ಗೂಗಲ್ ಮ್ಯಾಪ್ ನಂಬಿ ಹೋಗಿ, ಸೇತುವೆ ನಿರ್ಮಾಣಕ್ಕೆಂದು ಅಗೆದಿದ್ದ ಹೊಂಡಕ್ಕೆ ಬಿದ್ದ ಕಾರು

ಗೂಗಲ್ ಮ್ಯಾಪ್ ನಂಬಿ ಪ್ರಯಾಣಿಸಿದ ಕಾರು, ತಿರುಪತಿಯಲ್ಲಿ ಸೇತುವೆ ನಿರ್ಮಾಣಕ್ಕೆ ಅಗೆದಿದ್ದ ಬೃಹತ್ ಹೊಂಡಕ್ಕೆ ಬಿದ್ದ ಆಘಾತಕಾರಿ ಘಟನೆ ನಡೆದಿದೆ. ಹಳೆಯ ಮಾರ್ಗ ತೋರಿಸಿದ ಗೂಗಲ್ ಮ್ಯಾಪ್ಸ್ ಮತ್ತು ಹೆದ್ದಾರಿ ಅಧಿಕಾರಿಗಳ ಸುರಕ್ಷತಾ ಸೂಚನಾ ಫಲಕಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರೂ, ವಾಹನಕ್ಕೆ ತೀವ್ರ ಹಾನಿಯಾಗಿದೆ. ಈ ಘಟನೆ ತಂತ್ರಜ್ಞಾನ ಮತ್ತು ಮಾನವ ನಿರ್ಲಕ್ಷ್ಯದ ಅಪಾಯಗಳನ್ನು ಎತ್ತಿ ತೋರಿಸುತ್ತದೆ.

ಗೂಗಲ್ ಮ್ಯಾಪ್ ನಂಬಿ ಹೋಗಿ, ಸೇತುವೆ ನಿರ್ಮಾಣಕ್ಕೆಂದು ಅಗೆದಿದ್ದ ಹೊಂಡಕ್ಕೆ ಬಿದ್ದ ಕಾರು
ಗೂಗಲ್

Updated on: Jul 20, 2026 | 12:13 PM

ತಿರುಪತಿ, ಜುಲೈ 20: ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಕೆಲವೊಮ್ಮೆ ಕಣ್ಣು ಮುಚ್ಚಿ ನಂಬಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂಬುದಕ್ಕೆ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಗೂಗಲ್ ಮ್ಯಾಪ್(Google Map) ತೋರಿಸಿದ ಮಾರ್ಗವನ್ನೇ ಅಂತಿಮ ಎಂದು ನಂಬಿ ಪ್ರಯಾಣಿಸುತ್ತಿದ್ದ ಕಾರೊಂದು, ಸೇತುವೆ ನಿರ್ಮಾಣಕ್ಕಾಗಿ ಅಗೆಯಲಾಗಿದ್ದ ಬೃಹತ್ ಹೊಂಡಕ್ಕೆ ಬಿದ್ದ ಆಘಾತಕಾರಿ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಕಾರು ವೆಂಕಟಗಿರಿಯಿಂದ ತಿರುಪತಿ ಜಿಲ್ಲೆಯ ದಕ್ಕಿಲಿಯ ಕಡೆಗೆ ಕಡೆಗೆ ಹೊರಟಿತ್ತು. ಎರ್ಪೇಡು-ಪೆಂಚಲಕೋಣ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಲಿಂಗಸಮುದ್ರಂ ಎಂಬಲ್ಲಿ ಪ್ರಸ್ತುತ ಹೊಸ ಸೇತುವೆಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಕಾರಣಕ್ಕಾಗಿ ಹಳೆಯ ರಸ್ತೆಯನ್ನು ಮುಚ್ಚಿ, ವಾಹನಗಳ ಸಂಚಾರವನ್ನು ಬೇರೊಂದು ಮಾರ್ಗಕ್ಕೆ ತಿರುಗಿಸಲಾಗಿತ್ತು.

ಆದರೆ, ಕಾರು ಚಾಲಕ ಗೂಗಲ್ ನಕ್ಷೆಯನ್ನು ಆಧರಿಸಿ ಪ್ರಯಾಣಿಸುತ್ತಿದ್ದರಿಂದ, ನಕ್ಷೆಯಲ್ಲಿ ತೋರಿಸಿದ ಹಳೆಯ ನೇರ ಮಾರ್ಗದಲ್ಲೇ ಕಾರು ಚಲಾಯಿಸಿದ್ದಾರೆ. ಮುಂಭಾಗದ ರಸ್ತೆಯ ಸ್ಥಿತಿಯನ್ನು ಗಮನಿಸದ ಪರಿಣಾಮ, ಕಾರು ನೇರವಾಗಿ ಸೇತುವೆಗಾಗಿ ಅಗೆಯಲಾಗಿದ್ದ ಆಳವಾದ ಹೊಂಡಕ್ಕೆ ಬಿದ್ದಿದೆ.

ಕಾರು ಹೊಂಡಕ್ಕೆ ಬೀಳುತ್ತಿದ್ದಂತೆ ಭಾರಿ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ತಕ್ಷಣವೇ ಚಾಲಕನನ್ನು ಹೊರತೆಗೆದು ಪ್ರಥಮ ಚಿಕಿತ್ಸೆಗೆ ರವಾನಿಸಿದ್ದಾರೆ. ಅದೃಷ್ಟವಶಾತ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಕಾರು ತೀವ್ರವಾಗಿ ಜಖಂಗೊಂಡಿದೆ.

ಮತ್ತಷ್ಟು ಓದಿ: “ನನಗೆ ಕೆಲಸ ತೊರೆಯುವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ”: ಇದು ನನ್ನ ಜೀವನದ ಕಹಿ ಕ್ಷಣ ಎಂದ ಬೆಂಗಳೂರಿನ ಯುವಕ

ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ
ಈ ಅಪಘಾತಕ್ಕೆ ಕೇವಲ ಗೂಗಲ್ ಮ್ಯಾಪ್ಸ್ ಮಾತ್ರವಲ್ಲದೆ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣ ಎಂದು ಸ್ಥಳೀಯರು ಕಡಾಖಂಡಿತವಾಗಿ ಆರೋಪಿಸಿದ್ದಾರೆ. ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ರಸ್ತೆ ತಿರುವು ಇರುವ ಕುರಿತು ಯಾವುದೇ ಸೂಚನಾ ಫಲಕಗಳು ಅಥವಾ ರಾತ್ರಿ ವೇಳೆ ಹೊಳೆಯುವ ರಿಫ್ಲೆಕ್ಟರ್‌ಗಳನ್ನು ಅಳವಡಿಸಿರಲಿಲ್ಲ.

ಸುರಕ್ಷತಾ ಲೋಪ: ಕನಿಷ್ಠ ತಡೆಗೋಡೆ ಅಥವಾ ಸೂಚನಾ ಫಲಕಗಳನ್ನು ಹಾಕಿದ್ದರೆ ಈ ದುರಂತವನ್ನು ತಡೆಯಬಹುದಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳು ತಕ್ಷಣ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us