ನಿಖರವಾಗಿದ್ದರೆ, ಇದು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಎನ್‌ಎಚ್‌ಆರ್‌ಸಿ ಹೇಳಿದೆ. 4 ವಾರಗಳಲ್ಲಿ ಕ್ರಮ ತೆಗೆದುಕೊಂಡ ವಿವರವಾದ ವರದಿಯನ್ನು ಸಲ್ಲಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಾಜಸ್ಥಾನದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.